ನಾಲುಕು ಮಾತು
ಮನುಷ್ಯರು ಉಗುರು ಕತ್ತರಿಸಿಕೊಂಡು ಸ್ವಚ್ಛವಾಗಿರುತ್ತಾರೆ. ಕಾಲಿಗೆ ಮುಳ್ಳು ಚುಚ್ಚದೇ ಇರಲಿ ಅಂತ ಚಪ್ಪಲಿ ಹಾಕ್ಕೋತಾರೆ. ಆದರೆ ಇದನ್ನೆಲ್ಲಾ ಎತ್ತುಗಳು ಮಾಡ್ತಾವೆ ಅಂದ್ರೆ ನಿಮ್ಗೆ ಆಶ್ಚರ್ಯ ಆಗುತ್ತಾ? ನಾವು ಹೇಳುತ್ತಿರುವುದು ಎತ್ತುಗಳ ಕಾಲಲ್ಲಿ ಬೆಳೆವ ನಾಲುಗಳನ್ನು ಸರಿಯಾದ ಸಮಯದಲ್ಲಿ ಕತ್ತರಿಸುವ ಕುರಿತು.
ಎತ್ತುಗಳ ಕೊಳಗ (ಗೊರಸು) ಸವಕಳಿಯಾಗದಂತೆ ನಾಲು (ಹಲ್ಲೆ) ಹಾಕುವ ಕಾಯಕವನ್ನು ಶತಮಾನಗಳಿಂದ ಮಾಡಿಕೊಂಡು ಬಂದ ಕುಟುಂಬಗಳು ನಮ್ಮ ಮಧ್ಯೆ ಇವೆ. ಇಂದಿಗೂ ಆ ಕುಟುಂಬಗಳ ನಿಷ್ಕಳಂಕ ಕೈಂಕರ್ಯದಿಂದ ಎತ್ತುಗಳು ಶೃಂಗಾರಗೊಳ್ಳುತ್ತಿವೆ.
ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಎತ್ತುಗಳನ್ನು ನಂಬಿಕೊಂಡಿರುತ್ತಾರೆ. ಇಂತಹ ಎತ್ತುಗಳ ಕಾಲುಗಳಲ್ಲಿನ ಕೊಳಗ ಭಾಗ ಮತ್ತು ಹಿಂಬದಿಯಲ್ಲಿ ಉಗುರು ಬೆಳೆಯುತ್ತದೆ. ಇದನ್ನು ಹಾಗೇ ಬಿಟ್ಟರೆ ನಿತ್ಯ ಕಾರ್ಯದಲ್ಲಿ ತೊಂದರೆ. ಅವುಗಳನ್ನು ಸೂಕ್ತ ಸಮಯದಲ್ಲಿ ತೆಗೆದುಹಾಕುವ ಕಾಯಕಕ್ಕೆ ನಾಲು ಕಟ್ಟುವುದು ಎಂದು ಕರೆಯುತ್ತಾರೆ.
ಎತ್ತುಗಳ ನಾಲುಗಳನ್ನು ಸರಿಯಾದ ಸಮಯದಲ್ಲಿ ಕತ್ತರಿಸಿ, ಕೊಳಗದ ಆಕಾರ ಮತ್ತು ಗಾತ್ರದ ಆಧಾರದಲ್ಲಿ ಕಬ್ಬಿಣದಿಂದ ತಯಾರಿಸಿದ ನಾಲುಗಳನ್ನು ಜೋಡಿಸಿ ಸಣ್ಣ ಸಣ್ಣ ಮೊಳೆಗಳನ್ನು ಹೊಡೆಯುತ್ತಾರೆ. ಇದರಿಂದ ಎತ್ತುಗಳು ಎಂತಹ ಕಠಿಣ ರಸ್ತೆಯಲ್ಲಿ ಎಷ್ಟು ಹೊತ್ತು ಸಂಚರಿಸಿದರೂ ಅವುಗಳ ಪಾದಕ್ಕೆ ಯಾವುದೇ ತೊಂದರೆಯಾಗದು.
ಇದೇ ಕಾಯಕ
ಈ ನಾಲು ಕಟ್ಟುವ ಕಾಯಕ ಸಾವಿರಾರು ಕುಟುಂಬಗಳ ನಿರ್ವಹಣೆಗೆ ದಾರಿಯಾಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಜನ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮೊದಲೇ ಸಿದ್ಧ ಪಡಿಸಿಕೊಂಡಿರುವ ನಾಲುಗಳನ್ನು ಎತ್ತುಗಳಿಗೆ ಅಳವಡಿಸುತ್ತಾರೆ. ಇದರಿಂದ ಬರುವ ಅಲ್ಪ ಹಣದಲ್ಲಿಯೇ ಜೀವನ ನಿರ್ವಹಣೆ ಹಾಗೂ ನಾಲು ಖರೀದಿ.
ಹಾಕುವುದೇ ವಿಶೇಷ
ನಾಲುಗಳನ್ನು ಎತ್ತುಗಳಿಗೆ ಅಳವಡಿಸುವ ಸಂದರ್ಭದಲ್ಲಿ ಎತ್ತುಗಳನ್ನು ನೆಲಕ್ಕೆ ಮಲಗಿಸಲಾಗುತ್ತದೆ. ಆರೋಗ್ಯವಾಗಿರುವ ಎತ್ತುಗಳನ್ನು ಅವುಗಳ ಕಾಲಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಲಗಿಸುವುದೇ ಒಂದು ಕಲೆ. ನಾಲ್ಕಾರು ರೈತರು ಸೇರಿ, ಹಗ್ಗಗಳ ಸಹಾಯದಿಂದ ಎತ್ತುಗಳನ್ನು ನೆಲಕ್ಕೆ ಮಲಗಿಸಿ ಅವುಗಳ ನಾಲ್ಕೂ ಕಾಲುಗಳನ್ನು ಒಂದೆಡೆ ಸೇರಿಸಿ ಕಟ್ಟುತ್ತಾರೆ. ಕಟ್ಟಿದ ನಂತರವೇ ನಾಲು ಹಾಕುವ ಕೆಲಸ.
ನಮ್ಮ ತಂದೆಯವರ ತಲೆಮಾರಿನಿಂದಲೂ ಈ ಕಾಯಕ ಮಾಡಿಕೊಂಡು ಬಂದಿದ್ದೇವೆ. ಇದರಿಂದ ಬಂದ ಆದಾಯದಲ್ಲಿಯೇ ನಮ್ಮ ಕುಟುಂಬ ನಿರ್ವಹಣೆ. ಆದರೆ, ರೈತರು ಈಗ ಎತ್ತುಗಳಿಗಿಂತ ಹೆಚ್ಚು ಟ್ರಾಕ್ಟರ್ ಮೊರೆ ಹೋಗುತ್ತಿರುವುದರಿಂದ ನಮಗೆ ಕೂಲಿ ಕಡಿಮೆಯಾಗಿದೆ.
- ಅಲ್ಲಿಸಾಬ ನಾಲಬಂದ, ನಾಲು ಕಟ್ಟುವ ಕಸುಬುದಾರರು
- ಶಿವಕುಮಾರ ಕುಷ್ಟಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.