ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಕ್ಕಳ ರಾಜ್ಯ

Lingaraj Badiger
Updated On : 17 Jun 2013, 4:26 am

ಗ್ರಂಥಾಲಯ ಎಂದರೆ ಅಲ್ಲೊಬ್ಬರು ಕುರ್ಚಿ, ಟೇಬಲ್ ಹಾಕಿ ಪುಸ್ತಕ ಪಡೆಯುವವರ ವಿವರ ಬರೆದಿಟ್ಟುಕೊಳ್ಳುವುದು ಸಹಜ. ಮಂಗಳೂರು ಕುಳಾಯಿ ಶ್ರೀ ವೆಂಕಟರಮಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ವಿಭಿನ್ನ. ಇಲ್ಲಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಬಂದು ಪುಸ್ತಕ ತೆಗೆದುಕೊಂಡು ಹೋಗಬಹುದು, ಓದಬಹುದು. ಯಾರೂ ಲೆಕ್ಕ ಬರೆದಿಡುವುದಿಲ್ಲ.
ಮಕ್ಕಳ 'ಮುಕ್ತ ವಾಚನಾಲಯ' ವಿಭಿನ್ನ ಪ್ರಯೋಗ. ಕೊಠಡಿಯೊಳಗೆ ಕವಾಟುಗಳಲ್ಲಿ ಪುಸ್ತಕ ಇರುತ್ತದೆ. ಕವಾಟಿಗೆ ಬೀಗ ಇಲ್ಲ. ಬೇಕಿದ್ದ ಪುಸ್ತಕ ಓದಬಹುದು. ಕುರ್ಚಿ ಕೂಡಾ ಇಲ್ಲ. ಚಾಪೆ ಇಟ್ಟಿರುತ್ತಾರೆ ಅದರಲ್ಲಿ ಕೂರಬಹುದು. ಇಲ್ಲಿನ ಮಕ್ಕಳೂ ಅಷ್ಟೇ, ಸಾಲಾಗಿ ಬಂದು ಚಾಪೆಯಲ್ಲಿ ಕೂತು ಪುಸ್ತಕ ಓದುತ್ತಾರೆ. ಮಕ್ಕಳು ಮನೆಗೆ ತೆಗೆದುಕೊಂಡು ಹೋದ ಪುಸ್ತಕ ವಾಪಸ್ ತಂದಿದ್ದಾರೆಯೇ ಎಂದು ಪರಿಶೀಲಿಸುವುದಿಲ್ಲ.

ಮಕ್ಕಳ ವಿಶ್ವಾಸ ಗಳಿಸಿಕೊಂಡಾಗ ಮಾತ್ರ ಈ ರೀತಿ ಮಾಡಬಹುದು. 'ಗ್ರಂಥಾಲಯ ಮೌನ ಪ್ರೀತಿಸುತ್ತದೆ, ಮಕ್ಕಳು ಗಲಾಟೆ ಮಾಡುವುದಿಲ್ಲ, ಪುಸ್ತಕ ಪ್ರೀತಿ ಇಲ್ಲದವನು ಹಣವಂತನಾದರೂ ದರಿದ್ರನೇ' ಇತ್ಯಾದಿ ನುಡಿ ಮುತ್ತುಗಳು ಗ್ರಂಥಾಲಯದ ಗೋಡೆಗಳಲ್ಲಿ ಕಾಣಸಿಗುತ್ತವೆ.

'ಮಕ್ಕಳನ್ನು ನಂಬಿದರೆ ಅವರು ನಂಬಿಕೆ ಉಳಿಸಿಕೊಳ್ಳುತ್ತಾರೆ, ಪುಸ್ತಕ ಕಳೆದುಹೋಗಿದೆ ಎಂಬ ದೂರು ಕೂಡಾ ನಮಗೆ ಬರುತ್ತಿಲ್ಲ' ಎನ್ನುತ್ತಾರೆ ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ.
ಇಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಶುಚಿತ್ವಕ್ಕೆ ಪ್ರಾಧಾನ್ಯತೆ. ಎಲ್ಲ ಮಕ್ಕಳಿಗೂ ಕುಡಿಯಲು ಅಕ್ವಾಗಾರ್ಡ್ ನೀರು ಲಭ್ಯ. ಸ್ಥಳೀಯರ ಪ್ರಾಯೋಜಕತ್ವದಲ್ಲಿ 7.5 ಲಕ್ಷ ಖರ್ಚು ಮಾಡಿ ಅತ್ಯಾಧುನಿಕ ಶೈಲಿ ಶೌಚಾಲಯ ನಿರ್ಮಿಸಲಾಗಿದೆ.

ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಶಾಲೆ ಪ್ರಾರಂಭೋತ್ಸವ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸುವ ಮುನ್ನವೇ ಈ ಶಾಲೆಯಲ್ಲಿ ಮಕ್ಕಳ ಉತ್ಸವ ವೈಭವದಿಂದ ನಡೆಯುತ್ತಿತ್ತು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 487 ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆ ಆರಂಭದ ದಿನ ಕುದುರೆ ಬಂಡಿಯಲ್ಲಿ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತರುವುದು ಇಲ್ಲಿನ ವೈಶಿಷ್ಟ್ಯ. ಅಂದು ವೇದಿಕೆಯಲ್ಲಿ ಗಣ್ಯರನ್ನು ಕರೆದು ಸಭೆ ಮಾಡುವುದಿಲ್ಲ. ಗಣ್ಯರು, ಹೆತ್ತವರು ಮಕ್ಕಳ ಮೆರವಣಿಗೆಯಲ್ಲಿ ನಡೆದುಕೊಂಡೇ ಬರಬೇಕು, ಮಕ್ಕಳೇ ಹೈಲೈಟ್.
'ಇಂಗ್ಲಿಷ್ ಮಾಧ್ಯಮ ಶಾಲೆಗೆ ಪೋಷಕರು ಆಕರ್ಷಿತರಾಗುತ್ತಿದ್ದಾರೆ. ಹಾಗೆಂದು ಇಂಗ್ಲಿಷ್ ಭಾಷೆ ಕಲಿಯಬಾರದು ಎಂದಲ್ಲ. ಭಾರತೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ವಿಶ್ವಾಸ ಗಳಿಸುವುದು ಮುಖ್ಯ. ನಮ್ಮ ಶಾಲೆಯಲ್ಲಿ ಮಕ್ಕಳ ಪ್ರತಿಭೆಯ ವಿಕಸನಕ್ಕೆ ವಿಪುಲ ಅವಕಾಶ ಇದೆ. ವಿಭಿನ್ನ ಪ್ರಾರಂಭೋತ್ಸವ ಮಾಡುತ್ತೇವೆ. ಈ ಮೂಲಕ ಶಾಲೆಗೆ ಹೆಚ್ಚಿನ ಮಕ್ಕಳು ಬರುತ್ತಿದ್ದಾರೆ' ಎನ್ನುವುದು ಕೆ.ಕೆ. ಪೇಜಾವರ (9343562808) ಅಭಿಪಾಯ. ಮಕ್ಕಳ ಪ್ರತಿಭೆ ವಿಕಸನ ಮತ್ತು ಮಕ್ಕಳ ಪ್ರವೇಶ ಹೆಚ್ಚಳಕ್ಕೆ ಇವರೇ ರೂವಾರಿ. ವಿಜ್ಞಾನ ಸರಳ ಮಾದರಿಯಲ್ಲಿ ಮೂರು ಬಾರಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದವರು. ರಾಜ್ಯಾದ್ಯಂತ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments