ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೋವಿನ ಬಂಧ ಬೇಡ

Mainashree
Updated On : 7 Jun 2013, 12:44 pm

ದೇಹದ ಭಾಗ, ಅದರಲ್ಲೂ ಬಹುಮುಖ್ಯವಾದ ಅಂಗ ಕಾಲು. ಅದಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೇ ಆಗುವುದಿಲ್ಲ. ಹೆಚ್ಚೇನು? ಬದುಕು ನಿಂತಿರುವುದೇ ಅದರ ಮೇಲೆ. ಅದನ್ನೇ ಸಾಂಕೇತಿಕವಾಗಿ 'ನನ್ನ ಕಾಲ ಮೇಲೆ ನಾನು ಸ್ವತಂತ್ರವಾಗಿ ನಿಲ್ಲುವಂತಾಗಬೇಕು' ಎಂದು ಸ್ವಾವಲಂಬನೆಯನ್ನು ವ್ಯಾಖ್ಯಾನಿಸುತ್ತೇವೆ. ಕಾಲುಗಳಿಲ್ಲದಿದ್ದರೆ ಎಲ್ಲದಕ್ಕೂ ಪರಾವಲಂಬಿಯಾಗಿ ಜೀವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿಯೇ ನಮ್ಮ ದೇಹದ ಅಂಗಗಳಲ್ಲೇ ಕಾಲುಗಳಿಗೆ ಅಷ್ಟೊಂದು ಪ್ರಾಮುಖ್ಯ. ಒಂದೊಮ್ಮೆ ಅಂಥ ಕಾಲಿಗೆ ಅಪಘಾತದಲ್ಲೋ, ಇನ್ನಾವುದೋ ರೋಗ ಉಲ್ಬಣವಾಗಿಯೋ ಧಕ್ಕೆಯಾಯಿತು ಎಂದಿಟ್ಟುಕೊಳ್ಳೋಣ. ಕೆಲ ದಿನ ಹೈರಾಣಾಗಿ ಬಿಡುತ್ತೇವೆ. ಹಾಗೂ ಇದು ಇನ್ನಷ್ಟು ತೀವ್ರಗೊಂಡು ಅದರಿಂದ ಜೀವಕ್ಕೇ ಅಪಾಯವಾಗುವ ಹಂತ ಬಂತೆಂದಾಗ ಹಿಂದೆ ಮುಂದೆ ನೋಡದೇ ಕಾಲನ್ನು ಕತ್ತರಿಸಿಕೊಂಡುಬಿಡುತ್ತೇವೆ. ಜೀವಕ್ಕಿಂತ ಕಾಲು ಹೆಚ್ಚು ಯಾವತ್ತೂ ಆಗುವುದಿಲ್ಲ. ಬದುಕೂ ಹಾಗೆಯೇ. ಬದುಕಿನಲ್ಲಿನ ಸಂಬಂಧಗಳು ನಮ್ಮ ಅಂಗಗಳಿದ್ದಂತೆಯೇ. ಹೌದು, ಕೆಲ ಸಂಬಂಧಗಳು ನಮಗೆ ಅತ್ಯಂತ ಅನಿವಾರ್ಯವೆಂದೇ ಭಾವಿಸಿರುತ್ತೇವೆ. ಅಂಥ ವ್ಯಕ್ತಿಗಳಿಲ್ಲದೇ ಬದುಕೇ ಇಲ್ಲ, ಆ ಸಂಬಂಧವನ್ನು ಕಳೆದುಕೊಂಡು, ದೂರ ಮಾಡಿಕೊಂಡು ಜೀವಿಸುವ ಸಾಮರ್ಥ್ಯ ಇಲ್ಲವೇ ಇಲ್ಲ ಎಂದುಕೊಂಡಿರುತ್ತೇವೆ. ಕೆಲವೊಂದು ಭಾವನಾತ್ಮಕ ಸಂಬಂಧಗಳ ಪರಿ ಖಂಡಿತವಾಗಿಯೂ ಹಾಗೆಯೇ ಇರುತ್ತದೆ. ಒಂದೇ ಒಂದು ಕ್ಷಣ ಕೂಡ ಅವರಿಲ್ಲದೇ ಬದುಕಲಿಕ್ಕಾಗುವುದಿಲ್ಲ ಎಂಬಂಥ ದಟ್ಟತೆ ಹೃದಯ ಹೃದಯಗಳಲ್ಲಿ ಬೆಸೆದಿರುತ್ತದೆ. ಸಂಬಂಧಗಳ ಭಾವ ತೀವ್ರತೆ ಇಲ್ಲದೇ ಬದುಕುವುದೆಂದರೆ ಅದು ಮರುಭೂಮಿಯಂತೆಯೇ ಸರಿ. ಒಪ್ಪಿಕೊಳ್ಳೋಣ.  ಆದರೆ ಬದುಕು ಕೇವಲ ಭಾವನೆಗಳಲ್ಲೇ ಮುಗಿಯುವುದಿಲ್ಲ. ಅದನ್ನೂ ಮೀರಿದ ವಾಸ್ತವ ನಮ್ಮನ್ನು ನಡೆಸುತ್ತಿರುತ್ತದೆ. ವಾಸ್ತವಗಳನ್ನು ಅರಿಯದೆಯೇ ಕೇವಲ ಭಾವನಾತ್ಮಕವಾಗಿ ಯೋಚಿಸುವುದೆಂದರೆ ಮೂರ್ಖತನವಾಗುತ್ತದೆ. ಹೇಗೆ ಜೀವಕ್ಕೆ ಧಕ್ಕೆ ತರುವ ಗ್ಯಾಂಗ್ರಿನ್ ಆದ ಕಾಲನ್ನು ಮುಲಾಜಿಲ್ಲದೇ ಕತ್ತರಿಸಿ ಒಗೆಯುತ್ತೇವೆಯೋ, ಹಾಗೆಯೇ ಬದುಕಿಗೆ ಧಕ್ಕೆ ತರುವ ಸಂಬಂಧಗಳನ್ನು ಅಷ್ಟೇ ನಿಷ್ಠುರವಾಗಿ ಕೆಲವೊಮ್ಮೆ ಕತ್ತರಿಸಿಕೊಳ್ಳಬೇಕಾಗುತ್ತದೆ. ಕಾಲು ಬೇಕಿತ್ತು, ಇದ್ದರೆ, ಉಳಿಸಿಕೊಳ್ಳಲು ಆಗಿದ್ದರೆ ಒಳಿತಾಗಿತ್ತು. ಅಂಥ ಪ್ರಯತ್ನಗಳನ್ನು ಮಾಡಿಯಾದ ಮೇಲೆ ಕಾಲಿಗಾಗಿ ಜೀವವನ್ನೇ ಪಣಕ್ಕಿಡುವುದು ಮೂರ್ಖತನ. ಹಾಗೆಯೇ ಸಂಬಂಧಗಳೂ. ಅವನ್ನು ಉಳಿಸಿಕೊಳ್ಳುವ ಗರಿಷ್ಠ ಪ್ರಯತ್ನಮಾಡಿ. ಅನಿವಾರ್ಯವೆಂದಾದರೆ ಕಿತ್ತೆಸೆಯಲೂ ಹಿಂಜರಿಯಬೇಡಿ. ಸಣ್ಣದೊಂದು ಪಶ್ಚಾತ್ತಾಪವೂ ನಿಮಗೆ ಬೇಕಿಲ್ಲ. ಏಕೆಂದರೆ ಅದು ನಿಮ್ಮ ಪ್ರಾಮಾಣಿಕ ಮತ್ತು ಅಂತಿಮ ನಿರ್ಧಾರವಾಗಿರುತ್ತದೆ. ಕಾಲಿಲ್ಲದೆಯೂ ಬದುಕಿದೆ. ಹಾಗೆಯೇ ಅಂಥ ವೃಣಪೀಡಿತ, ರೋಗಿಷ್ಟ ಸಂಬಂಧಗಳಿಲ್ಲದೆಯೂ ಜೀವನವಿರುತ್ತದೆ. ಬದುಕು ಮುಖ್ಯ. <

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments