MAGIC ಮ್ಯಾತ್
ಅರೆ, ಇವ್ರು ಯಾವ ಸ್ಕೂಲ್ಗೂ ಹೋಗಿಲ್ಲ, ಮ್ಯಾತ್ಸ್ ಕಲಿತಿಲ್ಲ, ಇಷ್ಟು ಫಾಸ್ಟ್ ಆಗಿ ಹೇಗೆ ಲೆಕ್ಕ ಹಾಕಿದರು ಅಂತ ಎಂದಾದ್ರೂ...
ಮೊಳ ಹತ್ತು ರುಪಾಯಿ ಸ್ವಾಮಿ. 8 ರುಪಾಯಿ ಮಾಡ್ಕೋಮ್ಮಾ. 3 ಮೊಳ ಮಲ್ಲಿಗೆ, 4 ಮೊಳ ಜಾಜಿ, 6 ಮೊಳ ಕನಕಾಂಬರ, 8 ಮೊಳ ಸೇವಂತಿಗೆ, ಹಾಂ... ಹಾಗೇ ಬಿಡಿ ಹೂವು ಎಲ್ಲಾ ನೂರು ನೂರು ಗ್ರಾಂ ಹಾಕಿಬಿಡಮ್ಮಾ..., ಅಂತ ಹೇಳಿ, 500ರ ಒಂದು ನೋಟು ಕೊಟ್ರೆ, ಮೊಳ ಹಾಕ್ತಾ ಹಾಕ್ತಾನೇ ಲೆಕ್ಕ ಹಾಕಿ, ಕವರ್ಗೆ ಹೂವು, ನಿಮ್ಮ ಕೈಗೆ ಚೇಂಜ್ ಇಟ್ಟಾಗಿರುತ್ತೆ. ಅರೆ, ಇವ್ರು ಯಾವ ಸ್ಕೂಲ್ಗೂ ಹೋಗಿಲ್ಲ, ಮ್ಯಾತ್ಸ್ ಕಲಿತಿಲ್ಲ, ಇಷ್ಟು ಫಾಸ್ಟ್ ಆಗಿ ಹೇಗೆ ಲೆಕ್ಕ ಹಾಕಿದರು ಅಂತ ಎಂದಾದ್ರೂ ತಲೆ ಕೆಡಿಸಿಕೊಂಡಿದೀರಾ!
ಹೀಗೆ ಅದರ ಬಗ್ಗೆ ಆಲೋಚಿಸಿ, ಮಕ್ಕಳಿಗೆ ಈ ಥರ ಗಣಿತ ಸರಳವಾಗಿಸಬೇಕು, ಫನ್ ಆಗಿಸಬೇಕು, ಮ್ಯಾಜಿಕಲ್ ಆಗಿಸಬೇಕು ಅನ್ನುವ ಆಲೋಚನೆಗಳು 'ಮ್ಯಾತ್ಲ್ಯಾಬ್'ನ್ನು ಹುಟ್ಟುಹಾಕಿತು. ಬೆಂಗಳೂರಿನ ಬನಶಂಕರಿ 2 ಸ್ಟೇಜ್ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಚಿರಂತನ ಪ್ರೀ ಸ್ಕೂಲ್ನಲ್ಲಿದೆ ಈ ಮ್ಯಾತ್ಸ್ ಲ್ಯಾಬ್. ಇಲ್ಲಿ ಮಕ್ಕಳು ಗಣಿತವನ್ನು ಆಟದ ಮೂಲಕ, ಚಟುವಟಿಕೆಗಳ ಮೂಲಕ ಕಲೀತಿದಾರೆ.
'ನಮ್ಮ ಚಿರಂತನ ಸ್ಕೂಲ್ನಲ್ಲಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ಕೊಡ್ತೀವಿ. ಇಂದಿನ ಮಕ್ಕಳಿಗೆ ಶಾಲಾ ಕಲಿಕೆ ತುಂಬಾ ಒತ್ತಡಮಯ ಆಗಿದೆ. ಅವರಲ್ಲಿ ಆಲೋಚನಾ ಶಕ್ತಿಗಾಗಲೀ, ಕ್ರಿಯಾಶೀಲತೆಗಾಗಲೀ ಅವಕಾಶವಿಲ್ಲ. ಈ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ತುಡಿತ ಮೊದಲಿನಿಂದಲೂ ನನ್ನಲ್ಲಿತ್ತು. ನನ್ನ ಮಗ ಮನೋಜ್ಞ ಪ್ರೈಮ್ಸ್ ಮ್ಯಾತ್ಸ್ ಲ್ಯಾಬ್ ಸೇರಿದ ಮೇಲೆ ಅವನಲ್ಲಾದ ಬದಲಾವಣೆ ನೋಡಿ, ನಮ್ಮಲ್ಲಿಯೇ ನಡೆಸಬಾರದೇಕೆ ಎಂಬ ಬೇಡಿಕೆಯನ್ನು ಪ್ರೈಮ್ಸ್ ಮ್ಯಾತ್ಸ್ ಲ್ಯಾಬ್ನ ಕೋ ಫಂಡರ್ ಗಾಯತ್ರಿ ಮುಂದಿಟ್ಟೆ, ಒಪ್ಪಿದರು. ಒಮ್ಮನಸ್ಸಿನಿಂದನಡೆಸ್ತಿದೀವಿ. 1-6 ನೇ ಕ್ಲಾಸ್ ಮಕ್ಕಳಿಗೆ ಈ ಕ್ಲಾಸನ್ನು ವಾರದಲ್ಲಿ ಎರಡು ದಿನ ಸಂಜೆ ನಡೆಸ್ತೀವಿ' ಅಂತಾರೆ ಚಿರಂತನ ನರ್ಸರಿ ಶಾಲೆಯ ಸಂಸ್ಥಾಪಕಿ ಸಂಧ್ಯಾ ಭೀಮಣ್ಣ.
ಮ್ಯಾತ್ಸ್ ಲ್ಯಾಬ್ ಜನನ
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗಾಯತ್ರಿ, ಅವರ ಪತಿ ರಾಘವ್ ಪ್ಲೇಸ್ಮೆಂಟ್ ಸಮಯಕ್ಕೆ ತಯಾರಿ ನಡೆಸಲು ಒಂದು ಪುಟ್ಟ ಗುಂಪು ಕಟ್ಟಿದರು. ಅವರು ಓದಿದ ಕಾಲೇಜಿನ ಕೆಲ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲಿ, ಟೆಕ್ನಾಲಜಿಯಲ್ಲಿ ಪರಿಣತಿ ಹೊಂದಿದ್ದರು. ಗಣಿತದಲ್ಲಿ ಹೆಚ್ಚಿನ ಒಲವಿದ್ದ ಗಾಯತ್ರಿ ಮತ್ತು ರಾಘವ್ ಮ್ಯಾತ್ಸ್ ಕಲಿಸುವುದೆಂದಾಯ್ತು. ತಾವಿಲ್ಲಿ ಕಲಿಯುತ್ತಿರುವ ಮ್ಯಾತ್ಸ್ ಶಾಲಾ ಮಟ್ಟದ್ದೆಂಬುದು ಅವರ ಅರಿವಿಗೆ ಬಂತು. ಶಾಲೆಯ ಲೆವೆಲ್ನಲ್ಲಿ ತಳಪಾಯ ಸಧೃಡವಾಗಿದ್ದರೆ ಸುಲಭ ಅನ್ನುವುದು ಮನದಟ್ಟಾಯ್ತು. ಈ ಗುಂಪು ಕಲಿಕೆ ತಮಗೆ ಸಹಾಯಕವಾದಾಗ, ರಾಜ್ಯದಾದ್ಯಂತ ಸುತ್ತಿ ಹೆಚ್ಚು ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. 1ನೇ ತರಗತಿಯಿಂದ ಆರನೇ ತರಗತಿಯೊಳಗೆ ತಳಹದಿ ಗಟ್ಟಿಯಾಗಬೇಕು ಅನಿಸಿ ಮ್ಯಾತ್ಸ್ ಲ್ಯಾಬ್ನ ಜನನವಾಯ್ತು.
ಲ್ಯಾಬ್ ಪಠ್ಯಕ್ರಮ
ರಾಘವ್ಗೆ ಕಲಿಸಿದ್ದ ತುಮಕೂರಿನ ಪ್ರಯೋಗಾತ್ಮಕ ಶಾಲೆಯ ಗಣಿತ ಶಿಕ್ಷಕರನ್ನು ಭೇಟಿ ಮಾಡಿ 1ರಿಂದ 9ನೇ ತರಗತಿವರೆಗಿನ ಚಿಣ್ಣರಿಗಾಗಿ ಕ್ರಿಯಾತ್ಮಕವಾದ ಕರಿಕ್ಯುಲಮ್ ರೂಪಿಸಲಾಯಿತು. ಟೀಚರ್ ಮಕ್ಕಳೊಂದಿಗೆ ಬೆರೆತು ಕೆಳಗೆ ಕುಳಿತು ಸ್ನೇಹದಿಂದ ಒಡನಾಡುವುದು ಮೊದಲ ಹೆಜ್ಜೆಯಾಯ್ತು. ಸಾಮಾನ್ಯವಾಗಿ 5ನೇ ತರಗತಿಯಿಂದಾಚಿನ ಮಕ್ಕಳಿಗೆ ಪ್ಲಾನ್ ಮಾಡ್ತಾರೆ. ಆದರೆ ನಾವು 1ನೇ ತರಗತಿಯಿಂದ ಶುರು ಮಾಡಿದೀವಿ. ತಳಮಟ್ಟದಲ್ಲೇ ಮಕ್ಕಳಿಗೆ ಮ್ಯಾತ್ಸ್ನಲ್ಲಿ ಆಸಕ್ತಿ ಮೂಡಿಸಬೇಕು. ಕಲಿಕೆ ಖುಷಿ ಆಗಬೇಕು ಅಂತಾರೆ ಗಾಯತ್ರಿ.
ಹೇಗೆ ನಡೆಯುತ್ತೆ?
ಲ್ಯಾಬ್ನಲ್ಲಿ ನಡೆವ ಪ್ರತಿ ಚಟುವಟಿಕೆ ಮಗುವಿನ ನಿಜಜೀವನಕ್ಕೆ ಹತ್ತಿರವಾಗಿರುತ್ತೆ. ಗೆಸ್ಟ್ ಲೆಕ್ಚರ್, ಫೀಲ್ಡ್ ಟ್ರಿಪ್ಸ್, ಕ್ರಿಯಾತ್ಮಕ ವರ್ಕ್ಶಾಪ್ಗಳು, ಹ್ಯಾಂಡ್ ಆನ್ ಎಕ್ಸ್ಪೀರಿಯನ್ಸ್ ಎಲ್ಲವೂ ಸೇರಿದೆ. ಉದಾ: 1ನೇ ತರಗತಿಯ ಮಗು, ಜಯನಗರದ 4ನೇ ಬ್ಲಾಕ್ ಕಾಂಪ್ಲೆಕ್ಸ್ನ ಒಂದು ಅಂಗಡಿ ಮಾಲಿಕನನ್ನು ಮಾತಾಡಿಸಿ ಮಾಹಿತಿ ಸಂಗ್ರಹಿಸಿ, ಗ್ರಾಫ್ ತಯಾರಿಸಿ ತರಗತಿಯಲ್ಲಿ ವಿವರಿಸುತ್ತಾನೆ.
ಮನೇಲಿ ಅಪ್ಪನ ಪಕ್ಕ ಕುಳಿತು ಕ್ರಿಕೆಟ್ ಪಂದ್ಯ ನೋಡುವಾಗ, ವೀಕ್ಷಣೆ ಜತೆಗೆ ಸ್ಕೋರ್ಸ್ ಲೆಕ್ಕ ಮಾಡ್ತಾ ಮ್ಯಾತ್ಸ್ ನಡೀತಿರುತ್ತೆ. ಓಪನ್ ಎಂಡೆಡ್ ಪ್ರಶ್ನೆಗಳನ್ನು ಕೇಳುವುದರಿಂದ ಮಕ್ಕಳ ಚಿಂತನೆ ಸಾಮರ್ಥ್ಯ ಹೆಚ್ಚಾಗುತ್ತೆ. ಅಡುಗೆಯಲ್ಲಿ ಗಣಿತ, ಹೂವು, ತರಕಾರಿ ಮಾರುವವರ ಬಳಿ ಕಲಿಕೆ ಮುಂತಾದವುಗಳ ಮೂಲಕ ಮಕ್ಕಳಿಗೆ ಆಸಕ್ತಿ ಹೆಚ್ಚಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ ಇರುತ್ತೆ. ಗಣಿತಕ್ಕೂ ಯಾಕಿರಬಾರದು ಅನ್ನಿಸಿತು. ಆಡುತ್ತಾ ಕುಣಿಯುತ್ತಾ, ಎಕ್ಸ್ಪರಿಮೆಂಟ್ ಮಾಡ್ತಾ ಕಲಿಯುವುದರಿಂದ ಮ್ಯಾತ್ಸ್ ಬಗ್ಗೆ ಆಸಕ್ತಿ ಮೂಡುತ್ತಿಗೆ. ಆತ್ಮವಿಶ್ವಾಸ ಬೆಳೆಯುತ್ತಿದೆ ಅಂತ ದನಿಗೂಡಿಸ್ತಾರೆ ಚಿರಂತನ ಪ್ರೀ ಸ್ಕೂಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಸಂಧ್ಯಾ ಭೀಮಣ್ಣ. ಮಾಹಿತಿಗಾಗಿ ಗಾಯಿತ್ರಿ: 9480428248.
-ಗೀತಾ ಶ್ರೀನಿವಾಸನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.