ಅವರು ನಮ್ಮವರೇ, ಸಹನೆ ಇರಲಿ
ಕೆಲವರಿರ್ತಾರೆ, 'ನಾವೆಲ್ಲ ಎಷ್ಟು ಕಷ್ಟ ಅನುಭವಿಸಿದ್ದೇವೆ. ಆಗ ಹಾಗಿತ್ತು, ಹೀಗಿತ್ತು...' ಎಂದು ಆಗಾಗ ಹೇಳ್ತಾನೇ ಇರ್ತಾರೆ. ಅಂತವರು ಎಲ್ಲೆಡೆಯೂ ಸಿಗ್ತಾರೆ ಬಿಡಿ. ತುಂಬ ಕಷ್ಟ ಅನುಭವಿಸಿ ಈಗ ನೆಮ್ಮದಿಯ ಬದುಕು ಕಂಡುಕೊಂಡವರು ಅವರು. ಆದರೂ ಅಲ್ಲೇ ಕೊಂಕು ಕಾಣುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿರುತ್ತೆ. ಅವರ ಅನುಭವದ ಬಗ್ಗೆ ಮಾತಿಲ್ಲ. ಅಷ್ಟು ಕಷ್ಟದಲ್ಲಾದರೂ ಹೇಗೋ ಬೆಳೆದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅದರ ಬಗ್ಗೆ ಎಲ್ಲರಿಗೂ ಗೌರವವಿದ್ದೇ ಇದೆ. ಪ್ರಶ್ನೆ ಅದಲ್ಲ, ಅವರು ಎಲ್ಲದಕ್ಕೂ ತಮ್ಮ ಈ ಅನುಭವವನ್ನೇ ಗುರಾಣಿಯನ್ನಾಗಿ ಮಾಡಿಕೊಂಡು ಬಿಟ್ಟಿ ಸಲಹೆಗಳನ್ನು ಕೊಡ್ತಾ ಇರ್ತಾರೆ. ಎದುರಿನವರು ತಮ್ಮ ಮಾತುಗಳನ್ನು ಗೌರವಿಸುತ್ತಾರೋ, ಇಲ್ಲವೋ ಸಂಬಂಧವಿಲ್ಲ. ಒಟ್ಟಿನಲ್ಲಿ 'ಆಗ ಹಾಗಿತ್ತು, ಹೀಗಿತ್ತು. ನಿಮಗಾದರೆ ಈಗ ಏನೂ ತೊಂದರೆಯಿಲ್ಲ' ಎಂಬರ್ಥದಲ್ಲೇ ಮಾತನಾಡುತ್ತ ಇವತ್ತಿನ ದಿನದಿಂದ ದೂರವಿದ್ದೇ ಮಾತನಾಡುತ್ತಾರೆ. ಜತೆಗೆ 'ಹಾಗೆ ಮಾಡಿ. ಅನುಭವದಿಂದ ಹೇಳ್ತಾ ಇದ್ದೇನೆ' ಎಂಬ ಸಲಹೆ ಬೇರೆ. ಸಲಹೆ ತೆಗೆದುಕೊಳ್ಳುವುದು, ಕೊಡುವುದು ತಪ್ಪಲ್ಲ್ಲ. ಆದರೆ, ಬೇಕಿದ್ದಾಗ ಮಾತ್ರ ನೀಡಿದರೆ ಬೆಲೆ ಹೆಚ್ಚು ಅಲ್ಲವೇ? ಇಂತಹ ಸೂಕ್ಷ್ಮ ಅವರಿಗೆ ಗೊತ್ತಾಗುವುದೇ ಇಲ್ಲ. ಅವರ ಮಾತುಗಳನ್ನು ಪಾಲಿಸದಿದ್ದರೆ ಮುನಿಸು ಬೇರೆ. ಹೇಗಾದರೂ ಮಾಡಿ ತಮ್ಮ ಮೂಗಿನ ನೇರಕ್ಕೆ ಬೆಳೆಸಿಕೊಂಡ ಯೋಚನೆಗಳನ್ನು ಎದುರಿನವರಿಗೆ ಅರ್ಥ ಮಾಡಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಾರೆ. ಯಾವುದೇ ಕಾರಣಕ್ಕೂ ಅದು ಹಾಗಲ್ಲ ಹೀಗೆ ಎಂಬುದನ್ನು ಒಪ್ಪಿಕೊಳ್ಳಲೇ ಸಿದ್ಧರಿರುವುದಿಲ್ಲ. ತಲೆಮಾರುಗಳು ಬದಲಾದಂತೆಲ್ಲ, ಕಾಲ ಓಡಿದಂತೆಲ್ಲ ಯೋಚನೆ, ಜೀವನಶೈಲಿ, ನಂಬಿಕೆಗಳು ಬದಲಾಗುವುದು ಸಹಜ ಎಂಬುದು ಅವರಿಗೆ ಅರ್ಥವೇ ಆಗುವುದಿಲ್ಲ. ತಾವು ಹಾಗಿದ್ದೆವು, ತಮ್ಮ ಮುಂದಿನವರೂ ಹಾಗೆಯೇ ಇರಬೇಕು ಎನ್ನುವುದರಲ್ಲಿಯೇ ಅವರ ದೃಷ್ಟಿಕೋನ ಸೀಮಿತ. ಬದಲಾವಣೆಗೆ ಅವರಲ್ಲಿ ಜಾಗವೇ ಇಲ್ಲ. ತಪ್ಪು ಅವರ ಮನೋಭಾವದ್ದು. ಎಲ್ಲರಲ್ಲೂ ಬದಲಾವಣೆಯನ್ನು ಒಪ್ಪಿಕೊಳ್ಳುವ ಔದಾರ್ಯ ಇರುವುದಿಲ್ಲ. ಬದಲಾವಣೆಯನ್ನು ಒಪ್ಪಿಕೊಂಡು ತಾವೂ ಅದಕ್ಕೆ ತಕ್ಕಂತೆ ಬದುಕವುದು ಆದರ್ಶ. ಕೊನೇ ಪಕ್ಷ ತಾವು ಹೇಗಿದ್ದರೂ ಬದಲಾದವರನ್ನು ಆಕ್ಷೇಪಿಸದಿರುವುದು ಸಹನೆ. ಇದನ್ನು ಎಲ್ಲರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ. ಅಂತಹ ಸಂದರ್ಭಗಳಲ್ಲಿ 'ಇವತ್ತು ಹೀಗಿದೆ. ಮಾರಾಯ್ರೇ. ನಿಮ್ಮ ಕಾಲ ಇದಲ್ಲ' ಎಂದು ಸಮಾಧಾನದಿಂದಲೇ ತಿಳಿಯಪಡಿಸಿದರೆ ಒಳಿತು. ಬೇಸತ್ತು ಅವರನ್ನು ನಿರ್ಲಕ್ಷಿಸಲೇ ಬಾರದು. ಎಷ್ಟೆಂದರೂ ಅವರು ನಮ್ಮವರೇ ಅಲ್ಲವೇ? ವಯಸ್ಸಿನಲ್ಲಿ ಸಣ್ಣವರಾದಾಕ್ಷಣ ಯೋಚನೆ, ವರ್ತನೆಗಳೂ ಸಣ್ಣತನದ್ದಾಗಬೇಕೆಂದೇನೂ ಇಲ್ಲವಲ್ಲ.
-ಸಹನೆ