ಚೆಲ್ಲಾಟ ಬೇಡ, ಸಹಾಯ ಮಾಡಿ
ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿಕೊಂಡಾಗ ಅವರನ್ನು ಆ ಕಷ್ಟದಿಂದ ಪಾರುಮಾಡಲೆಂದೇ ಅಗ್ನಿಶಾಮಕ ದಳ ಸಿಬ್ಬಂದಿ ಇದ್ದಾರೆ.
ಆದರೆ, ಅವರನ್ನು ಸದುಪಯೋಗಪಡಿಸಿಕೊಳ್ಳದ ಸಾಕಷ್ಟು ಮಂದಿ ಅವರಿಗೆ ತೊಂದರೆ ನೀಡುತ್ತಾರೆ. ಹುಸಿಕರೆಗಳನ್ನು ಮಾಡಿ ಅವರಿಗೆ ತೊಂದರೆ ನೀಡಿ, ಚೆಲ್ಲಾಟವಾಡುತ್ತ ಖುಷಿ ಪಡುವವರೇ ಹೆಚ್ಚು. ಜನರಿಗೆ ನೆರವು ನೀಡಿ ಅವರ ಸೇವೆ ಮಾಡುವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಹುಸಿಕರೆಗಳನ್ನು ಮಾಡುವ ಯುವಕರು ಅದನ್ನು ನಿಲ್ಲಿಸಬೇಕು. ಕರೆ ಮಾಡಿ ದುರಂತದ ಬಗ್ಗೆ ಮಾಹಿತಿ ನೀಡಿದರೆ ಅದರಿಂದ ಪ್ರಯೋಜನವಾಗುವುದಿಲ್ಲ. ಕರೆ ಮಾಡಿದ ವ್ಯಕ್ತಿ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅನಾಹುತ ಸಂಭವಿಸಿರುವುದು ಎಲ್ಲಿ ಎಂಬ ಬಗ್ಗೆಯೂ ವಿಳಾಸ ನೀಡಬೇಕು.
ಸಾಕಷ್ಟು ಪ್ರಕರಣಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಳಾಸ ತಿಳಿದಿರುವುದಿಲ್ಲ. ಅಂತಹ ಸ್ಥಳಗಳಿಗೆ ತಲುಪುವ ವೇಳೆಗೆ ತಡವಾಗುತ್ತದೆ. ಆಗ ಅನಾಹುತ, ಸಾವುನೋವು ಹೆಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡುವವರು ತಮ್ಮ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಬೇಕು. ಒಂದು ವೇಳೆ ವಿಳಾಸ ತಿಳಿಯದಿದ್ದಲ್ಲಿ, ಆ ಸಿಬ್ಬಂದಿ ನಿಮಗೆ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ.
ಮೊಬೈಲ್‌ನಿಂದ ಅಥವಾ ತಮ್ಮದೇ ಮನೆಯ ಸ್ಥಿರ ದೂರವಾಣಿಯಿಂದ ಕರೆ ಮಾಡಿದರೆ ಅದು ಅಗ್ನಿಶಾಮಕದಳ ಸಿಬ್ಬಂದಿಗೆ ಸಿಗುತ್ತದೆ. ಆದರೆ, ಕಾಯಿನ್ ಬೂತ್‌ಗಳಿಂದ, ಎಸ್‌ಟಿಡಿ ಬೂತ್‌ಗಳಿಂದ ಕರೆ ಮಾಡಿದಾಗ ಮರೆಯದೇ ದೂರವಾಣಿ ಸಂಖ್ಯೆ ನೀಡಿ, ಇಲ್ಲವೇ ವಿಳಾಸವನ್ನು ಸರಿಯಾಗಿ ಹೇಳಿ. ಅವರು ಬೇಗ ತಲುಪಲು ಅವಕಾಶ ಕಲ್ಪಿಸಿ. ಸಾಧ್ಯವಾದಲ್ಲಿ ಅವರು ಬರುವ ಮುನ್ನ ಮುಂಜಾಗ್ರತಾ ಕ್ರಮಕೈಗೊಳ್ಳಿ ಇಲ್ಲವೇ ಅನಾಹುತ ತಪ್ಪಿಸಲು ಮುಂದಾಗಿ.
-ಶಾಂತ ತಮ್ಮಯ್ಯ