ಹಣ್ಣು, ತರಕಾರಿಗಳು ರಕ್ತವನ್ನೂ ಶುದ್ಧವಾಗಿಡಬಲ್ಲವು
ವಿಟಮಿನ್ ಸಿ ಮತ್ತು ನಾರಿನ ಅಂಶವನ್ನು ಅಧಿಕವಾಗಿ ಹೊಂದಿರುವ ಹಣ್ಣು, ತರಕಾರಿಗಳು ಕೊಲೆಸ್ಟರಾಲ್ ಕಡಿಮೆ ಮಾಡುವುದಷ್ಟೇ ಅಲ್ಲ, ರಕ್ತ ಹೆಪ್ಪುಗಟ್ಟುವುದನ್ನೂ ತಡೆಯಬಲ್ಲವು. ರಕ್ತನಾಳಗಳನ್ನು ಸ್ವಚ್ಛವಾಗಿಟ್ಟು ರಕ್ತ ಸಂಚಾರ ಏರುಪೇರಾಗದಂತೆ ನೋಡಿಕೊಳ್ಳಬಲ್ಲವು. ಯಾರು ಇಂಥ ಹಣ್ಣು, ತರಕಾರಿಗಳನ್ನು ಜಾಸ್ತಿ ಸೇವಿಸುತ್ತಾರೆಯೋ ಅವರಲ್ಲಿ ರಕ್ತದ ತೊಂದರೆಗಳು ಕಡಿಮೆ ಎನ್ನುವುದು ದೃಢಪಟ್ಟಿದೆ.
ಇತ್ತೀಚೆಗೆ ಸ್ವೀಡನ್ನಲ್ಲಿ ಒಂದು ಸಂಶೋಧನೆ ನಡೆಯಿತು. 260 ವಯಸ್ಕರನ್ನು ಆಯ್ಕೆ ಮಾಡಿಕೊಂಡು ಯಾರು ಅಧಿಕವಾಗಿ ಹಣ್ಣು ತರಕಾರಿ ಸೇವಿಸುತ್ತಾರೆ, ಯಾರು ಕಡಿಮೆ ಸೇವಿಸುತ್ತಾರೆ ಎನ್ನುವ ವರ್ಗೀಕರಣ ಮಾಡಲಾಯಿತು. ಹಣ್ಣು, ತರಕಾರಿ ಅಧಿಕವಾಗಿ ಸೇವಿಸಿದವರಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಚಟುವಟಿಕೆಗಳು ತೀವ್ರವಾಗಿದ್ದವು. ಸಂಶೋಧನೆಗಳಿಂದ ಕಂಡುಬಂದಿರುವ ಸಮಾಚಾರ ಏನೆಂದರೆ, ಹಣ್ಣು ಹಾಗೂ ತರಕಾರಿಗಳಲ್ಲಿರುವ ವಿಟಮಿನ್ ಸಿ ಮತ್ತು ನಾರಿನ ಅಂಶಗಳು ರಕ್ತಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಚೆನ್ನಾಗಿಡುತ್ತವೆ, ರಕ್ತದ ಪ್ಲೇಟ್ಲೆಟ್ಗಳು ಗುಂಪುಗೂಡುವುದನ್ನು ತಡೆಯುವ ಮೂಲಕ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತವೆ ಎನ್ನುವುದು.
ಇನ್ನೊಂದು ಸಂಶೋಧನೆ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಯಾರು ಮೊಟ್ಟೆಯನ್ನೂ ಸೇವಿಸದ ಶುದ್ಧ ಸಸ್ಯಾಹಾರಿಗಳೋ, ಅವರಲ್ಲಿ ರಕ್ತ ಪರಿಚಲನೆಗೆ ಸಂಬಂಧಿಸಿದ ತೊಂದರೆಗಳು ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ. ಪ್ರಾಣಿಜನ್ಯ ಕೊಬ್ಬು ಕೊಲೆಸ್ಟರಾಲ್ ಅನ್ನು ಉದ್ದೀಪಿಸುತ್ತದೆ. ಆದರೆ ಸಸ್ಯಾಹಾರದಲ್ಲಿನ ನಾರಿನ ಅಂಶ, ವಿಶೇಷತಃ ಸುಲಭವಾಗಿ ಕರಗಬಲ್ಲ ನಾರು ಕೊಲೆಸ್ಟರಾಲ್ ವಿರೋಧಿ. ಈ ಕಾರಣದಿಂದಾಗಿಯೇ ಅಪ್ಪಟ ಶಾಖಾಹಾರಿಗಳಲ್ಲಿ ರಕ್ತ ಪರಿಚಲನೆಯ ತೊಂದರೆಗಳು ಅಷ್ಟಾಗಿ ಇರಲಿಕ್ಕಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಪ್ರಾಣಿಜನ್ಯ ಆಹಾರಗಳನ್ನು ಸೇವಿಸುವ ಅಭ್ಯಾಸ ಉಳ್ಳವರಿಗೆ ಹೋಲಿಸಿದರೆ ಸಸ್ಯಾಹಾರಿಗಳಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಬಹಳ ಕಡಿಮೆ. ಇವರ ರಕ್ತದಲ್ಲಿ ಜಿಗುಟು ಕೂಡ ಕಡಿಮೆ. ಹೀಗಾಗಿ ಹೃದ್ರೋಗ ಸೇರಿದಂತೆ ಆರೋಗ್ಯ ತೊಂದರೆಗಳನ್ನು ರಕ್ಷಿಸಿಕೊಳ್ಳುವ ಅತ್ಯುತ್ತಮ ಉಪಾಯ ಎಂದರೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು.
ಕೊಲೆಸ್ಟರಾಲ್ ಬಗ್ಗೆ ಚರ್ಚಿಸುವಾಗ ನಾವು ನಿತ್ಯ ಬಳಸುವ ಯಾವ್ಯಾವ ಹಣ್ಣು, ತರಕಾರಿಗಳಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಎನ್ನುವ ಪುಟ್ಟ ಪಟ್ಟಿ ನೀಡಿದ್ದೆ. ಓದುಗರ ಅನುಕೂಲಕ್ಕಾಗಿ ಅದನ್ನು ಮತ್ತೊಮ್ಮೆ ಇಲ್ಲಿ ಪುನರಾವರ್ತಿಸಿದ್ದೇನೆ ಅಷ್ಟೆ. ಸೀಬೆ ಹಣ್ಣು, ಪಪ್ಪಾಯ, ಸ್ಟ್ರಾಬೆರಿ, ದ್ರಾಕ್ಷಿ, ಕಿವಿ ಫ್ರೂಟ್; ಲಿಂಬು, ಕಿತ್ತಳೆ, ಮೋಸುಂಬೆ, ಟೊಮೆಟೊ, ಬ್ರಕೋಲಿ, ಕ್ಯಾಲಿಫ್ಲವರ್, ಹಸಿ ಬಟಾಣಿ, ಕೋಸು, ಬಾಳೆಹಣ್ಣು, ಅನಾನಸ್. ರೆಡ್ ಸ್ವೀಟ್ ಪೆಪ್ಪರ್ ಮತ್ತು ಗ್ರೀನ್ ಸ್ವೀಟ್ ಪೆಪ್ಪರ್.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com