ಪ್ರಚಂಡೆಯರು
ಅದೊಂದು ಆಕಸ್ಮಿಕ. ಚಂಡೆ ಕಲಿತು, 'ಮಂಜುಷಾ ಮಹಿಳಾ ಚಂಡೆ ಬಳಗ' ಹುಟ್ಟುಹಾಕುವ ಕಲ್ಪನೆಯೂ ಅವರಾರಿಗೂ ಇರಲಿಲ್ಲ.
'ಗಂಡು ಕಲೆ'ಯಲ್ಲಿ ಸ್ತ್ರೀಶಕ್ತಿಯ ಪಾರಮ್ಯ. ತಾಳಮದ್ದಲೆಯಲ್ಲಿ ಮಹಿಳೆಯರು ಅರ್ಥ ಹೇಳಿದ್ದು, ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿ ಕುಣಿದದ್ದು, ಭಾಗವತಿಕೆಯಲ್ಲೂ ಸೈ ಅನ್ನಿಸಿಕೊಂಡಿದ್ದು ಇವನ್ನೆಲ್ಲ ಕೇಳಿಯೇ ಇದ್ದೀರಿ. ಈಗ ಇನ್ನೂ ಒಂದು ಹೆಜ್ಜೆ ಮುಂದೆ. 'ತಾ ಥೈ' ಎಂದು ಕುಣಿಸುವುದು. 'ಚಂಡೆ ನುಡಿಸುವುದು ಹೆಂಗಸರಿಂದ ಅಸಾಧ್ಯ' ಎಂಬ ಈವರೆಗಿನ ನಂಬಿಕೆಯನ್ನು ಸುಳ್ಳಾಗಿಸಿದ್ದಾರೆ ಉಡುಪಿ ಜಿಲ್ಲೆ ಕುಕ್ಕಿಕಟ್ಟೆ ಹೆಣ್ಣುಮಕ್ಕಳು.
ಅದೊಂದು ಆಕಸ್ಮಿಕ. ಚಂಡೆ ಕಲಿತು, 'ಮಂಜುಷಾ ಮಹಿಳಾ ಚಂಡೆ ಬಳಗ' ಹುಟ್ಟುಹಾಕುವ ಕಲ್ಪನೆಯೂ ಅವರಾರಿಗೂ ಇರಲಿಲ್ಲ. ಮೂರ್ನಾಲ್ಕು ವರ್ಷ ಹಿಂದೆ ಮಹಿಳಾ ಸ್ವಾವಲಂಬನೆ ಕ್ರಾಂತಿಗೆ ಮುನ್ನುಡಿ ಬರೆಯಲು ಹಳ್ಳಿಹಳ್ಳಿಯಲ್ಲಿ ಧರ್ಮಸ್ಥಳದ ಸ್ವ-ಸಹಾಯ ಸಂಘಗಳು ಹುಟ್ಟಿಕೊಳ್ಳುತ್ತಿದ್ದ ಕಾಲ. ಕುಕ್ಕಿಕಟ್ಟೆಯಲ್ಲಿಯೂ ಸಂಘ ಶುರುವಾಯಿತು.
ಸಂಘ ಸದಸ್ಯೆಯರಿಗೆ ಸಂಘದ ಚಟುವಟಿಕೆಗಳ ಜತೆಗೆ ತಾವೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬೆಳೆಯಬೇಕು, ಹೊಸಹೊಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎನ್ನುವ ತವಕ. ಮೊದಲು ನಡೆದದ್ದು ಭಜನಾ ಸ್ಪರ್ಧೆ. ಅದನ್ನು ಯಶಸ್ವಿಯಾಗಿ ಸಂಘಟಿಸಿದ ಬಳಿಕ ಅವರಲ್ಲಿ ಧೈರ್ಯ ಮೂಡಿತು. ಆತ್ಮವಿಶ್ವಾಸದಿಂದ ಬೀಗುತ್ತಿದ್ದವರ ದೃಷ್ಟಿ ಚಂಡೆ ಕಲೆಯತ್ತ ಹೊರಳಿತು. ಕೆಲವು ಸದಸ್ಯರು ಅದನ್ನು ರೂಢಿಸಿಕೊಳ್ಳಲು ಬಹಳ ಆಸಕ್ತಿ ವಹಿಸಿದರು. ಹೀಗೆ ಮಾರ್ಚ್ 28, 2010ರಲ್ಲಿ 'ಮಂಜುಷಾ ಮಹಿಳಾ ಚಂಡೆ ಬಳಗ' ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
ಕುಕ್ಕಿಕಟ್ಟೆಯ ಮಂಜುಷಾ ಮಹಿಳಾ ತಂಡದ ಸದಸ್ಯರು ಅಲೆಯೂರಿನ ನಾಗರಾಜ ಭಟ್ಟರಿಂದ ಚಂಡೆ ಬಾರಿಸುವುದನ್ನು ಕಲಿಯಲು ಆರಂಭಿಸಿದರು. ಆರಂಭದ ಆರು ತಿಂಗಳು ನೆಲದಲ್ಲಿ ಹಾಗೂ ನಂತರ ಮೂರು ತಿಂಗಳುಗಳ ಕಾಲ ಮರದ ತುಂಡಿನಲ್ಲಿಯೇ 'ತಾಳ'ದ ಅಭ್ಯಾಸ ನಡೆಯಿತು. ಆಮೇಲೆ ಚಂಡೆ ಬಾರಿಸಲು ಶುರುವಾಯಿತು. ಚಂಡೆ ಕಲೆಯನ್ನು ತೊಡಗಿಕೊಂಡ ಎಲ್ಲಾ ಮಹಿಳೆಯರಿಗೂ ಯಜಮಾನರ (ಪತಿ) ಸಹಕಾರ, ಪ್ರೋತ್ಸಾಹವಿದೆ ಎನ್ನುವುದು ಮೆಚ್ಚಬೇಕಾದ ಅಂಶ.
ತಂಡ ಪ್ರಥಮ ಬಾರಿಗೆ ಆಲೆಯೂರಿನ ಬ್ರಹ್ಮ ಮಂಡಳ ಉತ್ಸವದಲ್ಲಿ ತನ್ನ ಕಲೆ ಪ್ರದರ್ಶಿಸಿತು. ಮಾನಿನಿಯರ ಚೊಚ್ಚಲ ಪ್ರಯತ್ನವೇ ಯಕ್ಷ ಪ್ರೇಮಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು. ಅಡುಗೆ ಕೆಲಸ, ಮಕ್ಕಳ ಲಾಲನೆ-ಪಾಲನೆ, ಸಂಸಾರದ ತಾಪತ್ರಯದಲ್ಲಿಯೇ ದಿನದ ಬಹುಹೊತ್ತು ಕಳೆಯುವ ಗೃಹಿಣಿಯರು ಉತ್ಸಾಹದಿಂದ, ಲಯಬದ್ಧವಾಗಿ ಚಂಡೆ ನುಡಿಸಿದ್ದು ಕಂಡು ಎಲ್ಲರೂ ಬೆಕ್ಕಸಬೆರಗಾದರು. ಚಂಡೆ ತಂಡಕ್ಕೆ ಎಲ್ಲಾ ಕಡೆಯಿಂದಲೂ ಆಹ್ವಾನ ಬರತೊಡಗಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ, ಸಾಗರ, ಸೊರಬ, ಮೈಸೂರು, ತೀರ್ಥಹಳ್ಳಿ, ಮುರ್ಡೇಶ್ವರ...ಕರ್ನಾಟಕದ ಅನೇಕ ಕಡೆ ಸುಶ್ರಾವ್ಯವಾಗಿ ಚಂಡೆ ಬಾರಿಸಿದ ತಂಡದ ಸದಸ್ಯೆಯರು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶಗಳಲ್ಲಿಯೂ ತಮ್ಮ ಕಲೆ ಪ್ರದರ್ಶಿಸಿದ್ದಾರೆ.
ಉಡುಪಿಯ ಮಚ್ಚಲಾ ಸುಬ್ರಮಣ್ಯ ದೇವಸ್ಥಾನ (ಪೇಜಾವರ), ಉಡುಪಿಯ ಪರ್ಯಾಯ ಉತ್ಸವ...ಹೀಗೆ ಕೆಲ ಕಡೆಗಳಲ್ಲಿ ಸೇವೆಯನ್ನೂ ನೀಡುತ್ತಿದ್ದಾರೆ.
ಮೂರು ವರ್ಷಗಳಿಂದ ಬಳಗ ಸೊಗಸಾಗಿಯೇ ಚಂಡೆಯ ಸದ್ದು ಮೊಳಗಿಸುತ್ತಿದೆ. ಶೋಭಾಯಾತ್ರೆ, ಜಾತ್ರೆ, ಉತ್ಸವ...ಮುಂತಾದ ವಿಶೇಷ ಸಂದರ್ಭಗಳಲ್ಲಿ ಹುರುಪಿನಿಂದಲೇ ತಮ್ಮ ಕೈಚಳಕದ ಕಲೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಇದುವರೆಗೆ 450ಕ್ಕೂ ಹೆಚ್ಚು ಪ್ರದರ್ಶನ ನೀಡಿದ ಹೆಗ್ಗಳಿಕೆ ಈ ತಂಡದ್ದು. ತಾರಾ ಆಚಾರ್ಯ ಹಾಗೂ ರಮಾ ರಾವ್ ಅವರ ಮುಂದಾಳತ್ವದಲ್ಲಿ ಈ ತಂಡ ಮುನ್ನಡೆಯುತ್ತಿದೆ.
ಮಾಹಿತಿಗೆ: 9964897169 ಅಥವಾ 8050458471.
- ಚಿತ್ರ, ಬರಹ: ಗಣಪತಿ ಹಾಸ್ಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.