ಮಕ್ಕಳಷ್ಟೇ ಅಲ್ಲ, ದೊಡ್ಡವರೂ ತಿನ್ನಿ!
ಓಟ್ಸ್ ಎನ್ನುವುದನ್ನು ಕೇಳಿಯೇ ಇರುತ್ತೀರಿ. ಬಣ್ಣಬಣ್ಣದ ಆಕರ್ಷಕ ಪ್ಯಾಕ್‌ಗಳಲ್ಲಿ ದೊರೆಯುವ ಇದು ಚಿಕ್ಕ ಮಕ್ಕಳಿಗೆ ಭಾರಿ ಇಷ್ಟ. ಕೆಲವು ಪುಟಾಣಿಗಳಿಗಂತೂ ಅದೇ ಮುಖ್ಯ ಆಹಾರ. ಅಮ್ಮಂದಿರೂ ಹಾಗೇ ಮಾಡುತ್ತಾರೆನ್ನಿ. ಮಗು ಏನಾದರೂ ತಿಂದರೆ ಸಾಕು ಅಂದುಕೊಂಡು ಇಷ್ಟಪಟ್ಟಿದ್ದನ್ನೇ ಮತ್ತೆಮತ್ತೆ ತಿನ್ನಿಸುತ್ತಾರೆ. ಇರಲಿ. ಅದು ಸರಿಯೊ ತಪ್ಪೋ ಎಂದು ಈಗ ಚರ್ಚಿಸುವುದಿಲ್ಲ. ಆದರೆ ದೊಡ್ಡವರೂ ಓಟ್ ತಿನ್ನುವುದು ಮುಖ್ಯ. ಅದು ಕೇವಲ ಚಿಕ್ಕಮಕ್ಕಳ ಆಹಾರ ಎನ್ನುವ ಭ್ರಮೆಯಿಂದ ಹೊರಬಂದು ಓಟ್ ತಿನ್ನುವುದನ್ನು ರೂಢಿಸಿಕೊಂಡರೆ ಆರೋ ಗ್ಯಕ್ಕೆ ಒಳ್ಳೆಯದು. ಕೊಲೆಸ್ಟರಾಲ್ ಕಡಿಮೆ ಮಾಡುವ ಬಹುದೊಡ್ಡ ಗುಣ ಇದರಲ್ಲಿದೆ.
ಓಟ್ ಉಷ್ಣವಲಯದಲ್ಲಿ ಬೆಳೆಯುವ ಏಕದಳ ಧಾನ್ಯ. ಬಳಕೆಯಲ್ಲಿ ಓಟ್ಸ್ ಎಂದು ಬಂದಿದೆ ಅಷ್ಟೆ. ಕನ್ನಡದಲ್ಲಿ ಕೆಲವು ಕಡೆ ತೋಕೆಗೋಧಿ ಎನ್ನುತ್ತಾರೆ. ಯೂರೋಪ್ ರಾಷ್ಟ್ರಗಳಲ್ಲಿ ಇದೇ ಮುಖ್ಯ ಆಹಾರ. ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ನಮ್ಮಲ್ಲಿ ಇದರ ಬಳಕೆ ಮಕ್ಕಳ ಆಹಾರವಾಗಿ ಪ್ರಸಿದ್ಧವಾಗುತ್ತಿದೆ ಅಷ್ಟೆ. ಸರಳವಾಗಿ ಹೇಳಬೇಕೆಂದರೆ ನಾವು ಗೋಧಿಯನ್ನು ಹೇಗೆ ಬಳಸುತ್ತೇವೆಯೋ ಹಾಗೆ ಯುರೋಪಿನ್ನರಲ್ಲಿ ಇದರ ಬಳಕೆ ಹೆಚ್ಚು.
ವಿಶೇಷವಾಗಿ ಡಚ್ಚರು ಓಟ್ ಮಹತ್ವವನ್ನು ಬಹಳ ಹಿಂದೆಯೇ ಅರಿತಿದ್ದರು. ಕರಗುವ ನಾರನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಓಟ್‌ನಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಗುಣವಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರೇ ಅವರು. ಓಟ್ ಕುರಿತು ಇದುವರೆಗೆ ಸುಮಾರು 25 ಸಂಶೋಧನೆಗಳು ನಡೆದಿವೆ. ಅದರಲ್ಲಿ 23 ಸಂಶೋಧನೆಗಳು 'ಕೊಲೆಸ್ಟರಾಲ್ ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರ' ಎನ್ನುವುದನ್ನು ದೃಢಪಡಿಸಿವೆ. ಮಧ್ಯಮ ಗಾತ್ರದ ಅರ್ಧ ಬೌಲ್ ಬೇಯಿಸಿದ ಓಟ್ಸ್ ಅಥವಾ ಒಂದು ಬೌಲ್ ಓಟ್ಸ್ ಮೀಲ್ (ಹಿಟ್ಟು ಅಥವಾ ಅದರಿಂದ ಮಾಡಿದ ತಿನಿಸು) ತಿಂದರೆ ಸಾಕು, ಪರಿಣಾಮ ಅದ್ಭುತವಾಗಿರುತ್ತದೆ ಎನ್ನುತ್ತಾರೆ ತಜ್ಞರು.
ಎಲ್ಲರ ಮೇಲೂ ಓಟ್ ಪ್ರಭಾವ ಬೀರುತ್ತದೆ ಅಥವಾ ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುತ್ತದೆ ಎಂದೇನೂ ಇಲ್ಲ. ಬಹುತೇಕರಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಶೇ 20ರವರೆಗೂ ತಗ್ಗಿಸಿದರೆ, ಕೆಲವರಲ್ಲಿ ಈ ಪ್ರಮಾಣ ಶೇ 3ರಿಂದ 4 ಮಾತ್ರ ಎನ್ನುವುದನ್ನೂ ಸಂಶೋಧನೆಗಳೇ ತೋರಿಸಿಕೊಟ್ಟಿವೆ. ತೀರಾ ಅಪರೂಪಕ್ಕೆ ಕೆಲವರಲ್ಲಿ ಯಾವುದೇ ಪರಿಣಾಮ ಬೀರದೇ ಇರುವುದೂ ಇದೆ. ಲಿಂಗ ಮತ್ತು ವಯೋವಾನ ಆಧರಿಸಿಯೂ ಓಟ್ ಕೆಲಸ ಮಾಡುತ್ತದೆ ಎನ್ನುವುದು ಇನ್ನೂ ಕುತೂಹಲದ ವಿಚಾರ. ಯುವತಿಯರಲ್ಲಿ ಕೊಲೆಸ್ಟರಾಲ್ ತಗ್ಗಿಸದಿದ್ದರೆ, ವಯಸ್ಸಾದ ಮಹಿಳೆಯರಲ್ಲಿ ಕೊಲೆಸ್ಟರಾಲ್ ಅನ್ನು ಗಣನೀಯವಾಗಿ ತಗ್ಗಿಸುತ್ತದೆ. ಯಾವುದೇ ವಯೋವಾನದ ಪುರುಷರಲ್ಲಿ ಮಧ್ಯಮ ಪರಿಣಾಮ ಬೀರುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com