ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೀರೇ!

ದಿನ ನಿತ್ಯ ಆಹಾರ ಸೇವನೆ ಪ್ರಕಾರ ಬೆಳಿಗ್ಗೆ ತಿಂಡಿ ಮದ್ಯಾಹ್ನ ಮತ್ತು ರಾತ್ರಿ ಊಟವಿದ್ದಂತೆ, ನೀರಿನ ಸೇವನೆ ಹೇಗಿರಬೇಕು,...

Mainashree
Updated On : 26 Jul 2013, 6:56 am

ಬಿಸಿಲಲ್ಲಿ ಓಡಿ ದಣಿದ ಜೀವಕ್ಕೆ ಅಮೃತ ಕೊಟ್ಟರೂ ಬೇಡ. ನೀರು ಕೊಟ್ಟರೆ ಬೇಕು. ಮರುಭೂಮಿಯಲ್ಲಿ ಸಿಗುಬಿದ್ದ ಪಥಿಕ ಒಂದು ಹನಿ ನೀರಿಗಾಗಿ ತನ್ನ ಸರ್ವಸ್ವವನ್ನೇ ಒತ್ತೆಯಿಟ್ಟಾನು. ನೀರಿನ ಮಹತ್ವ ತಿಳಿಯುವುದೇ ಇಂಥ ಸಮಯದಲ್ಲಿ.
ಮನುಷ್ಯನ ದೇಹ ನೀರಿನಿಂದಲೇ ರಚಿತವಾಗಿದೆ. ಮಾನವನ ಮೆದುಳಿನ ಭಾಗದಲ್ಲಿ ಶೇ.74, ರಕ್ತದಲ್ಲಿ ಶೇ.83ರಷ್ಟು ನೀರಿದೆ. ಮೂಳೆಯಲ್ಲಿ ಶೇ.22 ಹಾಗೂ ಮಾಂಸಖಂಡ ಶೇ.75 ನೀರಿನಿಂದ ಕೂಡಿದೆ. ತಜ್ಞರ ಪ್ರಕಾರ ಆರೋಗ್ಯದ ಚಿಕಿತ್ಸೆಗೆ ನೀರು ಕೂಡ ಬಹಳ ಮುಖ್ಯವಾದ ಔಷಧ. ಶರೀರದಲ್ಲಿ ನೀರು ಕಡಿಮೆಯಾದರೆ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ನೀರಿನ ಅಂಶ ಕಡಿಮೆಯಾಗುತ್ತಿದ್ದಂತೆ ರಕ್ತ ಚಲನಶಕ್ತಿಯನ್ನು ಕಳೆದುಕೊಂಡು ಅನಾರೋಗ್ಯ ಹೆಚ್ಚಾಗುತ್ತದೆ.
ಇಷ್ಟೆಲ್ಲಾ ಇದ್ದರೂ ನಾವು ನೀರು ಸೇವಿಸುವುದು ಕಡಿಮೆ. ಮಾನವನಿಗೆ ಪ್ರತಿ ನಿತ್ಯದ ಆಹಾರ ಹೇಗೆ ಮುಖ್ಯವೋ ಅದೇ ರೀತಿ ನೀರು ಕೂಡ. ಆದರೆ ನೀರು ಸೇವಿಸಬೇಕಾದರೂ ಕೆಲವು ನಿಯಮ ಪಾಲಿಸಲೇಬೇಕಾಗುತ್ತದೆ.
ದಿನ ನಿತ್ಯ ಆಹಾರ ಸೇವನೆ ಪ್ರಕಾರ ಬೆಳಿಗ್ಗೆ ತಿಂಡಿ ಮದ್ಯಾಹ್ನ ಮತ್ತು ರಾತ್ರಿ ಊಟವಿದ್ದಂತೆ, ನೀರಿನ ಸೇವನೆ ಹೇಗಿರಬೇಕು, ಯಾವ ಹೊತ್ತಿನಲ್ಲಿ ಎಷ್ಟು ಪ್ರಮಾಣದ ನೀರು ಸೇವಿಸಬೇಕು ಎಂಬುದು ಅರಿತುಕೊಂಡರೆ ಸಾಕು. ಗಡಿಬಿಡಿ ಜೀವನದಲ್ಲಿ ಒಂದು ಹೊತ್ತಿಗೆ ಒಂದು ಗ್ಲಾಸ್  ನೀರು ಕುಡಿದರೆ ಸಾಕಪ್ಪ ಎನ್ನುವಂತೆ ಲೈಫ್ಸ್ಟೈಲ್ ಆಗಿಬಿಟ್ಟಿದೆ. ದುಡಿಯುವ ಉತ್ಸಾಹದಲ್ಲಿರುವವರಿಗೆ ಆಹಾರದ ಕಡೆ ಗಮನವಿದೆ. ಆದರೆ ಸೇವಿಸಿದ ಆಹಾರಕ್ಕೆ ಎಷ್ಟು ನೀರು ಬೇಕು ಎಂಬುದು ತಿಳಿದಿರುವುದಿಲ್ಲ.

ಯಾವುದಕ್ಕೆ ಎಷ್ಟು ನೀರು?
1.    ಮಾನವನ ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳನ್ನು ನೀರು ಕರಗಿಸುವ ಶಕ್ತಿ ಹೊಂದಿದೆ. ಆಹಾರಕ್ಕೆ ತಕ್ಕಂತೆ ನೀರು ಕುಡಿಯದಿದ್ದರೆ ಕಿಡ್ನಿಯಲ್ಲಿ ಕಲ್ಲು ಕಾಣಿಸುವುದು. ಇಂತಹ ಕಲ್ಲುಗಳನ್ನು ಹೊರ ಹಾಕಬೇಕಾದರೆ ಪ್ರತಿ ದಿನ 12 ಲೋಟ ನೀರು ಕುಡಿದರೆ ಸಾಕು, ಮೂತ್ರ ವಿಸರ್ಜನೆ ಮುಖಾಂತರ ಕಲ್ಲು ಹೊರಹಾಕಬಹುದು.
2.     ಮೂತ್ರಕೋಶದ ಸೋಂಕನ್ನು ನೀರು ಗುಣಪಡಿಸಬಲ್ಲದು. ಹೆಚ್ಚಾಗಿ ನೀರು ಕುಡಿದಷ್ಟು ಮೂತ್ರ ವಿಸರ್ಜಿಸಬಹುದು. ಹೀಗೆ ಮೂತ್ರಕೋಶದ ಸೋಂಕು ತಂದಿರುವ ಏಕಾಣಜೀವಿಗಳನ್ನು ನೀರು ಹೊರಹಾಕುತ್ತದೆ ಎಂದು ಕಿಡ್ನಿ ತಜ್ಞ ಡಾ. ರಾಬರ್ಟ್ ಟ್ಯಾಂಚನ್ಕೋ ಹೇಳಿದ್ದಾರೆ.
3.     ಜ್ವರ ಕಡಿಮೆಯಾಗಲು ಸಹಕಾರಿ. ನೀರು ಸೇವಿಸಿದಷ್ಟು ಜ್ವರ ಕಡಿಮೆಯಾಗುತ್ತದೆ. ದೇಹದಲ್ಲಿರುವ ಶಾಖವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಶಾಖ ಮೂತ್ರದ ಮೂಲಕ ಹೊರಹೋಗುತ್ತದೆ.
4.     ನೀರು ಶರೀರದ ಉಷ್ಣತೆ ಕಾಪಾಡುತ್ತದೆ. ಕೆಲಸ ಮಾಡುವಾಗ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಉಷ್ಣತೆ ನಿಯಂತ್ರಿಸಲು ಸಹಕಾರಿಯಾಗುತ್ತದೆ.
5.     ಕಫ, ಶೀತ ಮತ್ತು ಗಂಟಲು ನೋವು ಸೇರಿ ಇತರೆ ಸೋಂಕನ್ನು ಗುಣಪಡಿಸಲು ನೀರು ಸಹಾಯ ಮಾಡುತ್ತದೆ. ನೀರು ಹೆಚ್ಚಾಗಿ ಸೇವಿಸಿದಷ್ಟು ಗಂಟಲಲ್ಲಿರುವ ಕಫವನ್ನು ಹೊರಹಾಕಬಹುದು.
6.     ನೀರು ಎದೆಯುರಿ ಕಡಿಮೆ ಮಾಡಬಲ್ಲದು. 20 ನಿಮಿಷಗಳಿಗೊಮ್ಮೆ 2ರಿಂದ 3 ಲೋಟ ನೀರು ಸೇವಿಸುತ್ತಿದ್ದರೆ ಎದೆಯುರಿ ಕಡಿಮೆಯಾಗುವುದು. ನೀರಿನೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಆಸಿಡಿಟಿ ಕಡಿಮೆಯಾಗುತ್ತದೆ.
7.     ದೇಹದಲ್ಲಿ ಶಕ್ತಿ ಉತ್ಪತ್ತಿಗೆ ನೀರು ಸಹಾಯಕಾರಿ. ನೀರು ಸೇವಿಸಿದಷ್ಟು ಹೆಚ್ಚು ಕಾರ್ಯಪ್ರವೃತ್ತವಾಗಿರಬಹುದು. ಹೆಚ್ಚಾಗಿ ನೀರು ಸೇವಿಸುತ್ತಿದ್ದರೆ ರಕ್ತದ ಚಲನ ಹೆಚ್ಚಾಗಿ ದೇಹವನ್ನು ಸಕ್ರಿಯವಾಗಿರಿಸುತ್ತದೆ.
8.     ನೀರು ಸೇವನೆಯಿಂದ ಮೈಗ್ರೇನ್ ದೂರವಾಗುತ್ತದೆ ಎಂದು ಕೆಲವು ಅಧ್ಯಯನ ಹೇಳುತ್ತವೆ. ದೇಹಕ್ಕೆ ನೀರು ಹೆಚ್ಚಾಗಿ ಹೋದಷ್ಟು ಆಲೋಚನೆಯ ಸ್ಥಿತಿ ಬದಲಾಗುತ್ತದೆ. ನಿಶ್ಯಕ್ತಿಯನ್ನು ದೂರ ಮಾಡುತ್ತದೆ.
9.     ಹೆಚ್ಚು ನೀರು ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು. ಊಟಕ್ಕೆ ಮೊದಲು ಎರಡು ಲೋಟ ನೀರು ಸೇವಿಸಬೇಕು. ಇದು ನಿಮ್ಮ ದೇಹಕ್ಕೆ ಎಷ್ಟು ಆಹಾರ ಬೇಕೋ ಅಷ್ಟು ಸೇವಿಸಲು ಸಹಕಾರಿಯಾಗುತ್ತದೆ.
10. ದೇಹಕ್ಕೆ ರಕ್ಷಣೆ ನೀಡುವ ಚರ್ಮವನ್ನು ತೇವದಿಂದಿಡುತ್ತದೆ. ಚರ್ಮವನ್ನು ಮೃದುವಾಗಿ ಹಾಗೂ ಕಾಂತಿಯುತವಾಗಿ ಇರಿಸಬಲ್ಲದು. ಚರ್ಮ ಸುಕ್ಕಾದವರು ಪ್ರತಿ ದಿನ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸುವುದರಿಂದ ಸುಕ್ಕನ್ನು ಗುಣ ಪಡಿಸಿಕೊಳ್ಳಬಹುದು. <

ನೀರು ಸೇವಿಸುವ ಕ್ರಮ
1.     ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕು. ನೀವು ನಿದ್ರೆಗೆ ಜಾರಿದಾಗ ದೇಹ ನೀರಿನ ಅಂಶವನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ಹಾಗೂ ಮಲಗುವ ಮುನ್ನ ಎರಡು ಲೋಟ ನೀರು ಕುಡಿಯಬೇಕು. ಇದು ದೇಹದ ವಿಷವನ್ನು ಹೊರಹಾಕುತ್ತದೆ.
2.     ಪ್ರತಿದಿನ 12 ಲೋಟ ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಮಾನವನ ದೇಹಕ್ಕೆ ಪ್ರತಿದಿನ 12 ಲೋಟ ನೀರು ಅಗತ್ಯವಿದೆ.
3.     ದಿನಕ್ಕೆ ಕನಿಷ್ಠ 12 ಗರಿಷ್ಠ 16 ಲೋಟ ನೀರು ಕುಡಿಯಬೇಕು. 16 ಲೋಟಕ್ಕೂ ಹೆಚ್ಚು ನೀರು ಸೇವಿಸಬಾರದು.
4.     ಒಂದೇ ಬಾರಿಗೆ 12 ಲೋಟ ನೀರು ಸೇವಿಸುವುದರ ಬದಲು ಆಗಾಗ ಸ್ವಲ್ಪ ನೀರು ಸೇವಿಸಬಹುದು. ಇದು ಹೃದಯ ಕಾಯಿಲೆ ನಿವಾರಿಸಲು ಸಹಕಾರಿಯಾಗುತ್ತದೆ.
5.     ನೀರಿನ ದಾಹ ಹೆಚ್ಚುವವರೆಗೆ ಕಾಯಬೇಡಿ. ದಾಹವಾಗುವುದಕ್ಕೂ ಮುನ್ನ ನೀರನ್ನು ಸೇವಿಸಿ.
6.     ದೇಹಕ್ಕೆ ವಯಸ್ಸು ಹೆಚ್ಚಾದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಷ್ಟು ಕೊಬ್ಬಿನಂಶ ಹೆಚ್ಚುತ್ತದೆ.
7.     ಹಸಿವಾಗುತ್ತಿದೆ ಎಂದ ಕೂಡಲೇ ಊಟ ತಿನ್ನಬೇಡಿ. ಊಟಕ್ಕೂ ಮೊದಲು ನೀರು ಕುಡಿದು ನಂತರ ಆಹಾರ ಸೇವಿಸಿದರೆ ಒಳ್ಳೆಯದು.
8.     ಮೂತ್ರವು ಮಂದವಾಗಿ ಹಳದಿ ಬಣ್ಣದಿಂದ ಹೊರಹೋಗುವುದು ಕಡಿಮೆ ನೀರು ಕುಡಿಯುವುದರ ಲಕ್ಷಣ.
9.     ಊಟದ ಸಮಯದಲ್ಲಿ ಹಾಗೂ ಊಟವಾದ ತಕ್ಷಣ ನೀರನ್ನು ಸೇವಿಸುವ ಅಭ್ಯಾಸ ಬಿಡಬೇಕು. ನಾವು ತೆಗೆದುಕೊಳ್ಳುವ ಆಹಾರದಲ್ಲಿ ಜೀರ್ಣರಸ ಉತ್ಪತ್ತಿಯಾಗುತ್ತದೆ. ಈ ಸಂದರ್ಭದಲ್ಲಿ ನಾವು ನೀರು ಕುಡಿಯುವುದರಿಂದ ಉತ್ಪತ್ತಿಯಾಗುವ ಜೀರ್ಣರಸ ನೀರಿನಲ್ಲಿ ಬೆರೆಯುತ್ತದೆ. ಇದರಿಂದ ನಾವು ಸೇವಿಸುವ ಆಹಾರದಲ್ಲಿರುವ ಪೋಷಾಕಾಂಶವನ್ನ್ನು ಕಳೆದುಕೊಳ್ಳಬೇಕಾಗುತ್ತದೆ.
10. ವಿಷ ವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿ ನೀರು ಅತಿ ಮುಖ್ಯ ಪಾತ್ರ ವಹಿಸುತ್ತದೆ. ಆಹಾರ ವಿಷವಾದಾಗ ಭೇಧಿಯಾಗುವುದು ಸಹಜ. ಹೆಚ್ಚಾಗಿ ಭೇದಿಯಾಗುತ್ತಿದ್ದರೆ ಇದಕ್ಕೆ ಮೊದಲ ಚಿಕಿತ್ಸೆ ಮನೆಯಲ್ಲೇ ಮಾಡಬಹುದು. ಒಂದು ಗ್ಲಾಸು ನೀರಿಗೆ 2 ಚಮಚ ಸಕ್ಕರೆ ಹಾಗು 1/4 ಚಮಚ ಉಪ್ಪು ಬೆರೆಸಿ ಕುಡಿದರೆ ಭೇದಿ ನಿಲ್ಲಲು ಸಹಾಯವಾಗುತ್ತದೆ. ಇದು ಮೆಡಿಕಲ್ ಸ್ಟೋರ್ನಲ್ಲಿ ಸಿಗುವ ಎಲೆಕ್ಟ್ರಾಲ್ ಪೌಡರ್ಗೆ ಸಮ.
11. ಮಲಬದ್ಧತೆ ತೊಂದರೆಯಿಂದ ನರಳುತ್ತಿದ್ದರೆ ನೀರನ್ನು ಹೆಚ್ಚಾಗಿ ಸೇವಿಸಿ, 10 ನಿಮಿಷಗಳ ಕಾಲ ನಡೆದಾಡುವುದರಿಂದ ಕರುಳುಗಳು ವಿಶ್ರಾಂತಗೊಂಡು ಮಲ ಹೊರಹಾಕುತ್ತದೆ.
12. ಗರ್ಭಿಣಿಯರು ದಿನಕ್ಕೆ 10 ಲೋಟ ಹಾಗೂ ಬಾಣಂತಿಯರು 13 ಲೋಟ ನೀರು ಸೇವಿಸಬೇಕು.

- ಮೈನಾಶ್ರೀ ಸಿ. ನಿಡಗಲ್ಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments