ದಿನಕ್ಕೊಂದು ಕಪ್ ಕಾಳು ಇಲ್ಲ ಕೊಲೆಸ್ಟರಾಲ್ ಗೋಳು!
ಇಂದಿನ ಯುವ ಪೀಳಿಗೆಯ ಆಹಾರ ಪದ್ಧತಿ ನೋಡಿದರೆ ವ್ಯಥೆಯಾಗುತ್ತದೆ. ರೆಡಿಮೇಡ್ ಫುಡ್, ಸಕ್ಕರೆ ಅಂಶ ಅಧಿಕವಿರುವ ಸಾಫ್ಟ್‌ಡ್ರಿಂಕ್ಸ್. ಇವೆರಡರಲ್ಲೂ ಸತ್ವ ಇರೋದಿಲ್ಲ. ತಕ್ಷಣಕ್ಕೆ ಹೊಟ್ಟೆ ತುಂಬುತ್ತದೆ ಎನ್ನುವುದನ್ನು ಬಿಟ್ಟರೆ ಆರೋಗ್ಯಕ್ಕೆ ಒಳ್ಳೆ ಅಂಶಗಳು ಯಾವವೂ ಇಲ್ಲ. ಹಿಂದೆಲ್ಲ ಬೇಳೆಕಾಳುಗಳ ಯುಗ. ಅಡುಗೆ ಮನೆಯಲ್ಲಿ ಹುರಳಿ, ಅವರೆ, ಆಲಸಂದೆ, ಹೆಸರು, ರಾಜ್ಮಾ, ಕಡಲೆಕಾಳು ಮೊದಲಾದ ಕಾಳುಗಳು ಇರಲೇಬೇಕಿತ್ತು. ಏಕೆಂದರೆ ತರಕಾರಿ ಇಲ್ಲದಿದ್ದರೂ ಯಾವುದಾದರೊಂದು ಕಾಳು ಇದ್ದರೂ ಸಾಕಿತ್ತು, ಮಹಿಳೆಯರು ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ರುಚಿಕಟ್ಟಾದ ಸಾಂಬಾರ್ ಸಿದ್ಧವಾಗುತ್ತಿತ್ತು. ತರಕಾರಿಯಷ್ಟೇ ಇವು ಕೂಡ ಸತ್ವಯುತವಾಗಿರುತ್ತವೆ. ಆರೋಗ್ಯ ರಕ್ಷಣೆಯಲ್ಲಿ ಇವುಗಳಿಗೂ ವಿಶಿಷ್ಟ ಸ್ಥಾನವಿದೆ. ಈಗಿನ ತಲೆಮಾರಿನ ಮಕ್ಕಳಿಗೆ ಇಂಥ ಕಾಳುಗಳೆಂದರೆ ಅಲರ್ಜಿ. ಹುರುಳಿಯ ಬಣ್ಣ ನೋಡಿಯೇ 'ನಾನು ತಿನ್ನಲ್ಲ' ಎಂದು ಈಗಿನ ಯುವಕ, ಯುವತಿಯರು ಹೇಳುವುದನ್ನು ನಾನೇ ಕಂಡಿದ್ದೇನೆ.
ವಿಷಯಾಂತರವಾಗುತ್ತಿದೆ ಎಂದುಕೊಳ್ಳಬೇಡಿ. ಕೊಲೆಸ್ಟರಾಲ್ ಬಗ್ಗೆ ಹೇಳುತ್ತಿದ್ದೆ. ಕಾಳುಗಳು, ದ್ವಿದಳ ಧಾನ್ಯಗಳು ಕೊಲೆಸ್ಟರಾಲ್ ನಿಯಂತ್ರಕರು. ನಿಸರ್ಗದಲ್ಲಿ ಲಭ್ಯವಿರುವ ಅತಿ ಅಗ್ಗದ, ಸುಲಭವಾಗಿ ದೊರೆಯುವ, ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸುವ ಮತ್ತು ಎಂಥಹ ದೇಹ ಪ್ರಕೃತಿಯವರಿಗೂ ಯಾವ ರೀತಿಯಲ್ಲೂ ಅಡ್ಡಪರಿಣಾಮ ಉಂಟುಮಾಡದ 'ಔಷಧ'ಗಳಿವು ಎಂದೂ ಹೇಳಬಹುದು. ಎಲ್‌ಡಿಎಲ್ ಕೊಲೆಸ್ಟರಾಲ್ ವಿರುದ್ಧ ಇವುಗಳ ಹೋರಾಟದ ಬಗ್ಗೆ ಎಷ್ಟು ಹೇಳಿದರೂ ಸಾಲದು. ದಿನಕ್ಕೊಂದು ಕಪ್ ಬೇಯಿಸಿದ ಕಾಳು ತಿಂದರೆ ಕೊಲೆಸ್ಟರಾಲ್ ಮಟ್ಟ (ಕೊಲೆಸ್ಟರಾಲ್ ಕುರಿತು ಚರ್ಚೆ ಮುಗಿಯುವವರೆಗೆ ಕೇವಲ 'ಕೊಲೆಸ್ಟರಾಲ್' ಎಂದು ಪ್ರಸ್ತಾಪವಾಗಿದ್ದರೆ ಅದನ್ನು ಎಲ್‌ಡಿಎಲ್ ಕೊಲೆಸ್ಟರಾಲ್ ಎಂದಿ ಓದಿಕೊಳ್ಳುವುದು) ಶೇ 20ರಷ್ಟು ಕಡಿಮೆಯಾಗುತ್ತದೆ ಮತ್ತು ಎಚ್‌ಡಿಎಲ್ ಕೊಲೆಸ್ಟರಾಲ್ ಗಣನೀಯವಾಗಿ ಹೆಚ್ಚುತ್ತದೆ ಎನ್ನುವುದು ವೈಜ್ಞಾನಿಕವಾಗಿಯೇ ನಿರೂಪಿತವಾಗಿರುವ ಸಂಗತಿ.
ಯಾವ ಥರದ ಕಾಳುಗಳಾದರೂ ಸರಿಯೇ. ಕೇವಲ ಮೂರು ವಾರಗಳಲ್ಲಿಯೇ ಅದರ ಪರಿಣಾಮ ನಿರೀಕ್ಷಿಸಬಹುದು. ಒಂದೇ ಸಲ ಒಂದು ಕಪ್ ತಿನ್ನುವುದಕ್ಕಿಂತ ಅದನ್ನೇ ಅರ್ಧರ್ಧ ಕಪ್‌ನಂತೆ ದಿನಕ್ಕೆ ಎರಡು ಸಲ ಅಥವಾ ಕಾಲು ಕಪ್‌ನಂತೆ ನಾಲ್ಕು ಬಾರಿ ಸೇವಿಸುವುದು ಇನ್ನೂ ಒಳ್ಳೆಯದು. ಕೊಲೆಸ್ಟರಾಲ್ ಕಡಿಮೆಯಾದ ವೇಗದಲ್ಲಿಯೇ ಎಚ್‌ಡಿಎಲ್ ಕೊಲೆಸ್ಟರಾಲ್ ಮಟ್ಟ ಏರದಿರಬಹುದು, ಆದರೆ ವರ್ಷ ಅಥವಾ ಎರಡು ವರ್ಷದಲ್ಲಿ ಎಚ್‌ಡಿಎಲ್ ಪ್ರಮಾಣ ಕನಿಷ್ಠ ಶೇ 9ರಷ್ಟು ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು. ಕಾಳುಗಳಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಆರು ಬಗೆಯ ವಿವಿಧ ಪದಾರ್ಥಗಳಿರುತ್ತವೆ ಎನ್ನುವುದನ್ನು ಪತ್ತೆ ಮಾಡಲಾಗಿದೆ. ಪ್ರಮುಖವಾದದ್ದು ಎಂದರೆ ಕರಗುವ ನಾರು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com