ಇರುವ ಇಬ್ಬರಲ್ಲಿ ವಿಲನ್ ಯಾರು?
ನಮ್ಮ ಶರೀರದಲ್ಲಿ ಎಚ್‌ಡಿಎಲ್ ಕೊಲೆಸ್ಟರಾಲ್ ಜಾಸ್ತಿ ಇದ್ದು, ಎಲ್‌ಡಿಎಲ್ ಕೊಲೆಸ್ಟರಾಲ್ ಕಡಿಮೆ ಇದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿ ಇದ್ದರೆ ಉತ್ತಮ. ಇವನ್ನು ಹೀರೋ, ವಿಲನ್‌ಗಳಿಗೆ ಹೋಲಿಸಬಹುದು. ಎಚ್‌ಡಿಎಲ್ ನಮ್ಮ ಪಾಲಿಗೆ ಹೀರೋ ಆದರೆ, ಎಲ್‌ಡಿಎಲ್ ಪಾಲಿಗೆ ವಿಲನ್. ಎಲ್‌ಡಿಎಲ್ ನಮಗೂ ವಿಲನ್ನೇ. ಕೆಲವು ಆಹಾರಗಳು ಎಲ್‌ಡಿಎಲ್ ಪ್ರಮಾಣ ಕಡಿಮೆ ಎಚ್‌ಡಿಎಲ್ ಕೊಲೆಸ್ಟರಾಲ್ ಮಟ್ಟ ಹೆಚ್ಚಿಸಲು ನಿಶ್ಚಿತವಾಗಿಯೂ ನೆರವಾಗುತ್ತವೆ.
ಕೊಲೆಸ್ಟರಾಲ್ ಕುರಿತು ಇನ್ನೊಂದಿಷ್ಟು ಹೇಳಬೇಕು. ರಕ್ತನಾಳಗಳು ಕುಗ್ಗುವುದು, ರಕ್ತ ಹೆಪ್ಪುಗಟ್ಟುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. ರಕ್ತದಲ್ಲಿ ಆಮ್ಲಜನಕ ರಹಿತವಾದ ಮೂಲಧಾತುಗಳಿರುತ್ತವೆ. ಇಂಥ ಧಾತುಗಳು ಎಲ್‌ಡಿಎಲ್ ಕೊಲೆಸ್ಟರಾಲ್ ಕಣಗಳೊಂದಿಗೆ ಉತ್ಕರ್ಷಿಸಿದಾಗ ಎಲ್‌ಡಿಎಲ್ ಒಂದು ರೀತಿಯ ವಾಸನೆ ಪಡೆಯುತ್ತದೆ. ಬೆಣ್ಣೆಯನ್ನು ಬಹುದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಡದೇ ಹೊರಗಿಟ್ಟಾಗ ಒಂದು ನಮೂನೆಯ ವಾಸನೆ ಬರುತ್ತದಲ್ಲ, ಅದೇ ಬಗೆಯ ವಾಸನೆಯನ್ನು 'ವಿಲನ್ ಕೊಲೆಸ್ಟರಾಲ್' ಪಡೆಯುತ್ತದೆ. ಈ ತ್ವರಿತ ರಾಸಾಯನಿಕ ಕ್ರಿಯೆಯಲ್ಲಿ ಎಲ್‌ಡಿಎಲ್ ಲೋಳೆಗಡ್ಡೆಯಂತಾಗುತ್ತದೆ. ಅದನ್ನೇ ಮಾಕ್ರೋಫೇಜಸ್ ಎನ್ನುವುದು. ಕೊಬ್ಬಿನ ನೆರವಿನಿಂದ ಈ ಮಾಕ್ರೋಫೇಜಸ್‌ಗಳು ಬುರುಗಿನಂತೆ ವರ್ತಿಸಲಾರಂಭಿಸುತ್ತವೆ ಅಂದರೆ ಅವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇರುತ್ತದೆ. ಇವು ನಾಜೂಕಿನಿಂದ ರಕ್ತನಾಳ ಪ್ರವೇಶಿಸಿ ಅವನ್ನು ಧ್ವಂಸಗೊಳಿಸುವ ಕಾರ್ಯದಲ್ಲಿ ಮಗ್ನವಾಗುತ್ತವೆ.
ವಿಜ್ಞಾನಿಗಳು ಹೇಳುವುದೇನೆಂದರೆ, ಎಲ್‌ಡಿಎಲ್ ಕೊಲೆಸ್ಟರಾಲ್ ತನ್ನ ಪಾಡಿಗೆ ತಾನಿದ್ದರೆ ಅಷ್ಟೊಂದು ಅಪಾಯ ಆಗಲಾರದು. ಆದರೆ ರಾಸಾಯನಿಕ ಪ್ರಕ್ರಿಯೆಗಳಿಂದ ಅವು ಮಾಕ್ರೋಫೇಜಸ್‌ನಂಥ ವಿಷಕಾರಕಗಳಾಗಿ ಪರಿವರ್ತನೆ ಹೊಂದಿದರೆ ಅಪಾಯ ಕಟ್ಟಿಟ್ಟದ್ದು. ರಕ್ತ ಹೆಪ್ಪುಗಟ್ಟಲು ಈ ಪ್ರಕ್ರಿಯೆಯೇ ಪ್ರಮುಖವಾದ ಕಾರಣ. ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುವ ಆಹಾರವನ್ನು ಅಧಿಕವಾಗಿ ಸೇವಿಸಿದರೆ ಈ ಎಲ್‌ಡಿಎಲ್ ವಿಷಕಾರಕವಾಗಿ ಪರಿವರ್ತನೆಯಾಗುವುದನ್ನು ತಡೆಯಬಹುದು. ಎಲ್ಲಿಂದ ಎಲ್ಲಿಯ ಸಂಬಂಧ ಅಲ್ಲವೆ? ಆರೋಗ್ಯ ವಿಜ್ಞಾನವೇ ಹಾಗೆ. ಏನೇ ಆದರೂ ಕೊನೆಗೆ ಬಂದು ನಿಲ್ಲುವುದು ಆಹಾರ ವಿಜ್ಞಾನದ ಬಳಿಯಲ್ಲಿಯೇ.
ನಮ್ಮ ಶರೀರದಲ್ಲಿ ಎಲ್‌ಡಿಎಲ್ ಮಟ್ಟ ನಿಯಂತ್ರಣದಲ್ಲಿಟ್ಟುಕೊಂಡು, ಎಚ್‌ಡಿಎಲ್ ಕೊಲೆಸ್ಟರಾಲ್ ಹೆಚ್ಚಿಸಲು ಎಂಥ ಆಹಾರ ಮುಖ್ಯ ಎನ್ನುವುದನ್ನು ಮುಂದಿನ ಕೆಲ ಸಂಚಿಕೆಗಳಲ್ಲಿ ವಿವರವಾಗಿ ಚರ್ಚಿಸೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com