ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಾಕ್ಷಿಗಳ ಬಗ್ಗೆ ಅರಿವಿರಲಿ

Vishwanath S
Updated On : 12 Jun 2013, 1:25 am

ಇತ್ತೀಚೆಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿರುವ ಸಾಕಷ್ಟು ಪ್ರಕರಣಗಳು ಬಿದ್ದುಹೋಗುತ್ತಿವೆ. ಅಂದರೆ ಖುಲಾಸೆಗೊಳ್ಳುತ್ತಿವೆ. ಆರೋಪಿಗಳು ದೋಷಮುಕ್ತರಾಗುತ್ತಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿರುವುದೇ ಇದಕ್ಕೆ ಕಾರಣ.
ಹಾಗಾಗಿ ಪೊಲೀಸರು ಸಾಕ್ಷಿಗಳ ಕೊರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಪರಾಧ ನಡೆದ ನಂತರ ಸಾಕ್ಷಿಗಳನ್ನು ಪತ್ತೆ ಮಾಡಿ, ವಿಚಾರಣೆ ನಡೆಸಿ ಅವರಿಂದ ಕಲೆಹಾಕಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ.
ಆದರೆ, ಇದಕ್ಕೆ ಎಳ್ಳುನೀರು ಬಿಟ್ಟಂತೆ, ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆರೋಪಿಗಳಿಗೆ ಜಾಮೀನು ಸಿಗುತ್ತದೆ. ಕೆಲವು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ತಡವಾಗಿ, ಸಣ್ಣಪುಟ್ಟ ಅಪರಾಧಗಳಿಗೆ ಬೇಗ ಜಾಮೀನು ಸಿಗುತ್ತದೆ. ಆದರೆ, ವಿಚಾರಣೆಗೆ ಬಂದಾಗ ಸಾಕ್ಷಿಗಳ ಕೊರತೆಯಿಂದ ಪ್ರಕರಣ ಖುಲಾಸೆಗೊಳ್ಳುತ್ತವೆ ಎಂಬುದು ಪೊಲೀಸರ ಅಭಿಪ್ರಾಯ. ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಳ್ಳಲು ಜನರಲ್ಲಿರುವ ಭಯವೇ ಕಾರಣ. ಅಪರಾಧಗಳ ಬಗ್ಗೆ ಜನರು ಮೊದಲು ಎಚ್ಚೆತ್ತುಕೊಳ್ಳಬೇಕು.
ಯಾವುದೇ ಅಪರಾಧ ನಡೆದುದನ್ನು ಕಂಡಲ್ಲಿ ಆ ಬಗ್ಗೆ ಧೈರ್ಯವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬೇಕು. ಮತ್ತೊಂದು ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರಿಗೆ ಅನುಕೂಲವಾಗುವ ಅಂದರೆ, ಆರೋಪಿ ಪತ್ತೆಗೆ ಅಗತ್ಯವಿರುವ ಸಾಕ್ಷಿಗಳನ್ನು ನಾಶಪಡಿಸಬಾರದು.
ಆದರೆ, ಸಾಕಷ್ಟು ಮಂದಿಗೆ ಈ ಸಾಕ್ಷಿಗಳ ಬಗ್ಗೆ ಅರಿವಿಲ್ಲ. ಹಾಗಾಗಿ ಅಪರಾಧ, ಅಪಘಾತದಂತಹ ಯಾವುದೇ ಕೃತ್ಯ ನಡೆದಲ್ಲಿ ಅಲ್ಲಿಗೆ ಜನ ಜಮಾಯಿಸುತ್ತಾರೆ. ಪೊಲೀಸರು ಬರುವ ಮುನ್ನ ಆ ಸ್ಥಳದಲ್ಲಿ ಓಡಾಡಿ, ವಸ್ತುಗಳನ್ನು ಅತ್ತಿತ್ತ ಕದಲಿಸಿ ಸಾಕ್ಷಿ ನಾಶ ಮಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಾಕ್ಷಿ ಸಂಗ್ರಹಿಸುವುದು, ನಾಶಮಾಡದಂತೆ ಎಚ್ಚರವಹಿಸುವುದು ಮುಖ್ಯ. ಜನರಲ್ಲಿ ಈ ಬಗ್ಗೆ ಅರಿವು ಮೂಡಬೇಕು ಎಂಬುದು ಪೊಲೀಸರ ಮನವಿ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement