ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಡಕೆ ಮಾತು

ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ ಎಂಬುದನ್ನು ಸ್ವತಃ ಅಡಕೆಯೇ ಒಪ್ಪುತ್ತಿಲ್ಲ. ಬೇಕಿದ್ದರೆ ಅದರ ಮಾತಲ್ಲೆ ಕೇಳಿಬಿಡಿ...

Mainashree
Updated On : 6 Jun 2013, 11:57 am

ನಮಸ್ಕಾರ, ನಾನು ನಿಮ್ಮ ಅಡಕೆ. ಸಂಸ್ಕೃತದಲ್ಲಿ ನನ್ನನ್ನು 'ಪೂಗ' ಎಂದು ಕರೆಯುತ್ತಾರೆ. ನನ್ನ ಬಹುಕಾಲದ ಬಯಕೆಯನ್ನು ರಾಜ್ಯದ ಘನ ಸರ್ಕಾರ  ಈಡೇರಿಸಿದೆ. ಗುಟ್ಕಾ ನಿಷೇಧಿಸಿದೆ. ಆ ಖುಷಿಯನ್ನು ಮೆಲ್ಲುತ್ತಾ ಮಾನ್ಯ ಸುಸಂಸ್ಕೃತ ಅಡಕೆ ಬೆಳೆಗಾರರೊಂದಿಗೆ ನನ್ನ ಮನದಾಳದ ಅನಿಸಿಕೆಗಳನ್ನು ಖಾರವಾಗಿಯೇ ಹಂಚಿಕೊಳ್ಳಲು ಬಯಸುತ್ತೇನೆ.
ನಿಮಗೆಲ್ಲಾ ತಿಳಿದಿರುವಂತೆ ನನಗೆ ಪುರಾತನ ವ್ಯಕ್ತಿತ್ವವಿದೆ. ಪುರಾಣ- ಪುಣ್ಯಕಥೆಗಳಲ್ಲೂ, ಸಂಸ್ಕೃತ ಶ್ಲೋಕಗಳಲ್ಲೂ ನನ್ನ ಉಲ್ಲೇಖವಿದೆ. ನಾನು ಸಮಾಜದಲ್ಲಿ ಎಷ್ಟು ಗೌರವಾನ್ವಿತ ವ್ಯಕ್ತಿ ಆಗಿದ್ದೆನೆಂದರೆ 'ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು' ಎಂಬ ಗಾದೆ ನನಗೊಂದು ಗರಿ. ನೀವು ಕೇಳಿರುತ್ತೀರಿ, ಯುದ್ಧಕ್ಕೆ ರಣವೀಳ್ಯವನ್ನು ನೀಡಲಾಯಿತು ಎನ್ನುವ ಮಾತನ್ನು. ಅದರಲ್ಲಿ ಭಾಗವಹಿಸುತ್ತಿದ್ದುದು ನಾನು ಮತ್ತು ನನ್ನ ಆಪ್ತಮಿತ್ರ ವೀಳ್ಯದ ಎಲೆ. ಯುದ್ಧದ ಆಹ್ವಾನವಿರಬಹುದು, ಸಂಧಾನದ ಮಾತುಕತೆ ಇರಬಹುದು ಅಥವಾ ಗಂಡು- ಹೆಣ್ಣಿನ ಕೊಡುಕೊಳ್ಳುವಿಕೆ ಇರಬಹುದು, ಹೀಗೆ ನಾನಾ ಒಡಂಬಡಿಕೆಗಳಲ್ಲಿ ಬಹಳ ಹಿಂದಿನಿಂದಲೂ ಭಾಗವಹಿಸುತ್ತಾ ಬಂದಿದ್ದೇನೆ.
ಭಾರತದಲ್ಲಿ ಈ ಹಿಂದಿನಿಂದಲೂ ನನ್ನ ಧನಾತ್ಮಕ ಅಂಶಗಳನ್ನು ಗುರುತಿಸಿ, ಮಿತ್ರರಾದ ಎಲೆ, ಸುಣ್ಣ, ಕೊಬ್ಬರಿ, ಲವಂಗ... ಮುಂತಾದವುಗಳೊಂದಿಗೆ 'ತಾಂಬೂಲ' ಎನ್ನುವ ಹೆಸರಿನಲ್ಲಿ ನನ್ನನ್ನು ಮೆಲ್ಲುತ್ತಾ ಬಂದಿದ್ದು, ಜಗಿತದ ರಸಾಸ್ವಾದವನ್ನು ಉಣಬಡಿಸುತ್ತಾ ಬಂದಿದ್ದೇನೆ. ಸ್ತ್ರೀ- ಪುರುಷರೆನ್ನುವ ಬೇಧವಿಲ್ಲದೆ ನನ್ನನ್ನು ಆಸ್ವಾದಿಸುವುದರ ಹಿಂದೆ, ನನ್ನಲ್ಲಿರುವ ಕಾಮೋತ್ತೇಜಕ ಗುಣ, ಜೀರ್ಣಕಾರಕ ಗುಣ, ಹಲ್ಲನ್ನು ಗಟ್ಟಿಗೊಳಿಸುವ ಗುಣ ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸುವ ಗುಣ ಸಹಕಾರಿಯಾಗಿದೆ.
ಮದುವೆಯ ಮೊದಲರಾತ್ರಿ ಹೆಂಡತಿ ಗಂಡನಿಗೆ ತಾಂಬೂಲ ಕೊಟ್ಟು ತಾನೂ ತಿನ್ನುವ ಸಂಪ್ರದಾಯದ ಆಚರಣೆ ಇದೆ. ಅದು ಈಗಲೂ ಮುಂದುವರಿಯುತ್ತಿದೆ. ಕೆಂಪೇರಿದ ತುಟಿಯಿಂದ ಇಳಿಯುವ ರಸಗವಳ ಉತ್ತೇಜಿಸುತ್ತಿದೆ ಎಂದು ಗಂಡ- ಹೆಂಡತಿ ಪಿಸುಮಾತನ್ನಾಡುವುದನ್ನು ನಾನು ಕದ್ದು ಕೇಳಿದ್ದೇನೆ.
ಎಷ್ಟೋ ಧರ್ಮಗಳ ಕಾರ್ಯಗಳಲ್ಲಿ ನನ್ನ ಉಪಸ್ಥಿತಿ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಕರ್ಪೂರ, ಊದುಬತ್ತಿ, ಹಾಲು, ಮೊಸರು, ತುಪ್ಪ, ಹೂಗಳ ಸುವಾಸನೆಯನ್ನು ಆಸ್ವಾದಿಸುತ್ತಾ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತ, ಗೌರವದಿಂದ ಬದುಕುತ್ತಿದ್ದ ನನ್ನ ಜೀವನ ಈ ರೀತಿಯ ತಿರುವು ಪಡೆಯುತ್ತದೆಂದು ನಾನೆಂದೂ ಊಹಿಸಿರಲಿಲ್ಲ.
ನಾನು ಆಹಾರವಸ್ತುವಲ್ಲ, ನಿಜ. ಆದರೂ ನನ್ನ ಔಷಧೀಯ ಗುಣಗಳಿಂದ ಜನರ ಬಾಯಿಗೆ ಆಹಾರವಾಗಿ ನೆಮ್ಮದಿಯಿಂದ ಬದುಕುತ್ತಿದ್ದೆ. ನನ್ನನ್ನು ಬೆಳೆಯುವ ತಮಗೆ ಕೈತುಂಬ ಹಣ ಕೊಡಿಸಲು ಸಾಧ್ಯವಾಗದಿದ್ದರೂ, ತಮ್ಮೆಲ್ಲ ಗೌರವ- ಸಂಸ್ಕೃತಿಗಳನ್ನು ಉಳಿಸಿಕೊಂಡು ಬದುಕುವಷ್ಟರ ಮಟ್ಟಿಗೆ ನೆಮ್ಮದಿ ನೀಡಿದ್ದೆ. ಆದರೆ ವಿಧಿಯ ಮಾಯೆ 1985ರಲ್ಲಿ ನನ್ನನ್ನು ಯಾವ್ಯಾವುದೋ ರಾಸಾಯನಿಕಗಳೊಡನೆ ಚಟವಸ್ತುಗಳ ತಯಾರಿಕೆಯಲ್ಲಿ ಭಾಗವಹಿಸುವಂತೆ ಮಾಡಿತು. ಪಾನ್‌ಪರಾಗ್, ಪಾನ್‌ಮಸಾಲ, ರಜನಿಗಂಧ, ಗುಟ್ಕಾ... ಹೀಗೆ ನೂರಾರು ವೇಷಗಳಲ್ಲಿ ಮಾರುಕಟ್ಟೆಗೆ ನೂಕಲ್ಪಟ್ಟೆ. ನನಗೇ ಅಚ್ಚರಿಯಾಗುವಂತೆ ಯುವಜನಾಂಗ ಅದೆಷ್ಟು ಬೇಗ ಇವುಗಳ ದಾಸರಾದರೆಂದರೆ ಊಟವನ್ನಾದರೂ ಬಿಟ್ಟಾರು, ಗುಟ್ಕಾ ಬಿಡದ ಸ್ಥಿತಿ ತಲುಪಿದರು. ಕಂಡಕಂಡಲ್ಲಿ ಅಗಿದುಗಿದು, ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ಪೊಟ್ಟಣಗಳು ಮಾಲಿನ್ಯದ ಹೊಸ ಚಿತ್ತಾರಗಳನ್ನು ಭಾರತದ ಮೂಲೆಮೂಲೆಗಳಲ್ಲೂ ಬಿಡಿಸಲು ಪ್ರಾರಭಿಸಿದ್ದವು. ನನ್ನ ಧಾರಣೆ ಗಗನಕ್ಕೇರಿತು.
ಧಾರಣೆ ಹೆಚ್ಚಾದ ಅಮಲಿನಲ್ಲಿ ತೇಲುತ್ತಿದ್ದ ನಿಮಗೆ ಆರೋಗ್ಯದ ಬಗೆಗಿನ ಕೂಗು ಕೇಳಿಸಲೇ ಇಲ್ಲ. ಆಗ ನನ್ನ ಪರವಾಗಿ ನಿಂತವರು ಕೆ.ವಿ. ಸುಬ್ಬಣ್ಣನವರು. ನನಗಿನ್ನೂ ನೆನಪಿದೆ, ಬೆಳೆಗಾರರೆಲ್ಲಾ ಸೇರಿ ಗುಟ್ಕಾ ದೊರೆಯೊಬ್ಬರಿಗೆ ಶಿವಮೊಗ್ಗದಲ್ಲಿ ಸನ್ಮಾನ ಏರ್ಪಡಿಸಿದ್ದರು. ಅಂದು ಸುಬ್ಬಣ್ಣ ಗುಟ್ಕಾದ ವಿರುದ್ಧ ಕರಪತ್ರ ಹಂಚಿ, ನಿಮಗೆ ಖಳನಾಯಕನಂತೆ ಕಂಡಿದ್ದರು. ಸ್ವತಃ ನನ್ನನ್ನು ಬೆಳೆಯುತ್ತಿದ್ದ ಸುಬ್ಬಣ್ಣನವರು, ಗುಟ್ಕಾದಂಥ ವಿಷವಸ್ತುವಿನಲ್ಲಿ ನಾನು ಬಳಕೆಯಾಗಿ ಧಾರಣೆ ಹೆಚ್ಚಾಗುವುದನ್ನು ಸಂಸ್ಕಣತಿಯ ಅಧಃಪತನವೆಂದು ಬಣ್ಣಿಸಿದ್ದರು. ಮುಂದೆ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಅವರು ಅಂದು ಬರೆದಿದ್ದ 'ಅಡಕೆಯ ಮಾನಹಾನಿ' ಲೇಖನ ಓದಿದರೆ ನಿಮಗೆ ಅವರ ದೂರದೃಷ್ಟಿಯ ಅರಿವಾಗುತ್ತದೆ. ಜೀವನವಿಡೀ ನನ್ನನ್ನು ಮೆಲ್ಲುತ್ತಿದ್ದ ಸುಬ್ಬಣ್ಣ ನನ್ನ ಮಾನ ಉಳಿಸುವ ಪ್ರಯತ್ನ ಮಾಡಿದ್ದರು. ನಾನು ಅವರಿಗೆ ಆಭಾರಿಯಾಗಿದ್ದೇನೆ.
ಕೇವಲ ಧಾರಣೆಗೆ ಮರುಳಾಗಿ ಗುಟ್ಕಾದಂಥ ವಿಷವಸ್ತುವಿನಲ್ಲಿ ನನ್ನನ್ನು ಬಂಧಿಸಿದಿರಿ. ರಾಸಾಯನಿಕಗಳು ಮೈತುಂಬ ಅಂಟಿಕೊಂಡರೂ ಮೆದುವಾಗದ ನನ್ನ ಅಪರೂಪದ ಗಟ್ಟಿತನ ನನಗೆ ಮುಳುವಾಗಿತ್ತು. ಹೆತ್ತವರು ತಮ್ಮ ಮಗಳನ್ನು ಧಾರೆಯೆರೆದು ಕೊಡುವಾಗ ಯೋಗ್ಯ ವರನನ್ನು ಬಯಸುತ್ತಾರೆ. ಮಗಳನ್ನು ಅಡ್ಡಕಸುಬಿಗೆ ಇಳಿಸಿ ಹಣಮಾಡಿ ಬದುಕುವವನಿಗೆ ಯಾರಾದರೂ ಧಾರೆಯೆರೆದು ಕೊಡುತ್ತಾರೇನು? ಹಾಗೆಯೇ ನೀವು ನನ್ನನ್ನು ಗುಟ್ಕಾದಂಥ ಮಾರಿಗೆ ಕೊಡುವಾಗ ಆಲೋಚಿಸಬೇಕಾಗಿತ್ತು. ನನ್ನದಲ್ಲದ ತಪ್ಪಿಗೆ ಆರೋಗ್ಯ ಇಲಾಖೆ ನನ್ನನ್ನೂ ಆರೋಗ್ಯಕ್ಕೆ ಹಾನಿಕಾರಕವೆಂದು ತೀರ್ಮಾನಿಸುವ ಹಂತಕ್ಕೆ ತಲುಪಿ ಸುಪ್ರೀಂಕೋರ್ಟಿನಿಂದ ನನಗೆ ಛೀ, ಥೂ ಎಂದು ಉಗುಳಿಸಿದಿರಿ. ನಿಮ್ಮ ಈ ತಪ್ಪಿನಿಂದಾಗಿ ಮಾನಸಿಕವಾಗಿ ನಾನೆಷ್ಟು ನೊಂದೆನೆಂದೆರೆ, ಎಂದೂ ಇಲ್ಲದ ಕಾಯಿಲೆಗಳು ನನಗಂಟಿಕೊಂಡವು. ಕೊಳೆರೋಗ, ಮಣಿಉದುರುವ ರೋಗ, ಅಣಬೆರೋಗ... ನಾನು ಜರ್ಜರಿತನಾದೆ.
ಮೂಲತಃ ನನ್ನನ್ನು ಬೆಳೆಯುವ ಹೆಚ್ಚಿನವರು ಶುದ್ಧ ಸೋಮಾರಿಗಳು. ಯಾವುದೇ ಆರೈಕೆ ಮಾಡದಿದ್ದರೂ ಒಂದು ಹಂತದ ಬೆಳೆಯನ್ನು ನಾನು ನೀಡುತ್ತಲೇ ಬಂದಿದ್ದೇನೆ. ಅದಕ್ಕಾಗಿ ಕೆಲವರು ನನ್ನ ಕೃಷಿಯಲ್ಲೂ ಹೆಚ್ಚಿನ ಶ್ರಮ ತೆಗೆದುಕೊಳ್ಳುವುದಿಲ್ಲ. ಈ ವರ್ಷ ನನ್ನನ್ನು ಮರದಿಂದ ಇಳಿಸಿ ಮಾರಿಕೊಂಡರೆ ಮತ್ತೆ ಮುಂದಿನ ವರ್ಷವೇ ಬಂದು ಮಾತನಾಡಿಸುವ ಬೆಳೆಗಾರರನ್ನೂ ನಾನು ನೋಡಿದ್ದೇನೆ. ನನ್ನೊಂದಿಗೆ ಮಿತ್ರರಾದ ಎಲೆ, ಕಾಳುಮೆಣಸು, ಏಲಕ್ಕಿ, ಬಾಳೆ, ಕೋಕೊ... ಹೀಗೆ ಹಲವರನ್ನು ನಾನು ಮನಃಪೂರ್ವಕವಾಗಿ ಒಪ್ಪಿ ನನ್ನ ನೆರಳಿನಲ್ಲಿ ಬೆಳೆಯಗೊಡುತ್ತೇನೆ.
ಮಾನ್ಯ ನನ್ನ ಬೆಳೆಗಾರರೆ, ಈಗಲೂ ಕಾಲ ಮಿಂಚಿಲ್ಲ. ಗುಟ್ಕಾ ನಿಷೇಧವನ್ನು ಬೆಂಬಲಿಸಿದರೆ ನೀವೇ ನಿಮ್ಮ ನೈತಿಕ ಮೌಲ್ಯ ಹೆಚ್ಚಿಸಿಕೊಂಡಂತೆ. ಗುಟ್ಕಾದ ಒಂದು ಪ್ಯಾಕೆಟ್‌ನಲ್ಲಿ ನಾನು ಇರುವ ಪ್ರಮಾಣ ಅತ್ಯಲ್ಪ. ಗುಟ್ಕಾ ನಿಷೇಧಿಸಿದರೆ ನನ್ನ ಬಳಕೆ ಕಡಿಮೆಯಾಗುತ್ತದೆ ಎನ್ನುವುದು ಅಷ್ಟೇನೂ ಸತ್ಯವಲ್ಲ. ಹಾಗೆ ನೋಡಿದರೆ ಬೀಡಾಗಳಲ್ಲಿ, ತಾಂಬೂಲಗಳಲ್ಲಿ ನಾನು ಹೆಚ್ಚು ಪ್ರಮಾಣದಲ್ಲಿ ಇರಬೇಕಾಗುತ್ತದೆ. ನನ್ನ ಔಷಧೀಯ ಗುಣಗಳನ್ನು ಮುಂದಿಟ್ಟುಕೊಂಡು ಇವುಗಳ ಬಳಕೆಗೆ ಪ್ರಚಾರ ಕೊಡಿ. ಎಷ್ಟೋ ವರ್ಷದಿಂದ ಮೆಲುಕು ಪ್ರಾಣಿಯಂತಾಗಿದ್ದ ಗುಟ್ಕಾ ಬಳಕೆದಾರರ ಬಾಯಿ ಸುಮ್ಮನೆ ಕೂರುವ ಜಾಯಮಾನದ್ದಲ್ಲ.

ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ಹಾನಿಕಾರಕವಲ್ಲದ ತಾಂಬೂಲ, ಬೀಡಾಗಳ ಬಳಕೆಯನ್ನು ಪ್ರೋತ್ಸಾಹಿಸಿ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ಹೊಸ ಉತ್ಪನ್ನಗಳನ್ನು ಆವಿಷ್ಕರಿಸಿ.
ಗುಟ್ಕಾಕ್ಕೆ ನನ್ನನ್ನು ಆಹಾರವಾಗಿಸಿದಂದಿನಿಂದಲೂ 'ನಿಷೇಧ' ಎನ್ನುವ ನನ್ನ ಪಾಲಿನ ಇಂಪಾದ ಶಬ್ದದಿಂದ, ಮಧ್ಯವರ್ತಿಗಳು ಆಡಿದ ಧಾರಣೆಯ ಹಾವು- ಏಣಿ ಆಟದಲ್ಲಿ ನೀವು ಬಸವಳಿದಿದ್ದೀರಿ. ಈ ಹಂತದಲ್ಲಿ ಧಾರಣೆ ಕಡಿಮೆಯಾದಂತೆನಿಸಿದರೂ ಮುಂದೆ ಸಿಗುವ ನಿರ್ದಿಷ್ಟ ಧಾರಣೆ ನಿಮ್ಮ ನೆಮ್ಮದಿಗೆ ನೆರವಾಗುತ್ತದೆ ಎಂಬ ಅಂಶ ನೆನಪಿನಲ್ಲಿಡಿ. ಕಡಿಮೆ ದರ್ಜೆಯ ವಿದೇಶಿಯರು ನನ್ನ ಸ್ಥಾನಕ್ಕೆ ಆಮದಾಗುವುದನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿ.
ನನ್ನ ಸಹಚರರಾದ ಹಾಳೆ, ಸೋಗೆ ಮತ್ತು ನನ್ನನ್ನು ಹೆತ್ತ ಮರದಿಂದ ಸಿಗುವ ದಬ್ಬೆಗಳಿಗೆ ಸೂಕ್ತ ಮಾರುಕಟ್ಟೆ ಹುಡುಕಿ. ನನ್ನನ್ನು ಬೇಯಿಸಿದಾಗ ಬರುವ ತೊಗರನ್ನು ಸ್ವಾಭಾವಿಕ ಬಣ್ಣವಾಗಿ ಬಟ್ಟೆಗಳಲ್ಲಿ ಬಳಸಬಹುದೆಂದು ಈಗಾಗಲೇ ಹೆಗ್ಗೋಡಿನ ಚರಕದ ಪ್ರಸನ್ನ ತೋರಿಸಿಕೊಟ್ಟಿದ್ದಾರೆ. ಹೊಸನಗರದ ರಾಮಚಂದ್ರಾಪುರ ಮಠವು ನನ್ನನ್ನು ಬಳಸಿ ತಯಾರಿಸಿದ ಖಾದ್ಯಯೋಗ್ಯ ಪದಾರ್ಥಗಳು, ಮಾರ್ಜಕಗಳು ಮತ್ತು ಔಷಧೀಯ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ನೀವೂ ಬಳಸಿ, ಬೇರೆಯವರಿಗೂ ಪರಿಚಯಿಸಿ.
ನಿಮ್ಮ ಆದಾಯ ಮತ್ತು ನನ್ನ ಧಾರಣೆಯನ್ನು ಈ ರೀತಿ ಹೆಚ್ಚಿಸಿಕೊಳ್ಳುವುದರ ಬದಲು, ಗುಟ್ಕಾ ನಿಷೇಧವನ್ನು ವಿರೋಧಿಸಿ ನನ್ನ ಮಾನಹರಣ ಮಾಡಬೇಡಿ. ಅಡಕೆ ಬೆಳೆಗಾರರೆಂದರೆ ಸುಸಂಸ್ಕೃತರು, ಪ್ರಜ್ಞಾವಂತರು ಎಂದು ಗುರುತಿಸಿಕೊಂಡಿರುವ ನೀವು ಈ ಸಮಾಜದ ಆರೋಗ್ಯವನ್ನು ಕಾಪಾಡಲೇಬೇಕು. ತಂಬಾಕು, ಬೀಡಿ, ಸಿಗರೇಟ್, ಮದ್ಯಗಳನ್ನು ನಿಷೇಧಿಸಬೇಕೆಂದು ನೀವು ನಡುಬೀದಿಯಲ್ಲಿ ನಿಂತರೆ ಸಾವಿರ ಸಾವಿರ ದನಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವ ನೈತಿಕ ಗೌರವವನ್ನು ನೀವು ಹೊಂದಿರುತ್ತೀರಿ.
ಒಹೋ, ಯಾರೋ ಬರುತ್ತಿದ್ದಾರೆ! ಕೈಯಲ್ಲಿ ವೀಳ್ಯದೆಲೆಯ ಕಟ್ಟು ಕಾಣುತ್ತಿದೆ. ಗುಟ್ಕಾ ಸಿಗುತ್ತಿಲ್ಲ, ಒಳ್ಳೆಯದಾಯಿತು. ತಂಬಾಕು ಗುಟ್ಕಾದ ಸಹವಾಸ ಸಾಕು. ಎಲೆ ಅಡಕೆ ಸುಣ್ಣ ಹಾಕಿದರೆ ಅದರ ಮಜವೇ ಬೇರೆ... ಎಂದು ಮಾತಾಡ್ತ ಬರ್ತಿರೋದು ಕೇಳ್ತಾ ಇದೆ. ಅಬ್ಬಾ! ಅಂತೂ ಹೋದ ಮಾನ ತಿರುಗಿ ಬಂತೆಂದ್ಕೋತ್ತೀನಿ. ಎಲ್ಲ ನನ್ನ ಬೆಳೆಗಾರರಿಗೆ ಶುಭವಾಗಲಿ, ನಮಸ್ಕಾರ.

- ಪ್ರಕಾಶ್ ಕಾಕಾಲ್
prakash.kakal@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments