ಹೋಗು, ಮುಕ್ತನೆ! ನೀನು ಊರಿಂದೂರಿಗೆ...
ಶ್ರೀರಾಮಕೃಷ್ಣ ಮಹಾಸಂಘವು ದಿನಕಳೆದಂತೆ ಒಂದು ಆಕಾರವನ್ನು ತಳೆಯಿತು. ಅಲ್ಲಿ ಯುವ ಸನ್ಯಾಸಿಗಳು ಪರಿಪೂರ್ಣ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರು. ಈಗ ಅವರಲ್ಲಿ ಕೆಲವರು ಪರಿವ್ರಾಜಕರಾಗಿ ತೀರ್ಥಾಟನೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು. 'ಗುರುಭಾಯಿಗಳು ತಂತಮ್ಮ ಅನುಭವವನ್ನು ತಾವೇ ಗಳಿಸಿಕೊಳ್ಳಲಿ, ಈ ಮಠದಿಂದ ಬಿಡಿಸಿಕೊಂಡು ಹೋಗಿ, ಸ್ವತಂತ್ರರಾಗಿದ್ದು, ತಮ್ಮ ಸತ್ವಪರೀಕ್ಷೆ ಮಾಡಿಕೊಳ್ಳಲಿ. ಈ ಹೊಸ ಜೀವನಾನುಭವಗಳು ಅವರನ್ನು ಧೀರರನ್ನಾಗಿ, ಅಜೇಯರನ್ನಾಗಿ ಮಾಡುತ್ತವೆ. ಹೀಗೆ ಅವರು ಪುರುಷಸಿಂಹರಾಗುತ್ತಾರೆ' ಎನ್ನುತ್ತಾ ಪರಿವ್ರಾಜಕ ಜೀವನ ಕೈಗೊಳ್ಳುವಂತೆ ಯುವ ಸಾಧಕರನ್ನು ಪ್ರೋತ್ಸಾಹಿಸಿದರು.
ಮಠ ಒಂದು ಸ್ಥಿತಿಗೆ ಬರುವವರೆಗೂ ವಿವೇಕಾನಂದರು ಪರಿವ್ರಾಜಕರಾಗಿ ಹೊರಡಲಿಲ್ಲ. ಮಠ ಸ್ಥಾಪನೆಯಾದ ಮೊದಲ ನಾಲ್ಕು ವರ್ಷಗಳಲ್ಲಿ ಸಣ್ಣಪುಟ್ಟ ತೀರ್ಥಯಾತ್ರೆಗಳನ್ನು ಕೈಗೊಂಡರೂ ಮಠಕ್ಕೆ ಹಿಂದಿರುಗುತ್ತಿದ್ದರು. ಆದರೆ ತಮ್ಮ ದೀರ್ಘ ಪರ್ಯಟನೆಗೆ ಕಾಲ ಪಕ್ವವಾಗಿದೆ ಎಂಬುದನ್ನು ಮನಗಂಡು 1890ರಲ್ಲಿ ಬಾರಾನಗೋರ್ ಮಠದಿಂದ ಹೊರಟು ಸತತ ಏಳು ವರ್ಷಗಳ ಕಾಲ ಸಮಸ್ತ ಭಾರತದ ಸಂಚಾರವನ್ನೂ, ಪಶ್ಚಿಮ ದೇಶಗಳ ಜೈತ್ರಯಾತ್ರೆ ಮುಗಿಸಿ ಹಿಂದಿರುಗಿದರು.
ಪರಿವ್ರಾಜಕ ವಿವೇಕಾನಂದರು ಒಬ್ಬ ಸಾಮಾನ್ಯ ಸನ್ಯಾಸಿಯಂತೆ ಕಾವಿಬಟ್ಟೆ ತೊಟ್ಟಿದ್ದರೂ ಅವರಲ್ಲಿ ಬ್ರಹ್ಮತೇಜಸ್ಸು, ರಾಜಗಾಂಭೀರ್ಯ ಎದ್ದು ಕಾಣುತ್ತಿತ್ತು. ಕೈಯಲ್ಲಿ ದಂಡ, ಕಮಂಡಲ ಹಾಗೂ ಒಂದು ಪುಟ್ಟ ಗಂಟು; ಗಂಟಿನಲ್ಲಿ ಪುಸ್ತಕಗಳು, ಒಂದು ಭಗವದ್ಗೀತೆ; ಇನ್ನೊಂದು ದಿ ಇಮಿಟೇಷನ್ ಆಫ್ ಕ್ರಿಸ್ತ. ಇವಿಷ್ಟನ್ನು ಹಿಡಿದುಕೊಂಡು ಕಾಷಾಯ ವಸ್ತ್ರಧಾರಿಯಾಗಿ ಸ್ವಾಮೀಜಿ ಪರಮೋಲ್ಲಾಸದಿಂದ ಪರಿವ್ರಾಜಕರಾಗಿ ಸಾಗುತ್ತಿದ್ದರು.
-ಆನಂದ ಎಸ್.ಎನ್.
anandsn193@gmail.com