ಕೊನೇ ಎಲೆ ಮಾತು
ಬಯಲಲ್ಲಿರುವ ಒಂದು ಮರ. ಅದರ ಕೊನೇ ಎಲೆ ಇನ್ನೇನು ಉದುರುವುದಕ್ಕೆ ಅಣಿಯಾಗಿತ್ತು. ಆ ನಡುಗುವ ಚಳಿಯಲ್ಲಿ ತನ್ನ ಮೇಲೆ ಬಿದ್ದಿರುವ ಮಂಜಿನ ಬಿಳಿ ಹೊದಿಕೆಯಲ್ಲಿ ಬಿಕ್ಕಳಿಸುತ್ತಿತ್ತು ಆ ಎಲೆ.
'ಗೆಳೆಯಾ...ನೀನೂ ನನ್ನ ಬಿಟ್ಟು ಹೊರಟು ಹೋದರೆ?' ಈ ಮೊದಲು ಹಸಿರಾಗಿದ್ದು, ನಂತರ ಹಳದಿ ಬಣ್ಣಕ್ಕೆ ತಿರುಗಿದ ಎಲೆಯನ್ನು ನೋಡುತ್ತಾ ಮರ ಕಂಬನಿ ಮಿಡಿಯುತ್ತಲೇ ಕೇಳಿತು.
ಎಲೆಗೆ ದುಃಖ ತಡೆಯಲಾಗದೆ ಜೋರಾಗಿ ಅಳೋಕೆ ಶುರು ಮಾಡಿತು. ಆಮೇಲೆ ಸಾವರಿಸಿ, 'ನೀನು ನನಗೇನು ಕೊಟ್ಟಿದ್ದೀಯಾ?'
ಆ ಮಂಜಿನ ಹೊದಿಕೆಯಲ್ಲಿ ಮರಗಟ್ಟಿರುವ ಮೈ, ಅದರಲ್ಲಿಯೂ ಬಿಸಿ ಕಣ್ಣೀರು ಸುರಿಸುತ್ತಿರುವ ಎಲೆಯನ್ನುದ್ದೇಶಿಸಿ ಮರ ಹೇಳಿತು.. 'ಇಷ್ಟೊಂದು ಕಾಲ ಬೆಳಕನ್ನು ಹೀರಿ, ನನಗೆ ಆಹಾರ ಒದಗಿಸಿ ಬದುಕಿಸಿದವನು ನೀನು. ನೀನು ನನ್ನಲ್ಲಿ ಎಳೆ ಚಿಗುರಾಗಿ ಎದ್ದು ನಿಂತಾಗ ಅದೆಷ್ಟು ಉಲ್ಲಸಿತಗೊಂಡಿದ್ದೆ! ನಿನ್ನ ಬೆವರಲ್ಲಿ ನನಗೆ ಬದುಕುಕೊಟ್ಟೆ.
ನಿನ್ನಲ್ಲಿ ಯೌವನ ತುಂಬಿ ತುಳುಕುವ ವೇಳೆ ನಾನು ಆಗ ತಾನೇ ಚಿಗುರು ಮೀಸೆಯೊಡೆದ ಯುವಕನಂತೆ ದರ್ಪದಿಂದ ಮೆರೆದೆ. ಗಾಳಿ ಬಂದರೆ ಸಾಕು...ಮಡದಿಯ ಹುಸಿ ಕೋಪದಂತೆ, ನಿಂತಲ್ಲಿ ನಿಲ್ಲಲಾರೆ ಎಂಬ ಚಡಪಡಿಕೆಯ ನಿನ್ನ ಸೊಗಸು ...
ಸುರಿವ ಮಳೆಗೆ ಮೈಯೊಡ್ಡಿ ನಿಂತರೆ, ಆಹಾ... ಪ್ರಿಯತಮೆಯಂತೆ ಒದ್ದೆ ಮೈಯಲ್ಲಿ ಪುಳಕವನ್ನುಂಟು ಮಾಡುತ್ತಿದ್ದೆ. ಆ ಚಳಿಯಲ್ಲಿ ನೀನು ನನ್ನನ್ನಪ್ಪಿ ಮಲಗಿದ್ದರೆ, ಅಮ್ಮನ ಮಡಿಲಿನ ಬೆಚ್ಚಗಿನ ಅನುಭವ... ಆದರೆ ನಾನು...ನಿನಗೆ ತೊಟ್ಟು ಕಳಚಿಕೊಳ್ಳುವ ನೋವನ್ನು ಮಾತ್ರ ನೀಡಿದ್ದೇನೆ.'
ಈ ಮಾತು ಕೇಳಿ ಎಲೆ ಮನಸ್ಸು ಭಾರವಾಯ್ತು. ಕೊನೆಯ ಕ್ಷಣದಲ್ಲಿ ಮರಕ್ಕೆ ಕೃತಜ್ಞತೆ ಸಲ್ಲಿಸಲು ಎದ್ದು ನಿಂತಾಗ ಬೀಸಿದ ಗಾಳಿ ಅದನ್ನು ಧರೆಗುರುಳಿತು.
ತನ್ನ ಬುಡದಲ್ಲಿ ಬಿದ್ದಿರುವ ಎಲೆಯನ್ನು ಮರ ದಿಟ್ಟಿಸುತ್ತಾ ನಿಂತಿದ್ದರೆ, ಮಂಜಿನ ಹನಿಯೊಂದು ಆ ಎಲೆಯ ಮೇಲೆ ಬಿತ್ತು. ನೆಲದಲ್ಲಿ ಬಿದ್ದಿದ್ದ ಆ ಎಲೆ ಮರದ ಬುಡವನ್ನಪ್ಪಿ ಕಾಲಗರ್ಭದಲ್ಲಿ ಮರೆಯಾಯಿತು.
-ರಶ್ಮಿ ಕಾಸರಗೋಡು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.