ನಿರ್ಲಕ್ಷ್ಯವೇ ತಕ್ಕ ಪ್ರತ್ಯುತ್ತರ
ಯಾರೋ ನಿಮ್ಮ ಬಗ್ಗೆ, ನಿಮ್ಮ ಕಾರ್ಯದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂತಿಟ್ಟುಕೊಳ್ಳಿ. ಆ ಸಂದರ್ಭದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ಅದರ ಸತ್ಯಾಸತ್ಯತೆ ನಿರ್ಧಾರವಾಗುತ್ತದೆ. ಅದು ಯಾವುದೇ ವ್ಯಕ್ತಿಯಾಗಲಿ, ನಿಮ್ಮ ಮೇಲಧಿಕಾರಿಯೇ ಆಗಿರಲಿ, ನಿಮ್ಮ ಹತ್ತಿರದವರು, ಸ್ನೇಹಿತರು, ಬಂಧುಗಳು ಹೀಗೆ ಯಾರೇ ಆಗಿದ್ದರೂ ನಿಮ್ಮ ಬಗ್ಗೆ ಸಣ್ಣದೊಂದು ಕಾಮೆಂಟ್ ಮಾಡಲು ಸ್ವತಂತ್ರರಾಗಿರುತ್ತಾರೆ. ಅದು ಅವರು ಕಂಡ ದೃಷ್ಟಿಕೋನವಾಗಿರಬಹುದು. ಅಥವಾ ಅವರ ಮೌಲ್ಯಮಾಪನದ ಸಾಮರ್ಥ್ಯವಿದ್ದರೂ ಇರಬಹುದು. ಅಥವಾ ಅವರ ತಿಳಿವಳಿಕೆಯ ಮಟ್ಟವನ್ನು ಅವಲಂಬಿಸಿಯೂ ಇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಆ ಸಂದರ್ಭ, ಸನ್ನಿವೇಶದಲ್ಲಿ ಅವರು ಅಂಥ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅನಿವಾರ್ಯವನ್ನು ಹೊಂದಿರಲೂಬಹುದು. ಅಷ್ಟೇಕೆ, ಯಾವುದೋ ಪೂರ್ವಗ್ರಹಪೀಡಿತರಾಗಿಯೂ ನಿಮ್ಮನ್ನು ಹಗುರವಾಗಿ ಪರಿಗಣಿಸಿರಲೂಬಹುದು. ಹಾಗಂತ ಅದೇ ಸತ್ಯವೆಂದು ನೀವು ಭಾವಿಸಬೇಕಾಗಿಲ್ಲ. ನೀವೇನೆಂಬುದು ನಿಮಗಿಂತ ಹೆಚ್ಚಾಗಿ ಬೇರೆಯವರಿಗೆ ಗೊತ್ತಿರಲು ಸಾಧ್ಯವೇ ಇಲ್ಲ. ನಿಮ್ಮ ವಿಶ್ವಾಸವನ್ನು ಅಲುಗಾಡಿಸಬಲ್ಲ ಇಂಥ ಮಾತುಗಳನ್ನೂ ನೀವೂ ಅಷ್ಟೇ ಹಗುರವಾಗಿ ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬಗ್ಗೆ ಹಾಗೊಂದು ಅಭಿಪ್ರಾಯವನ್ನು ಅವರು ಬಿತ್ತುತ್ತಿದ್ದಾರೆ ಎಂದಾದರೆ ನಿಮ್ಮ ಏಳಿಗೆ ಅವರಲ್ಲಿ ಸಣ್ಣದೊಂದು ನಡುಕವನ್ನು, ಅಸ್ಥಿರತೆಯನ್ನು ಹುಟ್ಟುಹಾಕಿದೆ ಎಂದೇ ಅರ್ಥ. ನೋಯುವ, ವಿಚಲಿತರಾಗುವ, ಚಿಂತಿಸುವ ಕಾರಣವೇ ಇಲ್ಲ. ಬಿಟ್ಹಾಕಿ, ಬಿಟ್ಹಾಕಿ. ಯಾವುದೇ ಕಾರಣಕ್ಕೂ ಅದಕ್ಕೆ ತಕ್ಷಣ ಪ್ರತಿಕ್ರಿಯಿಸಲು ಹೋಗಲೇಬೇಡಿ. ಅಂಥ ಮಾತುಗಳು ಕಿವಿಗೆ ಬಿದ್ದಾಗ ಸಹಜವಾಗಿಯೇ ನೀವು ತಾಳ್ಮೆ ಕಳೆದುಕೊಳ್ಳುತ್ತೀರಿ. ಅಸಹನೆ ನಿಮ್ಮನ್ನು ಆವರಿಸುತ್ತದೆ. ಮಾತುಗಳು ಮಿತಿ ಮೀರುತ್ತವೆ. ಇದರಿಂದ ನೋಡುಗರಲ್ಲಿ ನಿಮ್ಮ ಬಗೆಗಿನ ಅಭಿಪ್ರಾಯ ಬದಲಾಗುವ ಅಪಾಯವಿರುತ್ತದೆ. ಅದು ಪ್ರತಿಕ್ರಿಯೆಗೂ ಅರ್ಹವಲ್ಲದ ಮಾತುಗಳು ಎಂಬ ಧೋರಣೆ ನಿಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು. ಬೇರೆಯವರ ಮಾತುಗಳಿಂದ ನಿಮ್ಮ ಕಾರ್ಯಕ್ಕೆ ಬೆಲೆ ಬರಬೇಕಾಗಿಲ್ಲ. ಅಷ್ಟಕ್ಕೂ ನಿಮ್ಮ ಕಾರ್ಯದ ಮೌಲ್ಯಮಾಪನ ಮಾಡಲು ಅವರ್ಯಾರು? ಬಹಳಷ್ಟು ಬಾರಿ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲೆಂದೇ ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿರುತ್ತಾರೆ. ನಿಮ್ಮನ್ನು ನೈತಿಕವಾಗಿ ಕೆಳಕ್ಕೆ ತಳ್ಳುವ ಅವರ ಉದ್ದೇಶಕ್ಕೆ ಯಾವತ್ತಿಗೂ ನೀರೆರೆಯಬೇಡಿ. ಒಂದು ದಿವ್ಯ ನಿರ್ಲಕ್ಷ್ಯವೇ ಅದಕ್ಕೆ ತಕ್ಕ ಪ್ರತ್ಯುತ್ತರ ಎಂಬುದನ್ನು ನೆನಪಿಡಿ. ಹಾಗೆಂದು ಅದಕ್ಕೆ ಉತ್ತರಿಸಬೇಕಾದ ಸಂದರ್ಭ ಬಂದಾಗ ಕೈಕಟ್ಟಿ ಕುಳಿತುಕೊಳ್ಳಬೇಡಿ.
- ಸಹನೆ