ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಪ್ಪಿನಿಂದ ಒಪ್ಪು

Lingaraj Badiger
Updated On : 25 Jun 2013, 4:55 am

ಅದರ ಮೇಲೊಂದು ಬಿಗಿಯಾದ ಹಿಡಿತವನ್ನು ಸಾಧಿಸಲಾಗದಿದ್ದರೆ ಅದು ಕೋತಿಯಂತೆ ಆಡುತ್ತದೆ. ಅತ್ತಲೊಮ್ಮೆ ಇತ್ತಲೊಮ್ಮೆ ಹೊಯ್ದಾಡುತ್ತಲೇ ಇರುತ್ತದೆ. ಇದಮಿತ್ಥಂ ಎಂಬ ತೀರ್ಮಾನವನ್ನದು ಎಂದಿಗೂ ಕೊಡುವುದೇ ಇಲ್ಲ. ಅದು ಯಾವುದೇ ವಿಚಾರವಿರಬಹುದು, ಆ ಕ್ಷಣದಲ್ಲಿ ಒಂದು ತೀರ್ಮಾನ ಮಾಡಿ ನಾನು ಹೀಗೆ ಮಾಡುವುದೇ ಸರಿಯೆಂದು ಹೊರಟಿರೆಂದುಕೊಳ್ಳಿ. ಮರುಕ್ಷಣದಲ್ಲೇ ಮನಸು ಹಿಂದಕ್ಕೆ ಮರಳುತ್ತದೆ. ಹಾಗೆ ಬೇಡ, ಹೀಗೆ ಮಾಡೆಂದು ಉಪದೇಶಿಸುತ್ತದೆ. ಸರಿ ಎಂದುಕೊಂಡು ಹೊರಟರೆ ಮತ್ತೇನೋ ಸಲಹೆಯನ್ನು ಮುಂದಿಡುತ್ತದೆ. ಒಟ್ಟಾರೆ ಗೊಂದಲಕ್ಕೆ ನಿಮ್ಮನ್ನು ತಳ್ಳುವುದೇ ಮನಸ್ಸಿನ ಕೆಲಸ. ಹೀಗೆ ಹೊರಟರೆ ಕೊನೆಯವರೆಗೂ ಯಾವೊಂದೂ ತೀರ್ಮಾನಕ್ಕೆ ಬರಲಾಗದೇ ಹೊಯ್ದಾಟ ಹೆಚ್ಚುತ್ತಲೇ ಸಾಗುತ್ತದೆ.  
ಇದಕ್ಕಿರುವ ಒಂದೇ ಪರಿಹಾರವೆಂದರೆ, ಏನಾದರಾಗಲಿ ನಾನು ಹೀಗೆಯೇ ಮಾಡುವುದು ಎಂಬ ನಿರ್ಧಾರಕ್ಕೆ ಬಂದು ಬಿಡಬೇಕು. ಎಷ್ಟೋ ಸಂದರ್ಭದಲ್ಲಿ ನಾವು ತೆಗೆದುಕೊಂಡ ನಿರ್ಧಾರ ತಪ್ಪೇ ಆಗಿರುತ್ತದೆ. ಎಲ್ಲ ಸಮಯದಲ್ಲೂ ಸೂಕ್ತ ನಿರ್ಧಾರವನ್ನೇ ಕೈಗೊಂಡು ಬಿಡುತ್ತೇವೆ ಎನ್ನಲಾಗುವುದಿಲ್ಲ. ಹಾಗೆಂದು ನಿರ್ಧಾರ ಕೈಗೊಳ್ಳಲೇ ಹಿಂಜರಿಕೆ ಮಾಡುತ್ತ ಕುಳಿತುಬಿಟ್ಟರೆ ಕೊನೆಯವರೆಗೂ ನಿಮ್ಮದು ಗೊಂದಲದ ವ್ಯಕ್ತಿತ್ವ ಆಗಿಯೇ ಉಳಿದು ಬಿಡುತ್ತದೆ. ಮನಸ್ಸನ್ನು ಹೇಳಿದಂತೆ ಕೇಳುತ್ತ ಹೋದರೆ ಅದು ನಿಮಗೆ ಯಾವುದನ್ನೂ ಆಗಗೊಡುವುದಿಲ್ಲ. ನಾವು ಹೇಳಿದಂತೆ ಮನಸ್ಸನ್ನು ಕೇಳಿಸಬೇಕು.
ವಿಶೇಷವೆಂದರೆ ಹಾಗೆ ಕೈಗೊಂಡ ತಪ್ಪು ನಿರ್ಧಾರಗಳ ಅನುಭವದ ಆಧಾರದ ಮೇಲೆಯೇ ಪಾಠ ಕಲಿಯುತ್ತ ಹೋಗಿ ಕೊನೆಗೊಮ್ಮೆ ಯಾವುದೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತದೆ ಎಂಬ ವಿಶ್ವಾಸದ ಹಂತಕ್ಕೆ ತಲುಪುತ್ತೀರಿ. ಇಷ್ಟು ತಿಳಿದುಕೊಳ್ಳಿ, ಈ ಜೀವನದಲ್ಲಿ ತಪ್ಪು ನಿರ್ಧಾರ ಎನ್ನುವುದು ಇರುವುದೇ ಇಲ್ಲ. ಅಂಥ ನಿರ್ಧಾರದಿಂದ ನಮಗೆ ನಷ್ಟವಾದಾಗ ಅದನ್ನು ನಾವು ತಪ್ಪು ಎಂದುಕೊಳ್ಳುತ್ತೇವಷ್ಟೇ. ಆದರೆ ಅಂಥ ತಪ್ಪೇ ನಮ್ಮನ್ನು ಮುಂದೆ ಸರಿದಾರಿಗೆ ಕೊಂಡೊಯ್ಯುತ್ತದೆ. ತಪ್ಪು ಮಾಡಲು ಹಿಂಜರಿಕೆ ಏಕೆ? ಆದರೆ ನೆನಪಿಡಿ ಪ್ರತಿ ಬಾರಿ ಹೊಸ ತಪ್ಪು ಮಾಡಿ. ಹಿಂದೆ ಮಾಡಿದ ತಪ್ಪಿನ ಪುನರಾವರ್ತನೆ ಬೇಡ. ತಪ್ಪು ಮಾಡಿದ ಮೇಲೇ ತಾನೆ ಅದು ತಪ್ಪೆಂದು ಗೊತ್ತಾಗುವುದು! ತಪ್ಪು ಮಾಡಿದ ಮೇಲೆ ಸರಿಮಾಡುವ ಅವಕಾಶವಾದರೂ ಇರುತ್ತದೆ, ಸರಿಮಾಡಿದ ಮೇಲೆ ತಪ್ಪು ಮಾಡಲಾಗುತ್ತದೆಯೆ?

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement