ಇದು ಸುಮಾರು ಎರಡು ದಶಕಗಳ ಹಿಂದಿನ ಕಥೆ. ಅಂದು ಆಕೆಗೆ ಸುಮಾರು ಒಂದೂವರೆ ವರ್ಷ. ಎಲ್ಲ ಮಕ್ಕಳಂತೆಯೇ ಲವಲವಿಕೆಯಿಂದ ಮನೆಯಂಗಳದಲ್ಲಿ ಆಡುತ್ತಿದ್ದಳು. ಮನೆಮಂದಿಯೆಲ್ಲಾ ಅವರದ್ದೇ ಕೆಲಸಗಳಲ್ಲಿ ಬ್ಯುಸಿ. ಪಕ್ಕದಲ್ಲಿ ಭತ್ತದ ಒಲೆ ಧಗಧಗ ಉರಿಯುತ್ತಿತ್ತು. ಆ ಜ್ವಾಲೆಯಲ್ಲೂ ಸೌಂದರ್ಯದ ಲೀಲೆ. ಹತ್ತಿರ ಬಂದವಳೇ ಈಕೆ ಅದೇನೋ ಆಟದ ವಸ್ತು ಎಂದು ಬೆಂಕಿಗೆ ಕೈ ಹಾಕಿಯೇಬಿಟ್ಟಳು. ಈಕೆಯ ಎರಡೂ ಕೈಗೆ ಬೆಂಕಿ ತಗುಲಿತು. ಆಕೆಯನ್ನು ರಕ್ಷಿಸುವ ಪ್ರಯತ್ನ ನಡೆಯಿತು. ಆಸ್ಪತ್ರೆಗೂ ಸೇರಿಸಲಾಯಿತು. ವೈದ್ಯರೇನೋ ಚಿಕಿತ್ಸೆ ಕೊಟ್ಟರು. ಆದರೆ, ಆಕೆಗೆ ಇವತ್ತಿಗೂ ಕೈಯ ಹತ್ತು ಬೆರಳುಗಳಿಲ್ಲ.
'ಆಕೆ' ಎಂಬವಳು ಇಲ್ಲಿ ಕಾರ್ಕಳ ತಾಲೂಕಿನ ಕೌಡೂರಿನ 'ಮಾಲಿನಿ ಭಂಡಾರಿ'. ಮೊನ್ನೆ ಬಿಡುಗಡೆಯಾದ 'ಆಟೋರಾಜ' ಚಿತ್ರದಲ್ಲಿ ನೀವಿವರನ್ನು ನೋಡಿರುತ್ತೀರಿ!
ಆಟೋರಾಣಿ
ಕೈಬೆರಳಿಲ್ಲದ ಹೆಣ್ಣು ಮಗಳೊಬ್ಬಳು ಪರೀಕ್ಷೆ ಬರೆಯುತ್ತಿದ್ದಾಳೆ. ಈಕೆಯ ಸ್ಥಿತಿಯನ್ನು ಗಮನಿಸುವ ನಾಯಕ ತಾನೇ ಎಕ್ಸಾಮ್ ಬರೆದು ಮಾನವೀಯತೆ ತೋರುತ್ತಾನೆ. 'ಆಟೋರಾಜ'ದ ಈ ಸೀನಿನ ರಾಣಿಯೇ ಮಾಲಿನಿ.
ಮಾಲಿನಿ ಬಗ್ಗೆ ನಿರ್ದೇಶಕ ಉದಯ್ ಪ್ರಕಾಶ್ ಅಂತರ್ಜಾಲದಲ್ಲಿ ಓದಿದ್ದರು, ಫೋಟೋ ಕಂಡಿದ್ದರು. ಅವರಿಗೊಂದು ಚಾನ್ಸ್ ಕೊಟ್ಟರೆ ಹೇಗೆ ಎಂದು ಯೋಚಿಸಿ, ಸ್ಯಾಂಡಲ್‌ವುಡ್‌ಗೆ ಕಾಲಿಡಲು ಸ್ಫೂರ್ತಿ ತುಂಬಿದರು.
ಕೀಬೋರ್ಡ್ ಮೇಲೆ ಬೆರಳು
ಮಾಲಿನಿ ಬಿಎ ಪದವೀಧರೆ. ನಮ್ಮ- ನಿಮ್ಮಂತೆಯೇ ಬರೆಯಬಲ್ಲರು. ಯಾರ ಸಹಾಯವಿಲ್ಲದೆ ಕಂಪ್ಯೂಟರಿನಲ್ಲಿ ಟೈಪಿಸಬಲ್ಲರು. ಇವರ ಕಂಪ್ಯೂಟರ್ ಜ್ಞಾನ ಕಂಡ ಸಮೀಪದ ಪ್ರಾಥಮಿಕ ಶಾಲೆ, ಕರೆದು ಕೆಲಸವನ್ನೂ ಕೊಟ್ಟಿತು.
ಕಣ್ತೆರೆಸಿದ ಸವಿತಾ ಸಮಾಜ
ಮಾಲಿನಿಗೆ ಸರ್ಕಾರಿ ಹುದ್ದೆಯ ಕನಸಿತ್ತು. ಈ ಕನಸಿಗೆ ಕೈಜೋಡಿಸಿದ್ದು ಉಡುಪಿಯ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ. ಮಾಲಿನಿ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸಲೆಂದೇ ಅಂದಿನ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾದರು. ಆದರೆ, ಭಗವಂತ ಕಣ್ತೆರೆಯಲಿಲ್ಲ. ಕೊನೆಗೆ ಉಡುಪಿಯ ಅಂಬಲಪಾಡಿಯ ಸವಿತಾ ಸಮಾಜ ಸಹಕಾರಿ ಸೊಸೈಟಿಯಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತು. ಈ ಸಂಸ್ಥೆಯ ಕಾರ್ಕಳದ ಶಾಖೆಯಲ್ಲಿ ಮಾಲಿನಿ ಈಗ ವ್ಯವಸ್ಥಾಪಕಿ.
ಮಾಲಿನಿಯ ಸಾಧನೆ ಗಮನಿಸಿ ಗಣರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಲಯನ್ಸ್, ರೋಟರಿ ಕ್ಲಬ್, ಉಡುಪಿಯ ಅರಣ್ಯ ಇಲಾಖೆ, ರಾಜ್ಯ ನೌಕರರ ಸಂಘಗಳು ಸನ್ಮಾನಿಸಿವೆ. ಧರ್ಮಪಾಲ ಭಂಡಾರಿ- ಪುಷ್ಪಾವತಿ ಭಂಡಾರಿ ದಂಪತಿಯ ಪುತ್ರಿಯಾದ ಮಾಲಿನಿಗೆ, ಪತಿ ಪ್ರಸನ್ನ ಹೆಜ್ಜೆ ಹೆಜ್ಜೆಗೂ ಬೆನ್ನು ತಟ್ಟುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಮತ್ತಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಅವರ ಕಣ್ಣುಗಳಲ್ಲಿ ದೀಪವಾಗಿದೆ.
- ನವೀನ್ ಭಟ್ ಇಳಂತಿಲ