ಆರೋಪಿ ಬೆರಳಚ್ಚು ಸಂಗ್ರಹ
ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರ ಆತನ ಎರಡೂ ಕೈಗಳ ಬೆರಳುಗಳ ಮುದ್ರೆಯನ್ನು ಪಡೆಯುತ್ತಾರೆ. ಅದನ್ನು ಹಾಗೆಯೇ ಸಂಗ್ರಹಿಸಿ ಇಡುತ್ತಾರೆ. ಇದರಿಂದ ಆರೋಪಿ ಪತ್ತೆ ಸುಲಭವಾಗುತ್ತದೆ ಎಂಬುದು ಬೆರಳಚ್ಚು ಸಂಗ್ರಹದ ಉದ್ದೇಶ. ಪೊಲೀಸರು ಬಂಧಿಸುವ ಆರೋಪಿಗಳು ಜೈಲಿಗೆ ಹೋದ ನಂತರ ಜಾಮೀನು ಪಡೆದು ಹೊರಬರುತ್ತಾರೆ. ಅವರು ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಮತ್ತೆ ತಮ್ಮ ಹಳೆ ಚಾಳಿಯನ್ನು ಮುಂದುವರೆಸುತ್ತಾರೆ. ಆಗ ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗುವ ಬೆರಳಚ್ಚು ಹಾಗೂ ಪೊಲೀಸ್ ಠಾಣೆಯಲ್ಲಿರುವ ಬೆರಳಚ್ಚುಗಳನ್ನು ತಾಳೆ ಮಾಡಿ ನೋಡಲಾಗುತ್ತದೆ. ಸ್ಥಳದಲ್ಲಿ ಸಿಗುವ ಬೆರಳಚ್ಚು ಠಾಣೆಯಲ್ಲಿರುವ ಯಾವುದಾದರೊಂದು ಬೆರಳಚ್ಚಿಗೆ ಹೋಲಿಕೆ ಆದರೆ ಪೊಲೀಸರ ಕೆಲಸ ಅರ್ಧ ಮುಕ್ತಾಯವಾದಂತೆ.
ಆ ಬೆರಳಚ್ಚು ಯಾವ ಆರೋಪಿಗೆ ಸೇರಿದ್ದು ಎಂಬ ಮಾಹಿತಿ ಪಡೆದು ನಂತರ ಆತನ ಪತ್ತೆಗೆ ಮುಂದಾಗುತ್ತಾರೆ. ಆತ ಪತ್ತೆಯಾದ ನಂತರ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗವಹಿಸಿದ್ದರೇ, ಇಲ್ಲವೇ ಎಂಬಿತ್ಯಾದಿ ಮಾಹಿತಿ ಬಗ್ಗೆ ಕಲೆಹಾಕುತ್ತಾರೆ. ಕಪ್ಪು ದ್ರವವೊಂದನ್ನು ಗಾಜಿನ ತುಂಡಿನ ಮೇಲೆ ಹಚ್ಚಿ, ಅದನ್ನು ಗಾಜಿನ ಎಲ್ಲಾ ಭಾಗಕ್ಕೆ ಉಜ್ಜಲಾಗುತ್ತದೆ. ನಂತರ ಆರೋಪಿಗಳು ಬೆರಳ ತುದಿ ಅಂದರೆ ಬೆರಳಚ್ಚು ಪಡೆಯುವ ಭಾಗವನ್ನು ಆ ಗಾಜಿನ ಮೇಲೆ 180 ಡಿಗ್ರಿಯಲ್ಲಿ ಉಜ್ಜಲಾಗುತ್ತದೆ. ನಂತರ ಅದನ್ನು ಬಿಳಿ ಹಾಳೆ ಮೇಲೆ (ಹೆಬ್ಬೆಟ್ಟಿನ ಗುರುತು ಹಾಕುವಂತೆ ಎಲ್ಲಾ ಬೆರಳ ಅಚ್ಚು ಪಡೆಯಲಾಗುತ್ತದೆ) ಅದನ್ನು ಹಾಕಿಸಿಕೊಂಡು ನಂತರ ಸಂಗ್ರಹಿಸಿಡಲಾಗುತ್ತದೆ. ಇದು ಬೆರಳಚ್ಚು ಸಂಗ್ರಹಿಸುವ ಹಳೆ ಪದ್ಧತಿ. ಆರೋಪಿಯ ಬೆರಳಚ್ಚು ಸಂಗ್ರಹಿಸುವುದು ಕಡ್ಡಾಯ.
- ಶಾಂತ ತಮ್ಮಯ್ಯ