ಮಿಡ್ನೈಟ್ MURDER!
90ರ ದಶಕದಲ್ಲಿ ಬಾಗೇಪಲ್ಲಿ ತಾಲೂಕಿನ ಆಸುಪಾಸಿನಲ್ಲಿ ಹೆಸರುವಾಸಿಯಾಗಿದ್ದ...
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಂಧ್ರದ ಗಡಿಗೆ ಅಂಟಿಕೊಂಡಿದೆ. ಇಲ್ಲಿ ತೆಲುಗು ಪ್ರಭಾವ ಹೆಚ್ಚು. ಇಲ್ಲಿಂದ ಆಂಧ್ರದ ಗೋರಂಟ್ಲಕ್ಕೆ ಹೋಗುವ ಹಾದಿಯಲ್ಲಿದೆ ಮಾರಗಾನಕುಂಟೆ. ಈ ಗ್ರಾಮದಲ್ಲಿ ಆರುನೂರು ಮನೆಗಳಿದ್ದು, ಹತ್ತಿರಹತ್ತಿರ ಎರಡು ಸಾವಿರ ಜನಸಂಖ್ಯೆ ಇದೆ.
ಗ್ರಾಮದ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಗಡಿಪ್ರದೇಶ ಜತೆಗೆ ಕಾಡಿನ ಅಂಚಿನಲ್ಲಿರುವ ಕಾರಣ ಇಲ್ಲಿ ಭೂಮಿಗೆ ಕೊರತೆ ಇಲ್ಲ. ಇಲ್ಲಿರುವ ಎಲ್ಲ ರೈತರೂ ಅವರವರ ಅನುಕೂಲಕ್ಕೆ ತಕ್ಕಂತೆ ಭೂಮಿ ಹೊಂದಿದ್ದಾರೆ. ಇಲ್ಲಿಂದ ಕೇವಲ 3 ಕಿ.ಮೀ. ದೂರದಲ್ಲಿದೆ ದೇವಕುಂಟೆ ಗ್ರಾಮ. ಇದು ಅತಿ ಸಣ್ಣ ಗ್ರಾಮ. 50 ಮನೆಗಳಿರಬಹುದು. ಈ ಗ್ರಾಮ ಬೃಹತ್ ಬೆಟ್ಟದ ತಪ್ಪಲಿನಲ್ಲಿದೆ.
ಬೆಟ್ಟಗುಡ್ಡಗಳೆಂದರೆ ಪಶ್ಚಿಮಘಟ್ಟಗಳಂತೆ ಬೃಹತ್ ಅರಣ್ಯವಲ್ಲ. ಕೇವಲ ಮುಳ್ಳಿನ ಪೊದೆಗಳು, ಸೀತಾಫಲ ಗಿಡಗಳು ಇರುವ ಕುರುಚಲು ಕಾಡು ಮಾತ್ರ ಇದ್ದ, ಈ ಬೆಟ್ಟದಲ್ಲಿ ಮನುಷ್ಯ ಓಡಾಡಿದರೂ ಕಾಣಿಸುವಷ್ಟು ಪಾರದರ್ಶಕವಾಗಿದೆ. ಈ ಬೆಟ್ಟದ ಹೆಸರು ಅಕ್ಕಮ್ಮನವರ ಬೆಟ್ಟ. ಇದೇ ಬೆಟ್ಟದಲ್ಲಿ ನಕ್ಸಲೀಯರು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ದೊರೆತ ಪೊಲೀಸರು ಸುಮಾರು ದಿನ, ಇಲ್ಲಿಯೇ ಕೂಂಬಿಂಗ್ ನಡೆಸಿದ್ದರು. ಆದರೆ ನಕ್ಸಲೀಯರು ಕಾಣಿಸದೆ ಬರಿಗೈಯಲ್ಲಿ ಹಿಂತಿರುಗಿದ್ದರು.
- - - -
ಈ ಭಾಗದಲ್ಲೀಗ ಭೂಮಾಲೀಕರ ದಬ್ಬಾಳಿಕೆಯಾಗಲಿ, ಮೇಲ್ವರ್ಗದವರ ದೌರ್ಜನ್ಯವಾಗಲೀ ಇಲ್ಲ. ಇನ್ನು ಜೀವನದಿಗಳಾಗಲಿ, ನೀರಾವರಿ ಜಲಾಶಯಗಳಾಗಲೀ ಈ ಪ್ರದೇಶದಲ್ಲಿ ಇಲ್ಲದ ಕಾರಣ ಬಹುತೇಕರು ಮಳೆ ಆಶ್ರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೈಗಾರಿಕೆ, ಕಾರ್ಖಾನೆಗಳಿಲ್ಲದ ಕಾರಣ ಇಲ್ಲಿ ಕಾರ್ಮಿಕರಿಗೆ ಮಾಲೀಕರ ಶೋಷಣೆ ಎಂಬುದು ಇಲ್ಲವೇ ಇಲ್ಲ. ಆದರೂ ನಕ್ಸಲೀಯರು ಇಲ್ಲಿ ಯಾಕೆ ಬಂದರು ಎಂಬ ಪ್ರಶ್ನೆಗೆ ಉತ್ತರ ಕೇವಲ ತಲೆ ಮರೆಸಿಕೊಳ್ಳಲು ಎಂದು ಹೇಳಬಹುದೇ? ಹಾಗಾದರೆ ಇಲ್ಲಿ ಅವರು ಕೊಲೆ ಅಪಹರಣದಂಥ ಪ್ರಕರಣಗಳನ್ನು ನಡೆಸಿದ್ದಾದರೂ ಯಾಕೆ ಎಂಬ ಪ್ರಶ್ನೆಗಳಿಗೆ ನಕ್ಸಲೀಯ ನಾಯಕ ಕಾರ್ತಿಕ್ ಅಂದು ನೀಡಿದ್ದ ಉತ್ತರ, 'ಕರ್ನಾಟಕದಲ್ಲಿ ಸಂಘಟನೆ ಬಲಪಡಿಸುವುದು'.
ಹಾಗಾದರೆ ಕರ್ನಾಟಕದಲ್ಲಿ ಸಂಘಟನೆ ಆರಂಭವಾಗುತ್ತಲೇ ಇಲ್ಲಿದ್ದ ನಾಯಕರು ಯಾಕೆ ತೆರೆಮರೆಗೆ ಸರಿದರು ಎಂಬುದು ಇಂದಿಗೂ ಕಾಡುತ್ತಿರುವ ಪ್ರಶ್ನೆ. 90ರ ದಶಕದಲ್ಲಿ ಬಾಗೇಪಲ್ಲಿ ತಾಲೂಕಿನ ಆಸುಪಾಸಿನಲ್ಲಿ ಹೆಸರುವಾಸಿಯಾಗಿದ್ದ ನಕ್ಸಲೀಯ ನಾಯಕರು ಇಬ್ಬರು. ಒಬ್ಬ ಸಾಗರ್ ಅಲಿಯಾಸ್ ಆಂಜನೇಯಲು, ಮತ್ತೊಬ್ಬ ಕಾರ್ತಿಕ್ ಅಲಿಯಾಸ್ ಕೊಂಡಾರೆಡ್ಡಿ. ಇವರಿಬ್ಬರೂ ಆಂಧ್ರದವರೇ. ಈಗಲೂ ಆಂಧ್ರದಲ್ಲೇ ಇದ್ದಾರೆ. ಆದರೂ ಕರ್ನಾಟಕದಲ್ಲಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಮಾತ್ರ ಸತ್ಯ.
ಒಂದೇ ಗುಂಪಿನಲ್ಲಿದ್ದ ಇವರಿಬ್ಬರೂ ನಂತರ ಕಾರಣಾಂತರಗಳಿಂದ ಬೇರೆಯಾದರು. ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಕಾರ್ಯಚಟುವಟಿಕೆ ನಡೆಸಿದರು. ಇವರಿಬ್ಬರೂ ಬೇರೆಯಾಗಲು ಪ್ರಮುಖ ಕಾರಣ ಗೊತ್ತಿಲ್ಲವಾದರೂ ನಾಯಕತ್ವದ ಆಸೆ ಇವರಿಬ್ಬರನ್ನೂ ಬೇರ್ಪಡಿಸಿತು ಎಂದು ಮೂಲಗಳಿಂದ ತಿಳಿದುಬಂದಿತ್ತು. ಹೀಗೆ ಬೇರ್ಪಟ್ಟ ಗುಂಪು ತಮ್ಮ ಇರುವಿಕೆಯನ್ನು ತೋರ್ಪಡಿಸಲು ಮುಂದೆ ಬರಬೇಕಿತ್ತು. ಹಾಗಾಗಿಯೇ ಈ ಭಯಾನಕ ಘಟನೆ ನಡೆಯಲು ಕಾರಣವಾಯಿತಾ? ಅಥವಾ ಸತ್ತಾರ್ ಸಾಬ್ ನಿಜವಾಗಲೂ ಪೊಲೀಸ್ ಮಾಹಿತಿದಾರನಾಗಿದ್ದನಾ? ಇಂದಿಗೂ ನಿಗೂಢ.
ನಕ್ಸಲೀಯರಿಂದ ಥ್ರೆಡ್ ಇದೆ ಎಂಬುದು ಗ್ರಾಪಂ ಅಧ್ಯಕ್ಷರಾಗಿದ್ದ ಸತ್ತಾರ್ ಸಾಬ್ ಅವರಿಗೆ ಮೊದಲೇ ಗೊತ್ತಿತ್ತು. ಅದೇ ಕಾರಣಕ್ಕೆ ಅವರು ಪೊಲೀಸರ ರಕ್ಷಣೆಯನ್ನೂ ಕೇಳಿದ್ದರು ಎಂದು ಅವರ ಕುಟುಂಬದವರು ಅಂದು ಆರೋಪಿಸಿದ್ದರು. ಆದರೆ ಅವರು ರಕ್ಷಣೆ ಕೇಳಿದ್ದು, ಕೇವಲ ಮೌಖಿಕವಾಗಿ ಲಿಖಿತವಾಗಿಲ್ಲದ ಕಾರಣ ಅದಕ್ಕೆ ದಾಖಲೆಗಳಿಲ್ಲ ಎಂದು ಹೇಳಿದ್ದರು. ಅದು ನಿಜವಾ? ಗೊತ್ತಿಲ್ಲ. ಆದರೆ ಅವರು ವೈಯಕ್ತಿಕವಾಗಿಯೂ ರಕ್ಷಣೆಗೆ ಮುಂದಾಗಿದ್ದರು ಎಂಬುದಂತೂ ಸತ್ಯ.
ಅದಕ್ಕೆ ಉದಾಹರಣೆಯೆಂದರೆ ಗೋರಂಟ್ಲ, ಬಾಗೇಪಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲೇ ಅವರ ಮನೆ ಇದೆ. ಅದೂ ಗ್ರಾಮದ ಮಧ್ಯೆ ಇದೆ. ನೂತನವಾಗಿ ನಿರ್ಮಿಸಿದ್ದ ಮನೆಗೆ ಸಾಮಾನ್ಯ ಬಾಗಿಲಿನ ಜತೆಗೆ ಭದ್ರವಾದ ಕಬ್ಬಿಣದ ಬಾಗಿಲನ್ನೂ ನಿರ್ಮಿಸಿದ್ದಾರೆ. ಅಪರಿಚಿತರು ಬಂದರೆ ಅವರು ಬಾಗಿಲು ತೆಗೆಯದಿರುವುದನ್ನು ಸುಮಾರು ದಿನಗಳಿಂದಲೇ ರೂಢಿಸಿಕೊಂಡಿದ್ದರು ಎನ್ನಲಾಗಿದೆ. ಅಷ್ಟು ಜಾಗ್ರತೆಯಿಂದ ಇದ್ದರೂ ಅಂದು ನಡೆಯಬಾರದ ಅನಾಹುತವೊಂದು ನಡೆದೇಹೋಯಿತು!
ನಕ್ಸಲೀಯರು ಪತ್ರಿಕಾಗೋಷ್ಠಿಯ ಮೂಲಕ ಎಚ್ಚರಿಕೆ ಕೊಟ್ಟು ಸರಿಯಾಗಿ ಹತ್ತುದಿನಗಳು ಕಳೆದಿತ್ತು. ವರ್ಣಂಪಲ್ಲಿ, ದೇವಿಕುಂಟ, ಚಿನ್ನಕಾಯಲಪಲ್ಲಿ, ಚಿನ್ನೇಪಲ್ಲಿ ಮುಂತಾದ ಗುಡ್ಡಗಾಡು ಪ್ರದೇಶಗಳ ಹಳ್ಳಿಗಳಲ್ಲಿ ಪೊಲೀಸರು ಸ್ವಲ್ಪ ಹೆಚ್ಚಿಗೆ ಅನ್ನುವ ಮಟ್ಟದಲ್ಲಿ ಓಡಾಡುತ್ತಿದ್ದರು. ನಕ್ಸಲೀಯರೊಂದಿಗೆ ಸಂಬಂಧ ಹೊಂದಿದ್ದಾರೆ, ನಕ್ಸಲೀಯರಿಗೆ ಊಟ ನೀಡಿದ್ದಾರೆ ಎಂಬ ಅನುಮಾನಗಳ ಮೇಲೆ ಹಲವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವುದರಲ್ಲಿಯೂ ಪೊಲೀಸರು ನಿರತರಾಗಿದ್ದರು.
90ರ ದಶಕದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಮೊಬೈಲ್ ಸಂಪರ್ಕ ಇರಲಿಲ್ಲ. ಉಳ್ಳವರು ಮಾತ್ರ ಸ್ಥಿರ ದೂರವಾಣಿ ಹೊಂದಿದ್ದರು. ಅದರಲ್ಲೂ ಗ್ರಾಮೀಣ ಪ್ರದೇಶದ ದೂರವಾಣಿ ವಾರದಲ್ಲಿ ಒಂದು ದಿನ ಕಾರ್ಯನಿರ್ವಹಿಸಿದರೆ ಉಳಿದ ಆರು ದಿನ ಡೆಡ್ ಆಗುತ್ತಿತ್ತು. ಅದಕ್ಕೆ ಕಾರಣ ದೂರವಾಣಿ ಸಂಪರ್ಕದ ತಂತಿಗಳನ್ನು ಈಗಿನಂತೆ ಭೂಮಿಯ ಒಳಗೆ ಹಾಕದೆ ಕಂಬಗಳ ಮೇಲೆ ಎಳೆದಿದ್ದರು. ಆ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದು, ಜೋರಾಗಿ ಬೀಸಿದ ಗಾಳಿಯಿಂದಾಗಿ ತಂತಿಗಳು ಒಂದರಮೇಲೊಂದು ಬಿದ್ದು, ದೂರವಾಣಿಗಳು ಹೆಚ್ಚು ಕಾಲ ಸ್ಥಗಿತಗೊಳ್ಳುತ್ತಿದ್ದವು.
ಇದನ್ನೇ ಅಸ್ತ್ರವಾಗಿ ಅಂದಿನ ನಕ್ಸಲೀಯ ನಾಯಕರು ಬಳಸಿಕೊಂಡರು ಎಂಬುದು ಘಟನೆ ನಡೆದ ನಂತರ ಬೆಳಕಿಗೆ ಬಂದ ವಿಚಾರ. ಸತ್ತಾರ್ಸಾಬ್ ಕೊಲೆಯಾಗುವುದಕ್ಕೂ ಮುನ್ನ ಆ ಮಾರ್ಗವಾಗಿ ಎಳೆದಿದ್ದ ದೂರವಾಣಿ ತಂತಿಗಳನ್ನು ನಕ್ಸಲೀಯರು ತುಂಡರಿಸಿದ್ದರು. ಪರಿಣಾಮವಾಗಿ ಪೊಲೀಸರಿಗೆ ಮಾಹಿತಿ ತಿಳಿಯಲು ತಡವಾಯಿತು. ಪೊಲೀಸರು ಬರುವ ವೇಳೆಗೆ ನಕ್ಸಲರು 'ಕೆಲಸ' ಮುಗಿಸಿ, ಜಾಗ ಖಾಲಿ ಮಾಡಿದ್ದರು.
-----
ರಾಷ್ಟ್ರೀಯ ಪಕ್ಷದ ಸದಸ್ಯನಾಗಿ ಮಾರಗಾನಕುಂಟೆ ಎಂಬ ಬೃಹತ್ ಗ್ರಾಪಂ ಅಧ್ಯಕ್ಷರಾಗಿದ್ದ ಸತ್ತಾರ್ಸಾಬ್ ಎಂಬ 45 ವರ್ಷದ ವ್ಯಕ್ತಿಗೆ ಸಹಜವಾಗಿಯೇ ಜನರೊಂದಿಗೆ ಹೆಚ್ಚಿನ ಸಂಪರ್ಕ ಇತ್ತು. ಅದರಲ್ಲೂ ಗ್ರಾಮೀಣ ಪ್ರದೇಶವಾದ ಕಾರಣ ಆತ ಸರಳ ವ್ಯಕ್ತಿಯಂತೆಯೇ ಎಲ್ಲರೊಂದಿಗೆ ಬೆರೆತಿದ್ದ. ಹಾಗಾಗಿ ಎಷ್ಟೇ ಹೊತ್ತಿನಲ್ಲಿ ಜನರು ಸಮಸ್ಯೆ ಎತ್ತಿಕೊಂಡು ಇವರ ಮನೆಗೆ ಬಂದರೂ ಅವರ ಸಮಸ್ಯೆ ಆಲಿಸಿ ಸಾಧ್ಯವಾದರೆ ಅದಕ್ಕೆ ಪರಿಹಾರ ಸೂಚಿಸಿ ಕಳುಹಿಸುತ್ತಿದ್ದರು.
ಅಂದು ಮನೆಗೆ ಬಂದ ಜನರ ಸಮಸ್ಯೆಗಳನ್ನು ಆಲಿಸಿ ಎಲ್ಲರನ್ನೂ ಕಳುಹಿಸಿದ ನಂತರ ಊಟ ಮಾಡಿ ಮಲಗಿದ್ದರು. ಹಳ್ಳಿ ಕಡೆ ರಾತ್ರಿ 8 ಗಂಟೆಯೊಳಗೆ ಊಟ ಮಾಡಿ, 9 ಗಂಟೆಗೆ ಮಲಗಿಬಿಡುತ್ತಾರೆ. ಬೆಳಗ್ಗೆ 4 ಗಂಟೆಗೆ ಎದ್ದು ದೈನಂದಿನ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ರೂಢಿ. ಇದಕ್ಕೆ ವೃತ್ತಿನಿರತ ರಾಜಕಾರಣಿ ಸತ್ತಾರ್ಸಾಬ್ ಕೂಡಾ ಹೊರತಾಗಿರಲಿಲ್ಲ. ಹಾಗಾಗಿಯೇ ಅವರು ಒಂಬತ್ತು ಗಂಟೆ ಮುಗಿಯುವುದರೊಳಗೆ ಬೆಡ್ರೂಂ ಸೇರಿದ್ದರು.
ರಾತ್ರಿ 10 ಗಂಟೆ. ಗ್ರಾಮದಲ್ಲಿ ಏನೋ ಗಲಭೆ ನಡೆಯುತ್ತಿರುವುದು ಸತ್ತಾರ್ಸಾಬ್ ಕಿವಿಗೆ ಬಿತ್ತು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕುಡಿಯುವವರ ಸಂಖ್ಯೆ ಅಂದಿನ ದಿನಗಳಲ್ಲಿ ತೀರಾ ಕಡಿಮೆ ಎನ್ನುವ ಮಟ್ಟದಲ್ಲಿತ್ತು. ಇದ್ದ ಅಲ್ಪಸ್ವಲ್ಪ ಕುಡುಕರು ನಿತ್ಯ ಮನೆಯಲ್ಲಿ ಜಗಳ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಆ ಜಗಳ ನಡೆಯುವುದು ಸಂಜೆಯ ವೇಳೆ. ತೀರಾ ರಾತ್ರಿಯಾದಂತೆ ಮತ್ತಿನ ನಶೆ ನೆತ್ತಿಗೇರಿ ಕುಡುಕ ಮಹಾಶಯರು ನಿದ್ದೆಗೆ ಜಾರುತ್ತಾರೆ. ಆದರೆ ಅಂದು ತಡ ರಾತ್ರಿ ಗದ್ದಲ ಕೇಳಿಸುತ್ತಿರುವುದು ಸತ್ತಾರ್ ಸಾಬ್ಗೆ ಸ್ವಲ್ಪ ಅನುಮಾನ ಮೂಡಿಸಿತ್ತು. ಆಗಲೇ ಅವರು ಎಚ್ಚೆತ್ತು ಮನೆಯಲ್ಲಿದ್ದ ಲ್ಯಾಂಡ್ಲೈನ್ ಫೋನ್ನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಅನಾಹುತ ತಪ್ಪುತ್ತಿತ್ತಾ? ಗೊತ್ತಿಲ್ಲ.
ಹೊರಗೆ ನಡೆಯುತ್ತಿರುವ ಗದ್ದಲ ಏನು ಎಂಬುದನ್ನು ನೋಡಲು ಭದ್ರಪಡಿಸಿದ್ದ ಬಾಗಿಲು ತೆಗೆದು ಹೊರಬಂದರು. ಹಾಗೆ ಹೊರಬರುವುದನ್ನೇ ಕಾಯುತ್ತಿದ್ದ ಆಗಂತುಕರು ಹಸಿದ ಹೆಬ್ಬುಲಿಗಳಂತೆ ಅವರ ಮೇಲೆ ಎರಗಿದರು. ಹೊರ ಬಂದಿರುವುದು ಸತ್ತಾರ್ ಸಾಬ್ ಎಂಬ ವಿಷಯ ಅರಿತ ಕೂಡಲೇ ನಾಲ್ವರು ಶಸ್ತ್ರಧಾರಿಗಳು ಅವರನ್ನು ಸುತ್ತುವರೆದು ಕೈಯಲ್ಲಿದ್ದ ಬಂದೂಕುಗಳನ್ನು ನೇರವಾಗಿ ಹಣೆಗೆ ಗುರಿಯಿಟ್ಟು ಮುಂದೆ ನಡೆಯುವಂತೆ ಸೂಚಿಸಿದರು.
ಮೊದಲೇ ಹೇಳಿದಂತೆ ಸತ್ತಾರ್ಸಾಬ್ ಅವರ ಮನೆ ಇದ್ದುದು ಬಾಗೇಪಲ್ಲಿ ಗೋರಂಟ್ಲ ಮುಖ್ಯರಸ್ತೆಯ ಪಕ್ಕದಲ್ಲೇ. ಅವರ ಮನೆಯ ಬಾಗಿಲು ಇಳಿದರೆ ಮುಖ್ಯರಸ್ತೆ ಎದುರಾಗುತ್ತಿತ್ತು. ಬಲಿ ಮಿಕ ಕೈಗೆ ಸಿಕ್ಕಿದೆ ಎಂಬುದು ಅರಿವಾಗುತ್ತಲೇ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಇನ್ನೂ ಐದಾರು ಶಸ್ತ್ರಧಾರಿಗಳು ಅವರನ್ನು ಕೂಡಿಕೊಂಡರು. 10ಕ್ಕೂ ಹೆಚ್ಚು ಜನರ ತಂಡ ಸತ್ತಾರ್ ಸಾಬ್ರನ್ನು ಸುತ್ತುವರೆದಿತ್ತು. ಪ್ರತಿಯೊಬ್ಬರ ಕೈಯಲ್ಲೂ ಮಿರಮಿರನೆ ಮಿಂಚುವ ನೂತನ ಮಾದರಿಯ ಬಂದೂಕುಗಳಿದ್ದವು.
ಇವರ ಜತೆಗೆ ಕೆಲವು ಮುಸುಕುಧಾರಿಗಳು ಮಂದ ಬೆಳಕಿನಲ್ಲಿ ಮಿಂಚುವ ಭಯಾನಕ ಮಾದರಿಯ ಮಚ್ಚು ಲಾಂಗುಗಳನ್ನು ಹಿಡಿದು ಗುಂಪಿನೊಂದಿಗೆ ಸೇರಿಕೊಂಡರು. ಇವರೆಲ್ಲರೂ ನಕ್ಸಲೀಯರೇ? ಅಥವಾ ನಕ್ಸಲೀಯರಿಗೆ ಬೆಂಬಲಿಸಿ ಸತ್ತಾರ್ಸಾಬ್ ವಿರೋಧಿಗಳು ಗುಂಪಿನೊಂದಿಗೆ ಕೈಜೋಡಿಸಿದ್ದರೆ? ಈ ಪ್ರಶ್ನೆಗಳು ಇಂದಿಗೂ ಕಾಡುತ್ತಿವೆ. ಆದರೆ, ಸ್ಪಷ್ಟ ಉತ್ತರ ಮಾತ್ರ ಲಭ್ಯವಾಗಿಲ್ಲ. ಸತ್ತಾರ್ ಸಾಬ್ ಮನೆಯು ಗ್ರಾಮದ ಒಂದು ಅಂಚಿನಲ್ಲಿದ್ದರೆ ಅವರನ್ನು ಮುಖ್ಯರಸ್ತೆಯ ಮೂಲಕ ಮೆರವಣಿಗೆ ಮಾಡಿ ಗ್ರಾಮದ ಮಧ್ಯಭಾಗಕ್ಕೆ ಕರೆತರಲಾಯಿತು.
----
ಮುಖ್ಯರಸ್ತೆಯ ಮೂಲಕ ಅವರನ್ನು ಕರೆತಂದು, ಸರ್ಕಲ್ನಲ್ಲಿ ನಿಲ್ಲಿಸಲಾಯಿತು. ಗ್ರಾಮಸ್ಥರನ್ನು ಹೆದರಿಸುವ ಕಾರಣಕ್ಕೆ ಒಂದೆರಡು ನಾಡಬಾಂಬ್ಗಳನ್ನು ಸಿಡಿಸಿ ಜನರನ್ನು ಚದುರಿಸಲಾಯಿತು. ಸರ್ಕಲ್ನಲ್ಲಿ ಅವರನ್ನು ನಿಲ್ಲಿಸಿ 'ನಮ್ಮ ಸಂಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು, ಸಂಘಟನೆ ಬಗ್ಗೆ ಅಪಪ್ರಚಾರ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ಭೂರ್ಜುವಾ ನಾಯಕರಿಗೆ ಇದು ಎಚ್ಚರಿಕೆ. ಮುಂದೆ ಮತ್ತೊಂದು ಅನಾಹುತವನ್ನು ನಮ್ಮ ಕೈಯಲ್ಲಿ ಮಾಡಿಸುವ ಸಾಹಸಕ್ಕೆ ಯಾರೂ ಕೈ ಹಾಕಬೇಡಿ. ಒಂದು ವೇಳೆ ನಮ್ಮ ಆಜ್ಞೆ ಮೀರಿ ಸಾಹಸ ಮಾಡಿದವರಿಗೆ ಇದೇ ಗತಿಯಾಗುತ್ತದೆ' ಎಂಬ ಎಚ್ಚರಿಕೆಯ ಸಂದೇಶವನ್ನು ಅಲ್ಲಿ ನಾಯಕನ ಸ್ಥಾನದಲ್ಲಿದ್ದ ವ್ಯಕ್ತಿ ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿದ್ದ ಎತ್ತಿನ ಗಾಡಿಯ ಮೇಲೆ ನಿಂತು ರವಾನಿಸಿದ್ದ.
ಆ ವ್ಯಕ್ತಿ ಅಲ್ಲಿಂದ ಕೆಳಗೆ ಇಳಿಯುತ್ತಿದ್ದಂತೆ ಅದೇ ಹಸಿರು ನಿಶಾನೆ ಎಂಬಂತೆ ಕಾಯುತ್ತಿದ್ದ ಇತರರು ಸತ್ತಾರ್ ಸಾಬ್ರನ್ನು ಕೊಚ್ಚಲಾರಂಭಿಸಿದರು. ಅವರ ಕುಟುಂಬದವರ ಆರ್ತನಾದ ಮುಗಿಲುಮುಟ್ಟಿದ್ದರೆ ಮಚ್ಚಿನ ಏಟುಗಳಿಂದ ತತ್ತರಿಸಿದ ಅವರು ನೆಲಕ್ಕೆ ಉರುಳಿದರು. ಆತನ ಜೀವ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಗುಂಪು ತಮ್ಮ ಸಂಘಟನೆಯ ನಾಯಕರಿಗೆ ಜಯಕಾರ ಹಾಕುತ್ತಾ ಅಲ್ಲಿಂದ ಜಾಗ ಖಾಲಿಮಾಡಿತು.
ಒಬ್ಬ ಜನಪ್ರತಿನಿಧಿ ಕೊಲೆಯಾದರೆ ಪೊಲೀಸರಿಗೆ ಸುದ್ದಿ ಮುಟ್ಟಿದ್ದು ಅವರ ಕೊಲೆಯದ ಎರಡು ಮೂರು ಗಂಟೆಗಳ ನಂತರ! ಪೊಲೀಸರು ಬಂದಿದ್ದು ಬೆಳಗಾಗುವ ವೇಳೆಗೆ!
-----
ಕೊಲೆ ನಡೆದ ನಂತರ ಬಂದ ಪೊಲೀಸರು, ಕರ್ತವ್ಯ ಪೂರೈಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನಕ್ಸಲೀಯರನ್ನು ಮಟ್ಟಹಾಕುವ ಮಾತುಗಳನ್ನಾಡಿದರು. ಯಾರೇನೇ ಮಾಡಿದರೂ ಈ ಘಟನೆ ಪೊಲೀಸ್ ಇಲಾಖೆಗೆ ಅಳಿಸಲಾರದ ಒಂದು ಕಪ್ಪುಚುಕ್ಕೆಯಾಗಿ ಕಾಡಿದ್ದಂತೂ ಸುಳ್ಳಲ್ಲ. ಇಷ್ಟಕ್ಕೂ ಈ ಕೃತ್ಯ ಎಸಗಿದ್ದು ನಕ್ಸಲೀಯ ನಾಯಕ ಸಾಗರ್ ತಂಡ ಎಂಬುದು ನಂತರ ಪೊಲೀಸ್ ತನಿಖೆಗಳಿಂದ ತಿಳಿದುಬಂದ ವಿಚಾರ. ಮೊದಲೇ ಹೇಳಿದಂತೆ ಕಾರ್ತಿಕ್ ಮತ್ತು ಸಾಗರ್ ಬೇರ್ಪಟ್ಟು ತಮ್ಮದೇ ತಂಡಗಳನ್ನು ರಚಿಸಿಕೊಂಡಿದ್ದರು. ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಉಭಯ ತಂಡಗಳು ತುದಿಗಾಲಲ್ಲಿ ನಿಂತಿದ್ದವು.
ಅದೇ ಸಮಯದಲ್ಲಿ ಸತ್ತಾರ್ಸಾಬ್ ಕೊಲೆಯಿಂದ ಸಾಗರ್ ತಂಡ ಕಾರ್ಯನಿರತವಾಗಿದೆ ಎಂಬುದು ಹೊರಬಿದ್ದಿತ್ತು. ಇನ್ನು ಕಾರ್ತಿಕ್ ತಂಡ ಒಂದು ಕೃತ್ಯ ಎಸಗಲೇಬೇಕಿತ್ತು. ಈ ಸಮಯದಲ್ಲಾದರೂ ಪೊಲೀಸರು ಚುರುಕಾಗಿದ್ದರೆ ಮುಂದಿನ ಅನಾಹುತ ತಪ್ಪುತ್ತಿತ್ತಾ? ಗೊತ್ತಿಲ್ಲ. ಆದರೆ ಎಂದಿನಂತೆ ಪೊಲೀಸರ ನಿರ್ಲಕ್ಷ್ಯ ಮುಂದಿನ ಅನಾಹುತಕ್ಕೆ ನಾಂದಿ ಹಾಡಿತ್ತು. ಹಾಗಾಗಿಯೇ ಕುಪ್ಪಣ್ಣನ ಕಿಡ್ನ್ಯಾಪ್ ಮತ್ತು ಮರ್ಡರ್ ನಡೆಯಿತಾ?
ಮುಂದಿನ ಸಂಚಿಕೆಯಲ್ಲಿ: ಕುಪ್ಪಣ್ಣ ಕಿಡ್ನ್ಯಾಪ್!
- ಅಶ್ವತ್ಥನಾರಾಯಣ್ ಎಲ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.