ಕೊಳ್ಳಲು ಸಿಗುವುದು
ಮಹಿಳೆಯೊಬ್ಬಳಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಅವಳು ಮಾರ್ಕೆಟಿಗೆ ಹೋಗಿದ್ದಳು. ಮಾರ್ಕೆಟ್ನಲ್ಲಿ ಒಂದು ಹೊಸ ಅಂಗಡಿ ತೆರೆಯಲಾಗಿತ್ತು. ಆ ಅಂಗಡಿಯ ಕೌಂಟರಿನ ಹಿಂದೆ ಸಾಕ್ಷಾತ್ ದೇವರೇ ನಿಂತಿದ್ದ!
'ದೇವಾ ನೀನಿಲ್ಲಿ ಏನು ಮಾರುತ್ತಿರುವಿ?' ಎಂದಾಕೆ ದೇವರನ್ನು ಕೇಳಿದಳು.
'ನಿನ್ನ ಹೃದಯ ಬಯಸುವ ಎಲ್ಲವನ್ನೂ' ಎಂದ ದೇವರು.
ಮಹಿಳೆಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಮನುಷ್ಯ ಬಯಸುವ ಎಲ್ಲ ಅತ್ಯುತ್ತಮ ವಸ್ತುಗಳನ್ನೇ ಕೊಳ್ಳಬೇಕೆಂದು ಆಕೆ ನಿರ್ಧರಿಸಿದಳು.
'ನನಗೆ ಮನಶ್ಶಾಂತಿ ಮತ್ತು ಪ್ರೀತಿ ಮತ್ತು ಸಂತೋಷ ಮತ್ತು ಜ್ಞಾನ ಮತ್ತು ಭಯದಿಂದ ಮುಕ್ತಿ ಬೇಕು' ಎಂದಳು. ಅನಂತರ ತುಸು ಯೋಚಿಸಿ ಹೇಳಿದಳು-'ಕೇವಲ ನನಗೆ ಮಾತ್ರವಲ್ಲ, ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಬೇಕು.'
ದೇವರು ನಕ್ಕು ಹೇಳಿದ, 'ನಿನಗೆ ನಾನು ಹೇಳಿದುದು ಸರಿಯಾಗಿ ಅರ್ಥವಾಗಲಿಲ್ಲವೆಂದು ತೋರುತ್ತದೆ. ನಾವು ಇಲ್ಲಿ ಹಣ್ಣುಗಳನ್ನು ಮಾರುವುದಿಲ್ಲ. ಕೇವಲ ಬೀಜಗಳನ್ನಷ್ಟೇ ಮಾರುತ್ತೇವೆ.'
ನಂದಿನಿ ಡಿ. ಕಾಮತ್
ಮೂಲ: ಅಂತೋನಿ ಡಿಮೆಲ್ಲೊ