ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಲ್ಲು, ಎದುರಿಸಿ ನಿಲ್ಲು!

Mainashree
Updated On : 28 Jul 2013, 3:55 am

ಸ್ವಾಮಿ ವಿವೇಕಾನಂದರ ಬೋಧನೆಗಳು ಅವರ ಜೀವನದ ಕುಲುಮೆಯಲ್ಲಿ ಕುದ್ದು ಕುದ್ದು ಹೊರಬಂದ ಅನುಭವದ ರಸಪಾಕ.  ಆ ಅನುಭವಗಳು ಜೀವನ ಪಾಠಗಳಾಗಿ ಅವರ ಬದುಕನ್ನೇ ಬದಲಿಸಿದವು. ಅಂತಹ ಒಂದು ಅದ್ಭುತ ಜೀವನಪಾಠವನ್ನು ಅವರು ವಾರಣಾಸಿಯಲ್ಲಿ ಕಲಿತರು.
ಸ್ವಾಮೀಜಿ ಮಠದಿಂದ ಹೊರಟು ಮೊದಲು ಬಂದಿದ್ದು ವಾರಣಾಸಿಗೆ. ಒಂದು ದಿನ ಬೆಳಗ್ಗೆ ಸ್ವಾಮೀಜಿ ದುರ್ಗೆಯ ದರ್ಶನ ಮಾಡಿಕೊಂಡು ಬರುತ್ತಿದ್ದಾಗ, ಕೋತಿಗಳು ಹಿಂಡು ಹಿಂಡಾಗಿ ಬಂದು ಮುತ್ತಿಕೊಂಡವು. ಅವು ಅವರನ್ನು ಮುಂದುವರಿಯಲು ಬಿಡದೆ ಕಿರುಚತೊಡಗಿದವು. ಸ್ವಾಮೀಜಿ ದಾಪುಗಾಲು ಹಾಕುತ್ತ ನಡೆಯತೊಡಗಿದರು. ಕೋತಿಗಳು ವಿಚಿತ್ರವಾಗಿ ಕಿರುಚುತ್ತ ಅಟ್ಟಿಸಿಕೊಂಡು ಬಂದವು. ಸ್ವಾಮೀಜಿ ಓಡಲಾರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ಎದುರುಗಡೆಯಿಂದ ಬಂದ ವೃದ್ಧ ಸಾಧುವೊಬ್ಬರು, ಹೇಳಿದರು, 'ನಿಲ್ಲು, ಆ ಪ್ರಾಣಿಗಳನ್ನು ಎದುರಿಸು!' ಸ್ವಾಮೀಜಿ ಕೋತಿಗಳಿಗೆ ಬೆನ್ನುಮಾಡಿ ಓಡುತ್ತಿದ್ದವರು ಇದ್ದಕ್ಕಿದ್ದಂತೆ ಎದುರಿಸಿ ನಿಂತು ಕೋತಿಗಳನ್ನು ದುರುಗುಟ್ಟಿ ನೋಡಿದರು. ಏನಾಶ್ಚರ್ಯ! ತಕ್ಷಣ ಆ ಕೋತಿಗಳೆಲ್ಲ ಓಟಕಿತ್ತವು. ವಿಸ್ಮಯಾನಂದಗಳಿಂದ ಸ್ವಾಮೀಜಿ ಆ ಸಾಧುವಿಗೆ ಕೃತಜ್ಞತೆಯಿಂದ ನಮಿಸಿದರು.
ಈ ಘಟನೆಯನ್ನು ಉದಾಹರಿಸುತ್ತಾ ಸ್ವಾಮೀಜಿ ನ್ಯೂಯಾರ್ಕ್‌ನಲ್ಲಿ ಭಾಷಣ ಮಾಡುವಾಗ ಹೇಳುತ್ತಾರೆ, 'ನಮ್ಮ ಇಡೀ ಜೀವನಕ್ಕೆ ಅನ್ವಯಿಸುವ ದೊಡ್ಡ ಪಾಠವಿದು. ಕಷ್ಟಗಳನ್ನು ಎದುರಿಸಿ ಧೈರ್ಯವಾಗಿ ಎದುರಿಸಿ ನಿಲ್ಲಿ. ಕಷ್ಟಕಾರ್ಪಣ್ಯಗಳನ್ನು ಕಂಡು ಹೆದರಿ ಓಡಿಹೋಗುವ ಬದಲು ಎದುರಿಸಿ ನಿಂತದ್ದೇ ಆದರೆ ಅವು ಆ ಕೋತಿಗಳಂತೆಯೇ ಪಲಾಯನ ಮಾಡುತ್ತವೆ. ನಮ್ಮಲ್ಲಿರುವ ಭಯ-ಅಜ್ಞಾನಗಳು, ಕಷ್ಟಕಾರ್ಪಣ್ಯಗಳು ತೊಲಗಬೇಕಾದರೆ ನಾವುಅವುಗಳನ್ನು ಎದುರಿಸಿ ಹೋರಾಡಬೇಕು.'
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement