ಅಕ್ಬರನ ನಮಾಜು
ಮೊಗಲ್ ಬಾದಶಾಹ್ ಅಕ್ಬರ್ ಕಾಡಿನಲ್ಲಿ ಬೇಟೆಯಾಡುತ್ತಿದ್ದ. ಸಾಯಂಕಾಲ ಪ್ರಾರ್ಥನೆಯ ಸಮಯವಾಗುತ್ತಲೇ ಆತ ತನ್ನ ಕುದುರೆಯಿಂದಿಳಿದು...
ಮೊಗಲ್ ಬಾದಶಾಹ್ ಅಕ್ಬರ್ ಕಾಡಿನಲ್ಲಿ ಬೇಟೆಯಾಡುತ್ತಿದ್ದ. ಸಾಯಂಕಾಲ ಪ್ರಾರ್ಥನೆಯ ಸಮಯವಾಗುತ್ತಲೇ ಆತ ತನ್ನ ಕುದುರೆಯಿಂದಿಳಿದು, ನೆಲದ ಮೇಲೆ ಚಾಪೆ ಹರಡಿ, ಒಬ್ಬ ಧರ್ಮಿಷ್ಠ ಮುಸಲ್ಮಾನನಂತೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸತೊಡಗಿದ.
ಅದೇ ಸಮಯಕ್ಕೆ ಬೆಳಗ್ಗೆ ಮನೆಯಿಂದ ಹೊರಟ ತನ್ನ ಗಂಡ ಸಂಜೆಯಾದರೂ ಹಿಂತಿರುಗದಿರುವುದರಿಂದ ಆತಂಕಿತಳಾದ ರೈತ ಮಹಿಳೆಯೊಬ್ಬಳು ತನ್ನ ಪತಿಯನ್ನು ಹುಡುಕುತ್ತಾ ಆ ದಾರಿಯಾಗಿ ಬಂದಳು. ಗಂಡನ ಚಿಂತೆಯಲ್ಲಿಯೇ ಮುಳುಗಿದ್ದ ಅವಳು ನಮಾಜು ಮಾಡುತ್ತಿದ್ದ ಅಕ್ಬರನನ್ನು ಗಮನಿಸದೆ ಎಡವಿ ಬಿದ್ದಳು. ಬಿದ್ದವಳು ಎದ್ದು ದೊರೆಯ ಕ್ಷಮೆಯನ್ನೂ ಯಾಚಿಸದೆ ಪತಿಯನ್ನರಸಿ ಮುನ್ನಡೆದಳು. ಇದರಿಂದ ಅಕ್ಬರ ಕುಪಿತನಾದ. ಆದರೆ ಒಬ್ಬ ಉತ್ತಮ ಮುಸಲ್ಮಾನನಂತೆ ನಮಾಜು ಮಾಡುವಾಗ ಯಾರೊಡನೆಯೂ ಮಾತನಾಡಬಾರದೆಂಬ ನಿಯಮವನ್ನನುಸರಿಸಿ ಏನೂ ಹೇಳಲಿಲ್ಲ. ದೊರೆಯ ನಮಾಜು ಮುಗಿಯುವ ಸಮಯಕ್ಕೆ ಸರಿಯಾಗಿ ಆ ಮಹಿಳೆ ತನ್ನ ಗಂಡನೊಂದಿಗೆ ಸಂತಸದಿಂದ ಹಿಂತಿರುಗಿದಳು. ಈಗ ಆಕೆ ದೊರೆ ಮತ್ತು ಅವನ ಪರಿವಾರದವರನ್ನು ಕಂಡು ಆಶ್ಚರ್ಯಚಕಿತಳಾದಳು. ಅಕ್ಬರ್ ತನ್ನ ಸಿಟ್ಟನ್ನು ಹೊರಹಾಕುತ್ತ ಆಕೆಯನ್ನುದ್ದೇಶಿಸಿ 'ಈಗಿನ ನಿನ್ನ ಉದ್ಧಟತನದ ವರ್ತನೆಗೆ ಕಾರಣ ಕೊಡು. ಇಲ್ಲವಾದಲ್ಲಿ ನಿನ್ನನ್ನು ಶಿಕ್ಷಿಸಲಾಗುವುದು' ಎಂದು ಗರ್ಜಿಸಿದ. ಆಕೆ ದೊರೆಯ ಕಣ್ಣುಗಳನ್ನು ದಿಟ್ಟಿಸುತ್ತ 'ದೊರೆಗಳೇ, ನಾನು ನನ್ನ ಪತಿಯ ಬಗ್ಗೆ ಚಿಂತಿಸುತ್ತಿದ್ದುದರಿಂದ ಇಲ್ಲಿ ನಿಮ್ಮನ್ನು ನೋಡಲಿಲ್ಲ ಮಾತ್ರವಲ್ಲ, ನೀವು ಹೇಳುವ ಹಾಗೆ ನಿಮ್ಮನ್ನು ಎಡವಿದ್ದೂ ನನ್ನ ಅರಿವಿಗೆ ಬರಲಿಲ್ಲ. ತಾವಾದರೋ ಆಗ ನಮಾಜು ಮಾಡುತ್ತಿದ್ದಿರಿ ಮತ್ತು ನನ್ನ ಪತಿಗಿಂತಲೂ ಅಗಣಿತವಾಗಿಅಮೂಲ್ಯವಾಗಿರುವವನನ್ನು ಧ್ಯಾನಿಸುತ್ತಿದ್ದಿರಿ. ಹಾಗಿರುವಾಗ ತಾವು ನನ್ನನ್ನು ಅದ್ಹೇಗೆ ಗಮನಿಸಿದಿರಿ?' ಎಂದು ಕೇಳಿದಳು.
ಅಕ್ಬರನಿಗೆ ನಾಚಿಕೆಯಾಗಿ ಮೌನದ ಮೊರೆಹೊಕ್ಕ. ಮುಂದೆ, ವಿದ್ಯಾವಂತಳೂ ಅಲ್ಲದ, ಮುಲ್ಲಾಳೂ ಅಲ್ಲದ, ಸಾಮಾನ್ಯ ರೈತ ಮಹಿಳೆಯೊಬ್ಬಳು ತನಗೆ ನಿಜವಾದ ಪ್ರಾರ್ಥನೆಯ ಅರ್ಥವನ್ನು ತಿಳಿಹೇಳಿದಳೆಂದು ತನ್ನ ಆಪ್ತರಲ್ಲಿ ಹೇಳಿಕೊಂಡನಂತೆ.
- ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.