ಸಾವಿರದ ಸರಿಗಮ
ಗಂಡ-ಹೆಂಡತಿ ಮಧ್ಯೆ ನಿತ್ಯ ನಡೆಯುವ ಜಗಳಗಳನ್ನೇ ಕೇಂದ್ರವಾಗಿಟ್ಟುಕೊಂಡು...
ಗಂಡ-ಹೆಂಡತಿ ಮಧ್ಯೆ ನಿತ್ಯ ನಡೆಯುವ ಜಗಳಗಳನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ನಾಟಕ 33 ವರ್ಷಗಳಾದರೂ ಮುನ್ನುಗ್ಗುತ್ತಲೇ ಇದೆ.
ಆಡ್ತಾ ಆಡ್ತಾ ನಾಟ್ಕ. ಮೂಲದಲ್ಲಿ ಬರೆದದ್ದು ಅರವತ್ತೇ ನಿಮಿಷಕ್ಕೆ. ಮೂವತ್ತಮೂರು ವರ್ಷಗಳಲ್ಲಿ ಸಂಭಾಷಣೆಗಳನ್ನು ಸೇರಿಸಿಕೊಳ್ಳುತ್ತ ಸೇರಿಸಿಕೊಳ್ಳುತ್ತ ಹಿಗ್ಗಿದ್ದು ಬರೋಬ್ಬರಿ ಎರಡೂವರೆ ಗಂಟೆಗೆ!
ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿದ್ದ ವಿಜಿಗೆ ಸಮಾಜದ ಅಂಕುಡೊಂಕುಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ. 'ಸಂಸಾರದಲ್ಲಿ ಸರಿಗಮ' ಹುಟ್ಟಿದ್ದೂ ಇಂಥ ಸೂಕ್ಷ್ಮ ಅವಲೋಕನದಿಂದಲೇ. 1980ರಲ್ಲಿ ಈ ನಾಟಕ ಬರೆದು, ನಿರ್ದೇಶಿಸಿ, ತಾವೇ ಮುಖ್ಯ ಪಾತ್ರದಲ್ಲಿ ನಟಿಸಿ ರಂಗಕ್ಕೆ ತಂದಾಗ ಇದೊಂದು ಯಶಸ್ವಿ ಪ್ರಯೋಗವಾಗುತ್ತದೆ ಎನ್ನುವ ವಿಶ್ವಾಸ ಖುದ್ದು ವಿಜಿಗೇ ಇರಲಿಲ್ಲ.
ಮೂಲ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳದೆ, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತ, ನೂರು..ಐನೂರು..ಸಾವಿರ ಪ್ರಯೋಗಗಳನ್ನು ದಾಟಿ 1297ನೇ ಪ್ರದರ್ಶನದ ಹೊಸ್ತಿಲಿಗೆ ಬಂದು ನಿಂತಿದೆ ಈ ನಾಟಕ. ಹವ್ಯಾಸಿ ರಂಗತಂಡವೊಂದು ಸುದೀರ್ಘ ಅವಧಿಯಿಂದ ಒಂದೇ ನಾಟಕ ಪ್ರದರ್ಶಿಸುತ್ತಿರುವುದು, ಅಷ್ಟೂ ಪ್ರದರ್ಶನಗಳಲ್ಲಿ ಒಬ್ಬನೇ ಕಲಾವಿದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕನ್ನಡದ ಮಟ್ಟಿಗಂತೂ ದಾಖಲೆಯೇ ಇರಬೇಕು. ಈ ನಾಟಕದಿಂದಾಗಿಯೇ ವಿಜಿ ಜತೆ ಸರಿಗಮ ಕೂಡ ಸೇರಿಕೊಂಡಿರುವುದು.
ಕಿರುತೆರೆ, ಹಿರಿತೆರೆಗಳಲ್ಲಿ ಸಕ್ರಿಯರಾದರೂ ಸರಿಗಮ ವಿಜಿ ರಂಗಭೂಮಿಯ ನಂಟು ಬಿಡಲಿಲ್ಲ. ಅವರ 'ಯಶಸ್ವಿ ಕಲಾವಿದರು' ತಂಡ ನಾಡಿನ ಮೂಲೆಮೂಲೆಗಳಲ್ಲೂ ಈ ನಾಟಕ ಪ್ರದರ್ಶಿಸಿದೆ. ನೂರಾರು ಸಂಘ ಸಂಸ್ಥೆಗಳು, ಅನಾಥಾಶ್ರಮಗಳ ಸಹಾಯಾರ್ಥ ಪ್ರದರ್ಶನಗಳನ್ನು ನೀಡಿದೆ. ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್ಗಳಲ್ಲೂ 'ಸರಿಗಮ' ಹಾಡಿದೆ. ವರ್ಷದ ಹಿಂದೆ ಅಮೆರಿಕದಲ್ಲಿ ಅಲ್ಲಿನ ಕನ್ನಡಿಗರಿಗೇ ತರಬೇತಿ ನೀಡಿ ರಂಗದ ಮೇಲೆ ಪ್ರಯೋಗಿಸಿದ್ದಾರೆ ವಿಜಿ.
ಹೊಂದಾಣಿಕೆಯೇ ಬದುಕು
'ಸಂಸಾರದಲ್ಲಿ ಸರಿಗಮ'ದ ಕಥೆ ಸರಳವಾದದ್ದು. ಎರಡು ಸಂಸಾರ. ಮೂರ್ತಿ (ವಿಜಿ) ಮತ್ತು ಸರಸ್ವತಿ (ಶ್ರೀದೇವಿ) ಅವರದು ಹಿರಿಯರೇ ನಿಶ್ಚಯಿಸಿದ ಮದುವೆ. ಸರಸ್ವತಿ ಹಳ್ಳಿ ಹುಡುಗಿ. ರಮೇಶ್ ಮತ್ತು ಸ್ಟೆಲ್ಲಾ ಅವರದು ಪ್ರೇಮ ವಿವಾಹ. ಗಂಡನನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಮಾಡರ್ನ್ ಆಗುವಂತೆ ಸರಸ್ವತಿಗೆ ಅಕ್ಕಪಕ್ಕದವರು ತಲೆ ತುಂಬುತ್ತಾರೆ. ಮೈತುಂಬ ಸೀರೆ ಉಟ್ಟುಕೊಳ್ಳುತ್ತಿದ್ದವಳು ಚೂಡಿದಾರ, ಜೀನ್ಸ್, ಮಿಡಿ...ಕೊನೆಗೆ ಫ್ರಾಕ್ಗೆ ಬರುತ್ತಾಳೆ. ಸಂಪ್ರದಾಯಗಳನ್ನು ಒಂದೊಂದಾಗಿ ಬಿಡುತ್ತಾಳೆ. ಅತ್ತ ಸ್ಟೆಲ್ಲಾ ಬೇರೆ ಧರ್ಮೀಯಳಾದರೂ ಗಂಡನ ಮನೆಯ ಸಂಪ್ರದಾಯಗಳನ್ನು ಒಂದೊಂದಾಗಿ ಕಲಿತುಕೊಳ್ಳುತ್ತ, ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಷ್ಟು ಪಳಗುತ್ತಾಳೆ. ದಿನೇ ದಿನೆ ಸರಸ್ವತಿ ಸಂಸಾರದಲ್ಲಿ ಬಿರುಕು ಮೂಡಲಾರಂಭಿಸಿದರೆ, ಸ್ಟೆಲ್ಲಾ ದಾಂಪತ್ಯ ಜೀವನ ಬಲಗೊಳ್ಳುತ್ತ, ಸುಮಧುರವಾಗಿ ಸಾಗುತ್ತದೆ. ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಯಾವುದೇ ಆಗಲಿ, ದಂಪತಿ ಮಧ್ಯೆ ಹೊಂದಾಣಿಕೆ ಇದ್ದರೆ ದಾಂಪತ್ಯ ಸುಗಮವಾಗಿರುತ್ತದೆ ಎನ್ನುವುದು ನಾಟಕದ ಸಂದೇಶ.
ಅಪ್ಪಟ ಕಾಮಿಡಿ ನಾಟಕ. ಸಹಜ ಸಂಭಾಷಣೆಗಳೇ ಜೀವಾಳ. ಅವು ಜನಜೀವನದ ಮಧ್ಯದಲ್ಲೇ ರೂಪುಗೊಂಡವು. ಒಮ್ಮೆ ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಜತೆ ಹೋಗುತ್ತಿದ್ದರಂತೆ ವಿಜಿ. ಮ್ಯಾನೇಜರ್ ಸಪ್ಪಗಿದ್ದರು. ಸಹಜವಾಗಿ 'ಏಕೆ ಹೀಗಿದ್ದೀರಿ' ಎಂದು ಇವರು ಕೇಳಿದರು. '15 ದಿನಗಳಿಂದ ಪ್ರೊಡ್ಯೂಸರ್ ಹಣವನ್ನೇ ಕೊಟ್ಟಿಲ್ಲ. ವಾರದಿಂದ ಮನೆಯಲ್ಲಿ ಕುಕ್ಕರ್ ತರುವಂತೆ ಗಲಾಟೆ. ನನಗೆ ನಿಕ್ಕರ್ ಕೊಳ್ಳಲಿಕ್ಕೇ ದುಡ್ಡಿಲ್ಲ, ಇನ್ನು ಹೆಂಡತಿಗೆ ಕುಕ್ಕರ್ ಕೊಡಿಸೋದು ಹೇಗೆ?' ಎಂದರು. ಮುಂದಿನ ಪ್ರದರ್ಶನದಲ್ಲಿ ಈ ಡೈಲಾಗ್ ಸೇರಿತು. ಈಗ ಅದು ಅತ್ಯಂತ ಜನಪ್ರಿಯ ಸಂಭಾಷಣೆ. 2-3 ಮಕ್ಕಳಾದರೂ ತಾಯಂದಿರು ಜಿಮ್ಗೆ ಹೋಗುವುದು ಇತ್ಯಾದಿ ಲೇಟೆಸ್ಟ್ ಟ್ರೆಂಡ್ಗಳನ್ನೂ ಸೇರಿಸಿಕೊಳ್ಳುತ್ತಿದ್ದಾರೆ ವಿಜಿ. ವೀಕ್ಷಕರಲ್ಲಿ ಪ್ರತಿಯೊಬ್ಬರಿಗೂ ಇದು ನಮ್ಮದೇ ಕಥೆ ಅನ್ನಿಸುವುದರಿಂದ ನಾಟಕ ಯಶಸ್ವಿಯಾಗಿ ಮುನ್ನುಗ್ಗುತ್ತಿದೆಯಂತೆ.
ಇದೂ ವಿಕ್ರಮ
ಆರಂಭದ ಎರಡು ಪ್ರದರ್ಶನಗಳಲ್ಲಿ ಮಂಜುಳಾ ಎಂಬ ಕಲಾವಿದ ವಿಜಿಗೆ ಜತೆಯಾಗಿ ನಟಿಸುತ್ತಿದ್ದರು. ನಂತರ ಬಂದವರು ತಾರೆ ಭವ್ಯಾ. ಅವರು ನೂರಾರು ಪ್ರದರ್ಶನಗಳಲ್ಲಿ ಸಾಥ್ ನೀಡಿದರು. ನಂತರ ಉಮಾಶ್ರೀ ಎಂಟು ವರ್ಷ 600ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಕಾಣಿಸಿಕೊಂಡರು. ಎರಡು ವರ್ಷದಿಂದ ಅಂದಾಜು 400 ಪ್ರದರ್ಶನಗಳಲ್ಲಿ ಕಿರುತೆರೆ ನಟಿ ಶ್ರೀದೇವಿ ಇದ್ದಾರೆ. ಆಶಾಲತಾ, ರೇಖಾದಾಸ್, ಸಿಹಿಕಹಿ ಗೀತಾ, ಪ್ರಮೀಳಾ ಜೋಷಾಯ್, ಕಿರುತೆರೆ ನಿರೂಪಕಿ ಸುನಂದಾ ಇವರೆಲ್ಲ 'ಸಂಸಾರದಲ್ಲಿ ಸರಿಗಮ'ದ 'ಯಶಸ್ವಿ' ಪಯಣದಲ್ಲಿದ್ದವರೇ. ರವೀಂದ್ರ, ಮುರಳಿ, ನೀಲಕಂಠ ಕೂಡ ತಂಡದ ಕಾಯಂ ಕಲಾವಿದರು. ಈಗೀಗ ರಮೇಶ್- ಸ್ಟೆಲ್ಲಾ ಜೋಡಿಯಾಗಿ ರವೀಂದ್ರ, ಸುನಂದಾ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀದೇವಿ ಅಥವಾ ಸುನಂದಾಗೆ ಅನನುಕೂಲವಾದಾಗ ರೇಖಾದಾಸ್ ಇರುತ್ತಾರೆ.
ಸಾಹಸ ಪ್ರಧಾನ ಸಿನಿಮಾವೊಂದರ ಚಿತ್ರೀಕರಣದಲ್ಲಿ ಅಪಘಾತವಾಗಿ ಕಾಲಿಗೆ ತೀವ್ರ ಏಟು ಬಿದ್ದಿದ್ದರಿಂದ ಕೆಲಕಾಲ '...ಸರಿಗಮ'ದಿಂದ ದೂರವಿದ್ದರು ವಿಜಿ. ಈಗೇನೂ ಕಾಲು ಪೂರ್ತಿ ವಾಸಿಯಾಗಿಲ್ಲ. ಆದರೂ ವಿಜಿ ರಂಗದ ಮೇಲೆ ನಟಿಸುತ್ತ, ನಗಿಸುತ್ತ ಇದ್ದಾರೆ. ನಾಟಕ 2000 ಪ್ರದರ್ಶನಗಳತ್ತ ದಾಪುಗಾಲಿಡುತ್ತಿದೆ.
ವಿಜಿ ಸಂಪರ್ಕ: 9945069993, 080- 23598444.
ಯುಗಾದಿ ಬೇವು ಬೆಲ್ಲ
ಯುಗಾದಿಯಂದು ರವೀಂದ್ರ ಕಲಾಕ್ಷೇತ್ರ ಬುಕ್ ಮಾಡಲು ಹೋದರೆ ಸಿಗುವುದಿಲ್ಲ. ಏಕೆಂದರೆ ಅಂದು ಸರಿಗಮ ವಿಜಿ ಅವರಿಗೇ ಮೀಸಲಾಗಿರುತ್ತದೆ. 21 ವರ್ಷಗಳಿಂದ ನಿರಂತರವಾಗಿ ಯುಗಾದಿಯಂದು ಕಲಾಕ್ಷೇತ್ರದಲ್ಲಿ 'ಸಂಸಾರದಲ್ಲಿ ಸರಿಗಮ' ಉಚಿತ ಪ್ರದರ್ಶನ ನೀಡುವ ವಿಜಿ, ಅಂದು ಪ್ರೇಕ್ಷಕರಿಗೆ ಬೇವು-ಬೆಲ್ಲ, ಮಹಿಳಾ ಪ್ರೇಕ್ಷಕರಿಗೆ ಅರಿಶಿಣ-ಕುಂಕುಮ ನೀಡುತ್ತಾರೆ. ಸಮಾಜದ ಪ್ರಮುಖರು ಅಂದು ನಾಟಕ ನೋಡಲು ತಪ್ಪದೇ ಹಾಜರಿರುತ್ತಾರೆ ಎನ್ನುವುದೂ ವಿಶೇಷವೇ.
ಈ ವರ್ಷ ಮಗನ ಮದುವೆ ಇದ್ದ ಕಾರಣ ಯುಗಾದಿ ಪ್ರದರ್ಶನ ಏರ್ಪಡಿಸಿರಲಿಲ್ಲ. ಬದಲಿಗೆ ಇಂದು (ಜೂನ್ 24) ಸಂಜೆ 6.15ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ. ಇದು 1297ನೇ ಪ್ರದರ್ಶನ. ಸಚಿವರಾದ ಅಂಬರೀಶ್ ಮತ್ತು ಉಮಾಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಸಮ್ಮುಖದಲ್ಲಿ ಅವರಿಗೆ ಗೌರವಾರ್ಪಣೆಯೂ ನಡೆಯಲಿದೆ.
- ರಾಜೇಶ ಮುಂಡಿಗೇಸರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.