ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಒಳ್ಳೆ ಆಹಾರ ವೈದ್ಯರನ್ನು ದೂರ ಇಡುವುದು!

Vishwanath S
Updated On : 16 Jun 2013, 3:53 am

ಕೆಲವು ಸಲ ಅತಿಯಾದ ಭೀತಿ ಇಲ್ಲದ ಆತಂಕಗಳನ್ನು ತಂದೊಡ್ಡಬಲ್ಲದು. ಹಾಗೆಯೇ ಸಣ್ಣ ನಿರ್ಲಕ್ಷ್ಯವೂ ಪ್ರಾಣಕ್ಕೆ ಎರವಾಗಬಲ್ಲದು. ಹೃದಯದ ವಿಚಾರದಲ್ಲಿ ಇವೆರಡೂ ಸಲ್ಲದು.
ಒಮ್ಮೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಹೋಗಿದ್ದೆವು. ರಾತ್ರಿ ಒಂದು ಗಂಟೆಯಾಗಿರಬಹುದು. ಪಕ್ಕದ ಬೆಡ್‌ನಲ್ಲಿ ಮಲಗಿದ್ದ ಗೆಳೆಯ ನನ್ನನ್ನು ತಟ್ಟಿ ಎಬ್ಬಿಸಿದ. ಮುಖದಲ್ಲಿ ಪ್ರೇತಕಳೆ. ಇಡೀ ದೇಹ ಬೆವರಿನಿಂದ ತೊಯ್ದುತೊಪ್ಪೆಯಾಗಿದೆ. ನನಗೂ ಗಾಬರಿ. 'ಸಿಕ್ಕಾಪಟ್ಟೆ ಬೆವರುತ್ತಿದೆ. ರಿಸೆಪ್ಶನ್‌ಗೆ ಫೋನ್ ಮಾಡಿ ಡಾಕ್ಟರ್‌ಗೆ ಬರೋಕೆ ಹೇಳು. ಹಾರ್ಟ್ ಅಟ್ಯಾಕ್ ಆಗೋ ಥರ ಅನ್ನಿಸ್ತಿದೆ' ಎಂದು ಏದುಸಿರು ಬಿಡುತ್ತ ಹೇಳಿದ. 'ಎದೆ ನೋವು ಇದೆಯಾ? ಏನಾಗ್ತಾ ಇದೆ' ಎಂದು ಕೇಳಿದೆ. 'ಎದೆ ನೋವಿಲ್ಲ. ಆದರೆ ಮೈಕೈ ಸಿಕ್ಕಾಪಟ್ಟೆ ಬೆವರುತ್ತಿದೆ. ಉಸಿರು ಕಟ್ಟಿದಂತೆ ಆಗುತ್ತಿದೆ' ಎಂದ. ಅಷ್ಟರಲ್ಲಿ ನನಗೂ 'ಬೆವರಿನ' ಅನುಭವ ಆಗತೊಡಗಿತ್ತು. ಎದ್ದು ನೋಡಿದರೆ ಎ.ಸಿ ಕೆಟ್ಟಿತ್ತು. ಎ.ಸಿ ಇದ್ದಿದ್ದರಿಂದ ಫ್ಯಾನ್ ಹಾಕಿಕೊಂಡಿರಲಿಲ್ಲ. ಅದ್ಯಾವಗಲೋ ಎ.ಸಿ ಹಾಳಾಗಿದ್ದರಿಂದ ಸಿಕ್ಕಾಪಟ್ಟೆ ಧಗೆಗೆ ಬೆವರು, ಗಾಳಿಯ ಸಂಚಾರಕ್ಕೆ ಅವಕಾಶ ಇಲ್ಲದ್ದರಿಂದ ಉಸಿರು ಕಟ್ಟಿದಂತೆ ಆಗಿತ್ತು. ಕಿಟಕಿ ಬಾಗಿಲು ತೆಗೆದಾಗ ತಣ್ಣನೆ ಗಾಳಿ ಸೋಕಿ ಸ್ವಲ್ಪ ಹಗುರಾಯಿತು. 'ಹಾರ್ಟ್ ಅಟ್ಯಾಕ್ ಆಗುವಾಗ ಮೈ ಬೆವರುತ್ತದೆ' ಎಂಬುದನ್ನು ಕೇಳಿದ್ದ ಗೆಳೆಯ ಆತಂಕಕ್ಕೆ ಒಳಗಾಗಿದ್ದ.
ಎದೆ ನೋವಿನ ಬಗ್ಗೆ ಹೇಳುತ್ತೇನೆ. ಆಗಾಗ ಸಣ್ಣ ಪ್ರಮಾಣದಲ್ಲಿ ನೋವು ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡಬಾರದು. 'ಅಯ್ಯೋ, ಸಣ್ಣ ನೋವು. ಹೋಗುತ್ತೆ' ಎಂದುಕೊಂಡರೆ ಮುಂದೆ ಆಪತ್ತು ತಂದುಕೊಳ್ಳಬೇಕಾದೀತು. ಕೆಲವು ಸಲ  ಆ್ಯಸಿಡಿಟಿಯಂಥ ತೊಂದರೆ ಆದಾಗಲೂ ಎದೆಯಲ್ಲಿ ಬೇನೆ ಕಾಣಿಸಿಕೊಳ್ಳುವುದುಂಟು. ಬಹುತೇಕ ಪ್ರಸಂಗಗಳಲ್ಲಿ ಎದೆ ನೋವು ಹೃದ್ರೋಗದ ಮುನ್ಸೂಚನೆ ಕೊಡುತ್ತದೆ. ಹೃದಯಕ್ಕೆ ಆಮ್ಲಜನಕ ಮತ್ತು ಶುದ್ಧ ರಕ್ತ ಪೂರೈಸುವ ರಕ್ತನಾಳ ಕಿರಿದಾಗುತ್ತಿದೆ ಎನ್ನುವುದರ ಮುನ್ನೆಚ್ಚರಿಕೆ ಇದು. ಯಾವುದಕ್ಕೂ ವೈದ್ಯರನ್ನು ಭೇಟಿ ಮಾಡಿದರೆ ಬೇರೆ ಸಮಸ್ಯೆ ಇದ್ದರೆ ಅದಕ್ಕೂ ಪರಿಹಾರ ಸಿಕ್ಕಂತಾಗುತ್ತದೆ. ಒಂದೊಮ್ಮೆ ಹೃದಯದ ತೊಂದರೆಯೇ ಇದ್ದಲ್ಲಿ ಆಪತ್ತಿನಿಂದ ಪಾರಾದಂತಾಗುತ್ತದೆ.
ಆಹಾರದ ವಿಚಾರದಲ್ಲಿ ಜಾಗೃತೆಯಿಂದ ಇದ್ದರೆ ಹೃದ್ರೋಗವನ್ನು ದೂರ ಇಡಬಹುದು. ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಪ್ರಾಣಿಜನ್ಯ ಆಹಾರಗಳಿಂದ ದೂರ ಇರಬೇಕು. ಬೆಳ್ಳುಳ್ಳಿ, ಈರುಳ್ಳಿ ಸೇವನೆ ಜಾಸ್ತಿ ಮಾಡಬೇಕು. ಡೈರಿ ಉತ್ಪನ್ನಗಳನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಆ್ಯಂಟಿ ಆಕ್ಸಿಡೆಂಟ್‌ಗಳಿರುವ ತರಕಾರಿ, ಹಣ್ಣು ಒಳ್ಳೆಯದು. ಇವನ್ನು ಪಾಲಿಸಿದರೆ ಹೃದ್ರೋಗದ ಸಂಭವನೀಯತೆಯನ್ನು ಬಹಳ ಕಡಿಮೆ ಮಾಡಿಕೊಳ್ಳಬಹುದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement