ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾಗಿದ್ದು ಸಾಕು, ಬೀಗಿ

Rashmi Kasaragodu
Updated On : 30 Jul 2013, 3:54 am

ಸಾಕಿನ್ನು ಬಗ್ಗಿದ್ದು. ಅದೆಷ್ಟು ದಿನ ಹೀಗೆ ಬಾಗುತ್ತಲೇ ಇರುತ್ತೀರಿ? ಇವತ್ತು ಬಿಟ್ಟರೆ ಮುಂದೆಂದೂ, ಮತ್ತೆಂದೂ ನಿಮಗೆ ಸೊಂಟ ಎತ್ತರಿಸಿ, ಎಲ್ಲರೆದುರು ನೆಟ್ಟಗೆ ನಿಲ್ಲುವ ಅವಕಾಶವೇ ಸಿಗಲಿಕ್ಕಿಲ್ಲ. ಅಷ್ಟಕ್ಕೂ ಬೇರೆಯವರಿಗಾಗಿ, ನಿಮ್ಮ ಸುಖವನ್ನು ಕಳೆದುಕೊಂಡು, ನಿಮ್ಮ ಸಂತೋಷವನ್ನು ಬಲಿಗೊಟ್ಟು, ನಿಮ್ಮೆಲ್ಲ ಅವಕಾಶಗಳನ್ನು ತ್ಯಾಗ ಮಾಡಿ ಹೀಗೆ ಬಾಗುತ್ತಲೇ ಇರಬೇಕಾದ ಅಗತ್ಯವಾದರೂ ಏನಿದೆ ಹೇಳಿ? ಹೋಗಲಿ ಎಂದರೆ ಇದರಿಂದ ಏನಾದರೂ ಲಾಭ ನಿಮಗಾಗಲೀ, ನಿವಂದುಕೊಂಡವರಿಗಾಗಲೀ ಆಗಿದೆಯೇ? ಅದೂ ಬೇಡ. ನೀವು ಹೀಗೆ ಬಿಟ್ಟುಕೊಟ್ಟ ಅವಕಾಶಗಳನ್ನು, ನೀವು ತ್ಯಾಗ ಮಾಡಿದ ಸುಖ- ಸಂತೋಷವನ್ನು ಸದುಪಯೋಗಪಡಿಸಿಕೊಂಡು ಅವರಾದರೂ ನೆಮ್ಮದಿಯಾಗಿ ಬದುಕಿದ್ದಾರಾ? ನಿಮ್ಮ ಅವಕಾಶವನ್ನು ಪಡೆದವರಾದರೂ ಉದ್ಧಾವಾಗಿದ್ದಾರಾ? ದೇವರಾಣೆ ಇಲ್ಲ. ಏಕೆಂದರೆ ಅವರ ಹಣೆಬರಹವೇ ಹಾಗೆ ಸ್ವಾಮಿ. ಅವರೆಂದಿಗೂ ಜೀವನದಲ್ಲಿ ಏನನ್ನೂ ಸಾಧಿಸುವವರಲ್ಲ. ಅಸಲಿಗೆ ಅವರಿಗೆ ಅಂಥದ್ದೊಂದು ಸಾಮರ್ಥ್ಯವೇ ಇಲ್ಲ. ಇದ್ದಿದ್ದಿದ್ದರೆ ಬೇರೆಯವರ ಸುಖ- ಸಂತೋಷ, ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿದ್ದರೇಕೆ? ಹಾಕಿದ ಭಿಕ್ಷೆಯಲ್ಲೇ ಬದುಕುವ ಮಂದಿ ಯಾವತ್ತಿಗೂ ಸ್ವಂತವಾಗಿ ದುಡಿದು ಗಳಿಸಿ ಬದುಕುವ ಯೋಚನೆಯನ್ನೇ ಮಾಡುವುದಿಲ್ಲ. ಅವರ ಮಿತಿ ಏನಿದ್ದರೂ ಇವತ್ತಿನ ಗಳಿಕೆಯ ಬೀದಿಗಷ್ಟೇ ಸೀಮಿತವಾಗಿರುತ್ತದೆ. ಹಾಗಂದ ಮೇಲೆ ನೀವು ಬೇರೆಯವರಿಗಾಗಿ ಮಾಡಿದ ತ್ಯಾಗಕ್ಕಾದರೂ ಅರ್ಥವೇನು?
ಇನ್ನಾದರೂ, ಸ್ವಲ್ಪ ಬುದ್ಧಿ ಕಲಿಯಿರಿ. ನೀವು ಬೇರೆಯವರಿಗೆ ಅನ್ಯಾಯ ಮಾಡಬಾರದು. ಅವರ ಅವಕಾಶ, ನೆಮ್ಮದಿಯನ್ನು ಕಿತ್ತುಕೊಳ್ಳಬಾರದು ಎಂಬುದು ಸತ್ಯ. ಅದನ್ನು ಬಿಟ್ಟು ನಾನೇನೋ ಎಲ್ಲವನ್ನೂ ಧಾರೆ ಎರೆದು ಕರ್ಣ ಎನಿಸಿಕೊಳ್ಳುತ್ತೇನೆ, ಯೌವ್ವನವನ್ನೇ ತ್ಯಾಗ ಮಾಡಿದ ಪುರು ಆಗುತ್ತೇನೆ. ಆ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತೇನೆ ಎಂಬುದೆಲ್ಲ ಭ್ರಮೆ. ಇಂಥ ಆದರ್ಶ, ಸಿದ್ಧಾಂತಗಳೆಲ್ಲ ಹಿತ ನೀಡುವುದು ಒಂದು ಹಂತದವರೆಗೆ ಮಾತ್ರವೇ. ನಿಮ್ಮ ಬದುಕನ್ನು ನೀವು ಬದುಕಿಬಿಡಿ. ನಿಮ್ಮ ಸುಖವನ್ನು ಕಳಕೊಂಡು ಬದುಕುವುದು ದ್ರೋಹವೇ. ಅದು ನಿಮ್ಮ ಆತ್ಮಕ್ಕೆ ನೀವು ಮಾಡುವ ದ್ರೋಹ. ಅದು ಬೇರೆಯವರಿಗೆ ಮಾಡುವ ದ್ರೋಹಕ್ಕಿಂತ ಹೆಚ್ಚು ಅಪಾಯಕಾರಿ. ನಿಮ್ಮ ಆತ್ಮ ಸುಖದಲ್ಲಿ ಮಿಂದೆದ್ದ ಮೇಲೆ ಬೇರೆಯವರ ಬಗ್ಗೆ ಯೋಚಿಸುವುದು ಮಾತ್ರವೇ ಧರ್ಮ. ನೆನಪಿಡಿ, ಮೊದಲು ನೀವು. ನಂತರ ನಿಮ್ಮ ಸುತ್ತಲು.


-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement