ಮಗುವನ್ನು ಎದೆಹಾಲಿನಿಂದ ವಂಚಿಸುವುದು ಅದರ ಮಾನಸಿಕ, ದೈಹಿಕ ಬೆಳವಣಿಗೆಗೆ ಕುಂದು. ಜತೆಗೆ ತಾಯಿಯ ದೈಹಿಕ ಸೌಂದರ್ಯ ಹಾಗೂ ಆರೋಗ್ಯವೂ ಹಾಳು. ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ. ಆ ಹಿನ್ನೆಲೆಯಲ್ಲಿ ಈ ಲೇಖನ.
ನವಜಾತ ಶಿಶುಗಳಿಗೆ ತಾಯಿಯ ಮಡಿಲು, ಮೊಲೆ ಹಾಲು ಹಾಗೂ ತಾಯಿ ಪಕ್ಕದಲ್ಲಿಯೇ ಇದ್ದಾಳೆ ಎಂಬ ಭದ್ರತಾ ಭಾವನೆ ಇದ್ದರೇನೇ ಸ್ವರ್ಗ ಸುಖ. ಮಗುವಿಗೆ ತಾಯಿಯ ಎದೆಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ. ಮಗು ಜನಿಸಿದ ಮೊದಲನೇ ದಿನದಿಂದಲೇ ತಾಯಿ ಹಾಗೂ ಮಗುವಿನ ನಡುವೆ ಬಿಡಿಸಲಾರದ ಬಾಂಧವ್ಯ ಸೃಷ್ಟಿಯಾಗುತ್ತದೆ. ತಾಯಿ ಹಾಲು ಉಣಿಸುವ ಮೂಲಕ ಈ ಬಾಂಧವ್ಯ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ.
ಆದರೆ, ಈಗೀಗ ಸೌಂದರ್ಯ ಪ್ರಜ್ಞೆ ಕಾಡುವ ಅನೇಕ ಹೆಣ್ಣು ಮಕ್ಕಳು ತಮ್ಮ ಎದೆಯಲ್ಲಿ ಹಾಲಿಲ್ಲ ಎಂದೋ, ಫಿಸಿಕ್ ಹಾಳಾಗುತ್ತದೆ ಎಂದೋ ಮಗುವಿಗೆ ಹಾಲುಣಿಸಲು ಹಿಂದು ಮುಂದು ನೋಡುತ್ತಿದ್ದಾರೆ. ಇದು ಮಗುವಿನ ಮಾನಸಿಕ, ದೈಹಿಕ ಬೆಳವಣಿಗೆಗೆ ಕುಂದುಂಟು ಮಾಡುವುದಲ್ಲದೆ, ತಾಯಿಯ ದೈಹಿಕ ಸೌಂದರ್ಯ ಹಾಗೂ ಆರೋಗ್ಯವನ್ನೂ ಹಾಳು ಮಾಡುವುದರಲ್ಲಿ ಅನುಮಾನವೇ ಇಲ್ಲ.
ನಿಮ್ಮ ಮಗುವಿಗೆ ಎಷ್ಟೇ ಕೃತಕ ಆಹಾರ ನೀಡಿದರೂ ಮಗುವಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದೇ ಇಲ್ಲ. ಕೃತಕ ಆಹಾರ ನೀಡಿದರೆ ಮಗು ಗುಂಡ್, ಗುಂಡಾಗಿ ಮುದ್ದಾಗಿ ಕಾಣಿಸುವುದರಲ್ಲಿ ಅನುಮಾನವೇ ಅಲ್ಲ. ಆದರೆ, ಅದು ಅಮ್ಮನ ಹಾಲು ಕುಡಿದು ಬೆಳೆದ ಮಗುವಿನಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರುವುದಿಲ್ಲ ಎಂಬುದು ಸತ್ಯ.
ಯಾವಾಗ ಆರಂಭ?
- ಜನನವಾದ ತಕ್ಷಣ ಮಗುವಿಗೆ ಎದೆಹಾಲನ್ನು ನೀಡುವುದು ಉತ್ತಮ. ಇದು ಹೆರಿಗೆಯ ರಕ್ತಸ್ರಾವವನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ, ಹಾಲು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿ ಮೊಲೆಗಳಲ್ಲಿ ಪ್ರತಿರಕ್ಷಕ ಗುಣವನ್ನು ನಿರ್ಮಿಸಿ, ಹೆಚ್ಚಿನ ಕ್ರಿಯಾಶೀಲತೆಯನ್ನು ವರ್ಧಿಸುತ್ತದೆ ಹಾಗೂ ಹಾಲು ಸಮರ್ಪಕವಾಗಿ ಉತ್ಪಾದನೆಯಾಗುವಂತೆ ಮಾಡುತ್ತದೆ.
- ಜನಿಸಿದ ತಕ್ಷಣ ಮಗು ಮೊಲೆ (ಒಣ ಚೀಪುವಿಕೆ)ಯನ್ನು ಚೀಪುವುದರಿಂದ ಒಂದು ಗಂಟೆಯೊಳಗೆ ಹಾಲು ಹರಿಯಲು ಆರಂಭವಾಗುತ್ತದೆ.
ಯಾವಾಗ ಮಗುವಿಗೆ ಹಾಲು ಬೇಕಾಗಬಹುದು?
- ಮಗು ಯಾವಾಗ ಬಯಸುತ್ತದೋ ಆಗ.
- ಒಂದು ಮೊಲೆಹಾಲನ್ನು ಒಮ್ಮೆ ಉಣಿಸಬೇಕು.
- ಮಗು ಚೀಪುವುದರಲ್ಲಿ ವ್ಯಯಿಸುವ ಸಮಯವು 10-20 ನಿಮಿಷಗಳಷ್ಟು ಬದಲಾವಣೆಯಾಗುತ್ತದೆ. ಕೆಲವು ತಾಯಂದಿರು ಹಾಲಿನ ಕಲ್ಪಿತ ಪೂರೈಕೆ ಹಾಗೂ ನೈಜ ಪೂರೈಕೆಗಳ ನಡುವಿನ ವ್ಯತ್ಯಾಸ ಅರ್ಥೈಸಿಕೊಳ್ಳುವುದು ಅಗತ್ಯ.
- ಹುಟ್ಟಿದ ಎರಡು ವಾರಗಳ ನಂತರ ಸುಮಾರಾಗಿ ವಾರಕ್ಕೆ 150 ರಿಂದ 200 ಗ್ರಾಂಗಳಷ್ಟು ಮಗುವಿನ ತೂಕ ಹೆಚ್ಚಾಗಬೇಕು.
- ಹುಟ್ಟಿದ 5ನೇ ದಿನದಿಂದ ಮಗುವು ದಿನಕ್ಕೆ 3-4 ಬಾರಿ ಮಲ ವಿಸರ್ಜಿಸುತ್ತಿರಬೇಕು.
- ಒಂದೊಮ್ಮೆ ಮಗು ಹುಟ್ಟಿದ 5 ದಿನಗಳ ನಂತರ, ಬಟ್ಟೆಯ ಡೈಪರ್‌ಗಳನ್ನು ದಿನಕ್ಕೆ 7-8 ಬಾರಿ ಬದಲಾಯಿಸಬೇಕು.
- ಭಾರವಾದ ಡಿಸ್ಪೋಸೆಬಲ್ ಡೈಪರ್‌ಗಳನ್ನು ಬಳಸುತ್ತಿದ್ದಲ್ಲಿ ದಿನಕ್ಕೆ 5-6 ಬಾರಿ ಅವುಗಳನ್ನು ಬದಲಾಯಿಸಬೇಕು.
- ಮೇಲೆ ಹೇಳಿದ ಸಂಗತಿಗಳು ಸರಿ ಹೊಂದದೇ ಇದ್ದಲ್ಲಿ ಮಗು ಸಾಕಷ್ಟು ಹಾಲನ್ನು ಪಡೆಯುತ್ತಿಲ್ಲ ಎಂದರ್ಥ. ಇದು ಅಸಮರ್ಪಕ ಹಾಲೊಸರುವಿಕೆ ಅಥವಾ ಮಗು ಮತ್ತು ತಾಯಿಯ ಮೊಲೆಯ ನಡುವೆ ಉಂಟಾಗುವ ಅಸಮರ್ಪಕ ಸಂಪರ್ಕದಿಂದ ಸಂಭವಿಸಬಹುದು. ಆಗ ಎದೆಹಾಲು ಉಣಿಸುವ ಅಂತರ ಅಥವಾ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಬೇಕು.
- ಹೆಚ್ಚು ಹೆಚ್ಚು ಮೊಲೆ ಹಾಲನ್ನು ನೀಡಿದರೆ ಅಧಿಕ ಪ್ರಮಾಣದಲ್ಲಿ ಹಾಲೊಸರುವಿಕೆ ಉಂಟಾಗುತ್ತದೆ. ಮಗು ಮೊಲೆಯೊಂದಿಗೆ ಸರಿಯಾಗಿ ಸಂಪರ್ಕ ಹೊಂದುವುದನ್ನು ಖಾತರಿ ಮಾಡಿಕೊಳ್ಳಿ. ಸರಿಯಾದ ಸಂಪರ್ಕ ಇಲ್ಲದೇ ಹೋದಲ್ಲಿ ಮೊಲೆ ಹಾಲನ್ನು ಸಂಗ್ರಹಿಸಿ, ಆಮೇಲೆ ನೀಡಬೇಕು.
- ಮಗುವಿನ ಬಾಯಿ ಪೂರ್ಣವಾಗಿ ತೆರೆಯುವ ತನಕ ಕಾದು, ನಂತರ ಮೊಲೆಯ ತೊಟ್ಟುಗಳನ್ನು ತೂರಿಸಿ. ಮಗುವಿನ ತುಟಿಗಳು ತೊಟ್ಟಿನ ಸುತ್ತಲಿನ ಕಂದು ಭಾಗಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಮಗುವಿನ ದವಡೆಗಳು ಒತ್ತಿ ಹಾಲು ಹೀರುವ ಅನುಭವ ತಾಯಿಗೆ ಉಂಟಾಗಬೇಕು. ಮಗು ಚೀಪಲು ತೊಡಗಿದಂತೆ ಎದೆಯ ಮೇಲ್ಭಾಗದಲ್ಲಿ ಹೆಚ್ಚಾಗಿರುವ ಹಾಲು ಉತ್ಪಾದಕ ಗ್ರಂಥಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಒಸರುತ್ತದೆ.
ಏಕೆ ಎದೆ ಹಾಲು ಕೊಡಬೇಕು?
- ಎದೆಹಾಲು ಅಗತ್ಯ ಎಲ್ಲ ಪೋಷಕಾಂಶಗಳನ್ನೂ ಒಳಗೊಂಡಿರುತ್ತದೆ. ಮಗುವಿನ ಅವಶ್ಯಕತೆಗಳಿಗೆ ತಕ್ಕಂತೆ ಅದು ಬದಲಾಗುತ್ತಿರುತ್ತದೆ.
- ಎದೆಹಾಲನ್ನು ಚೆನ್ನಾಗಿ ಉಂಡ ಮಕ್ಕಳು ಹೆಚ್ಚು ಬುದ್ಧಿವಂತರಾಗುತ್ತಾರೆ, ಸಾಮಾನ್ಯ ಸೋಂಕುಗಳಿಂದ ಮುಕ್ತರಾಗಿರುತ್ತಾರೆ. ಚರ್ಮದ ಸಮಸ್ಯೆಗಳು ಬರೋದು ಕಡಿಮೆ.
- ಸ್ಥೂಲಕಾಯದಿಂದ ಮಕ್ಕಳು ಹೊರತಾಗಿರುತ್ತವೆ.
- ಬಾಯಿಯ ಸೋಂಕುಗಳಿಗೆ ಈಡಾಗುವುದಿಲ್ಲ.
- ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಾಧೆಗೊಳಗಾಗುವುದಿಲ್ಲ.
- ರಕ್ತಹೀನತೆ ಉಂಟಾಗುವುದಿಲ್ಲ.
- ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸೋದು ಕಡಿಮೆ.
- ಮಧುಮೇಹದಿಂದಲೂ ಎದೆ ಹಾಲು ಕುಡಿಯುವ ಮಕ್ಕಳು ದೂರವಾಗಿರುತ್ತವೆ.
- ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗಲೂ ಎದೆ ಹಾಲು ನೀಡಲು ಯಾವುದೇ ಸಮಸ್ಯೆಯಾಗುವುದಿಲ್ಲ.
ಮೂಳೆಗಳ ಬಗ್ಗೆ ಇರಲಿ ಎಚ್ಚರ
ತಾಯಿಗೆ ಹೇಗೆ ಸಹಕಾರಿ?
- ತಾಯಿಯ ಗರ್ಭಕೋಶ ಸಂಕುಚಿತಗೊಳ್ಳಲು ಎದೆಹಾಲು ನೀಡುವುದು ಸಹಾಯ ಮಾಡುತ್ತದೆ.
- ಗರ್ಭಿಣಿಯಾದಾಗ ಹೆಚ್ಚಾಗುವ ದೇಹದ ತೂಕವನ್ನು ಇಳಿಸಿಕೊಳ್ಳಲು ಸ್ತನ್ಯಪಾನ ಮಾಡಿಸಿದರೆ ಉತ್ತಮ.
- ಎದೆಯ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
- ಪ್ರಸವ ನಂತರದ ಡಿಪ್ರೆಷನ್ ಮತ್ತು ಮೂಳೆಗಡಸು ರೋಗಗಳಿಂದ ಹೊರತಾಗಿರುತ್ತಾರೆ.
ಸಮಸ್ಯೆ ಏನು ಬರಬಹುದು?
- ನೋವನ್ನುಂಟುಮಾಡುವ ಮೊಲೆಗಳು.
- ಹಾಲುಣಿಸುವ ಭಂಗಿ ಸರಿಯಾಗದೆ ಹೋಗುವುದು.
- ಮೊಲೆತೊಟ್ಟುಗಳ ಸೋಂಕು
- ಮಗುವಿಗೆ ತಾಯಿಯ ಮೊಲೆಯೊಡನೆ ಸಂಪರ್ಕ ಸಾಧಿಸಲು ಕಷ್ಟವಾಗುವುದು.
ತಪ್ಪು ಕಲ್ಪನೆಗಳೇನು?
- ಮಗುವಿಗೆ ಹಾಲೂಡುವ ರೀತಿ ಮಿತಿಗೊಳಪಟ್ಟಿರಬೇಕು. ಮಗುವಿಗೆ ತಾಯಿಯ ಹಾಲು ಅಲರ್ಜಿಯನ್ನುಂಟು ಮಾಡಬಹುದು.
- 12 ತಿಂಗಳ ನಂತರ ತಾಯಿಯ ಹಾಲು ಯಾವುದೇ ರೀತಿಯ ಆಹಾರ ಮೌಲ್ಯಗಳನ್ನು ಹೊಂದಿರುವುದಿಲ್ಲ.
- ಕೆಲವು ದಿನಗಳ ಮಟ್ಟಿಗೆ ಮಗುವಿನ ಆರೈಕೆ ಮಾಡಲು ಜೇನುತುಪ್ಪ, ಸಕ್ಕರೆ ನೀರು ಅಥವಾ ಇತರೆ ಪಾಕಸೂತ್ರಗಳನ್ನು ನೀಡಬೇಕು. ಆಕಳ ಹಾಲು ಅಥವಾ ಇತರ ಪಾಕಸೂತ್ರಗಳು ತಾಯಿಯ ಎದೆ ಹಾಲಿನಷ್ಟೇ ಒಳಿತು.
- ತಾಯಿಯ ಹಾಲಿನ ಹೊರತಾಗಿ ದಿನಕ್ಕೊಂದು ಸಾರಿ ಮೇಲು ಆಹಾರವನ್ನು ನೀಡಬೇಕು.
- ಮಗು ರಾತ್ರಿ ವೇಳೆ ಮಲಗಬೇಕು ಹಾಗೂ ದಿನದ ವೇಳೆಯಲ್ಲಿ ಮಾತ್ರ ಎದೆಹಾಲನ್ನು ಉಣಿಸಬೇಕು.
ಯಾವುದರಲ್ಲಿ ಹೆಚ್ಚಿದೆ ಕ್ಯಾಲ್ಸಿಯಂ?
- ದಿನಕ್ಕೆ 1000 ಮಿ.ಗ್ರಾಂ. ಕ್ಯಾಲ್ಸಿಯಂ ಸಿಗುವಂತೆ ಆಹಾರ ಸೇವಿಸಿ.
- ಹಾಲಿನ ಪದಾರ್ಥಗಳು, ಹಸಿರೆಲೆಗಳ ತರಕಾರಿಗಳು, ಸಾಲ್ಮನ್ ಮತ್ತು ಸಾರ್ಡಿನ್ ಮೀನುಗಳಂಥ ಸಮುದ್ರ ಆಹಾರಗಳು, ಪುಷ್ಟಿಗೊಳಿಸಿದ ಆಹಾರಗಳು ಮತ್ತು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಲ್ಸಿಯಂ ಪೂರಕ ಉತ್ಪನ್ನಗಳು ಒಳ್ಳೆಯದು.
- ಮದ್ಯಪಾನ, ಧೂಮಪಾನಗಳನ್ನು ವರ್ಜಿಸಿ. ಅವು ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತವೆ.
- ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶರೀರವು ಹೆಚ್ಚು ಕ್ಯಾಲ್ಸಿಯಂ ಹೀರಿಕೊಳ್ಳುತ್ತದೆ ಸಾಕಷ್ಟು ವಿಟಮಿನ್ 'ಡಿ' ಇರುವ ಆಹಾರ ಸೇವಿಸಿ. ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಕರಿಸುತ್ತದೆ.
- ಕೆ.ಎಸ್. ನಿರುಪಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics