ಪಿಕ್ನಿಕ್ ಪಾಠ
ಕರಾವಳಿಯಲ್ಲಿರುವ ಪ್ರಮುಖ ನಿಸರ್ಗಧಾಮ ಪಿಲಿಕುಳ. ಇದುವರೆಗೆ ವೀಕೆಂಡ್ ಪಿಕ್ನಿಕ್ ಪ್ರಿಯರ ತಾಣವಾಗಿದ್ದದ್ದು ಇನ್ನು ಮುಂದೆ ಶೈಕ್ಷಣಿಕ ಕೇಂದ್ರವಾಗಿಯೂ ಮಿಂಚಲಿದೆ. ಆದಕ್ಕೆ ಕಾರಣ ಇಲ್ಲಿರುವ ಪ್ರಾದೇಶಿಕ ಅಧ್ಯಯನ ಕೇಂದ್ರ.
ಪಿಲಿಕುಳದಲ್ಲಿ ತಲೆ ಎತ್ತಿರುವ ರಾಜ್ಯದ 2ನೇ ಪ್ರಾದೇಶಿಕ ಅಧ್ಯಯನ ಕೇಂದ್ರವನ್ನು ರಾಷ್ಟ್ರೀಯ ವಿಜ್ಞಾನ ಮಂಡಳಿ ಜತೆ ಜೋಡಿಸಿ ಶೈಕ್ಷಣಿಕ ಅಧ್ಯಯನ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ. ಧಾರವಾಡ ಹೊರತುಪಡಿಸಿದರೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಇರುವುದು ಮಂಗಳೂರಲ್ಲಿ. ಇನ್ನೊಂದು ಕೇಂದ್ರ ಮೈಸೂರಿನಲ್ಲಿ ಸಾಪನೆಯಾಗಲಿದೆ.
ಪಿಲಿಕುಳ ನಿಸರ್ಗಧಾಮ ಮಡಿಲಿನ 5 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾಮಗಾರಿ ಅಂತಿಮ ಹಂತದಲ್ಲಿದೆ. ಸುಮಾರು ರು. 10 ಕೋಟಿ ವೆಚ್ಚ. ಇಲ್ಲಿ ಜೀವವೈವಿಧ್ಯ ಗ್ಯಾಲರಿ, ಮುಂಚೂಣಿ ತಂತ್ರಜ್ಞಾನ ಹಾಗೂ ಮನರಂಜನಾ ಜ್ಞಾನತಾಣ ರೂಪಿಸಲಾಗಿದೆ.
ಶೈಕ್ಷಣಿಕ ಟಚ್
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕಿಂತ ಇಲ್ಲಿನ ಕೇಂದ್ರ ಭಿನ್ನ. ನಿಸರ್ಗಧಾಮದಲ್ಲಿ ಇರುವುದರಿಂದ ಇದು ಶೈಕ್ಷಣಿಕ ಅಧ್ಯಯನ ಕೇಂದ್ರವಾಗುತ್ತಿದೆ. ಪಿಲಿಕುಳದ 80 ಎಕರೆ ಪ್ರದೇಶದಲ್ಲಿ ಸಸ್ಯಕ್ಷೇತ್ರ ಇದೆ. 6 ಎಕರೆಯಲ್ಲಿ ಔಷಧೀಯ ವನ, ಉಳಿದ ಕಡೆ ಅಪರೂಪದ ಸಸ್ಯಗಳಿವೆ. ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಮೂಲಿಕೆ ಸಸ್ಯಗಳನ್ನು ಇಲ್ಲಿನ ಸಸ್ಯಶಾಸ್ತ್ರ ಮ್ಯೂಸಿಯಂನಲ್ಲಿ ರಕ್ಷಿಸಲಾಗುತ್ತಿದೆ. ಇದು ಅಧ್ಯಯನಾರ್ಥಿಗಳಿಗೆ ಅನುಕೂಲ. ಹಾಗಾಗಿಯೇ ಕೇಂದ್ರದ ಜತೆ ಸಸ್ಯಕ್ಷೇತ್ರ ಸಮ್ಮಿಳನದ ಯೋಜನೆ. ಕೇಂದ್ರದಲ್ಲಿ ಮಾನವ ವಿಕಾಸ, ಗತಕಾಲದ ಇತಿಹಾಸ ಕಲಿಯುವ ಅವಕಾಶ. ಜತೆಗೆ ಈಗಿನ ನ್ಯಾನೋ, ಸ್ಯಾಟಲೈಟ್ ತಂತ್ರಜ್ಞಾನವನ್ನೂ ತಿಳಿಯಬಹುದು. ಒಮ್ಮೆಗೆ 50 ಮಂದಿಗೆ ತ್ರಿ ಡಿ ವೀಕ್ಷಣೆಗೆ ವ್ಯವಸ್ಥೆ.
ಪಿಲಿಕುಳ ನಿಸರ್ಗಧಾಮ, ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರು ಬರುತ್ತಾರೆ, ವಿದ್ಯಾರ್ಥಿಗಳೂ ಭೇಟಿ ನೀಡುತ್ತಾರೆ. ಆದರೆ ಕೇವಲ ವೀಕ್ಷಿಸಿ ಹೋಗುತ್ತಾರೆ. ಇದರಿಂದ ಅಮೂಲ್ಯ ಜ್ಞಾನದ ಸಂಗ್ರಹ ಉಪಯೋಗಕ್ಕೆ ಬರುತ್ತಿಲ್ಲ. ಇದರ ಸದುಪಯೋಗದ ನಿಟ್ಟಿನಲ್ಲಿ ಅಧ್ಯಯನ ಕೇಂದ್ರವಾಗಿ ಪರಿವರ್ತಿಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ತೀರ್ಮಾನಿಸಿದೆ. ಇದಕ್ಕೆ ಅಗತ್ಯ ಅನುದಾನದ ಅವಶ್ಯಕತೆ ಇದ್ದು, ಸರ್ಕಾರಿ ಮಟ್ಟದಲ್ಲಿ ಒಪ್ಪಂದ ಆಗಬೇಕು. ಅಥವಾ ಯಾವುದೇ ವಿಶ್ವವಿದ್ಯಾಲಯವು ಕೇಂದ್ರದ ಜತೆ ಒಡಂಬಡಿಕೆ ಮಾಡಿಕೊಳ್ಳಬಹುದು.
ಶೈಕ್ಷಣಿಕ ಉಪಯೋಗಕ್ಕೆ ಸಿಗಬೇಕು ಎಂಬ ದಿಶೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೆರೆದುಕೊಳ್ಳುವಂತೆ ಮಾಡಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ವಿಜ್ಞಾನ ಮಂಡಳಿ ಸಹಯೋಗ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರಯೋಜನವಾಗುತ್ತದೆ. ಯಾವುದೇ ವಿವಿ ಜತೆ ಈ ಕುರಿತ ಒಪ್ಪಂದಕ್ಕೆ ನಾವು ಸಿದ್ಧ.
- ಡಾ.ಕೆ.ವಿ.ರಾವ್, ಸೊಸೈಟಿ ನಿರ್ದೇಶಕ
-ಆತ್ಮಭೂಷಣ್
ಚಿತ್ರ: ರಾಜೇಶ್ ಶೆಟ್ಟಿ