ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸರ್ವರೋಗಕ್ಕೂ ರಾಮಬಾಣ!

Mainashree
Updated On : 5 Jun 2013, 1:04 am

ಬೆಳ್ಳುಳ್ಳಿ ವಿಶ್ವವ್ಯಾಪಿ. ಇವತ್ತು ಜಗತ್ತಿನಾದ್ಯಂತ ಹೃದ್ರೋಗ ತಡೆಗೆ ಬೆಳ್ಳುಳ್ಳಿ ಬಳಸುತ್ತಾರೆ. ಯೂನಿವರ್ಸಿಟಿ ಆಫ್ ವೆಸ್ಟರ್ನ್ ಒಂಟಾರಿಯೊ ಸಂಶೋಧಕರು ಒಂದು ಸಮೀಕ್ಷೆ ನಡೆಸಿದರು. ಅದರಲ್ಲಿ ಕಂಡುಬಂದ ಅಂಶ ಎಂದರೆ ಅಧಿಕ ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವಿಸುವ ರಾಷ್ಟ್ರಗಳಲ್ಲಿ ಹೃದ್ರೋಗದ ತೊಂದರೆ ಕಡಿಮೆ ಇದೆ ಎನ್ನುವುದು.
ಹೃದ್ರೋಗಕ್ಕಷ್ಟೆ ಬೆಳ್ಳುಳ್ಳಿಯನ್ನು ಸೀಮಿತಗೊಳಿಸಬೇಕಿಲ್ಲ. ಔಷಧೀಯವಾಗಿ ಅದರ ವ್ಯಾಪ್ತಿ ಬಹಳ ದೊಡ್ಡದು. ಮೊನ್ನೆ ಓದುಗ ಮಿತ್ರರೊಬ್ಬರು ಎಸ್‌ಎಂಎಸ್ ಮಾಡಿದ್ದರು, 'ಗ್ಯಾಸ್ಟ್ರಿಕ್‌ನಿಂದ ಬಳಲುವರು ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣ ಬೆಳ್ಳುಳ್ಳಿಯ ಒಂದು ಎಸಳನ್ನು ಮಾತ್ರೆಯಂತೆ ನುಂಗಿ ನೀರು ಕುಡಿಯಬೇಕು. ನಾಲ್ಕೈದು ದಿನ ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಂಬಂಧಿತ ತೊಂದರೆಗಳು ಮಂಗಮಾಯ' ಎಂದು. ಅದನ್ನು ವೈದ್ಯ ಗೆಳೆಯ ಹರೀಶ್‌ಗೆ ತೋರಿಸಿದಾಗ ನಕ್ಕುಬಿಟ್ಟರು. 'ನಾವು ನಾಲ್ಕೈದು ಮಾತ್ರೆಗಳನ್ನು ಬರೆದು ಕೊಟ್ಟಾಗ ಅಥವಾ ಗ್ಯಾಸ್ಟ್ರಿಕ್, ಆ್ಯಸಿಡಿಟಿ ಇತ್ಯಾದಿ ತೊಂದರೆ ಇರುವವರಿಗೆ ಹೈಡೋಸ್ ಮಾತ್ರೆ ಕೊಡುವಾಗ ಊಟಕ್ಕೆ ಅರ್ಧ ಗಂಟೆ ಮೊದಲು ತೆಗೆದುಕೊಳ್ಳಿ ಎಂದು ಪುಟ್ಟ ಗುಳಿಗೆಯೊಂದನ್ನು ಕೊಡುತ್ತೇವಲ್ಲ. ಬೆಳ್ಳುಳ್ಳಿಯಲ್ಲಿರುವ ಅಂಶಗಳೇ ಅವುಗಳಲ್ಲೂ ಇರುತ್ತವೆ. ಎರಡೂ ಕೆಲಸ ಮಾಡುವುದು ಒಂದೇ ಥರ!'. 'ಹಾಗಾದರೆ ಮಾತ್ರೆ ಕೊಡುವ ಬದಲು ಬೆಳ್ಳುಳ್ಳಿ ಸೇವಿಸುವಂತೆ ಸಲಹೆ ನೀಡಬಹುದಲ್ಲ?' ಎಂದೆ. 'ಹಾಗೆ ಮಾಡಿದರೆ ನಮ್ಮ ಬಳಿ ಯಾರೂ ಬರುವುದೇ ಇಲ್ಲ ಮಾರಾಯಾ. ಜನಕ್ಕೆ ಗುಳಿಗೆ, ಔಷಧಗಳೇ ಬೇಕು. ಸಣ್ಣಪುಟ್ಟ ಸಮಸ್ಯೆಗಳಿಗೆ ಇಂಥ ಪರಿಹಾರ ಹೇಳಿದರೆ ಜನರ ದೃಷ್ಟಿಯಲ್ಲಿ ನಾವು ಒಳ್ಳೆಯ ಡಾಕ್ಟರ್ ಅನ್ನಿಸಿಕೊಳ್ಳಲ್ಲ' ಎಂದು ನಕ್ಕ.
ಹೃದ್ರೋಗದ ತೊಂದರೆಗಾಗಿ ಬೆಳ್ಳುಳ್ಳಿ ಸೇವಿಸಿದರೂ ಸಹ ಅದು ಇನ್ನಿತರ ರೀತಿಗಳಲ್ಲಿಯೂ ಪ್ರಭಾವ ಬೀರುತ್ತಿರುತ್ತದೆ. ವಿಶೇಷತಃ ಸಂಧು ನೋವುಗಳಿಗೆ ಇದು ರಾಮಬಾಣ. ನಿಯಮಿತವಾಗಿ ಸೇವಿಸುತ್ತಿದ್ದರೆ ಯಾವುದೇ ರೀತಿಯ ಪೇನ್ ಕಿಲ್ಲರ್‌ನ ಅಗತ್ಯವೂ ಬೀಳುವುದಿಲ್ಲ. ಅಷ್ಟು ಪರಿಣಾಮಕಾರಿ ಇದು! ಆಸ್ಟಿಯೋಅರ್ಥರೈಟಿಸ್‌ನವರಿಗಂತೂ ಇದಕ್ಕಿಂತ ಉಪಯುಕ್ತ ಮತ್ತು ಕಡಿಮೆ ದರದ ಮದ್ದು ಸಿಗಲಾರದು. ಮೈ ನೋವು, ಅಸ್ತಮಾ, ಉರಿಮೂತ್ರ, ರಕ್ತ ಹೋಗುವ ಮೂಲವ್ಯಾಧಿ, ಕಿರಿಕಿರಿ ಉಂಟುಮಾಡುವಂಥ ಅಸೌಖ್ಯ ಇತ್ಯಾದಿಗಳಿಗೂ ಇದು ರಾಮಬಾಣ. ಹೃದ್ರೋಗಿಗಳು ಬೇಯಿಸಿ ತಿನ್ನುವುದು ಸೂಕ್ತ. ಆದರೆ ಇತರರು ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುವುದು ಹೆಚ್ಚು ಉಪಯುಕ್ತ ಎನ್ನುವುದು ತಜ್ಞರ ಅಭಿಪ್ರಾಯ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement