ಬಿಸಿಬಿಸಿ ಕಾಫಿ ಹೃದಯಕ್ಕೆ ಒಳಿತೆ?
ನಾನು ಎದುರಿಸಿದ ಅತಿಹೆಚ್ಚು ಪ್ರಶ್ನೆಗಳಲ್ಲಿ ಇದೂ ಒಂದು, 'ಹೃದಯದ ತೊಂದರೆ ಇದ್ದವರು ಜಾಸ್ತಿ ಕಾಫಿ ಕುಡಿಯಬಾರದು ಎನ್ನುತ್ತಾರೆ. ಇದು ನಿಜವಾ?' 'ಹೃದ್ರೋಗಿಗಳು ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು' 'ಕಾಫಿಯಲ್ಲಿನ ಕೆಫೀನ್ ಹೃದಯಕ್ಕೆ ಘಾಸಿ ಉಂಟುಮಾಡುತ್ತದೆ ಎನ್ನುತ್ತಾರಲ್ಲ, ಇದು ಸತ್ಯವಾ?' ನಾನು ಏನಂತ ಹೇಳಲಿ? ಹೇಳಿಕೇಳಿ ನಮ್ಮ ಮೈಯ್ಯಾಸ್ ಹೋಟೆಲ್ಗಳು ರುಚಿಕಟ್ಟಾದ ಕಾಫಿಗೆ ಹೆಸರುವಾಸಿ. ಕಾಫಿ ಕುಡಿಯಲೆಂದೇ ಬೆಂಗಳೂರಿನಲ್ಲಿ ದೂರದೂರದ ಬಡಾವಣೆಗಳಿಂದ ನಮ್ಮ ಹೋಟೆಲ್ಗಳನ್ನು ಹುಡುಕಿ ಬರುವವರೂ ಇದ್ದಾರೆ. ದಾರಿಯಲ್ಲಿ ಹೋಗುವಾಗ ಮೈಯ್ಯಾಸ್ ಹೋಟೆಲ್ ಕಂಡರೆ, ಕಾಫಿ ಕುಡಿಯುವ ಅಭ್ಯಾಸ ಇಲ್ಲದವರು ಕೂಡ ನಮ್ಮಲ್ಲಿಗೆ ಬಂದು ಕಾಫಿ ಕುಡಿದು ಹೋಗುವುದನ್ನು ಕಂಡಿದ್ದೇನೆ.
ನಿಜ. ಕೆಲವು ವರ್ಷಗಳ ಹಿಂದೆ ಕಾಫಿ ಕುರಿತಾಗಿ ಒಂದು ಮಿಥ್ಯ ಭಾವನೆ ಇತ್ತು. ಸಾಮಾನ್ಯ ಜನರಷ್ಟೇ ಅಲ್ಲ, ವೈದ್ಯಕೀಯ ಕ್ಷೇತ್ರದ ಪರಿಣಿತರು ಕೂಡ 'ಕಾಫಿ ಹೃದಯಕ್ಕೆ ಒಳ್ಳೆಯದಲ್ಲ' ಅಂತಲೇ ನಂಬಿದ್ದರು. ಪಾಶ್ಚಾತ್ಯ ಸಂಶೋಧನೆಗಳು ಕೂಡ 'ದಿನಕ್ಕೊಂದೇ ಕಪ್ ಕಾಫಿ ಸಾಕು. ಜಾಸ್ತಿ ಕುಡಿದರೆ ಹೃದಯಾಘಾತ ಸಾಧ್ಯತೆ ಹೆಚ್ಚಬಹುದು' ಎಂದು ಎಚ್ಚರಿಸುತ್ತಿದ್ದವು. ಕಾಫಿ ರಕ್ತದೊತ್ತಡ ಹೆಚ್ಚಿಸುತ್ತದೆ, ಕಾಫಿಯಿಂದ ಆರೋಗ್ಯಕರವಲ್ಲದ ಕೊಲೆಸ್ಟರಾಲ್ ಮಟ್ಟ ಜಾಸ್ತಿಯಾಗುತ್ತದೆ, ಕಾಫಿಯಿಂದ ಹಾರ್ಟ್ ಅಟ್ಯಾಕ್ನ ರಿಸ್ಕ್ ಹೆಚ್ಚುತ್ತದೆ, ಜಾಸ್ತಿ ಕಾಫಿ ಕುಡಿದರೆ ಹೃದಯ ವೈಫಲ್ಯದ ಸಂಭವ ಹೆಚ್ಚು ಇತ್ಯಾದಿ ಇತ್ಯಾದಿ ನಂಬಿಕೆಗಳಿದ್ದವು. ಹೀಗಾಗಿ ಕಾಫಿ ಕುರಿತು ಒಂದು ರೀತಿಯ ಭಯ ನಮ್ಮನ್ನು ಆವರಿಸಿಕೊಂಡಿತ್ತು.
ಕಾಫಿ ಕುರಿತಂತೆ ನಾವು ಈವರೆಗೆ ನಂಬಿಕೊಂಡು ಬಂದಿದ್ದೆಲ್ಲ ಸುಳ್ಳು ಎನ್ನುತ್ತಿವೆ ಇತ್ತೀಚಿನ ಸಂಶೋಧನೆಗಳು. ಹಿಂದೆ ಇತರ ವಿಚಾರಗಳನ್ನು ಅಂದರೆ ಕ್ರಮಬದ್ಧ ಮತ್ತು ನಿಯಮಿತ ವ್ಯಾಯಾಮ, ಧೂಮಪಾನ ಮತ್ತಿತರ ಹವ್ಯಾಸಗಳು ಮೊದಲಾದ ಅಂಶಗಳನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಆಹಾರ, ಕಾಫಿ ಮೊದಲಾದ ಪೇಯಗಳ ಸೇವನೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಂಶೋಧನೆ ನಡೆಸಲಾಗುತ್ತಿತ್ತು ಎಂದು ಈಗಿನ ಸಂಶೋಧಕರು ಹೇಳುತ್ತಿದ್ದಾರೆ. 'ದಿನಕ್ಕೆ ಆರೇಳು ಕಪ್ ಕಾಫಿ ಕುಡಿಯುವವರು ಅದನ್ನು ಕಡಿಮೆ ಮಾಡಬೇಕು ಎಂದು ಹೇಳುವುದಕ್ಕೆ ಯಾವುದೇ ಆಧಾರ ಇಲ್ಲ. ಅದರಲ್ಲೂ ಕೆಫೀನ್ ಹೃದಯಕ್ಕೆ ತೊಂದರೆ ಉಂಟುಮಾಡುತ್ತದೆ ಎನ್ನುವುದನ್ನು ನಿರೂಪಿಸಲೂ ಸಾಧ್ಯವಾಗಿಲ್ಲ' ಎಂದಿದ್ದಾರೆ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ವೈದ್ಯಕೀಯ ನಿರ್ದೇಶಕ ವಾಲ್ಟರ್ ವಿಲ್ಲೆಟ್. ಕಾಫಿ ಕುಡಿಯುವುದರಿಂದ ಹೃದ್ರೋಗಿಗಳಿಗೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಸಂಶೋಧಕರೇ ಹೇಳುತ್ತಿರುವಾಗ ನಾನು ಹೇಳುವುದೇನಿದೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com