ಹಸಿರು ವೀರರು
ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರಬಹುದು. ಬರಕ್ಕೂ ಹೆಸರಾಗಿರಬಹುದು. ಆದರೆ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳು...
ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರಬಹುದು. ಬರಕ್ಕೂ ಹೆಸರಾಗಿರಬಹುದು. ಆದರೆ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳು ಮಲೆನಾಡಿನ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಹಸಿರಿನಿಂದಲೂ ಫಲಿತಾಂಶದಿಂದಲೂ ಕಂಗೊಳಿಸುತ್ತಿವೆ ಎಂದರೆ ನಿಮಗೆ ಅಚ್ಚರಿಯಾದೀತು.
ಕೊಪ್ಪಳ ತಾಲೂಕಿನ ಗಿಣಿಗೇರಾದಿಂದ 3 ಕಿ.ಮೀ. ಅಂತರದಲ್ಲಿರುವ ಹಳೇ ಕನಕಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನೋಡಿದರೆ ನಿಮ್ಮ ಅಭಿಪ್ರಾಯ ಬದಲಾಗದಿರದು. ಒಂದು ಸುಂದರ, ಮಾದರಿ ಶಾಲೆ ಹೇಗಿರಬೇಕು ಅನ್ನುವುದಕ್ಕೆ ಇದೇ ಉದಾಹರಣೆ.
ಶೈಕ್ಷಣಿಕ ಕ್ರಾಂತಿ
ಈ ಊರಿಗೆ ಬಸ್ ಸೌಕರ್ಯ ಇಲ್ಲ. ಏನೇ ಬೇಕಾದರೂ ಕಾಲ್ನಡಿಗೆಯಲ್ಲಿ ಗಿಣಿಗೇರಾಕ್ಕೆ ಬರಬೇಕು. 100 ಕುಟುಂಬಗಳಿರುವ ಈ ಊರಲ್ಲಿ ಸದ್ದು ಗದ್ದಲವಿಲ್ಲದೆ ಶೈಕ್ಷಣಿಕ ಕ್ರಾಂತಿಯೇ ನಡೆಯುತ್ತಿದೆ. ಈ ಊರಿಗೆ ಶಾಲೆಯೇ ಮಹಾದ್ವಾರವಿದ್ದಂತೆ. ದಾರಿಹೋಕರು ದಿಟ್ಟಿಸಿ ನೋಡುವಂಥ ಆಕರ್ಷಣೆ ಈ ಶಾಲೆಯದು. ಶಾಲೆಯ ಸೊಬಗಿಗೆ ಸುಂದರ ಪರಿಸರವೇ ಕಾರಣ. ಸುತ್ತಲೂ ತೆಂಗು, ತೇಗ, ಮಾವು, ಪೇರಲ, ನಿಂಬೆ, ನುಗ್ಗೆ, ಬೇವು ಮುಂತಾದ ಸುಮಾರು 90 ಬಗೆಯ ಗಿಡಗಳು ಬೆಳೆದು ನಿಂತಿವೆ. ಗಿಡಗಳು ಶಾಲೆಗೆ ಚಪ್ಪರವಾಗಿ ನಿಂತಿವೆ.
ಮಕ್ಕಳೇ ಎಲ್ಲಾ
ಇಲ್ಲಿನ ಶಿಕ್ಷಕರು ಪ್ರತಿ ಮಗುವಿಗೂ ಒಂದೊಂದು ಗಿಡದ ಮೇಲ್ವಿಚಾರಣೆ ನೀಡಿದ್ದಾರೆ. ಮಕ್ಕಳು ಗಿಡಗಳಿಗೆ ನೀರುಣಿಸಿ ಪೋಷಿಸಿಕೊಂಡು ಬರುತ್ತಿದ್ದಾರೆ. ಸುಂದರವಾದ ಕೈತೋಟ ಇದೆ. ಬಿಸಿಯೂಟಕ್ಕೆ ಸೌತೆಕಾಯಿ, ಕುಂಬಳಕಾಯಿ, ಬದನೆ, ಟೊಮೆಟೋ, ನುಗ್ಗೆ, ಪಾಲಕ್, ಬೀನ್ಸ್, ಎಲೆಕೋಸು ಮತ್ತಿತರ ತರಕಾರಿ ಖರೀದಿಸಬೇಕಿಲ್ಲ. ಮಕ್ಕಳೆ ಇಲ್ಲಿನ ರೈತರು. ಬಿಡುವಿನ ವೇಳೆಯಲ್ಲಿ ನುರಿತ ಕೃಷಿಕರಂತೆ ಕೆಲಸ ಮಾಡುತ್ತಾರೆ. ಬೀಜ ನೆಡುವುದು, ಕಳೆ ಕೀಳುವುದು, ನೀರುಣಿಸುವುದು, ಗೊಬ್ಬರ ಹಾಕುವುದು ಎಲ್ಲ ಮಾಡುತ್ತಾರೆ. ಮಳೆ ನೀರು ಪೋಲಾಗದಂತೆ ಸಂಗ್ರಹಿಸಲು ಟ್ಯಾಂಕ್ ಇದೆ.
ಶಾಲೆಯ ಕಂಪೌಂಡ್ ತುಂಬಾ ನುಡಿಮುತ್ತುಗಳು ರಾರಾಜಿಸುತ್ತವೆ. ಕೊಠ್ಗಳ ಹೊರಭಾಗದಲ್ಲಿ ಮಹಾನ್ ನಾಯಕರ ಚಿತ್ರಗಳು, ರಾಷ್ಟ್ರ ಲಾಂಛನಗಳು ಗಮನ ಸೆಳೆಯುವಂತಿವೆ. ಕೊಠಡಿಯ ಒಳಹೊಕ್ಕರೆ ಸಾಕು ಜ್ಞಾನಭಂಡಾರವೇ ತುಂಬಿರುವುದು ಕಂಡುಬರುತ್ತದೆ. ಕನ್ನಡ, ವಿಜ್ಞಾನ, ಗಣಿತ, ಇಂಗ್ಲಿಷ್, ಪರಿಸರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಬರೆಯಲಾಗಿದೆ.
ಶೈಕ್ಷಣಿಕ ಪ್ರಗತಿ ಸಾಧಿಸಿರುವ ಶಾಲೆಯ ಬಗ್ಗೆ ಊರಿನ ಜನಕ್ಕೆ ತುಂಬಾ ಹೆಮ್ಮೆ. ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರಾದ ಶಿವಪ್ಪ ರ್ಯಾವಣಕಿ ಜಲಾಲಸಾಬ ಹುಡೇದ ಮತ್ತು ಶಾರದಾ ಅವರನ್ನು ಸ್ಮರಿಸುತ್ತಾರೆ. ಈಗ ಮುಖ್ಯೋಪಾಧ್ಯಾಯರಾಗಿರುವ ರಾಜಾಸಾಬರು ಮತ್ತಷ್ಟು ಕಾಳಜಿ ವಹಿಸಿದ್ದಾರೆ. ಶಾಲೆ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಹಲವಾರು ಪ್ರಶಸ್ತಿ ಬಾಚಿಕೊಂಡಿದೆ. 'ಜಿಲ್ಲೆಯ ಅತ್ಯುತ್ತಮ ಹಸಿರು ಶಾಲೆ' ಪ್ರಶಸ್ತಿ ಪಡೆದ ಹೆಗ್ಗಳಿಕೆ. ಸಂಪರ್ಕ: 8971284359
- ಪ್ರಾಣೇಶ ಪೂಜಾರ ಗಿಣಿಗೇರಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.