ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಮ್ಮ ಕಾಲಕ್ಕೆ ಕಾಯಿರಿ

Lingaraj Badiger
Updated On : 29 Jul 2013, 4:31 am

ನಿಮ್ಮನ್ನು ನೋಡಿ ಸಹೋದ್ಯೋಗಿಗಳು ಆಡಿಕೊಳ್ಳುತ್ತಿದ್ದಾರೆಯೆ? ಸ್ನೇಹಿತರ ಕುಹಕ ನಿಮ್ಮನ್ನು ಇರಿಯುತ್ತಿದೆಯೆ? ನಿಮ್ಮ ಸ್ಥಿತಿಗೆ ಬಂಧುಗಳು ನಗುತ್ತಿದ್ದಾರೆಯೆ? ವೈರಿಗಳ ಅಟ್ಟಾಹಾಸ ಮೇರೆ ಮೀರಿದೆಯೆ? ನಿಮ್ಮವರೇ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಯೆ? ತೀರಾ ನಂಬಿದವರೇ ನಿಮ್ಮ ಕಣ್ಣೆದುರೇ ನಿಮಗೆ ದ್ರೋಹ ಬಗೆಯುತ್ತಿದ್ದಾರೆಯೆ? ಇವೆಲ್ಲದರ ಒಟ್ಟು ಪರಿಣಾಮ ನಿಮಗೆ ಜೀವನವೇ ಜುಗುಪ್ಸೆ ಎನಿಸಿಬಿಟ್ಟಿದೆ. ಹತಾಶೆ ಇನ್ನಿಲ್ಲದಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ನಿರಾಸೆ ಇಮ್ಮಡಿಸುತ್ತಿದೆ. ಛೇ, ಎಲ್ಲಾದರೂ ಇವರೆಲ್ಲರಿಂದ ದೂರ ಓಡಿ ಹೋಗಿಬಿಡಬೇಕು. ಇಲ್ಲಿ ಬೆಲೆ ಇಲ್ಲದ ಮೇಲೆ ಇದ್ದು ಏನು ಪ್ರಯೋಜನ? ಯಶಸ್ವಿಯಾಗ ಬಯಸುವವರು ಎಂದಿಗೂ ಇಂಥ ಸನ್ನಿವೇಶದಲ್ಲಿ ಹೀಗೆ ಯೋಚಿಸುವುದೇ ಇಲ್ಲ. ಇವಕ್ಕೆಲ್ಲ ಆತನ ಬಳಿಯಿರುವುದು ಒಂದೇ ಉತ್ತರ, ಏಕೈಕ ಪ್ರತಿಕ್ರಿಯೆ. ಅದು ದಿವ್ಯ ಮೌನ. ಅದನ್ನು ಬಿಟ್ಟರೆ ಪುಟ್ಟದೊಂದು ವ್ಯಂಗ್ಯ ಭರಿತ ನಗು. ಇಂಥ ಸನ್ನಿವೇಶಕ್ಕೆ ಖಂಡಿತಾ ಕುಗ್ಗಬಾರದು. ನಿಮ್ಮನ್ನು ಈ ಸ್ಥಿತಿಗೆ ತಳ್ಳಿದ ಕಾಲವನ್ನು ನಿಮ್ಮ ವ್ಯಂಗ್ಯದ ಮೂಲಕವೇ ಎದುರಿಸಬೇಕು. ಇದಕ್ಕೆ ಕಾರಣವಿಷ್ಟೆ, ಈಗ ಕಾಲ ನಿಮ್ಮದಲ್ಲ. ಅಂದರೆ ನಿಮ್ಮ ಕಾಲ ನಾಳೆ ಬರಲಿದೆ. ಕಾಯುವ ತಾಳ್ಮೆ ಇಲ್ಲದೇ ದುಡುಕಿ ಹೇಗೆ ಹೇಗೋ ಪ್ರತಿಕ್ರಿಯಿಸಿಬಿಟ್ಟಿರೋ ನಾಳೆಯ ನಿಮ್ಮ ದಿನವನ್ನು ನೀವು ಹಾಳು ಮಾಡಿಕೊಂಡಂತೆಯೇ. ನಿಮ್ಮದಲ್ಲದ ಸಮಯದಲ್ಲಿ ವಿಚಲಿತರಾಗದೇ ತಣ್ಣಗೆ ಕಾಯುವುದಿದೆಯಲ್ಲಾ, ಅದು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಇಂಥವಕ್ಕೆಲ್ಲಾ ಪ್ರತಿಕ್ರಿಯಿಸುವುದು ಹೇಗೆಂಬ ಚಿಂತೆಗೆ ಬೀಳುವ ಬದಲಿಗೆ ಇದಕ್ಕೆ ಕಾರಣವೇನು, ಇದನ್ನು ದಾಟಿ ಬರುವುದು ಹೇಗೆ ಎಂಬ ಚಿಂತನೆಯನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಕತೃತ್ವ ಶಕ್ತಿಯನ್ನು ಉದ್ದೀಪಿಸಿಕೊಳ್ಳಿ. ಇವಕ್ಕೆಲ್ಲಾ ಸಾಧನೆಯ ಮೇಲೆಯೇ ಉತ್ತರಿಸುತ್ತೇನೆ ಎಂಬ ಹಠಕ್ಕೆ ನಿಲ್ಲಿ. ನಿಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ದುಡಿಯಿರಿ. ನೀವಂದುಕೊಂಡಿದ್ದನ್ನು ಸಾಧಿಸುವ ಛಲ ನಿಮ್ಮನ್ನು ಮುನ್ನಡೆಸಲಿ. ಒಮ್ಮೆ ನೀವು ಅದರ ಹೊಸ್ತಿಲಿಗೆ ಹೋಗಿ ನಿಲ್ಲುತ್ತೀರಲ್ಲಾ, ಆಗ ಒಂದೊಂದೇ ಕೈಗೆತ್ತಿಕೊಳ್ಳಿ. ಇವರೆಲ್ಲರಿಗೂ ಉತ್ತರ ಕೊಡುವ ಅವಕಾಶ ಕಳೆದುಕೊಳ್ಳಬೇಡಿ. ಹಾಗೆಂದು ಹಳೆಯ ಅವರ ವರ್ತನೆಗೆ ಮುಯ್ಯಿ ತೀರಿಸಿಕೊಳ್ಳುವ ವರ್ತನೆಯೂ ಬೇಡ.  ಅದರ ಸ್ಥಾನವನ್ನು ಪ್ರೌಢತೆ ಆಕ್ರಮಿಸಿಕೊಳ್ಳಲಿ. ನಿಮ್ಮನ್ನು ಅವಮಾನಿಸುತ್ತಾರಲ್ಲಾ, ಅವರೇ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡಬೇಕು. ಹಾಗಿರಲಿ ನಿಮ್ಮ ನಡೆ. ಆಗ ನೋಡಿ ನೀವು ಹೇಗೆ ವಿಜೃಂಭಿಸುತ್ತೀರೆಂದು. ಹಾಗೆಂದು ಅವರೇನೂ ಬದಲಾಗರು ಬಿಡಿ. ಅತ್ತ ವಾಲಿದವರು, ನಿಮ್ಮತ್ತ ತಿರುಗಿರುತ್ತಾರೆ. ಅವರ ವ್ಯಂಗ್ಯ, ಕುಹಕ, ನಗು, ಅಟ್ಟಹಾಸ, ನಿರ್ಲಕ್ಷ್ಯ, ದ್ರೋಹದ ಗುರಿ ಬೇರೆಯವರಾಗಿರುತ್ತಾರೆ. ಮತ್ತದಕ್ಕೂ ನಿಮ್ಮದು ವ್ಯಂಗ್ಯದ ನಗುವಿನ ಉತ್ತರವೇ. ಈ ಬಾರಿ ನಿಮ್ಮ ಸ್ಥಿತಿಗಲ್ಲ, ಅವರನ್ನು ನೋಡಿ ನಗುತ್ತೀರಿ, ಅಷ್ಟೇ.
- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement