ಜಂಬೆ ಚಿತ್ರದ ಬಿಂಬ
ನಾವು ನಮ್ಮ ಊರನ್ನು ಮರೆತು ಯುಗಗಳಾದವು. ಕಾರ್ಖಾನೆಯಲ್ಲಿ ಅಕ್ಕಿ ಹುಟ್ಟದು, ಕಂಪ್ಯೂಟರ್‌ನಲ್ಲಿ ಬಾಳೆ ಬೆಳೆಯಲು ಸಾಧ್ಯವಿಲ್ಲ. ನಮ್ಮ ಊರನ್ನು ಮರೆತರೆ ಅದು ಬದುಕಾ? ಎನ್ನುವ ಹಾಡಿನ ಸಾಲುಗಳು. ಇದೇ ಆಶಯವನ್ನು ಹೊತ್ತಿರುವ ಕಿರು ಚಿತ್ರ 'ಊರು'.
ತಾನು ತಯಾರಿಸಿದ ಚಿತ್ರವನ್ನು ಕಿರು ಚಿತ್ರೋತ್ಸವಗಳಿಗೆ ಕಳುಹಿಸುವ ಆಸೆ ಯುವ ನಟ, ನಿರ್ದೇಶಕ ಮಂಜುನಾಥ ಜಂಬೆಯದು. ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಊರು ಬಿಟ್ಟು ಪಟ್ಟಣಗಳ ಕಡೆ ನಡೆಯುತ್ತಿರುವ ಯುವ ಜನರಿಗೆ ಅರಿವು ಮೂಡಿಸುವ ಆಸೆ. ಜಂಬೆ, ರಂಗಭೂಮಿ ಹಾಗೂ ಟಿವಿ ಸೀರಿಯಲ್ ಕ್ಷೇತ್ರಗಳಲ್ಲೂ ಪಳಗಿದ ಹುಲಿ.
ಕೆಳದಿ ಸಮೀಪದ ಅಡ್ಡೇರಿಯ ಮಂಜುನಾಥ್‌ಗೆ ನಟನೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಹುಟ್ಟಿಕೊಂಡದ್ದು ಹೀಗೆ: ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಎರಡು ದೆವ್ವಗಳ ಕಥೆ ಆಧರಿಸಿದ ನಾಟಕದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ ಮೇಲೆ. ಪ್ರೌಢಶಾಲೆ ಬಳಿಕ ನೀನಾಸಂಗೆ ಹೋಗಬೇಕೆಂದಿದ್ದ ಕನಸು ಕರಗಿತು.
ಅನಿವಾರ್ಯವಾಗಿ ವಾಣಿಜ್ಯದಲ್ಲಿ ಪಿಯುಸಿ. ಪಿಯುಸಿ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಎರಡು ವರ್ಷದ ಅನಿಮೇಷನ್ ಕೋರ್ಸ್. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಹೈದರಾಬಾದ್‌ನ ಕಂಪನಿಗೆ ಸೇರ್ಪಡೆ. ಅಲ್ಲಿ ಮೂರು ವರ್ಷ ಕೆಲಸ ನಿರ್ವಹಿಸುತ್ತಲೇ ಮೈಸೂರಿನ ಕಾಲೇಜಿನಲ್ಲಿ ಪದವಿ. ಮತ್ತೆ ನಾಟಕವೇ ಸೂಕ್ತ ಎಂದು ಕೆಲಸ ಬಿಟ್ಟು ಮಂಡ್ಯ ರಮೇಶ್‌ರ ನಟನಾ ನಾಟಕ ಶಾಲೆಗೆ ಸೇರಿದರು.
ನಟನಾದಲ್ಲಿ ಒಂದು ವರ್ಷ ನಟನೆ, ವಸ್ತ್ರವಿನ್ಯಾಸ, ಬಣ್ಣಗಾರಿಕೆ ತರಬೇತಿ. ಈ ಮಧ್ಯೆ ರಂಗಾಯಣಕ್ಕೆ ತಯಾರಿಸಿದ ವೈದೇಹಿಯವರ ನಾಟಕ 'ಸತ್ರು ಅಂದ್ರೆ ಸತ್ರ'ದಲ್ಲಿ ಮುಖ್ಯ ಪಾತ್ರ. ಈ ನಾಟಕ ಪ್ರದರ್ಶನಕ್ಕೆ ಬಂದ ಸಿಹಿಕಹಿ ಚಂದ್ರು ಝೀ ಕನ್ನಡದ ಹಾಸ್ಯ ಧಾರಾವಾಹಿ ಪಾಂಡುರಂಗ ವಿಠಲದಲ್ಲಿ ಅವಕಾಶ ನೀಡಿದರು. ಸುಮಾರು 300 ಕಂತುಗಳ ಕಾಲದಲ್ಲಿ ನಿರ್ದೇಶಕ ಮುನಿಜನಬಲ, ನಟ ಜಹಾಂಗೀರ್‌ರಿಂದ ಕೆಲ ಪಾಠ. ಮತ್ತೆ ನಟನಾದಲ್ಲಿ ರಂಗಕೆಲಸ. ಹಾಸ್ಯ ಧಾರಾವಾಹಿ 'ಪಂಚರಂಗಿ ಪೋಂ ಪೋಂ'ನಲ್ಲೂ ಕಾಣಿಸಿಕೊಂಡರು.
ಆರು ವರ್ಷಗಳ ಕೆಳಗೇ ಸಿನಿಮಾಗೆ ಕಥೆ ತಯಾರಿಸಿ ಇಟ್ಟುಕೊಂಡಿದ್ದರು. ಅದೇ ವೇಳೆ ಸಿಕ್ಕಿದ ಹೊಸನಗರದ ವೃಷಾಂಕ್ ಅವರು ಬರೆದ ಕತೆಯಲ್ಲೂ ತನ್ನ ಕತೆಯ ಸಾಮ್ಯ ಇರುವುದು ಕಾಣಿಸಿತು. ಎರಡೂ ಕತೆಗಳ ಕೆಲವಂಶಗಳನ್ನು ಸೇರಿಸಿಕೊಂಡು ಚಿತ್ರ ಮಾಡಿದ್ದಾರೆ. ವೃಷಾಂಕ್ ಚಿತ್ರದ ಮೂರು ಹಾಡು ಬರೆದರು. ಮಾರ್ಚ್‌ನಲ್ಲಿ ಶಿವಮೊಗ್ಗ ತೀರ್ಥಹಳ್ಳಿ ಆಸುಪಾಸು ಚಿತ್ರೀಕರಣ ಮುಗಿಸಿದ್ದಾರೆ. ಚಂದನ್ ಸಂಭಾಷಣೆ, ಕ್ಯಾಮೆರಾ ಕೈಚಳಕ ವಿಷ್ಣುಪ್ರಸಾದ್ ತೋರಿಸಿದ್ದಾರೆ. ನಿರ್ದೇಶನದ ಜತೆ ನಟನಾಗಿಯೂ ಜಂಬೆ ಕಾಣಿಸಿದ್ದಾರೆ.
- ಶ್ರೀನಿಧಿ ಎನ್. ಪುತ್ತೂರು