ಪದ್ಮಿನಿ ಪ್ರಸಾದ
ನಮ್ಮ ಸಮಾಜದಲ್ಲಿ ಲೈಂಗಿಕತೆ ಎಂದು ಮಾತೆತ್ತಿದರೆ ಕಿವಿ ಮುಚ್ಚಿಕೊಳ್ಳುವವರನೇಕ. ಹಾಗೆಯೇ ಬಾಯಿ ಮುಚ್ಚಿಸುವವರೂ. ಹಾಗಾಗಿಯೇ...
ನಮ್ಮ ಸಮಾಜದಲ್ಲಿ ಲೈಂಗಿಕತೆ ಎಂದು ಮಾತೆತ್ತಿದರೆ ಕಿವಿ ಮುಚ್ಚಿಕೊಳ್ಳುವವರನೇಕ. ಹಾಗೆಯೇ ಬಾಯಿ ಮುಚ್ಚಿಸುವವರೂ. ಹಾಗಾಗಿಯೇ ಅನೇಕ ಲೈಂಗಿಕ ಸಮಸ್ಯೆಗಳು ಪರಿಹಾರ ಕಾಣದೇ ಮತ್ತಷ್ಟು ಜಟಿಲ ಸಮಸ್ಯೆಗಳಾಗಿ ಸಾಮಾಜಿಕ, ಕೌಟುಂಬಿಕ ಜೀವನಕ್ಕೆ ಅಡ್ಡಗಾಲಾಗುತ್ತವೆ. ಜೊತೆಗೆ ಅವುಗಳ ಬಗ್ಗೆ ಮೂಢನಂಬಿಕೆಗಳೂ ಬೆಳೆಯುತ್ತವೆ. ಈ ಮೂಢನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡ ಅದೆಷ್ಟೋ ಢೋಂಗಿ ಲೈಂಗಿಕ ತಜ್ಞರ ಹುಸಿ ಚಿಕಿತ್ಸೆಗಳನ್ನು ಗಮನಿಸಿ, ದಂಗಾಗಿ ಏನಾದ್ರೂ ಮಾಡಬೇಕೆಂಬ ಹಪಹಪಿಯಿಂದ ಅದೇ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡವರು ಖ್ಯಾತ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್.
ಎಂಡಿ (ಗೈನಕಾಲಜಿ)ಯಲ್ಲಿ ಚಿನ್ನದ ಪದಕ ಪಡೆದು, ವೈದ್ಯ ವೃತ್ತಿ ಆರಂಭಿಸಿದ ಡಾ.ಪದ್ಮನಿ ಇಂದು ಬಿಡುವಿಲ್ಲದ ವೃತ್ತಿ ನಡುವೆಯೂ ಕೌನ್ಸೆಲಿಂಗ್, ಮಾಧ್ಯಮಗಳ ಮೂಲಕ, ಪುಸ್ತಕಗಳನ್ನು ಬರೆದು ಜನರಲ್ಲಿ ಲೈಂಗಿಕ ಅರಿವು ಮೂಡಿಸುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿ.
ಟೀನೇಜ್ನಲ್ಲಿ, ಮದುವೆಯಾದ ಮೇಲೆ, ವೃದ್ಧಾಪ್ಯದಲ್ಲಿ ಎದುರಾಗುವ ಅದೆಷ್ಟೋ ಲೈಂಗಿಕ ಸಮಸ್ಯೆಗಳು, ಅತ್ಯಾಚಾರದ ಬಗೆಗಿನ ಸಾವಿರ ಪ್ರಶ್ನೆಗಳನ್ನು ಹೊತ್ತ ಜನರು ಉತ್ತರ ಹಾಗೂ ಪರಿಹಾರ ಹುಡುಕಿಕೊಂಡು ಅಂಜುತ್ತಲೇ ಇವರತ್ತ ಬರುತ್ತಾರೆ. ಆದರೆ ಅಪರಿಚಿತರೊಡನೆಯೂ ನೆರೆಮನೆಯ ಪದ್ಮಕ್ಕನಂತೆ ಮಾತಾಡುವ ಡಾ. ಪದ್ಮಿನಿಯವರನ್ನು ಕಂಡೊಡನೆ ಮುಜುಗರವಿಲ್ಲದೆ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ.
ಡಾಕ್ಟರ್ಸ್ ಡೇಗಾಗಿ 'ಬೈಟು ಕಾಫಿ'ಗಾಗಿ ಮಾತನಾಡಿದ ಡಾ. ಪದ್ಮಿನಿ ಹಿಂದೆ ವೈದ್ಯೋ ನಾರಾಯಣ ಹರಿಃ ಎನ್ನುತ್ತಿದ್ದ ಸಮಾಜದಲ್ಲಿ ಇಂದು ರೋಗ ಉಲ್ಬಣಗೊಂಡು ರೋಗಿ ಸಾಯುತ್ತಿದ್ದಂತೇ ವೈದ್ಯರ ಮೇಲೆರಗುವ, ಆಸ್ಪತ್ರೆ ಕಟ್ಟಡಗಳನ್ನು ಧ್ವಂಸಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಲೈಂಗಿಕ ವಿಷಯದ ಬಗ್ಗೆ ಡಾ.ಪದ್ಮಿನಿ ಧ್ವನಿ ಎತ್ತಿದಾಗ ಮಡಿವಂತಿಕೆ ಇರುವ ಭಾರತದಂಥ ದೇಶದಲ್ಲೂ ಧನಾತ್ಮಕವಾಗಿ ಜನರು ಸ್ಪಂದಿಸಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಅದರಲ್ಲೂ ಅವರಿಗೆ ಮಾಧ್ಯಮ ನೀಡಿದ ಸಪೋರ್ಟ್ಗೆ ಚಿರಋಣಿಯಾಗಿದ್ದಾರೆ.
ಯಾವ ವೈದ್ಯರೂ ರೋಗಿಯ ಸಾವನ್ನು ಬಯಸುವುದಿಲ್ಲ. ಹಗಲು ರಾತ್ರಿ ಎನ್ನದೆ ತಮ್ಮ ಕೌಟುಂಬಿಕ ಸಮಸ್ಯೆಗಳನ್ನೆಲ್ಲ ಬದಿಗೊತ್ತಿ ಓಡಿಬರುವ ವೈದ್ಯರಿಗೆ ಆ ಕ್ಷಣದಲ್ಲಿ ರೋಗಿಯ ಜಾತಿ, ಆರ್ಥಿಕ ಸ್ಥಿತಿ ಎಲ್ಲಕ್ಕಿಂತ ಜೀವ ಉಳಿಸುವುದೊಂದೇ ಮುಖ್ಯವಾಗಿರುತ್ತದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮಾನವೀಯತೆ ಇಲ್ಲದೆ ವೈದ್ಯನಾಗಲು ಸಾಧ್ಯವಿಲ್ಲ. ತನ್ನ ಕೈಲಾದ ಪ್ರಯತ್ನವನ್ನು ಆತ ಮಾಡಿಯೇ ಮಾಡಿರುತ್ತಾನೆ. ನಾವು ದುಡ್ಡು ಕೊಡುತ್ತೇವೆ, ಅವರು ಚಿಕಿತ್ಸೆ ನೀಡುತ್ತಾರೆ ಅಷ್ಟೇ ಎಂಬ ಧೋರಣೆ ಬದಲಾಗಬೇಕಿದೆ ಎನ್ನುತ್ತಾರೆ. <
-ರೇಶ್ಮಾ ರಾವ್ ಸೊನ್ಲೆ