ಕೈದಿ ಮತ್ತು ಇರುವೆ
ಒಬ್ಬ ಕೈದಿ ಹತ್ತು ವರ್ಷಗಳಿಂದ ಒಂಟಿಯಾಗಿ ಸೆರೆಮನೆಯಲ್ಲಿದ್ದ. ಅವನು ಈ ದೀರ್ಘಾವಧಿ ಸೆರೆವಾಸದಲ್ಲಿ ಯಾರನ್ನೂ ಕಂಡಿರಲಿಲ್ಲ ಮತ್ತು ಯಾರೊಡನೆಯೂ ಮಾತಾಡಿರಲಿಲ್ಲ. ಗೋಡೆಯಲ್ಲಿ ಕೊರೆದ ಒಂದು ತೂತಿನ ಮೂಲಕ ಅವನಿಗೆ ಪ್ರತಿದಿನ ಆಹಾರವನ್ನು ನೀಡಲಾಗುತ್ತಿತ್ತು.
ಒಂದು ದಿನ ಅವನ ಕೋಣೆಗೆ ಒಂದು ಇರುವೆ ಬಂತು. ಅದು ಅವನ ಕೋಣೆಯ ಸುತ್ತ ಹೋಗುತ್ತಿರುವಾಗ ಅವನು ಅದರತ್ತ ಆಕರ್ಷಿತನಾಗಿ ಅದರ ಬಗ್ಗೆ ವಿಚಾರಮಗ್ನನಾದ. ಅದನ್ನು ಚೆನ್ನಾಗಿ ಗಮನಿಸಲು ಅವನು ಆ ಇರುವೆಯನ್ನು ತನ್ನ ಅಂಗೈಯಲ್ಲಿರಿಸಿದ. ಅದಕ್ಕೆ ಒಂದೆರಡು ಕಾಳುಗಳನ್ನಿತ್ತ ಮತ್ತು ರಾತ್ರಿ ವೇಳೆ ಅದನ್ನು ತನ್ನ ಟಿನ್ನಿನ ಕಪ್ನ ಕೆಳಗೆ ಇರಿಸಿದ.
ಒಂದಿ ದಿನ ಫಕ್ಕನೆ ಅವನ ಮನಸ್ಸಿಗೆ ಹೊಳೆಯಿತು: ಒಂದು ಇರುವೆಯ ಸೌಂದರ್ಯವನ್ನು ಕಂಡುಕೊಳ್ಳಲು ತನಗೆ ಹತ್ತು ವರ್ಷಗಳಷ್ಟು ದೀರ್ಘಾವಧಿಯ ಒಂಟಿ ಸೆರೆವಾಸ ಬೇಕಾಯಿತು.
ನಾಯಿಬುದ್ಧಿ
ತನ್ನ ಸ್ನೇಹಿತನೊಂದಿಗೆ ಇಸ್ಪೀಟ್ ಆಟ ಆಡುತ್ತಿದ್ದ ನಾಯಿಯನ್ನು ಕಂಡು ಒಬ್ಬ ಹೇಳಿದ, 'ಎಂತಹ ಬುದ್ಧಿವಂತ ನಾಯಿ ನಿನ್ನದು!'
ಅವನ ಸ್ನೇಹಿತ ಉತ್ತರಿಸಿದ, 'ಅದು ಕಾಣುವಷ್ಟೇನೂ ಬುದ್ಧಿವಂತವಾಗಿಲ್ಲ. ಒಳ್ಳೆಯ ಎಲೆಗಳು ಸಿಕ್ಕಿದಾಗಲೆಲ್ಲ ಅದು ತನ್ನ ಬಾಲವನ್ನು ಅಲ್ಲಾಡಿಸುತ್ತದೆ.'
- ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ