ಬೆರಳಚ್ಚು ಬರಿಗಣ್ಣಿಗೆ ಕಾಣಲ್ಲ
ಅಪರಾಧ ನಡೆದ ಸ್ಥಳಗಳಿಗೆ ಭೇಟಿ ಮಾಡುವ ಬೆರಳಚ್ಚು ಘಟಕ ತಜ್ಞರು ಬೆರಳಚ್ಚು ಪತ್ತೆ ಮಾಡಲೆಂದೇ ಇರುವ ರಾಸಾಯನಿಕ ವಸ್ತುಗಳನ್ನು ಬಳಸಿ ಬೆರಳಚ್ಚನ್ನು ಪತ್ತೆ ಮಾಡುತ್ತಾರೆ.
ಬೆರಳಚ್ಚು ಬರಿಗಣ್ಣಿಗೆ ಕಾಣುವುದಿಲ್ಲ. ರಾಸಾಯನಿಕ ವಸ್ತು ಬಳಸದೆ ಬೆರಳಚ್ಚು ಕಂಡುಹಿಡಿಯಲು ಆಗುವುದಿಲ್ಲ.
ಹಾಗಾಗಿ ಅನುಮಾನ ಬಂದ ವಸ್ತುಗಳ ಮೇಲೆ, ಅಂದರೆ ಮುಖ್ಯದ್ವಾರ, ಬೀರು ಬಾಗಿಲು, ಪೆಟ್ಟಿಗೆ, ಆಭರಣದ ಬಾಕ್ಸ್, ಗೋಡೆಗಳು ಸೇರಿದಂತೆ ಅನುಮಾನ ಬಂದ ವಸ್ತುಗಳ ಮೇಲೆ ಬೆರಳಚ್ಚು ತಜ್ಞರು ರಾಸಾಯನಿಕ ಪುಡಿಯನ್ನು ಸಿಂಪಡಿಸುತ್ತಾರೆ.
ಬೆರಳಚ್ಚು ಇರುವ ಸ್ಥಳ ಬಿಟ್ಟು ಬೇರೆ ಅಂದರೆ ಅದರ ಸುತ್ತಲಿನ ಜಾಗದಲ್ಲಿ ಆ ಪುಡಿ ಅಂಟಿಕೊಳ್ಳುವುದಿಲ್ಲ. ಬೆರಳಚ್ಚಿನ ಮೇಲೆ ಮಾತ್ರ ಅಂಟಿಕೊಳ್ಳುತ್ತದೆ. ಆಗ ಪೊಲೀಸರು ಭೂತ ಕನ್ನಡಿಯಿಂದ ಬೆರಳಚ್ಚು ಇರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅದು ಖಚಿತವಾದಲ್ಲಿ ಸಂಗ್ರಹಿಸಿಕೊಂಡು ತೆಗೆದುಕೊಂಡು ಹೋಗುತ್ತಾರೆ.
ಸೆಲೋ ಟೇಪ್ ಬಳಸಿ ಅದನ್ನು ಸಂಗ್ರಹಿಸಿಡುತ್ತಾರೆ. ನಂತರ ಅದರ ರೇಖೆಗಳು ಸರಿಯಾಗಿ ಸಿಕ್ಕಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಒಂದು ವೇಳೆ ಅರ್ಧ ಬೆರಳಚ್ಚು ಮಾತ್ರ ಬಂದಿದ್ದಲ್ಲಿ ಅದು ಯಾವ ಬೆರಳಚ್ಚು ಇರಬಹುದು ಎಂಬುದನ್ನು ಪತ್ತೆ ಮಾಡಿ ನಂತರ ಶಂಕಿತ ಆರೋಪಿಗಳ ಬೆರಳಚ್ಚಿಗೆ ಅದನ್ನು ಹೋಲಿಸುತ್ತಾರೆ.
ಬೆರಳಚ್ಚುಗಳು ಹೋಲಿಕೆಯಾದಲ್ಲಿ ಅಥವಾ ಆಗದಿದ್ದಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಾರೆ. ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುತ್ತಾರೆ. ಆ ಬೆರಳಚ್ಚುಗಳನ್ನು ಹಾಗೆಯೇ ಸಂಗ್ರಹಿಸಿ ಇಡುತ್ತಾರೆ.
- ಶಾಂತ ತಮ್ಮಯ್ಯ