ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಭಯದ ಬಳಿಕ

ಪ್ರಳಯದ ಕತೆಯುಳ್ಳ ಚಲನಚಿತ್ರಗಳು ಹಾಲಿವುಡ್‌ನಲ್ಲಿ ಲೆಕ್ಕವಿಲ್ಲದಷ್ಟು ಬಂದಿವೆ. ಅದರ ಮುಂದುವರಿಕೆಯಾಗಿ,...

Vishwanath S
Updated On : 17 Jun 2013, 12:18 pm

ಪ್ರಳಯದ ಕತೆಯುಳ್ಳ ಚಲನಚಿತ್ರಗಳು ಹಾಲಿವುಡ್‌ನಲ್ಲಿ ಲೆಕ್ಕವಿಲ್ಲದಷ್ಟು ಬಂದಿವೆ. ಅದರ ಮುಂದುವರಿಕೆಯಾಗಿ, ಪ್ರಳಯಾನಂತರದ ಭೂಮಿ ಹೇಗಿರುತ್ತದೆ ಎಂಬ ಕುರಿತಾಗಿಯೂ ಸಾಕಷ್ಟು ಮೂವಿಪ್ರವಾಹ ಹರಿದಿದೆ. ಅದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ 'ಆಫ್ಟರ್ ಅರ್ಥ್‌'. ಭಾರತ ಮೂಲದ ಹಾಲಿವುಡ್ ನಿರ್ದೇಶಕ ಮನೋಜ್ ನೈಟ್ ಶ್ಯಾಮಲನ್ ಚಿತ್ರೀಕರಿಸಿದ್ದಾನೆ ಎಂಬ ಕಾರಣಕ್ಕಾಗಿ ಇದನ್ನು ನೋಡಬಹುದು.
ಯಾವುದೋ ಮಹಾ ಅನಾಹುತದ ಕಾರಣ ಮಾನವರು ಭೂಮಿಯನ್ನು ತೊರೆದು ಹೋಗಿ ಬೇರೆಲ್ಲೋ ನೆಲೆಸಿದ್ದಾರೆ. ಅದಾಗಿ ಸಾವಿರ ವರ್ಷಗಳೇ ಕಳೆದಿವೆ. ತಂದೆ- ಮಗ ಇಬ್ಬರೂ ಹೊರಟ ಆಗಸನೌಕೆ ಭೂಮಿಯ ಮೇಲೆ ಅಪ್ಪಳಿಸಿ ಚೂರಾಗಿದೆ. ಗಾಯಗೊಂಡಿರುವ ಅಪ್ಪನನ್ನು ಬದುಕಿಸಿಕೊಳ್ಳಲೋಸುಗ ಮಗ ಈಗ ಭೂಮಿಯ  ಮೇಲೆ ಪಯಣಿಸುತ್ತ ಇಲ್ಲಿರುವ ವಿಚಿತ್ರ ಜೀವಿಗಳೊಂದಿಗೆ ಹೋರಾಡಬೇಕಾಗಿದೆ. ಖ್ಯಾತ ತಾರೆ ವಿಲ್ ಸ್ಮಿತ್ ಅಪ್ಪನಾಗಿ, ಆತನ ಮಗ ಜೇಡನ್ ಸ್ಮಿತ್ ಪುತ್ರನಾಗಿ ನೀಡಿರುವ ಅಭಿನಯ ಮಾತ್ರ ಈ ಚಿತ್ರವನ್ನು ಮೇಲೆತ್ತುತ್ತದೆ.
ಮನೋಜ್ ಶ್ಯಾಮಲನ್‌ನ ಚಿತ್ರಗಳನ್ನು ನೋಡುತ್ತ ಬಂದಿರುವವರಿಗೆ, ಆತ ತನ್ನ ಸೃಜನಶೀಲತೆಯನ್ನು ನಿಧಾನವಾಗಿ ಮೊಂಡಾಗಿಸಿಕೊಳ್ಳುತ್ತ ಬಂದಿರುವುದು ಗೊತ್ತಾಗುತ್ತದೆ. 1999ರಲ್ಲಿ ಆತನ ಮೊದಲ ಸಿನೆಮಾ 'ದಿ ಸಿಕ್ಸ್ತ್ ಸೆನ್ಸ್‌' ಬಂದಾಗ ಎಲ್ಲೆಡೆ ಹವಾ ಎಬ್ಬಿಸಿತ್ತು. ವಿಶಿಷ್ಟ ಚಿತ್ರಕತೆ, ಶಾಕ್ ನೀಡುವ ಅಂತಿಮ ತಿರುವು, ಹಿಚ್‌ಕಾಕಿಯನ್ ಎನಿಸಬಹುದಾದ ಭಯ ಮೂಡಿಸುವ ಕಥಾಸಂವಿಧಾನ, ಚಿತ್ರಣಗಳು ಮನೋಜ್‌ಗೆ ಭರವಸೆಯ ನಿರ್ದೇಶಕರ ಸಾಲಿನಲ್ಲಿ ಸ್ಥಾನ ನೀಡಿದ್ದವು. ನಂತರದ 'ಸೈನ್ಸ್‌' ಕೂಡ ವಿಶಿಷ್ಟ ಅನಿಸಿಕೊಂಡು ಆತನ ಸ್ಥಾನ ಭದ್ರಪಡಿಸಿತ್ತು. ತದನಂತರ ಬಂದ ಅನ್‌ಬ್ರೇಕಬಲ್, ದಿ ಹ್ಯಾಪನಿಂಗ್, ದಿ ವಿಲೇಜ್ ಮುಂತಾದವು ಸಾಮಾನ್ಯ ಸಿನೆಮಾಗಳು ಎನಿಸಿಕೊಂಡವು. ಗಳಿಕೆಯಲ್ಲೂ ಗೆಲ್ಲಲಿಲ್ಲ, ವಿಮರ್ಶಕರಿಗೂ ಸಲ್ಲಲಿಲ್ಲ.
ಮನೋಜ್‌ನ ಮಾಂತ್ರಿಕತೆಯನ್ನು ಕಸಿದುಕೊಂಡಿರುವುದೇನು? ಆತನ ಟ್ರೇಡ್‌ಮಾರ್ಕ್ ಎನಿಸಿಕೊಂಡಿರುವ ವಿಚಿತ್ರ ತಿರುವಿನ ಕ್ಲೈಮ್ಯಾಕ್ಸ್- ಈಗ ಅದನ್ನು ಎಲ್ಲರೂ ಮಾಡುತ್ತಾರೆ. ಆಧುನಿಕ ಥ್ರಿಲ್ಲರ್‌ಗಳ, ಹಾರರ್‌ಗಳ ರೀತಿಯೇ ಬೇರೆ ಇದೆ. ಹತ್ತು ವರ್ಷ ಹಿಂದಿನ ಪ್ರೇಕ್ಷಕರಿಗೆ ಭಯ ಹುಟ್ಟಿಸಿದ್ದ ಸಂಗತಿಗಳು ಇಂದಿನ ತಲೆಮಾರಿಗೆ ಭಯ ಹುಟ್ಟಿಸಲಾರವು. ರೋಮಾಂಚನವೂ ಅಪ್‌ಡೇಟ್ ಆಗಬೇಕು. ಇದನ್ನು ತಿಳಿದೂ ಚಿತ್ರಗಳಲ್ಲಿ ತರಲಾಗದೆ ಹೋದದ್ದೇ ಮನೋಜನ ವಿಫಲತೆಗೆ ಕಾರಣ ಅನ್ನಬಹುದು.

- ವಿಹಂಗಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments