ಸಂಶಯದಿಂದ ಶ್ರದ್ಧೆಯ ಕಡೆಗೆ
ಯಾವ ಗುರುವು ಶರೀರ-ಮಾತು-ಮನಸ್ಸುಗಳಿಂದ ಪರಿಶುದ್ಧನಾಗಿರುತ್ತಾನೆಯೋ ಅಂಥವನು ಮಾತ್ರ ತನ್ನ ಶಿಷ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪುತ್ತಾನೆ. ರಾಮಕೃಷ್ಣರು ತಮ್ಮ ವ್ಯಕ್ತಿತ್ವವನ್ನಾಗಲಿ, ಬೋಧನೆಯನ್ನಾಗಲಿ ಶಿಷ್ಯರು ಅಷ್ಟು ಸುಲಭವಾಗಿ ಸ್ವೀಕರಿಸಬೇಕೆಂದು ನಿರೀಕ್ಷಿಸಿದವರಲ್ಲ. ಆದ್ದರಿಂದ ರಾಮಕೃಷ್ಣರು ನರೇಂದ್ರನಿಗೆ ಹೇಳಿದರು, 'ನೋಡಯ್ಯ, ವ್ಯಾಪಾರಿಗಳು ಹಣವನ್ನು ಖೋಟಾವೋ, ಸಾಚಾವೋ ಎನ್ನುವುದನ್ನು ಪರೀಕ್ಷೆ ಮಾಡುವುದಿಲ್ಲವೇ? ಹಾಗೆಯೇ ನೀನೂ ನನ್ನನ್ನು ಪರೀಕ್ಷೆ ಮಾಡಿ ನೋಡು, ಹಾಗಲ್ಲದೆ ಒಪ್ಪಿಕೊಳ್ಳಲೇಬೇಡ' ಇಂತಹ ಧೀರ ಗುರುವನ್ನು ಪರೀಕ್ಷಿಸಲು ಕುಶಲಿ ಶಿಷ್ಯನೂ ಸಿದ್ಧನಾದ.
ಒಮ್ಮೆ ರಾಮಕೃಷ್ಣರ ಹಾಸಿಗೆಯ ಮೇಲಿನ ಹೊದಿಕೆಯ ಕೆಳಗಡೆ ಒಂದು ರುಪಾಯಿ ನಾಣ್ಯವನ್ನು ಅಡಗಿಸಿಟ್ಟು ಮರೆಯಲ್ಲಿ ನಿಂತ. ರಾಮಕೃಷ್ಣರು ಬಂದು ಎಂದಿನಂತೆ ತಮ್ಮ ಹಾಸಿಗೆಯ ಮೇಲೆ ಕುಳಿತರು. ತಕ್ಷಣವೇ ಏನೋ ಕುಟುಕಿದಂತಾಗಿ ನೋವಿನಿಂದ ಛಂಗನೆ ಹಾರಿದರು. ಅಲ್ಲಿದ್ದ ಪರಿಚಾರಕ ಹಾಸಿಗೆಯನ್ನು ಕೊಡವಿದಾಗ ಹೊದಿಕೆಯ ಕೆಳಗೆ ಅಡಗಿಸಿಟ್ಟಿದ್ದ ನಾಣ್ಯ ಕೆಳಗೆ ಬಿತ್ತು. ಇದನ್ನೆಲ್ಲ ಮರೆಯಲ್ಲಿ ನಿಂತು ನೋಡುತ್ತಿದ್ದ ನರೇಂದ್ರ ನಾಚಿಕೆಯಿಂದ ಅಲ್ಲಿಂದ ಹೊರಟೇಬಿಟ್ಟ. ಅವನ ಪರೀಕ್ಷೆಯಲ್ಲಿ ರಾಮಕೃಷ್ಣರು ಯಶಸ್ವಿಯಾಗಿದ್ದರು.
ರಾಮಕೃಷ್ಣರು ನರೇಂದ್ರನನ್ನು ಸಂಶಯದಿಂದ ಶ್ರದ್ಧೆಯ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ, ಈ ಪ್ರಪಂಚದ ಸಂಕುಚಿತತೆಯಿಂದ ವಿಶ್ವಾತ್ಮಭಾವದ ವೈಶಾಲ್ಯದ ಕಡೆಗೆ ನಡೆಸಿಕೊಂಡು ಬರುತ್ತಿದ್ದರು. ಇದು ಸಚ್ಚಿದಾನಂದ ಸ್ವರೂಪದ ಬ್ರಹ್ಮಜ್ಞಾನದ ಕಡೆಗೆ ನಡೆಸಿಕೊಂಡು ಹೋಯಿತು.
-ಆನಂದ ಎಸ್.ಎನ್.