ಕೊಬ್ಬು ತಿನ್ನಿ, ಆಲಿವ್ ಎಣ್ಣೆ ಸೇವಿಸಿ
ಇಂಥದ್ದೊಂದು ಮಾತು ಕೇಳಿದಾಗ ನನಗೂ ಅಚ್ಚರಿಯಾಗಿತ್ತು. ಅಮೆರಿಕದಲ್ಲಿ ಬಹಳ ಚಾಲ್ತಿಯಲ್ಲಿರುವ ಮಾತಿದು. ..
ಇಂಥದ್ದೊಂದು ಮಾತು ಕೇಳಿದಾಗ ನನಗೂ ಅಚ್ಚರಿಯಾಗಿತ್ತು. ಅಮೆರಿಕದಲ್ಲಿ ಬಹಳ ಚಾಲ್ತಿಯಲ್ಲಿರುವ ಮಾತಿದು.
ಹೃದಯದ ತೊಂದರೆ ಹಾಗೂ ರಕ್ತನಾಳದ ಸಮಸ್ಯೆ ಇರುವವರಿಗೆ ಆಲಿವ್ ಎಣ್ಣೆ ಬಹಳ ಉಪಯುಕ್ತವಾದುದು. ಎಲ್‌ಡಿಎಲ್ ಕೊಲೆಸ್ಟರಾಲ್ ತಗ್ಗಿಸಿ, ಎಚ್‌ಡಿಎಲ್ ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಎಲ್‌ಡಿಎಲ್ ಜತೆ ಮೂಲಧಾತು ರಹಿತ ಆಮ್ಲಜನಕದ ವಿಷಕಾರಕ ರಾಸಾಯನಿಕ ಪ್ರಕ್ರಿಯೆ ನಡೆಯುವುದನ್ನು ತಪ್ಪಿಸುತ್ತದೆ. ಅದರಲ್ಲಿರುವ ಆಲೊರೊಪಿನ್ ಎನ್ನುವ ರಾಸಾಯನಿಕವೇ ಈ ಪ್ರಕ್ರಿಯೆಯನ್ನು ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹೀಗಾಗಿ ನಿಯಮಿತವಾಗಿ ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಕೆ ಹೃದ್ರೋಗದ ರಿಸ್ಕ್ ಅನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತದೆ. ಒಲಯಿಕ್ ಆಮ್ಲ, ವಿಟಮಿನ್ ಇ ಇದರಲ್ಲಿ ಸಮೃದ್ಧವಾಗಿವೆ. ಜಠರ ಹುಣ್ಣು ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್‌ಗೂ ಆಲಿವ್ ಎಣ್ಣೆ ಪರಿಣಾಮಕಾರಿ ಮದ್ದು. ಅಲ್ಜಮೀರ್ ಎನ್ನುವ ಮರೆವಿನ ಕಾಯಿಲೆಗೂ ಇದು ರಾಮಬಾಣ ಎನ್ನುವುದು ದೃಢಪಟ್ಟಿದೆ.
ಆಲಿವ್ ಎಣ್ಣೆಯನ್ನು ನಮ್ಮಲ್ಲಿ ಅಡುಗೆಗೆ ಬಳಸುವುದು ಕಡಿಮೆ. ಸೌಂದರ್ಯವರ್ಧಕವಾಗಿ ಇದರ ಬಳಕೆ ಹೆಚ್ಚು. ಆದರೆ ಮೆಡಟರೇನಿಯನ್ ರಾಷ್ಟ್ರಗಳಲ್ಲಿ, ವಿಶೇಷವಾಗಿ ಗ್ರೀಸ್‌ನಲ್ಲಿ ಆಲಿವ್ ಎಣ್ಣೆ ಇಲ್ಲದೆ ಅಡುಗೆ ಮಾಡುವುದೇ ಅಪರೂಪ ಎನ್ನಬಹುದು. ಆ ಪ್ರದೇಶದಲ್ಲಿಯೇ ಆಲಿವ್ ಅನ್ನು ಅಧಿಕವಾಗಿ ಬೆಳೆಯುತ್ತಾರಾದರೂ ಜಗತ್ತಿನಾದ್ಯಂತ ಇದು ಪರಿಚಿತ. ಈಗೀಗ ನಮ್ಮಲ್ಲೂ ಮಾಲ್‌ಗಳಲ್ಲಿ, ಪ್ರಮುಖ ಮಳಿಗೆಗಳಲ್ಲಿ ಆಲಿವ್ ಎಣ್ಣೆ ಸಿಗುತ್ತಿದೆ.
ಕೊಲೆಸ್ಟರಾಲ್ ವಿಚಾರಕ್ಕೆ ಬರೋಣ. ಮೆಡಿಟರೇನಿಯನ್ ಪ್ರದೇಶದಲ್ಲಿ ಹೃದ್ರೋಗ ಕಡಿಮೆ. ರಕ್ತದೊತ್ತಡ ಮತ್ತಿತರ ಸಮಸ್ಯೆಗಳಿಂದ ಬಳಲುವವರೂ ಅಲ್ಲಿ ವಿರಳ. ಹಾಗಂತ ಅಧಿಕ ಕೊಬ್ಬಿನ ಪದಾರ್ಥಗಳನ್ನು ಅಲ್ಲಿನವರು ಧಾರಾಳವಾಗಿಯೇ ಸೇವಿಸುತ್ತಾರೆ. ಆದರೂ ಹೃದ್ರೋಗದ ಬಾಧೆ ಕಡಿಮೆ. ಇದೇಕೆ ಹೀಗೆ ಎನ್ನುವುದು ಅಮೆರಿಕನ್ ಸಂಶೋಧಕರ ತಲೆ ತಿನ್ನಲಾರಂಭಿಸಿತು. ಹೇಳಿಕೇಳಿ ಅಮೆರಿಕನ್ನರಲ್ಲಿ ಕೊಬ್ಬು ಮತ್ತು ತತ್ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಅವರ ಕಣ್ಣು ಮೆಡಿರೇನಿಯನ್ನರ ಮೇಲೆ ಬೀಳದಿರಲು ಹೇಗೆ ಸಾಧ್ಯ? ಅವರ ಆರೋಗ್ಯದ ಗುಟ್ಟು ಬೆನ್ನಟ್ಟಿ ಹೋದಾಗ ಅಲ್ಲಿನ ಆಹಾರ ಪದ್ಧತಿಯಲ್ಲಿ ಆಲಿವ್ ಎಣ್ಣೆ ಪ್ರಮುಖ ಎನ್ನುವುದು ಗೊತ್ತಾಯಿತು. ಪರಿಣಾಮ ಎಂದರೆ ಹೃದ್ರೋಗಕ್ಕೂ, ಆಲಿವ್ ಎಣ್ಣೆಗೂ ಏನು ಸಂಬಂಧ ಎನ್ನುವ ಕುರಿತು ವಿವರವಾದ ಪ್ರಯೋಗಗಳಾದವು. ಕೆಟ್ಟ ಕೊಲೆಸ್ಟರಾಲ್ ಉತ್ಪಾದನೆಗೆ ಕಡಿವಾಣ ಹಾಕುವುದರ ಜತೆಗೆ, ಎಚ್‌ಡಿಎಲ್ ಹೆಚ್ಚಿಸುವ ಅಂಶ ಇದೆ ಎನ್ನುವ ಸಂಗತಿ ಬಯಲಿಗೆ ಬಂದದ್ದು ಹೀಗೆ.
'ನೀವು ಎಷ್ಟೇ ಕೊಬ್ಬಿನ ಪದಾರ್ಥ ತಿನ್ನಿ, ಅದಕ್ಕೆ ತಕ್ಕಂತೆ ಆಲಿವ್ ಎಣ್ಣೆ ಸೇವಿಸುವುದನ್ನು ಮರೆಯಬೇಡಿ' ಎನ್ನುವುದು ಅಮೆರಿಕದ ಬಹಳಷ್ಟು ತಜ್ಞರ ಸಲಹೆ. ಅಲ್ಪಪ್ರಮಾಣದಲ್ಲಿ ಆಲಿವ್ ಎಣ್ಣೆ ದೇಹ ಸೇರಿದರೂ ರಕ್ತ ಹೆಪ್ಪುಗಟ್ಟದಂತೆ ಮತ್ತು ಮೂಲಧಾತು ರಹಿತ ಆಮ್ಲಜನಕ ಎಲ್‌ಡಿಎಲ್ ಕೊಲೆಸ್ಟರಾಲ್ ನಡುವೆ ವಿಷಕಾರಿ ರಾಸಾಯನಿಕ ಪ್ರಕ್ರಿಯೆಗಳು ನಡೆಯದಂತೆ ತಡೆಯುವ ಸಾಮರ್ಥ್ಯ ಅದಕ್ಕಿದೆ ಎನ್ನುವುದು ಈ ಶಿಫಾರಸ್ಸಿನ ತಾತ್ಪರ್ಯ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)