ಕೆಲಸ ಕಡ್ಡಾಯವಿಲ್ಲ
ಪ್ರತಿ ಜಿಲ್ಲೆಯಲ್ಲೂ ಗೃಹರಕ್ಷಕ ದಳ ಸಿಬ್ಬಂದಿ ಇರುತ್ತಾರೆ. ತಾವು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಲು ಅವರಿಗೆ ತಿಂಗಳಿಗೊಮ್ಮೆ ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿ ಬೆಂಗಳೂರಿಗೆ ಬರಬೇಕಾಗುತ್ತದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ದಳ ಸಿಬ್ಬಂದಿ ಅಗತ್ಯವಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಈ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಯಾವುದೇ ಜಿಲ್ಲೆಯಲ್ಲಿ ಒಮ್ಮೆ ನೇಮಕವಾದರೆ, 3 ವರ್ಷ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಇಚ್ಛಿಸಿದಲ್ಲಿ ಅದೇ ಕೆಲಸವನ್ನು ಮುಂದುವರೆಸಿಕೊಂಡು ಹೋಗಬಹುದು. ಇಲ್ಲವಾದಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಆ ಕೆಲಸದಿಂದ ಮುಕ್ತಿಹೊಂದಬಹುದು. ಕೆಲಸ ಮುಂದುವರೆಸಬೇಕೆಂಬ ಕಡ್ಡಾಯ ಕಾನೂನಿಲ್ಲ. ಹೋಂಗಾರ್ಡ್ಸ್ಗೆ ಈ ಹಿಂದೆ ತಿಂಗಳಿಗೆ ರು. 200 ಸಂಬಳ ನೀಡಲಾಗುತ್ತಿತ್ತು. ಕಳೆದ ಎರಡು ತಿಂಗಳಿಂದ ಸಂಬಳ ಹೆಚ್ಚಿಸಲಾಗಿದೆ. ಹಾಗಾಗಿ ಈಗ ಜನರು ಅದರತ್ತ ಆಸಕ್ತಿ ತೋರಿದ್ದಾರೆ.
ಹೋಂಗಾರ್ಡ್ ಕರ್ತವ್ಯ ನಿರ್ವಹಿಸಲು ನೀವು ಪದವಿ ಮಾಡಿರಬೇಕಿಲ್ಲ. 4 ಅಥವಾ 7ನೇ ತರಗತಿ ಪಾಸಾಗಿದ್ದರೆ ಸಾಕು. ಆದರೆ, ನಿಮ್ಮ ವಯಸ್ಸು 53 ದಾಟಿರಬಾರದು. ಹುದ್ದೆ ಖಾಲಿ ಇರುವಾಗ ಇಲಾಖೆಯಿಂದಲೇ ಅರ್ಜಿ ಆಹ್ವಾನಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತ್ಯೇಕ ಸಮವಸ್ತ್ರ ಇರುತ್ತದೆ.
ಕಂಪನಿಗಳ ಜತೆಗೆ ಇವರು ಪೊಲೀಸರಂತೆಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಿಬ್ಬಂದಿ ಕೊರತೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರು ಇವರನ್ನು ಬಳಸಿಕೊಳ್ಳುತ್ತಾರೆ.
- ಶಾಂತ ತಮ್ಮಯ್ಯ