ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಗಾ ಇದ್ದಷ್ಟೂ ಒಳ್ಳೆಯದು

Vishwanath S
Updated On : 2 Jun 2013, 2:52 am

ನಾವು ಎಂತಹ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲಿನ ರಕ್ತನಾಳಗಳ ಆರೋಗ್ಯ ನಿಂತಿದೆ. ಅಂದರೆ, ಹೃದಯದ ಬಗ್ಗೆ ಜಾಗೃತಿ ವಹಿಸುವಾಗ ತಿನ್ನುವ ಆಹಾರದ ಬಗ್ಗೆಯೂ ಗಮನ ನೀಡುವುದು ಅಗತ್ಯ ಎಂದಾಯಿತು.ಸರಿಯಾದ ಆಹಾರ ಪದ್ಧತಿ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಟ್ಟು ರಕ್ತಪರಿಚಲನೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಕೊಲೆಸ್ಟರಾಲ್, ಕೊಬ್ಬು ರಕ್ತದ ಹರಿವಿಗೆ ತಡೆ ಒಡ್ಡುತ್ತವೆ ಎನ್ನುವುದು ಜಗತ್ತೇ ಒಪ್ಪಿಕೊಂಡಿರುವ ವೈಜ್ಞಾನಿಕ ಸತ್ಯ. ಹೃದಯದ ತೊಂದರೆ ಇರುವವರಷ್ಟೇ ಅಲ್ಲದೆ ಆರೋಗ್ಯವಂತರು ಕೂಡ ಕೊಲೆಸ್ಟರಾಲ್, ಕೊಬ್ಬು ಅಧಿಕ ಪ್ರಮಾಣದಲ್ಲಿರುವ ಆಹಾರ ಪದಾರ್ಥಗಳಿಂದ ದೂರವಿರಿ ಎನ್ನುವುದು ಏಕೆ ಎಂದು ಅರ್ಥವಾಯಿತಲ್ಲ?
ಈಗಾಗಲೇ ಹೃದಯಾಘಾತಕ್ಕೆ ತುತ್ತಾಗಿರುವವರು ಏನು ಮಾಡಬೇಕು? ಸರ್ಜರಿ ಮಾಡಿಸಿಕೊಂಡಿದ್ದರೂ ಮತ್ತೊಮ್ಮೆ ಆಘಾತವಾಗುವುದಿಲ್ಲ ಎನ್ನುವ ಗ್ಯಾರಂಟಿ ಏನಿಲ್ಲವಲ್ಲ. ಆಹಾರದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರೆ ಭವಿಷ್ಯದಲ್ಲಿ ಮತ್ತೆ ತೊಂದರೆ ಎದುರಾಗುವುದನ್ನು ತಪ್ಪಿಸಬಹುದು ಹಣ್ಣು, ಸೊಪ್ಪು, ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಕೊಬ್ಬು ಶರಾರ ಪ್ರವೇಶಿಸುವುದನ್ನು ಬಹುಮಟ್ಟಿಗೆ ತಡೆಯಬಹುದು ಎನ್ನುತ್ತಾರೆ ತಜ್ಞರು.
ಬಲೂನ್ ಆಂಜಿಯೋಪ್ಲಾಸ್ಟಿ ಎನ್ನುವುದು ಬಹು ಜನಪ್ರಿಯ ಚಿಕಿತ್ಸಾ ವಿಧಾನ. ಇಲ್ಲಿನ ಪ್ರಕ್ರಿಯೆ ಬಹಳ ಸರಳ. ಬಲೂನ್ ತೂರುನಳಿಕೆ ನೆರವಿನಿಂದ ರಕ್ತನಾಳದಲ್ಲಿನ ತಡೆಯನ್ನು ನಿವಾರಿಸಿ ರಕ್ತನಾಳವನ್ನು ಅಗಲಗೊಳಿಸುವುದು ಮತ್ತು ರಕ್ತದ ಸುಗಮ ಹರಿವಿಗೆ ಅನುವು ಮಾಡಿಕೊಡುವುದು ಆಂಜಿಯೋಪ್ಲಾಸ್ಟಿ ಉದ್ದೇಶ. ಹಿಂದೆಲ್ಲ ವೈದ್ಯರು ಆಂಜಿಯೋಪ್ಲಾಸ್ಟಿಗೆ ಮುನ್ನ ಮೀನೆಣ್ಣೆ ಅಂಶ ಇರುವ ಮಾತ್ರೆ ಸೇವಿಸುವಂತೆ ಶಿಫಾರಸ್ಸು ಮಾಡುತ್ತಿದ್ದರೆಂದು ಕೇಳಿದ್ದೇನೆ. ಅಮೆರಿಕ, ಇಂಗ್ಲೆಂಡ್‌ನಂಥ ರಾಷ್ಟ್ರಗಳಲ್ಲೂ ರಕ್ತನಾಳದಲ್ಲಿನ ಅಡೆತಡೆ ನಿವಾರಣೆಗೆ ಮೀನೆಣ್ಣೆ ಇರುವ ಮಾತ್ರೆಗಳನ್ನು ಬಳಸುವುದು ಚಾಲ್ತಿಯಲ್ಲಿದೆ. ಅದಲ್ಲಿರುವ ಒಮೆಗಾ-3 ಹೆಪ್ಪುಗಟ್ಟಿರುವ ರಕ್ತ ಕರಗಲು ನೆರವಾಗುತ್ತದಂತೆ. ಆಂಜಿಯೋಪ್ಲಾಸ್ಟಿಗೆ ಮುನ್ನ ಅಡೆತಡೆ ಸ್ವಲ್ಪಮಟ್ಟಗೆ ನಿವಾರಣೆಯಾಗಿದ್ದರೂ ನೋವು ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಚಿಕಿತ್ಸೆ ಸುಲಭವಾಗುತ್ತದೆ. ಅಭ್ಯಾಸ ಇದ್ದವರಿಗೆ ಪರವಾಗಿಲ್ಲ. ಮೀನೆಣ್ಣೆಯನ್ನು ಔಷಧವಾಗಿ ಸೇವಿಸುವುದು ಕೆಲವು ಸಂಪ್ರದಾಯಸ್ಥರಿಗೆ ಈಗಲೂ ಅಪಥ್ಯ. ಅಂಥವರು ಏನು ಮಾಡಬೇಕು?
ಸಸ್ಯಹಾರಿಗಳೇನೂ ಚಿಂತಿಸಬೇಕಿಲ್ಲ. ನಮ್ಮ ಅಡುಗೆ ಮನೆಯಲ್ಲಿ ಇದ್ದೇಇರುವ ಪದಾರ್ಥವೊಂದು ಹೃದಯದ ಆಪ್ತಮಿತ್ರ. ಅದರ ನಿಯಮಿತ ಸೇವನೆ ರಕ್ತನಾಳಗಳನ್ನು ಮಾತ್ರವಲ್ಲದೆ ಹೃದಯವನ್ನೂ ಗಟ್ಟಿಮುಟ್ಟಾಗಿ ಇಡಬಲ್ಲದು. ಅದಾವುದು? ನಾಳೆ ನೋಡೋಣ.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement