ಅತ್ತ ದರಿ ಇತ್ತ ಕರಡಿ
ಸಮಾಜದಲ್ಲಿ ಶಾಂತಿ ಕಾಪಾಡಲು ಹಗಲಿರುಳೂ ಶ್ರಮಿಸುವ ಪೊಲೀಸ್ರೂ ಮನುಷ್ಯರೇ. ಅವರಿಗೂ ಜೀವದ ಮೇಲೆ ಆಸೆ ಇರುತ್ತದೆ. ಆದರೂ ಕರ್ತವ್ಯ ನಿರ್ವಹಣೆಗಾಗಿ ಪ್ರಾಣದ ಹಂಗು ತೊರೆದು ಮುನ್ನುಗ್ಗುತ್ತಾರೆ. ಕೆಲವೊಮ್ಮೆ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆಗ್ರಹಕ್ಕೆ ಗುರಿಯಾಗುವುದೂ ಉಂಟು. ಹಾಗೆ ಜನರ ಕೋಪಕ್ಕೆ ತುತ್ತಾದ ಪೊಲೀಸ್ ಅಧಿಕಾರಿಯೊಬ್ಬರ ಸ್ಥಿತಿ ಹೇಗಿತ್ತು ಎಂಬುದಕ್ಕೆ ಈ ಕತೆ ಓದಿ.
ಅದು ಚಿಕ್ಕನಾಯಕನಹಳ್ಳಿಯ ಒಂದು ಕುಗ್ರಾಮ. ಆ ಗ್ರಾಮದಲ್ಲಿ ದೊಂಬಿ, ಜಗಳ, ಗಲಾಟೆ ಪ್ರಕರಣಗಳು ಹೆಚ್ಚಾಗಿ ನಡೆಯುವುದರಿಂದ ಅದು ಸೂಕ್ಷ್ಮ ಗ್ರಾಮ ಎಂಬ ಹೆಸರನ್ನು ಪೊಲೀಸ್ ಪಟ್ಟಿಯಲ್ಲಿ ಪಡೆದುಕೊಂಡಿದೆ. ಹಾಗಾಗಿ ಅಲ್ಲಿ ಗಣೇಶನ ವಿಸರ್ಜನೆ, ದೇವರ ಮೆರವಣಿಗೆ, ಜಾತ್ರೆ, ಚುನಾವಣೆ... ಹೀಗೆ ಏನೇ ಸಾರ್ವಜನಿಕ ಸಮಾರಂಭ ನಡೆದರೂ ಪೊಲೀಸರು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ.
ಅದು ಪ್ರೊಫೆಸರ್ ನಂಜುಂಡಸ್ವಾಮಿ ಅವರ ರೈತ ಹೋರಾಟ ಉತ್ತುಂಗದಲ್ಲಿದ್ದ ಸಂದರ್ಭ. ರಾಜ್ಯದಲ್ಲಿ ಬಿಟಿ ಹತ್ತಿ ನಾಶ ಮಾಡಬೇಕೆಂದು ಆಗ್ರಹಿಸಿ ಪ್ರೊಫೆಸರ್ ಹೋರಾಟ ಹಮ್ಮಿಕೊಂಡಿದ್ದರು. ಹೋರಾಟ ಬೆಂಬಲಿಸಿ ರೈತರು ಬೀದಿಗೆ ಇಳಿದಿದ್ದರು. ಅದೇ ಕಾರಣಕ್ಕಾಗಿ ಈ ಗ್ರಾಮದಲ್ಲೂ ಅಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅದು ಒಂದು ಹೋಬಳಿ ಕೇಂದ್ರ. ಸಂಜೆ ವೇಳೆ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುವ ಸೂಚನೆಗಳಿರಲಿಲ್ಲ. ಜೊತೆಗೆ ಅನಾರೋಗ್ಯದಿಂದ ಪ್ರೊ. ನಂಜುಂಡಸ್ವಾಮಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂಬ ಮಾಹಿತಿ ಸಿಕ್ಕ ಕಾರಣ ರೈತರ ಪ್ರತಿಭಟನೆ ಬಗ್ಗೆ ಪೊಲೀಸರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಬೆರಳೆಣಿಕೆ ಪೊಲೀಸರನ್ನು ಬಂದೋಬಸ್ತಿಗಾಗಿ ನೇಮಿಸಿ, ಒಬ್ಬ ಸಬ್ಇನ್ಸ್ಪೆಕ್ಟರ್ರನ್ನು ಉಸ್ತುವಾರಿಗಿಟ್ಟಿದ್ದರು. ಹಸಿರಿನ ಚಪ್ಪರ, ತಮಟೆಯ ಸದ್ದು ಮೇರೆ ಮೀರಿತ್ತು. ಸುತ್ತಮುತ್ತಲ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದು ಸೇರುತ್ತಿದ್ದರು.
......
ರೈತರ ಪಂಪ್ಸೆಟ್ಗಳ ಅಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲು, ನದಿ ನಾಲೆಗಳಿಂದ ಬೆಳೆಗಳಿಗೆ ನೀರು ಹರಿಸಲು ಬಳಸುತ್ತಿದ್ದ ಡೀಸೆಲ್ ಪಂಪ್ಗಳನ್ನು ವಶಪಡಿಸಿಕೊಳ್ಳಲು ಹೀಗೆ ಯಾವುದೇ ಇಲಾಖೆಯ ಅಧಿಕಾರಿಗಳಾಗಲಿ ಪೊಲೀಸರ ಸಹಾಯವನ್ನೇ ಪಡೆಯುತ್ತಿದ್ದರು. ರೌದ್ರಾವತಾರ ತಾಳುವ ರೈತರನ್ನು ಹತೋಟಿಗೆ ತರಲು ಖಾಕಿಯೇ ದಿಕ್ಕು ಎಂದು ಎಲ್ಲಾ ಅಧಿಕಾರಿಗಳೂ ಬಲವಾಗಿ ನಂಬಿದ್ದರು. ಪ್ರತಿ ವಿಚಾರದಲ್ಲಿಯೂ ಪೊಲೀಸರ ಮಧ್ಯಪ್ರವೇಶದಿಂದ ರೈತರಿಗೂ ಪೊಲೀಸರ ಮೇಲೆ ಎಲ್ಲಿಲ್ಲದ ಕೋಪ ಮಡುಗಟ್ಟಿತ್ತು.
ಅಂದು ಕಾರ್ಯಕ್ರಮಕ್ಕೆ ಪ್ರೊಫೆಸರ್ ಬರಲಿಲ್ಲ ಎಂಬ ಬೇಸರ ಎಲ್ಲಾ ರೈತರಲ್ಲೂ ಇತ್ತು. ರೈತರು ಒಂದೆಡೆ ಸೇರಿದರೆ ಏನೋ ಮಸಲತ್ತು ನಡೆಯುತ್ತಿದೆ ಎಂಬ ಅನುಮಾನ ಪೊಲೀಸರಿಗೆ. ಹಾಗಾಗಿ ರೈತರ ಗುಂಪಿಗೆ ಪೊಲೀಸರು ಎಚ್ಚರಿಕೆ ನೀಡಿ ಚದುರಿಸುತ್ತಿದ್ದರು. ಇದರಿಂದ ರೈತರ ಪಿತ್ಥ ನೆತ್ತಿಗೇರಿತ್ತು.
ತಮ್ಮ ನಾಯಕ ಬರಲಿಲ್ಲ, ಹೋರಾಟದ ತೀವ್ರತೆ ಕುಸಿಯುತ್ತಿದೆ, ವಿದ್ಯುತ್ ಅಧಿಕಾರಿಗಳ ಕಿರುಕುಳ ಮಿತಿಮೀರಿದೆ ಹೀಗೆ ನಾನಾ ಚಿಂತೆಯಲ್ಲಿದ್ದ ರೈತರು ಬಂದಿದ್ದ ನಾಯಕರ ಮುಂದಾಳತ್ವದಲ್ಲಿಯೇ ಪ್ರತಿಭಟನೆ ಆರಂಭಿಸಿದರು. ರೈತನಾಯಕರಿಗೆ ಜೈಕಾರ, ಅಧಿಕಾರಿಗಳಿಗೆ ಧಿಕ್ಕಾರಗಳು ಮೊಳಗತೊಡಗಿದವು. ಬೆಳಗಿನಿಂದ ಯಾವುದೋ ಒಂದು ರೀತಿಯಲ್ಲಿ ತಮ್ಮ ಹೋರಾಟಕ್ಕೆ ಅಡ್ಡಿ ಮಾಡುತ್ತಿರುವುದು ಪೊಲೀಸರೇ ಎಂಬ ತೀರ್ಮಾನಕ್ಕೆ ಬಿಸಿರಕ್ತದ ಯುವರೈತರು ಬಂದರು. ಸಂಜೆಯ ವೇಳೆ ಆರಂಭವಾದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಮೊಳಗುತ್ತಿದ್ದ ಧಿಕ್ಕಾರದ ಕೂಗು ಪೊಲೀಸರ ವಿರುದ್ಧ ಮೊಳಗಲು ಆರಂಭಿಸಿತು.
ಪ್ರತಿಭಟನಾ ನಿರತ ರೈತರಿಂದ 'ರೈತವಿರೋಧಿ ಪೊಲೀಸರಿಗೆ ದಿಕ್ಕಾರ' ಎಂಬ ಕೂಗು ಕೇಳಿಬಂತು. ಮುಂದೆ ನಡೆಯಬಹುದಾದ ಅನಾಹುತ ಏನು ಎಂಬುದು ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಅರ್ಥವಾಯಿತು. ಪೊಲೀಸರಿಗೆ ತಾಳ್ಮೆಯಿಂದ ಇರುವಂತೆ ಸೂಚಿಸಿ ರೈತರು ಶಾಂತಿಯುತವಾಗಿ ಪ್ರತಿಭಟನೆ ಮುಂದುವರೆಸಬೇಕೆಂದು, ಕಾನೂನು ಮೀರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದರಿಂದ ರೈತರ ಕೋಪ ಇನ್ನಷ್ಟು ಹೆಚ್ಚಿತು. 'ನಾವು ಶಾಂತ ರೀತಿಯಿಂದಲ್ಲದೆ ದೊಂಬಿ ಮಾಡುತ್ತಿದ್ದೇವಾ? ನೀವೆ ಬಂದು ಶಾಂತಿ ಹಾಳು ಮಾಡುತ್ತಿದ್ದೀರಾ. ಜೊತೆಗೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಾ' ಎಂಬ ಜೋರು ಮಾತು ಗುಂಪಿನಿಂದ ಕೇಳಿಬಂತು. ಶಾಂತಿಯಿಂದ ಇರುವಂತೆ ಇನ್ಸ್ಪೆಕ್ಟರ್ ಮಾಡಿದ ಮನವಿ ಯಾರಿಗೂ ಕೇಳಿಸಲಿಲ್ಲ.
.....
ರೈತರ ಎಲ್ಲ ಹೋರಾಟಗಳಿಗೂ ಪೊಲೀಸರೇ ಅಡ್ಡಿ ಎಂಬ ಅಂತಿಮ ನಿರ್ಧಾರಕ್ಕೆ ಬಂದ ರೈತರು ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರತೊಡಗಿದರು. ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ಅರಿವಿಲ್ಲದೆ ಕಡಿಮೆ ಸಿಬ್ಬಂದಿಯೊಂದಿಗೆ ಬಂದಿದ್ದ ಸಬ್ಇನ್ಸ್ಪೆಕ್ಟರ್ ವಿಧಿ ಇಲ್ಲದೆ ಆತ್ಮರಕ್ಷಣೆಗಾಗಿ ಓಡಲೇ ಬೇಕಾಯಿತು.
ಕಲ್ಲೇಟಿಗೆ ಪೊಲೀಸರು ಓಡುತ್ತಲೇ ರೈತರ ಹುಮ್ಮಸ್ಸು ಇಮ್ಮಡಿಯಾಯಿತು. ತಾವು ಮಾಡುತ್ತಿದ್ದ ಹೋರಾಟವನ್ನು ಮರೆತು ಪೊಲೀಸರನ್ನು ಅಟ್ಟಿಸಿಕೊಂಡು ದೊಣ್ಣೆ, ಕಲ್ಲುಗಳ ಜತೆ ಹಿಂದೆ ಬಿದ್ದರು. ಅಪಾರ ಸಂಖ್ಯೆಯ ರೈತರು ಬೆನ್ನು ಬೀಳುತ್ತಲೇ ದಿಕ್ಕಾಪಾಲಾಗಿ ಪೊಲೀಸರು ಓಡಲಾರಂಭಿಸಿದರು.
ಚಿಕ್ಕನಾಯನಹಳ್ಳಿಯಂಥ ಬಯಲು ಸೀಮೆಯಲ್ಲಿ ಜೀವನದಿಗಳಿಲ್ಲದ ಕಾರಣ ರೈತರು ಬಾವಿಗಳನ್ನೇ ನೀರಾವರಿ ಬೇಸಾಯಕ್ಕಾಗಿ ಅವಲಂಬಿಸಿದ್ದರು. ಹಾಗಾಗಿಯೇ ಚಕ್ರ ಬಾವಿಗಳು ಇಲ್ಲಿ ಹೇರಳವಾಗಿವೆ. ಅವುಗಳಲ್ಲಿ ಕೆಲವು ನೀರಿಲ್ಲದೆ ಒಣಗಿವೆ. ಈ ಚಕ್ರ ಬಾವಿಗಳು ಭೂಮಿಯ ಮಟ್ಟಕ್ಕೆ ಇರುವುದರಿಂದ ಹತ್ತಿರ ಸುಳಿಯವ ವರೆಗೂ ಅಲ್ಲಿ ಬಾವಿ ಇದೆ ಎಂಬುದು ಹೊಸಬರಿಗೆ ಅರಿವಾಗುವುದಿಲ್ಲ. ಇಲ್ಲೂ ಅದೇ ಆಯಿತು. ಸಂಜೆಯ ಮಬ್ಬುಗತ್ತಲು. ಹಿಂದಿನಿಂದ ಬೀಸುತ್ತಿರುವ ಕಲ್ಲು ದೊಣ್ಣೆಗಳು. ಇವುಗಳಿಂದ ತಪ್ಪಿಸಿಕೊಳ್ಳಲು ಎದ್ದೆವೋ ಬಿದ್ದೆವೋ ಎಂದು ಓಡುತ್ತಿದ್ದ ಸಬ್ ಇನ್ಸ್ಪೆಕ್ಟರ್ಗೆ ಮುಂದಿದ್ದ ಚಕ್ರ ಬಾವಿ ಗೊತ್ತಾಗಲಿಲ್ಲ. ಬಾವಿಗೆ ಬಿದ್ದರು.
ಬಾವಿಯ ಸುತ್ತಲೂ ಕಲ್ಲಿನ ಕಟ್ಟಡ ನಿರ್ಮಿಸಲಾಗಿತ್ತು. ಆ ಕಲ್ಲಿನ ಕಟ್ಟಡದ ಒಳಗಿನಿಂದಲೇ ಒಂದು ಆಲದ ಗಿಡ ಟಿಸಿಲೊಡೆದು ಹೊರಬಂದು ಮಜಬೂತಾಗಿ ಬೆಳೆದಿತ್ತು. ಸಬ್ಇನ್ಸ್ಪೆಕ್ಟರ್ ಬಾವಿಗೆ ಬೀಳುತ್ತಿದ್ದೇನೆ ಎಂಬ ಅರಿವಾಗುತ್ತಲೇ ಉದ್ದಕ್ಕೆ ಚಾಚಿದ್ದ ಆಲದ ಕೊಂಬೆ ಹಿಡಿದರು. ಅದು ಭದ್ರವಾಗಿದ್ದ ಕಾರಣ ಬಾವಿಯ ಮಧ್ಯದಲ್ಲೇ ನೇತಾಡತೊಡಗಿದರು.
ಸಬ್ಇನ್ಸ್ಪೆಕ್ಟರ್ ಬಾವಿಗೆ ಬಿದ್ದಿರುವುದನ್ನು ಅಟ್ಟಿಸಿಕೊಂಡು ಬರುತ್ತಿದ್ದ ರೈತರು ನೋಡಲಿಲ್ಲ. ಮುಂದೆ ಓಡುತ್ತಿರುವ ಪೊಲೀಸ್ ಪೇದೆಗಳ ಮೇಲೆ ಅವರ ದೃಷ್ಟಿ ನೆಟ್ಟಿತ್ತು. ರೈತರ ಗದ್ದಲ ಅಡಗಿದ ಮೇಲೆ ಕೊಂಬೆ ಹಿಡಿದು ನೇತಾಡುತ್ತಿದ್ದ ಸಬ್ಇನ್ಸ್ಪೆಕ್ಟರ್ ಮೇಲೆ ಹತ್ತುವ ಪ್ರಯತ್ನ ಮಾಡತೊಡಗಿದರು. ಆದರೆ ಅದು ಚಕ್ರಬಾವಿ ಆದ ಕಾರಣ ಮೇಲೆ ಹತ್ತಲು ಸಾಧ್ಯವಿಲ್ಲ ಎಂಬುದು ಅವರ ಗಮನಕ್ಕೆ ಬಂದಿತು. ಸರಿ ಹಾಗಿದ್ದರೆ ಕೆಳಗೆ ನೀರಿಗೆ ಹಾರಿ ಈಜಿ ದಡ ಸೇರುವ ಯೋಚನೆ ಮಾಡಿ ಕೆಳಗೆ ನೋಡಿದರೆ ಅಲ್ಲಿ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ಅದು ಕರಡಿಯ ರೂಪದಲ್ಲಿ!
ಸಂಜೆಗತ್ತಲ್ಲಲ್ಲಿ ಆಹಾರ ಅರಸಿ ಕಾಡಿನಿಂದ ಊರಿನ ಕಡೆ ಬರುತ್ತಿದ್ದ ಕರಡಿಯೊಂದು ರೈತರ ಗದ್ದಲ ಕೇಳಿ ಜನ ತನ್ನನ್ನೇ ಅಟ್ಟಿಸಿಕೊಂಡು ಬರುತ್ತಿದ್ದಾರೆ ಎಂದು ಹೆದರಿ ಓಡತೊಡಗಿತ್ತು. ಆತ್ಮರಕ್ಷಣೆಯ ವಿಚಾರದಲ್ಲಿದ್ದ ಪೊಲೀಸರು, ಪೊಲೀಸರಿಗೆ ಬುದ್ಧಿ ಕಲಿಸಬೇಕು ಎಂದು ಓಡುತ್ತಿದ್ದ ರೈತರು ಕರಡಿಯನ್ನು ಗಮನಿಸಲಿಲ್ಲ. ಓಡುತ್ತಿದ್ದ ಕರಡಿ ಕೂಡ ಬಾವಿಯನ್ನು ಗಮನಿಸದೆ ಅದಕ್ಕೆ ಬಿದ್ದಿತ್ತು. ಜನರಿಂದ ತನ್ನ ಪ್ರಾಣ ಉಳಿದರೆ ಸಾಕು ಎಂಬ ಭೀತಿಯಿಂದ ಬಾವಿಯ ಒಂದು ಮೂಲೆಗೆ ಹೋಗಿ ಗೋಡೆ ಹಿಡಿದು ಕೂತಿತ್ತು. ಮೇಲೆ ನೇತಾಡುತ್ತಿರುವ ಮಾನವ ತನಗೆ ಅಪಾಯ ಮಾಡಲೇ ಬಂದಿದ್ದಾನೆ ಎಂಬ ಆತಂಕ ಅದಕ್ಕೆ ಬಂದಿರಬಹುದು. ಹಾಗಾಗಿ ಅದು ತನ್ನ ಮೇಲೆ ಎರಗಬಹುದಾದ ಮಾನವನಿಗೆ ಪ್ರತಿರೋಧ ಒಡ್ಡಲು ಸಿದ್ಧವಾಗಿ ತನ್ನ ಮೊನಚಾದ ಕೋರೆಗಳನ್ನು ಹೊರಗೆ ತೋರಿಸಿ ಇನ್ಸ್ಪೆಕ್ಟರ್ಗೆ ಹೆದರಿಸುವ ಭಂಗಿಯಲ್ಲಿತ್ತು. ಕೆಳಗೆ ನೀರಿನಲ್ಲಿ ಕರಡಿಯ ಹಾವಭಾವ ನೋಡಿದ ಸಬ್ಇನ್ಸ್ಪೆಕ್ಟರ್ಗೆ ಹೃದಯ ಬಾಯಿಗೆ ಬಂದಂತಾಯಿತು. ಮೇಲೆ ಹತ್ತಲು ಸಾಧ್ಯವಿಲ್ಲ. ಕೆಳಗೆ ಹಾರಿ ಪಾರಾಗಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಸಿಕ್ಕಿದ ಅವರು ದಿಕ್ಕು ಕಾಣದೆ ಮರದ ಕೊಂಬೆ ಹಿಡಿದು ನೇತಾಡುತ್ತಿದ್ದರು.
ರೈತರಿಂದ ತಪ್ಪಿಸಿಕೊಂಡ ಪೊಲೀಸ್ ಪೇದೆಗಳು ಹೇಗೋ ಠಾಣೆ ಸೇರಿದರು. ಎಲ್ಲ ಪೇದೆಗಳೂ ಬಂದಿದ್ದರು ಆದರೆ ಒಬ್ಬ ಸಬ್ಇನ್ಸ್ಪೆಕ್ಟರ್ ಮಾತ್ರ ಬಂದಿರಲಿಲ್ಲ. ಈ ವಿಷಯ ಮೇಲಧಿಕಾರಿಗಳಿಗೂ ತಿಳಿಯಿತು. ಕೋಪದಲ್ಲಿದ್ದ ರೈತರು ಸಬ್ ಇನ್ಸ್ಪೆಕ್ಟರ್ರನ್ನು ಏನಾದರೂ ಮಾಡಿರಬಹುದೇ ಎಂಬ ಶಂಕೆ ಎಲ್ಲರಲ್ಲೂ ಮೂಡಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ಮತ್ತು ಆಯುಧಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿತು. ಪೊಲೀಸರ ಮಧ್ಯರಾತ್ರಿ ದಾಳಿಯಿಂದ ಗ್ರಾಮಸ್ಥರೂ ಹೆದರಿ ಊರು ಬಿಟ್ಟು ನಾಪತ್ತೆಯಾದರು.
ಸಂಜೆ ಪೊಲೀಸರನ್ನು ಓಡಿಸಿಕೊಂಡು ಬಂದ ಪ್ರದೇಶವನ್ನೆಲ್ಲಾ ಹುಡುಕುತ್ತಿರಬೇಕಾದರೆ ಬಾವಿ ಕಾಣಿಸಿತು. ಅದರ ಒಳಗಿನಿಂದ ಇನ್ಸ್ಪೆಕ್ಟರ್ ಮಹಾಶಯರ ಧ್ವನಿ ಕೇಳಿದ್ದೇ ತಡ ಎಲ್ಲರೂ ಅತ್ತ ಧಾವಿಸಿದರು. ಮೇಲೆ ಜನರ ಓಡಾಟ ಕಂಡ ಕರಡಿ ತನ್ನ ಮೇಲೆ ದಾಳಿ ಮಾಡಲು ಮಾನವ ಪ್ರಾಣಿಗಳಷ್ಟೂ ಒಟ್ಟಾಗಿ ಬರುತ್ತಿವೆ ಎಂದೇ ಭಾವಿಸಿತೇನೋ. ಬಾವಿಯಲ್ಲೆಲ್ಲ ಒಮ್ಮೆ ಓಡಾಡಿ ಕೊನೆಗೂ ಮೆಟ್ಟಿಲಿರುವುದನ್ನು ಕಂಡು ಅದರ ಮೂಲಕ ಮೇಲೆ ಹತ್ತಿ ಬಂದು ಓಡಿ ನಾಪತ್ತೆಯಾಯಿತು. ನಂತರ ಬಾವಿಗೆ ಇಳಿದ ಪೊಲೀಸರು ಕೊಂಬೆ ಹಿಡಿದು ನೇತಾಡುತ್ತಿದ್ದ ಇನ್ಸ್ಪೆಕ್ಟರ್ರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ರೈತರ ಆಕ್ರೋಶಕ್ಕೆ ತುತ್ತಾಗಿ ಬಾವಿಗೆ ಬಿದ್ದು, ಕರಡಿಯ ಕೈಗೆ ಸಿಗದೆ ಪಾರಾಗಿ ಬಂದ ಆ ಇನ್ಸ್ಪೆಕ್ಟರ್ ಇನ್ನೂ ವೃತ್ತಿನಿರತರಾಗಿರುವ ಕಾರಣ ಅವರ ಹೆಸರನ್ನು ಇಲ್ಲಿ ಮರೆಮಾಚಲಾಗಿದೆ. ನಂತರ ಅವರ ಹೆಸರಿನ ಮೊದಲು 'ಕರಡಿ' ಪದ ಸೇರಿಕೊಂಡಿತು ಎಂಬುದು ವಿಶೇಷ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com