ಎದೆಯಲಿ ತಟಪಟ
ಮಳೆಯೆಂದರೆ ಏನೋ ಖುಷಿ. ಆದರೆ, ಹೃದಯಕ್ಕೆ ಮಾತ್ರ ಕಸಿವಿಸಿ. ಮಳೆ ಉಲ್ಲಾಸ, ಚೈತನ್ಯ ತರುವುದೇನೋ ಸಹಜ. ಆದರೆ,...
ಮಳೆಯೆಂದರೆ ಏನೋ ಖುಷಿ. ಆದರೆ, ಹೃದಯಕ್ಕೆ ಮಾತ್ರ ಕಸಿವಿಸಿ. ಮಳೆ ನಮ್ಮಲ್ಲೇನೋ ಉಲ್ಲಾಸ, ಚೈತನ್ಯ ತರುವುದೇನೋ ಸಹಜ. ಆದರೆ, 'ಲಬ್ ಲಬ್' ಅಂತ ಬಡಿದುಕೊಳ್ಳುವ ಈ ಹೃದಯ ಮಳೆಗಾಲದಲ್ಲೇ ಹೆಚ್ಚು ಕೈಕೊಡುತ್ತದೆ. ಬೇಕಾದರೆ, ಈಗಲೇ ಟಿವಿ ಆನ್‌ಮಾಡಿ ನೋಡಿ... ಯಾವುದಾದರೂ ಹೃದಯಾಘಾತದ ಬ್ರೇಕಿಂಗ್ ನ್ಯೂಸುಗಳು ಬರುತ್ತಿರಲೂಬಹುದು!
ಕಾಲಕ್ಕೂ, ಹೃದಯಕ್ಕೂ ನಂಟಿದೆ. ಅದರಲ್ಲೂ ಮಳೆ- ಚಳಿ ಇರುವ ತಿಂಗಳುಗಳಲ್ಲಿ ಹಾರ್ಟ್ ಅಟ್ಯಾಕ್ ಸಾಧ್ಯತೆಗಳು ಹೆಚ್ಚು ಅಂತಾರೆ ವೈದ್ಯರು. ವರ್ಷದ ಇನ್ನುಳಿದ ದಿನಗಳಿಗೆ ಹೋಲಿಸಿದಲ್ಲಿ, ಆಸ್ಪತ್ರೆಯಲ್ಲಿ ದಾಖಲಾಗುವ ಹೃದ್ರೋಗ ಕೇಸುಗಳು ಈ ವೇಳೆ ಅಧಿಕವಂತೆ. ಹೃದಯಾಘಾತ ಸ್ಥಿತಿಗಳಿಗೆ ಈ ಮೊದಲೇ ಒಳಗಾದ ಜನರು ಮಧುಮೇಹ, ಉಸಿರಾಟದ ತೊಂದರೆ ಮುಂತಾದ ಅಪಾಯಗಳಿಗೂ ತುತ್ತಾಗುತ್ತಾರೆ. ವಯಸ್ಸಾದವರ ಸ್ಥಿತಿಯಂತೂ ದೇವರಿಗೆ ಪ್ರೀತಿ.
ಡಾಕ್ಟರ ಸರ್ಟಿಫಿಕೇಟ್!
'ನಮ್ಮ ಆಸ್ಪತ್ರೆಯಲ್ಲಿಯೇ ತೆಗೆದುಕೊಂಡರೆ, ದಿನದ ಬೇರೆ ಸಮಯಕ್ಕೆ ಹೋಲಿಸಿದರೆ ಹೃದ್ರೋಗಿಗಳಾಗಿ ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ಬರುವ ರೋಗಿಗಳು ಅಧಿಕವಾಗಿರುತ್ತಾರೆ. ಮಳೆಗಾಲದ ದಿನಗಳಲ್ಲಿ ಸಂಭವಿಸುವ ಹೃದಯಾಘಾತವು ಹೆಚ್ಚು ಗಂಭೀರ ಸ್ವರೂಪದ್ದು' ಎಂಬುದು ಫೋರ್ಟಿಸ್ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಶ್ರೀಕಾಂತ ಶೆಟ್ಟಿಯವರ ಅಭಿಪ್ರಾಯ.
ಎಲ್ಲಿ ಹೆಚ್ಚು?
ವೈದ್ಯರ ವರದಿ ಇದನ್ನೂ ವಿವರಿಸುತ್ತದೆ. ಎಲ್ಲಿ ಹೆಚ್ಚು ಮಳೆ ಬೀಳುತ್ತದೋ, ತಂಪು ಹವೆ ಎಲ್ಲಿ ಹೆಚ್ಚು ಹರಿದಾಡುತ್ತದೋ ಅಂಥ ಕಡೆಯ ಜನ ಕೇರ್‌ಫುಲ್ಲಾಗಿರಬೇಕು. ಅದರಲ್ಲೂ ಬೆಂಗಳೂರಿನಂಥ ನಗರಗಳು ಹವಾಮಾನ ವೈಪರೀತ್ಯ ಕಾಣುತ್ತಲೇ ಇರುತ್ತವೆ. ಇಲ್ಲಿ ಮಳೆಗಾಲದ ದಿನಗಳಲ್ಲದೆ, ಬೇಸಿಗೆಯ ತಂಪಾದ ದಿನಗಳಲ್ಲೂ ಹೆಚ್ಚಿನ ಹೃದಯಾಘಾತಗಳು ಸಂಭವಿಸುತ್ತವಂತೆ.
ಜಗತ್ತಿನ ವಿವಿಧ ಪ್ರದೇಶದ ಅಧ್ಯಯನಗಳೊಟ್ಟಿಗೆ ಹೋಲಿಸಿದಾಗ ಡಾ. ಶ್ರೀಕಾಂತ್ ಗಮನಿಸಿದಂತೆ, ಕೆಲವು ಸಂಗತಿಗಳು ಸಮರ್ಥನೀಯವಾಗಿ ಕಂಡುಬರುತ್ತವೆ. ಲಂಡನ್ ಚೆಸ್ಟ್ ಹಾಸ್ಪಿಟಲ್‌ನ ಡಿಪಾರ್ಟ್‌ಮೆಂಟ್ ಆಫ್ ಕಾರ್ಡಿಯಾಲಜಿಯಲ್ಲಿ ಕೈಗೊಳ್ಳಲಾದ ವಿಶ್ಲೇಷಣೆ ಪ್ರಕಾರ, ತೀವ್ರಸ್ವರೂಪದ ಮಿಯೊಕಾರ್ಡಿಯಲ್ ಪ್ರಕರಣ ಸಂಭವಿಸುವುದು, ಸರ್‌ಕಾಡಿಯನ್ ಲಯವನ್ನು ಹೊಂದಿರುವುದು ಹಾಗೂ ವಾತಾವರಣದಲ್ಲುಂಟಾಗುವ ಬದಲಾವಣೆಯು ಮಳೆಗಾಲದ ವೇಳೆ ಉನ್ನತ ಸ್ತರದಲ್ಲಿರುವುದಾಗಿ ಕಂಡುಬಂದಿತ್ತು. ವಾತಾವರಣದಲ್ಲಿನ ಉಷ್ಣತೆಯ ಪರಿಣಾಮವನ್ನು ಈ ಸಂಗತಿ ಎತ್ತಿಹಿಡಿಯುತ್ತದೆ.
ಹಾರ್ಟೇಕೆ ಕೈಕೊಡುತ್ತದೆ?
ಮಳೆಗಾಲ ಹಾಗೂ ಶೀತದಿಂದ ಕೂಡಿದ ದಿನಗಳಲ್ಲಿ ಸಿಂಪಥೆಟಿಕ್ ಡಿಸ್ಚಾರ್ಜ್ ಅಂದರೆ, ರಕ್ತವನ್ನು ಪಂಪುಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಇದರಿಂದಾಗಿ ಹೃದಯದ ಮೇಲಿನ ಒತ್ತಡ ಜಾಸ್ತಿಯಾಗುತ್ತದೆ. ಈ ಹಿಂದೆಯೇ ಹೃದಯ ನಾಳಗಳಲ್ಲಿ ಬ್ಲಾಕ್ ಇರುವ ಅಥವಾ ಬ್ಲಾಕ್‌ಗೆ ಒಳಗಾಗಬಹುದಾದ ಲಕ್ಷಣವಿರುವ ರೋಗಿಗಳಲ್ಲಿ, ತಡೆಗಳು ಬಿರುಕುಗೊಂಡು ಸ್ರಾವ ಉಂಟಾಗಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು.
ಅಲ್ಲದೆ, ಮಳೆಗಾಲದಲ್ಲಿ ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟುವ ಸಾಧ್ಯತೆಯೂ ಅಧಿಕ. ವೈರಲ್ ಸೋಂಕು ತಗಲುವ ಸಾಧ್ಯತೆಯೂ ಹೆಚ್ಚು. ಉಸಿರಾಟ ಹಾಗೂ ಶ್ವಾಸಕೋಶಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚು. ಇವೆಲ್ಲ ಹಾರ್ಟ್ ಅಟ್ಯಾಕ್ ತಂದೊಡ್ಡಲೂಬಹುದು. ವಯಸ್ಸಾದವರು ಹೆಚ್ಚಿನ ಪ್ರಮಾಣದಲ್ಲಿ ಇದಕ್ಕೆ ತುತ್ತಾಗುತ್ತಾರೆ ಎನ್ನುತ್ತಾರೆ ಡಾ. ಶ್ರೀಕಾಂತ್.
ನೀವು ಸೇಫ್ ಆಗ್ಬೇಕಾ?
- ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವುದನ್ನು ಬಿಡಬೇಕು.
- ಬೆಚ್ಚನೆಯ, ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಬೇಕು.
- ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
- ಶ್ವಾಸಕೋಶ ಸೋಂಕಿಗೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು.
- ಅತಿಯಾದ ಸುಸ್ತು, ಉಸಿರುಗಟ್ಟಿದಂತಾಗುವುದು, ಎದೆಯುರಿ ಮುಂತಾದ ಗುಣಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಕಾಣಬೇಕು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.