ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉನ್ಮಾದವೇ ರಿಯಾಲಿಟಿ ಶೋಗಳ ಬಂಡವಾಳವಾ?

Lingaraj Badiger
Updated On : 29 Jul 2013, 4:35 am

ಪ್ರಾಮಾಣಿಕ ಸ್ಪರ್ಧಿಗೆ ಹತಾಶೆ
ಇತ್ತೀಚಿನ ರಿಯಾಲಿಟಿ ಶೋಗಳು ವೀಕ್ಷಕರಲ್ಲಿ ಹಲವು ಅನುಮಾನಗಳನ್ನು ಹುಟ್ಟಿಹಾಕಿವೆ. ರಿಯಾಲಿಟಿ ಶೋ ಎಂದರೆ ಮಾತೆತ್ತಿದರೆ, ಕೆಲಸಕ್ಕೆ ಬಾರದ್ದಕ್ಕೆಲ್ಲ ಜಗಳವಾಡುವುದೇ? ಅಂಕೆಯೇ ಇಲ್ಲದೆ ಹೆಣ್ಣು-ಗಂಡುಗಳು ಮೈಮೇಲೆ ಬಿದ್ದು ಒದ್ದಾಡುವುದೇ? ಮಾತೆತ್ತಿದರೆ ಮುತ್ತುಗಳ ವಿನಿಮಯವೇ? ಸಂಬಂಧಗಳು ಸೀಮಿತವಾಗಿದ್ದರೂ ಅದನ್ನು ತೀರಾ ಪಾರದರ್ಶಕವಾಗಿ ತೆರೆಯ ಮೇಲೆ ವಿಜೃಂಭಿಸುವುದೇ? ಉನ್ಮಾದ ಬಂದಂತೆ ನಗುವುದು-ಅಳುವುದು-ಕಿರುಚುವುದೇ? ಎಲ್ಲೆ ಮೀರಿ ವರ್ತಿಸುವುದೆ? ಕಡೆಯದಾಗಿ, ಇಂಥವರಿಗೇ ಬಹುಮಾನ ಎಂದು ಮೊದಲೇ ನಿರ್ಧಾರವಾಗಿದ್ದರೂ ನಿಜವಾದ ಪ್ರತಿಭೆಗೆ, ಅಷ್ಟೊಂದು ದಿನಗಳ ಕಾಲ ಉತ್ಸಾಹ-ಹುಮ್ಮಸ್ಸು ಕಾಯ್ದಿಟ್ಟುಕೊಂಡೇ ಬಂದ ಸ್ಪರ್ಧಿಗೆ ಸಿಗುವುದು ಹತಾಶೆಯೇ ಅಲ್ಲವೆ?
- ಬಿ.ಕೆ.ಮೀನಾಕ್ಷಿ, ಮೈಸೂರು

ರಿಯಲ್ ಹೀರೋಗಳನ್ನು ತೋರಿಸಿ
ನನ್ನ ಪ್ರಕಾರ ರಿಯಾಲಿಟಿ ಶೋಗಳಿಗೆ ವಯಸ್ಸಿನ ಇತಿ-ಮಿತಿಗಳಿರಬೇಕು. ಏಕೆಂದರೆ ಈಗ ಎಲ್ಲ ವಾಹಿನಿಗಳು  ನಾ ಮುಂದೆ, ತಾ ಮುಂದೆ ಎಂದು ಮಕ್ಕಳಿಗಾಗಿ ಸಾಕಷ್ಟು ರಿಯಾಲಿಟಿ ಶೋಗಳನ್ನು ತಂದಿವೆ. ಆದರೆ ಈ ಶೋಗಳು ಮಕ್ಕಳಿಗೆ ಶೇ 20ರಷ್ಟು ಆತ್ಮವಿಶ್ವಾಸ, ಧೈರ್ಯ ತುಂಬಿದರೆ,  ಶೇ. 80ರಷ್ಟು ಭಯ, ಖಿನ್ನತೆ, ಜಿಗುಪ್ಸೆಗೆ ಕಾರಣವಾಗಿವೆ. 'ನೀನು ಗೆಲ್ಲಲೇ ಬೇಕು' ಎಂಬ ಪಾಲಕರ ಒತ್ತಡವೂ ಇದಕ್ಕೆ ಕಾರಣವಾಗಿದೆ. ಇಂಥ ಶೋಗಳಿಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಒಲವು ಕಡಿಮೆಯಾಗಿದ್ದು, ಅವರಿಗೂ ನಾವು ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೆಚ್ಚುತ್ತಿದೆ. ನಮ್ಮ ದೇಶಕ್ಕಾಗಿ, ನಮ್ಮ ಭಾಷೆಗಾಗಿ ಹೋರಾಡಿದ ರಿಯಲ್ ಹೀರೋ, ಹೀರೋಯಿನ್‌ಗಳನ್ನು ರಿಯಾಲಿಟಿ ಶೋಗಳಲ್ಲಿ ತೋರಿಸಿದರೆ ತುಂಬಾ ಉಪಯುಕ್ತವಾಗುತ್ತದೆ.
ಟಪ್ರತಿಮಾ ಪ್ರದೀಪ ಮರಳಿ, ಗುಳೇದಗುಡ್ಡ

ಸ್ಪರ್ಧಿಯೇ ನಿಜವಾದ ಬಲಿಪಶು!
ಕನ್ನಡಕ್ಕೂ ಕಾಲಿಟ್ಟಿರುವ ರಿಯಾಲಿಟಿ ಶೋಗಳು ಇಂಗ್ಲೀಷ್, ಹಿಂದಿಯಿಂದ ಆಮದಾದ ಕಾರ್ಯಕ್ರಮ ಅಷ್ಟೇ. ಇವುಗಳಿಂದ ಯಾರಿಗೆ ಲಾಭ? ಎಷ್ಟೋ ಬಾರಿ ಕುಸಿದ ಟಿ.ಆರ್.ಪಿ ಮೇಲೆತ್ತಲು ಇವು ನೆರವಾಗಿದ್ದಿದೆ. ಎರಡನೆಯದಾಗಿ, ಕಾರ್ಯಕ್ರಮ ನಡೆಸಿಕೊಡುವವರು ಹಾಗೂ ತೀರ್ಪುಗಾರರು. ಹಾಡು, ನೃತ್ಯ ಮುಂತಾದ ಕಾರ್ಯಕ್ರಮಗಳ ತೀರ್ಪುಗಾರರನ್ನು ಗಮನಿಸಿದರೆ ಯಾರಿಗೆ ಮಾರ್ಕೆಟ್‌ನಲ್ಲಿ ಡಿಮ್ಯಾಂಡ್ ಕಡಿಮೆಯಾಗಿದೆಯೋ ಅವರೇ ಆಯ್ಕೆಯಾಗಿರುತ್ತಾರೆ. ಕಾರ್ಯಕ್ರಮ ಮುಗಿಸುವಷ್ಟರಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸು ಹೆಚ್ಚಿರುತ್ತದೆ. ಮೂರನೆಯದಾಗಿ, ಎಸ್‌ಎಂಎಸ್ ಸೇವೆ ಒದಗಿಸುವ ಕಂಪನಿಗಳು. ಅವುಗಳಿಗೂ ಹಣದ ಹೊಳೆಯೇ ಹರಿಯುತ್ತದೆ. ಇವೆಲ್ಲದರ ಮಧ್ಯೆ ಬಲಿಪಶುಗಳು ಪ್ರತಿಭೆ ತೋರಿಸಲು ಬಂದಿರುವ ಸ್ಪರ್ಧಿಗಳು. ಇವರೆಲ್ಲರಿಗಿಂತ ದೊಡ್ಡ ಬಕರಾಗಳು ನಮ್ಮಂತಹ ವೀಕ್ಷಕರು!
-ಎಸ್.ಚಂದ್ರಕಾಂತ, ಬೆಂಗಳೂರು

ಕಾಲಹರಣವಷ್ಟೆ
ಪೈಪೋಟಿ ಮೇಲೆ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಸಮಾಜಕ್ಕೆ ಪ್ರೇರಕವಾಗುವ ಯಾವುದೇ ಅಂಶಗಳಿಲ್ಲ. ನೈಜತೆಯಂತೂ ಇಲ್ಲವೇ ಇಲ್ಲ. ಕೇವಲ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಒಂದು ಗಂಟೆ ಅವರಿಂದ ಮೋಜು, ಮಸ್ತಿ, ಕುಣಿತಗಳನ್ನು ಪ್ರದರ್ಶಿಸುವ, ಅವರ ವೈಯುಕ್ತಿಕ ವಿಷಯಗಳನ್ನು ವೀಕ್ಷಕರಿಗೆ ತೆರೆದಿಡುವಂತಹ ಕೆಲಸವನ್ನು ರಿಯಾಲಿಟಿ ಶೋಗಳಲ್ಲಿ ಮಾಡಲಾಗುತ್ತಿದೆ. ಇದರಿಂದಾಗಿ ಇವು ಕೇವಲ ಕಾಲಹರಣ ಮಾಡುವ ಕಾರ್ಯಕ್ರಮಗಳಾಗಿವೆ.
-ಕೃತಿ ಹಿರೇಮಠ್, ಹಗರಿಬೊಮ್ಮನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement