ಕೌಟುಂಬಿಕ ಸಾಮರಸ್ಯಕ್ಕೂ ಬೆಂಕಿ ಬಿತ್ತು
-ವಾಸ್ತವದ ಪ್ರತಿಬಿಂಬ ಆಗಲಿ
ರಿಯಾಲಿಟಿ ಶೋಗಳಿಲ್ಲದೆ ಆ ಚಾನೆಲ್ನ ಕಾರ್ಯಕ್ರಮ ಪಟ್ಟಿ ಪರಿಪೂರ್ಣವಾಗದು ಎನ್ನುವಷ್ಟರ ಮಟ್ಟಿಗೆ ಬಹುತೇಕ ಚಾನೆಲ್ಗಳಲ್ಲಿ ರಿಯಾಲಿಟಿ ಶೋ ವಿಜೃಂಭಿಸುತ್ತಿದೆ. ರಿಯಾಲಿಟಿ ಎಂದರೆ ವಾಸ್ತವಿಕತೆಯನ್ನು ಪ್ರತಿಬಿಂಬಿಸುವುದು, ಅನುಭವಗಳನ್ನು ಯಥಾವತ್ತಾಗಿ ಅಳವಡಿಸುವುದು. ಈಗೇನಾಗಿದೆ ಎಂದರೆ ರಿಯಾಲಿಟಿ ಶೋಗಳಲ್ಲಿ ಕೃತಕ ಹಾವಭಾವಗಳು ಹೆಚ್ಚಾಗಿ ವಾಸ್ತವಕ್ಕೆ ಬೆಲೆಯೇ ಇಲ್ಲದಾಗಿದೆ. ನಾಟಕೀಯತೆ ಅಧಿಕವಾಗುತ್ತಿದೆ. ಸ್ವಾರ್ಥ ಹಾಗೂ ಜನಪ್ರಿಯತೆಯ ಗೀಳು ಎದ್ದು ಕಾಣುತ್ತಿದೆ. ಒಂದು ಸಣ್ಣ ಸಂಗತಿಯ ಸನ್ನಿವೇಶಗಳನ್ನು ದೊಡ್ಡದು ಮಾಡಿ ಅದನ್ನು ಅನವಶ್ಯಕವಾಗಿ ವೈಭವೀಕರಿಸಲಾಗುತ್ತಿದೆ. ಈ ರೀತಿಯ ರಿಯಾಲಿಟಿ ಶೋಗಳು ನಿರರ್ಥಕವಾಗಿದ್ದು, ಜನರ ಮನಸ್ಸಿನಿಂದ ಬಹುಬೇಗ ದೂರವಾಗುವ ಸಂಭವವೂ ಇದೆ. ಹೀಗಾಗಿ ನಾಟಕೀಯತೆಗೆ ಒತ್ತು ಕೊಡದೆ ವಾಸ್ತವಿಕತೆಯನ್ನು ಪ್ರತಿಬಿಂಬಿಸಲಿ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಅನಗತ್ಯ ಕೂಗಾಟ
ಕಣ್ಣಿಗೆ ತಂಪು, ಮನಸ್ಸಿಗೆ ಮುದವನ್ನು ಮಾತ್ರ ನೀಡುತ್ತಿರುವ ರಿಯಾಲಿಟಿ ಶೋಗಳು ಅಗತ್ಯ ಮಾಹಿತಿಗಳ ಕೊರತೆಯಿಂದ ನೋಡುಗರಿಗೆ ಉತ್ತಮ ಸಂದೇಶಗಳನ್ನು ತಲುಪಿಸುವಲ್ಲಿ ಎಡವುತ್ತಿವೆ. ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅವಿಭಾಜ್ಯ ಅಂಗವಾಗಿರುತ್ತಾರೆ. ಇರಲಿ. ಆದರೆ ಅವರು ಧರಿಸುವ ಉಡುಪು, ಗಂಟಲು ಹರಿಯುವಂತೆ ಕೂಗುವ ಶೈಲಿ, ಜನರ ಆಕರ್ಷಣೆಗಾಗಿ ಮಾಡುವ ಸರ್ಕಸ್ಗಳು ಯಾವ ಕಾರಣಕ್ಕಾಗಿ? ಮುಖ್ಯ ಸಂಗತಿಯೆಂದರೆ ಗಂಟೆಗಟ್ಟಲೆ ಇಂತಹ ಶೋಗಳ ಮುಂದೆ ಕೂಡುವುದರಿಂದ ಎಲ್ಲರ ಕೆಲಸ ಕಾರ್ಯಗಳು ಕುಂಟುತ್ತಾ ಸಾಗುತ್ತವೆ. ಓದು-ಬರಹಕ್ಕೆ ಬಳಸಬೇಕಾದ ಸಮಯ ವ್ಯರ್ಥವಾಗುವುದು. ರಾತ್ರಿ ವೇಳೆ ಕುಟುಂಬದ ಸದಸ್ಯರು ಕುಟುಂಬದ ವಿಚಾರಗಳ ಬಗೆಗೆ ಚರ್ಚಿಸಲೂ ಸಾಧ್ಯವಾಗುವುದಿಲ್ಲ. ಹೀಗೆ ರಿಯಾಲಿಟಿ ಶೋಗಳು ಸಮಾಜಕ್ಕೆ ಪೂರಕಕ್ಕಿಂತ ಮಾರಕವೇ ಸರಿ.
- ಸುಶೀಲಾ ಕುಪ್ಪಳಿ, ಇನಮಿಂಚೇನಹಳ್ಳಿ
ಅಸಂಬದ್ಧ ಶೋ
ಯಾಕೆ ಬೇಕು ಈ ರಿಯಾಲಿಟಿ ಶೋ ಅನ್ನೋ ಗೇಮ್ಪ್ಲಾನ್. ಇದರಿಂದ ಏನ್ ಉಪಯೋಗ? ಮೊದಲೇ ಕೆಟ್ಟು ಹೋಗಿರೋ ನಮ್ಮ ಸಮಾಜಾನ ಇನ್ನಷ್ಟು ಕೆಡಿಸ್ತಾ ಇದೆ ಈ ಆಟ. ಯಾಕೆ ಬೇಕು ಈ ಪಾಶ್ಚಿಮಾತ್ಯ ಕಲೆ? ನಮ್ಮಲ್ಲೇ ಆರ್ಥಿಕವಾಗಿ, ಸಾಮಾಜಿಕವಾಗಿ, ಬೇಕಾದಷ್ಟು ಸಮಸ್ಯೆಗಳಿವೆ. ಅವನ್ನೇ ಬಿಂಬಿಸಿ ಪರಿಹಾರ ಸೂಚಿಸೋ ಕಾರ್ಯಕ್ರಮ ಮಾಡಬಹುದು. ಅದನ್ನು ಬಿಟ್ಟು, ಬರೀ ಹಳಸಲು ಊಟ ಮಾಡ್ಸಿ 8 ವರ್ಷದ ಮಕ್ಕಳಿಂದ 80 ವರ್ಷದವರಿಗೂ ಬರೀ ಕೆಟ್ಟದನ್ನ ತೋರ್ಸಿ, ಅವರ ತಲೇಲಿ ಕೆಟ್ಟ ವಿಚಾರ ತುಂಬಿ, ಮಕ್ಕಳನ್ನ ಹಾಳ್ ಮಾಡೋ ಇಂಥ ಕಾರ್ಯಕ್ರಮಾನ ಬ್ಯಾನ್ ಮಾಡ್ಬೇಕು. ಖಂಡಿತ ಇದೊಂದು ಅಸಂಬದ್ಧ ಶೋ. ಇಂಥ ಶೋಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು.
- ಬಿ.ಆರ್.ಕೃಷ್ಣಪ್ರಸಾದ್ ಕಲ್ಲಳ್ಳಿ, ಶಿವಮೊಗ್ಗ
'ಜಗುಲಿ'ಯಲ್ಲಿ ಮುಂದಿನ ವಾರದ ವಿಷಯ 'ವಿವಾಹಪೂರ್ವ ಲೈಂಗಿಕತೆ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com