ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉದ್ದನಾಮ

Vishwanath S
Updated On : 10 Jun 2013, 12:22 pm

ಫೋನ್‌ನಲ್ಲಿ ಅವರ ಹೆಸರು ಹಿಡಿದು ಶುಭ ಕೋರಬೇಕಾದರೆ, ಹೆಸರು ಹೇಳುವಷ್ಟರಲ್ಲಿಯೇ ಒಂದು ರುಪಾಯಿ ಖಾಲಿಯಾಗಿರುತ್ತದೆ. ಮೊಬೈಲ್‌ನಲ್ಲಿ ಅವರ ಪೂರ್ಣ ಹೆಸರು ದಾಖಲಿಸಲು ಸಾಧ್ಯವೇ ಇಲ್ಲ. ರೈಲಿನಲ್ಲಿ ಟಿಕೆಟ್ ಕಾದಿರಿಸಲು ಸಹ, ಹೆಸರಿನೊಳಗಿರುವ ಮೊದಲಕ್ಷರಗಳನ್ನಷ್ಟೇ ತುಂಬಿದರೂ, 18 ಅಕ್ಷರಗಳಾಗುವುದರಿಂದ ಅಲ್ಲೂ ತುಂಬಲಾಗದು. ಬ್ಯಾಂಕ್ ಖಾತೆ ಇತ್ಯಾದಿಗಳ ಅರ್ಜಿಗಳಲ್ಲಿ ಅಕ್ಷರಗಳಿಗಿಟ್ಟ ಖಾನೆಗಳೇ ಸಾಕಾಗದು. ನಾಮಫಲಕದಲ್ಲಿ ಹೆಸರು ಬರೆಸಲು ಹೋದರೆ, ಅದು ಬ್ಯಾನರ್‌ನಷ್ಟು ಉದ್ದವಾಗುವುದರಲ್ಲಿ ಸಂಶಯವೇ ಇಲ್ಲ!
ಹೀಗೆ ಹೋದಲ್ಲೆಲ್ಲ ಸಮಸ್ಯೆ ತರುವ ಹೆಸರು ಯಾರದಿರಬಹುದು ಎಂದು ಯೋಚನೆಗೀಡಾದಿರಾ? ಇಲ್ಲಿದ್ದಾರೆ ನೋಡಿ. 66 ಇಂಚು ಎತ್ತರವಿರುವ ಆ ವ್ಯಕ್ತಿಯ ಹೆಸರಿನಲ್ಲೇ ಇಂಗ್ಲಿಷಿನ 61 ಅಕ್ಷರಗಳಿವೆ. ಆ ವ್ಯಕ್ತಿಯ ಪೂರ್ಣ ಹೆಸರು ಹೀಗಿದೆ ನೋಡಿ: ನಂದೂರಿ ವೆಂಕಟ ರಾಜ ವೀರ ಸತ್ಯ ಪಾಂಡುರಂಗ ವರಾಹ ಸೀತಾರಾಮ ಆಚಾರ್ಯಲು. (Nanduri Venkata Raja Veera Satya Panduranga Varaha Sita Rama Acharyulu). ಚುಟುಕಾಗಿ N.V.R.V.S.P.V.S.R.Acharyulu.
ಹಣೆಗೆ ಉದ್ದನಾಮ ಹಾಕಿಕೊಂಡಿರುವ ಇವರ ನಾಮಧೇಯವೂ ಉದ್ದವಾಗಿರುವುದು ಕಾಕತಾಳೀಯ. ತಂದೆ ಎನ್. ವೆಂಕಟಾಚಾರ್ಯಲು ಮತ್ತು ತಾಯಿ ಎನ್.ವಿ.ನರಸಿಂಹಮಂ. ಇವರಿಗೆ ಒಬ್ಬನೇ ಮಗನಾದ್ದರಿಂದ, ತಂದೆ-ತಾಯಿಯ ಜೊತೆ ಇವರ ಅಜ್ಜನ ಮತ್ತು ಅಜ್ಜಿಯರ ಬಯಕೆ ಪೂರೈಸುವ ಭರದಲ್ಲಿ ಅವರಿಗೆ ಉದ್ದದ ಹೆಸರು ಇಡಲಾಗಿದೆ. ಸಣ್ಣವನಿದ್ದಾಗ ನಿನ್ನ ಹೆಸರೇನು ಮರೀ ಎಂದರೆ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಕೇಳಿ ಎನ್ನುತ್ತಿದ್ದ ಆತ ನಂತರದ ದಿನಗಳಲ್ಲಿ ತನ್ನ ಹೆಸರನ್ನು ಬಾಯಿಪಾಠ ಮಾಡಿಕೊಂಡಿದ್ದಾರೆ. ಈಗ ಹೆಸರು ಕೇಳಿದರೆ ನಾವು ಜನಗಣಮನ ಹೇಳುವ ಹಾಗೆ ಒಮ್ಮೆಗೇ ಸ್ಪಷ್ಟವಾಗಿ ಹೇಳಿ ಮುಗಿಸುತ್ತಾರೆ.
ಸದ್ಯ ಇವರು ವಿಶಾಖಪಟ್ಟಣದ ನಕ್ಕಪಲ್ಲಿ ಅಂಚೆ ಕಚೇರಿಯಲ್ಲಿ ಪೋಸ್ಟ್‌ಮಾಸ್ಟರ್. 32 ವರ್ಷ ಸೇವೆ ಸಲ್ಲಿಸಿರುವ ಇವರು ಆಚಾರ್ಯಲು ಎಂದು ಚಿರಪರಿಚಿತರು. ಹೀಗಾಗಿ ಅವರ ಪೂರ್ಣ ಹೆಸರು ಹೇಳಿ ವಿಳಾಸ ವಿಚಾರಿಸಿದರೆ, ಪೋಸ್ಟ್‌ಮನ್ ಸಹ ಅಂತಹ ಹೆಸರಿನವರು ಗೊತ್ತಿಲ್ಲ, ಆದ್ರೆ ಆಚಾರ್ಯಲು ಅಂತ ಇದ್ದಾರೆ ಎನ್ನುತ್ತಾರೆ. ಇವರಿಗೆ ಅವಳಿ ಗಂಡು ಮಕ್ಕಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು. ಅವರಿಬ್ಬರ ಹೆಸರು ಸೇರಿಸಿದರೂ ಅಪ್ಪನ ಹೆಸರಿನ ಹತ್ತಿರವೂ ಹೋಗದು. ಅವರ ಪೂರ್ತಿ ಹೆಸರು ತಪ್ಪದೆ ಕರೆಯುವ ಸಾಹಸ ಮಾಡುವವರಿದ್ದರೆ ಸಂಪರ್ಕಿಸಬಹುದು: 09885057031.

- ಬಿ.ಎಸ್. ವೆಂಕಟಾಚಲ ಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments