ಪ್ರಕೃತಿ ವಿಕೋಪವಾದಾಗಲೂ ಬೇಕು..
ಮಳೆ ಅನಾಹುತದಿಂದ ಅಥವಾ ಬೇರೆ ಯಾವುದೇ ಅನಾಹುತ ಸಂಭವಿಸಿ ಚರಂಡಿಯಲ್ಲಿ ಮನುಷ್ಯರು ಕೊಚ್ಚಿಕೊಂಡು ಹೋದಾಗ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರೆಸ್ಕ್ಯೂ ವ್ಯಾನ್ (ರಕ್ಷಣಾ ವಾಹನ) ಹಾಗೂ ಅದರಲ್ಲಿನ ಬೋಟ್ (ದೋಣಿ) ಬಳಸಿ ಅವರ ಮೃತದೇಹ ಹುಡುಕುತ್ತಾರೆ. ಕೆರೆ, ಚರಂಡಿಯಲ್ಲಿ ಕಾರ್ಯಾಚರಣೆ ನಡೆಸುವಾಗ ಮಾತ್ರ ದೋಣಿಯನ್ನು ಬಳಸುತ್ತಾರೆ. ಕೆರೆ, ನೀರು ತುಂಬಿರುವ ಹೊಂಡಗಳಲ್ಲಿ ದೋಣಿಯನ್ನು ಬಳಸಿ ಮೃತದೇಹ ಹುಡುಕುವ ವೇಳೆ ಗ್ರ್ಯಾಪ್‌ನಲ್ ಬಳಸುತ್ತಾರೆ (ಪಾತಾಳ ಗರಡಿ). ಹೊಂಡ, ಕೆರೆ, ಚರಂಡಿಗಳಲ್ಲಿ ಕಾರ್ಯಾಚರಣೆ ನಡೆಸುವಾಗ ಕಾಲಿಗೆ ಗಂ ಬೂಟ್(ಶೂ) ಧರಿಸುತ್ತಾರೆ. ಈ ಶೂ ಧರಿಸಿದರೆ ಕಾಲಿಗೆ ಗಾಜು, ಮುಳ್ಳು, ಸೂಜಿಯಂತಹ ವಸ್ತುಗಳು ಚುಚ್ಚಬಾರದೆಂಬ ಉದ್ದೇಶ. ಕೈಗೆ ಕೈಚೀಲಗಳನ್ನು ಹಾಕಿಕೊಳ್ಳುತ್ತಾರೆ. ಅಗತ್ಯಬಿದ್ದಲ್ಲಿ ಮಾತ್ರ ಕೈಯಿಂದ ಹುಡುಕುತ್ತಾರೆ.
ನೀರಿನಲ್ಲಿ ಬಿದ್ದು ಮೃತಪಟ್ಟಿರುವ, ಕೊಚ್ಚಿಹೋಗಿರುವ ಪ್ರಕರಣಗಳಲ್ಲಿ ಹೆಚ್ಚಾಗಿ ಪಾತಾಳ ಗರಡಿಯನ್ನು ಬಳಸುತ್ತಾರೆ. ಅದನ್ನು ಹಗ್ಗಕ್ಕೆ ಕಟ್ಟಿ ನೀರಿನಲ್ಲಿ ಇಳಿಬಿಡಲಾಗುತ್ತದೆ. ನೀರಿನಲ್ಲಿರುವ ಎಲ್ಲಾ ವಸ್ತುಗಳನ್ನು ಅದು ತೋರಿಸುತ್ತದೆ. ನೀರಿನಲ್ಲಿರುವ ವಸ್ತುಗಳು ಕಾಣಲು ಸಿಬ್ಬಂದಿ ಬಳಿ ಯಂತ್ರವಿರುತ್ತದೆ. ಯಂತ್ರದಲ್ಲಿ ಕಂಡಾಗ ಮೃತದೇಹ ಮೇಲೆ ತೆಗೆಯುವುದು ಸುಲಭವಾಗುತ್ತದೆ. ದೋಣಿ ಎಂದರೆ ಅದು ಪ್ಲಾಸ್ಟಿಕ್‌ನದ್ದು. ಅಗತ್ಯಬಿದ್ದಾಗ ಅದಕ್ಕೆ ಗಾಳಿ ತುಂಬಿಸಿ ನಂತರ ಕಾರ್ಯಾಚರಣೆ ನಡೆಸುತ್ತಾರೆ. ಬೆಂಗಳೂರು ನಗರದಲ್ಲಿ ಅಂತಹ 5 ರಕ್ಷಣಾ ವಾಹನಗಳಿವೆ. ಉಳಿದಂತೆ ಮಹಾನಗರಗಳಿಗೆ ಒಂದೊಂದು ನೀಡಲಾಗಿದೆ.
- ಶಾಂತ ತಮ್ಮಯ್ಯ