ಬೈಟುಕಾಫಿ

ಪೈಗುಣ

ಮನೋವಿಜ್ಞಾನ, ಬೇರೆ ಜ್ಞಾನ ಶಾಖೆಗಿಂತ ಭಿನ್ನ. ಇಲ್ಲಿ ಪ್ರತೀ ಪ್ರಕರಣವೂ ಸವಾಲಿನ ಮುಳ್ಳು. ಮನುಷ್ಯನ ಅಂಗಾಂಗಗಳೆಲ್ಲ ಒಂದೇ ಆಕಾರ ಇರಬಹುದು, ಟೈಮ್ ಟು ಟೈಮ್ ಒಂದೇ...

ಪೈಗಳ ಬಳಿ ದಿನಕ್ಕೆ ಹತ್ತಾರು ಮನಸ್ಸುಗಳು ಬರುತ್ತವೆ. ವಿಶ್ವದಲ್ಲಿ ಯಾವ ಲೇಖಕನ ಊಹೆಗೂ ನಿಲುಕದ ಕಥೆಗಳನ್ನು ಅವು ಹೇಳುತ್ತವೆ. ಅಂಥ ಸಾವಿರ ಸಾವಿರ ಕಥೆಗಳಲ್ಲಿ, ಪೈಗಳು ಮೂರನ್ನಷ್ಟೇ ಇಲ್ಲಿ ಹೇಳಿದ್ದಾರೆ...


ಮನೋವಿಜ್ಞಾನ, ಬೇರೆ ಜ್ಞಾನ ಶಾಖೆಗಿಂತ ಭಿನ್ನ. ಇಲ್ಲಿ ಪ್ರತೀ ಪ್ರಕರಣವೂ ಸವಾಲಿನ ಮುಳ್ಳು. ಮನುಷ್ಯನ ಅಂಗಾಂಗಗಳೆಲ್ಲ ಒಂದೇ ಆಕಾರ ಇರಬಹುದು, ಟೈಮ್ ಟು ಟೈಮ್ ಒಂದೇ ಡ್ಯೂಟಿ ಮಾಡಬಹುದು. ಆದರೆ, ಮನಸ್ಸುಗಳೆಂದೂ ಒಂದೇ ಥರ ಇರೋದಿಲ್ಲ. ಪ್ರತಿಯೊಬ್ಬರ ಮನಸ್ಸೂ ತೀರಾ ವೈಯಕ್ತಿಕ. ನಲ್ವತ್ತು ವರ್ಷಗಳಿಂದ ಇಂಥ ಸಾವಿರಾರು ಅಚ್ಚರಿ, ವಿನೋದ, ವಕ್ರ ಮನಸ್ಸುಗಳನ್ನು ಕಂಡವರು ಖ್ಯಾತ ಮನೋರೋಗ ಚಿಕಿತ್ಸಕ ಡಾ. ಅಶೋಕ್ ಪೈ.
ಪೈಗಳ ಬಳಿ ದಿನಕ್ಕೆ ಹತ್ತಾರು ಮನಸ್ಸುಗಳು ಬರುತ್ತವೆ. ವಿಶ್ವದಲ್ಲಿ ಯಾವ ಲೇಖಕನ ಊಹೆಗೂ ನಿಲುಕದ ಕಥೆಗಳನ್ನು ಅವು ಹೇಳುತ್ತವೆ. ಅಂಥ ಸಾವಿರ ಸಾವಿರ ಕಥೆಗಳಲ್ಲಿ, ಪೈಗಳು ಮೂರನ್ನಷ್ಟೇ ಇಲ್ಲಿ ಹೇಳಿದ್ದಾರೆ. 'ಇಂಥ ಮನಸ್ಸುಗಳೂ ಇರುತ್ತವಾ?' ಪ್ರಶ್ನೆಯನ್ನು ಈ ಕಥೆಗಳು ಕೊನೆಯಲ್ಲಿ ಬಿಟ್ಟುಹೋಗುತ್ತವೆ.
ಮನಸ್ಸು 1
ಅವಳ ವಯಸ್ಸು ಹನ್ನೆರಡು. ಪೈಗಳೆದುರಿಗೆ ಕೂತು. ಪೈಗಳ ಬಳಿ ಕೌನ್ಸೆಲಿಂಗ್ಗೆ ಬಂದಳು. ಪೈಗಳು ಮಾತುಗಳನ್ನು ಯಾವ ಕೋನದಲ್ಲಿ ತಿರುಗಿಸಿದರೂ ಅವಳದ್ದು ಒಂದೇ ಹಠ, 'ನಾನು ಆತ್ಮಹತ್ಯೆ ಮಾಡ್ಕೋಬೇಕು ಸಾರ್'! ಇವರೂ ಗಂಟೆಗಟ್ಟಲೆ ಮಾತನಾಡಿದರು, ಮತ್ತೂ ಅವಳ ನಾಲಗೆಯ ತುದಿಯಲ್ಲಿ ಆತ್ಮಹತ್ಯೆ ಬೆದರಿಕೆಯ ಸಾಲು ಕಳಚಿ ಬೀಳಲೇ ಇಲ್ಲ.
'ಯಾಕೆ ಆತ್ಮಹತ್ಯೆ ಮಾಡ್ಕೋಬೇಕು?' ಈ ಪ್ರಶ್ನೆಯನ್ನವರು ಹನ್ನೆರಡನೇ ಸಲ ರಿಪೀಟು ಮಾಡಿದಾಗ ಅವಳಂದಳು, 'ನಾನು ಗರ್ಭಿಣಿಯಾಗಿದ್ದೀನಿ'. ಪೈಗಳಿಗೆ ಶಾಕ್! ಇಷ್ಟು ಸಣ್ಣ ವಯಸ್ಸಿನ ಹುಡುಗಿ, ಮತ್ತೊಬ್ಬನೊಂದಿಗೆ ಹಾಸಿಗೆ ಮೇಲೆ ಮಲಗಿದ್ದಳೇ? ನಂಬುವುದು ಕಷ್ಟವಾದರೂ, ಮಾತು ಮುಂದುವರಿಯಿತು. ಎಷ್ಟೇ ವಿವರ ಜಾಲಾಡಿದರೂ, ಅವಳಿಗೆ ಲೈಂಗಿಕತೆ ಬಗ್ಗೆ ಏನೂ ಗೊತ್ತೇ ಇಲ್ಲ ಎನ್ನುವುದು ತಿಳಿಯಿತು. ಸೆಕ್ಸಿನ ಕುರಿತು ಯಾವ ಪೂರ್ವಮಾಹಿತಿಯೂ ಆಕೆಗಿಲ್ಲ. ಆದರೂ, ಆಕೆ ಗರ್ಭಿಣಿ ಯಾಕಾದಳು?
ರಿವರ್ಸ್ ಗೇರಿನಲ್ಲಿ ಹೋಗೋಣ. ಹನ್ನೆರಡರ ಹರೆಯಕ್ಕೆ ಆಕೆ ಮುಟ್ಟಾದಳಂತೆ. ಅದನ್ನವಳು ತಾಯಿ ಬಳಿ ಹೇಳಿದಳು. ಆಗ ಅವರು, 'ಜಾಸ್ತಿ ಗಾಬರಿ ಆಗ್ಬೇಡ. ಇದು ಹೆಣ್ಮಕ್ಕಳಿಗೆ ತಿಂಗ್ಳ ತಿಂಗ್ಳ ಆಗುತ್ತೆ. ಇನ್ಮುಂದೆ ಈ ಥರ ಆದ್ರೆ ಹೇಳು, ಹೇಗೆ ಟ್ರೀಟ್ ಮಾಡ್ಕೋಬೇಕು ಅಂತ ನಾನ್ ಹೇಳ್ತೀನಿ' ಎಂದು ತಲೆ ಸವರಿ ಹಣೆಗೊಂದು ಮುತ್ತಿಟ್ಟರು.
ಮತ್ತೆ ಎರಡನೇ ತಿಂಗಳು ಮುಟ್ಟಾಯಿತು. ಮೂರನೇ ತಿಂಗಳೂ ಆಯಿತು. ನಾಲ್ಕನೇ ತಿಂಗಳು ಆಗ್ಲಿಲ್ಲ. ತಾಯಿ ಬಳಿ ಕೇಳಿದಳು, 'ಯಾಕೆ ಅಮ್ಮ ನನ್ಗೆ ಈ ತಿಂಗ್ಳು ಮುಟ್ಟಾಗ್ಲಿಲ್ಲ?'. ಅವರು ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದರು, 'ಏಯ್ ಅದಾಗುತ್ತೆ ಬಿಡು. ಸಣ್ಸಣ್ ವಿಚಾರ ಕೇಳಿ ತಲೆ ತಿನ್ಬೇಡ' ಅಂತ ಅವಳಿಗೆ ಗದರಿಸಿ ಕಳುಹಿಸಿದರು.
ಸ್ಕೂಲಲ್ಲಿ ಕೂತಾಗಲೂ ಅವಳಿಗೆ ಇದೇ ವಿಚಾರ ತಲೆಯಲ್ಲಿತ್ತು. ಪಕ್ಕದಲ್ಲಿದ್ದವಳನ್ನು ಕೇಳಿದಳು, 'ನೀನೂ ಮುಟ್ಟಾಗ್ತಿಯಾ?'. ಅವಳು 'ಹೌದು' ಅಂದಳು. 'ನಾನ್ ಹೋದ್ ತಿಂಗ್ಳು ಆಗ್ಲೇ ಇಲ್ಲ ಕಣೆ' ಅಂತ ಬೆರಳು ಕಚ್ಚಿ ಹೇಳಿದಳು. ಅದಕ್ಕೆ ಪಕ್ಕದ ಹುಡುಗಿ, 'ಓಹ್, ಹಾಗಾದ್ರೆ ನೀನು ಗರ್ಭಿಣಿ ಆಗಿದ್ಯ. ನಿನ್ಗೆ ಮಗು ಆಗುತ್ತೆ' ಅಂತ ಆರ್ಡರ್ ಪಾಸ್ ಮಾಡಿದಳು. ಇವಳು ಎದೆ ಒಡೆದು ಸಾಯುವುದೊಂದು ಬಾಕಿ.
ಪೈಗಳಿಗೆ ಅವಳ ಗರ್ಭ ಧರಿಸಿದ ಕಾರಣ ಗೊತ್ತಾಯಿತು!
ಮನಸ್ಸು 2
ಉತ್ತರ ಕರ್ನಾಟಕದಲ್ಲೊಂದು ಸಂಪ್ರದಾಯಸ್ಥ ಕುಟುಂಬ. 40-50 ಜನರ ದೊಡ್ಡ ಸಂಸಾರ. ಎಲ್ಲರೂ ತಮ್ಮ ಮಕ್ಕಳನ್ನು ಹತ್ತಿರದ ನಗರದಲ್ಲಿ ಓದಲು ಬಿಟ್ಟಿದ್ದರು. ಈ ಕುಟುಂಬದ 17 ವಿದ್ಯಾರ್ಥಿಗಳಿಗೆ ಒಂದೇ ಮನೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಆ ಕುಟುಂಬದ ಹುಡುಗ, ತನ್ನ ಚಿಕ್ಕಪ್ಪನ ಮಗಳನ್ನೇ (9ನೇ ತರಗತಿ) ಪ್ರೀತಿಸತೊಡಗಿದ. ದೈಹಿಕ ವ್ಯವಹಾರವೂ ನಡೆದುಹೋಯಿತು. ನಂತರ, ಅವಳು ಗರ್ಭಿಣಿ.
ಹುಡುಗನ ತಂದೆ ನ್ಯಾಯಾಧೀಶ. ಮಾತು, ಗತ್ತು ಎರಡೂ ಮೇಲ್ಮಟ್ಟದಲ್ಲೇ. ಹೀಗಾಗಿ, ಹುಡುಗಿಗಾದ ಮೋಸವನ್ನು ಆತ ಒಪ್ಪಲೇ ಇಲ್ಲ. 'ನಿನ್ ಹುಡುಗಿ ಯಾವನೋ ಬೇರೆ ಜತೆ ಮಲ್ಕೊಂಡಿದ್ದಾಳೆ' ಅಂತೇಳಿ, ಮಗನನ್ನು ಬೇರೆ ವ್ಯವಸ್ಥೆಯಲ್ಲಿ ಓದಿಸತೊಡಗಿದ. ಹುಡುಗಿಯ ತಂದೆ ಆಲೋಚಿಸಿದಂತೆ, ಮದ್ವೆ ಗಿದ್ವೆಯ ವಿಚಾರಗಳೆಲ್ಲ ತಲೆಕೆಳಗಾದವು.
ಆ ಹುಡುಗಿ ಗರ್ಭಪಾತಕ್ಕೂ ಒಪ್ಪಲಿಲ್ಲ. 'ನನಗೆ ಮಗು ಬೇಕು, ಅವನೇ ಗಂಡನಾಗಬೇಕು' ಅಂತ ಹಠ ಹಿಡಿದಳು. ಆಮೇಲೆ ಅವಳ ಮನವೊಲಿಸಲಾಯಿತು. 'ಪ್ರೆಗ್ನೆನ್ಸಿ ಕಂಟಿನ್ಯೂ ಮಾಡು. ಆದರೆ, ಆ ಮಗುವನ್ನು ಯಾರಾದರೂ ಮಕ್ಕಳಿಲ್ಲದ ದಂಪತಿಗೆ ದತ್ತು ಕೊಡು' ಎಂದು ಯಾರೋ ಹಿರಿಯರು ಹೇಳಿದರು. ಇವಳು 'ಹ್ಞೂಂ' ಅಂದಳು.
ಕೇಸ್ ಒಂದರ್ಥದಲ್ಲಿ ಕ್ಲೋಸಾಗಬೇಕಿತ್ತು. ಆದರೆ, ಮತ್ತೆ ಚಿಗುರಿತು!
ಕೆಲವು ವರ್ಷದ ನಂತರ, ಅವಳು ಬಿಎಸ್ಸಿ ವಿದ್ಯಾರ್ಥಿನಿ. 'ಮಗನೂ ಇಲ್ಲ, ಗಂಡನೂ ಇಲ್ಲ, ಇದು ಅನ್ಯಾಯ' ಎಂದು ಮನೆಯಲ್ಲಿ ವಾದಿಸಿ, ಅಪ್ಪನಿಂದ ಮತ್ತೆ ತಿರಸ್ಕಾರ ಕಟ್ಟಿಕೊಂಡಳು. ಗೃಹಮಂತ್ರಿಗಳಿಗೆ, ಮೇಲಧಿಕಾರಿಗಳಿಗೆ ಪತ್ರ ಬರೆದು, ವಿಷಯ ದೊಡ್ಡದು ಮಾಡಿದಳು. ಇವೆಲ್ಲ ರಿಸ್ಕ್ ಯಾಕೆ ಬೇಕು ಎಂದು ಆ ಸಂಪ್ರದಾಯಸ್ಥ ಕುಟುಂಬ ಇವರ ಮದುವೆಗೆ ಸಮ್ಮತಿ ಸೂಚಿಸಿತು.
ಇದೆಲ್ಲ ನಡೆದಿದ್ದು ಇಪ್ಪತ್ತು ವರ್ಷದ ಹಿಂದೆ. ಈಗ ಪರಭಾರೆಯಾದ ಆ ಹುಡುಗ ಎಂಬಿಎ ಓದುತ್ತಿದ್ದಾನೆ. ಮೊನ್ನೆ ಫ್ಯಾಮಿಲಿ ಪ್ರೋಗ್ರಾಮೊಂದು ನಡೆಯಿತು. ಅಲ್ಲಿ ಅವನಿಗೆ ತನ್ನ ಹೆತ್ತ ತಾಯಿ ಸಿಕ್ಕಳು! ಇವನಿಗೆ ಆಕೆಯೇ ತನ್ನನ್ನು ಹೆತ್ತಿದ್ದು ಅಂತ ಗೊತ್ತಿಲ್ಲ. ಆದರೆ ಕೇಳಿದ, 'ನೀವು ಡಾಕ್ಟ್ರು ಅಂತ ಹೇಳ್ತೀರ, ಆದ್ರೆ ನಿಮ್ಗೇಕೆ ಮಕ್ಕಳಾಗ್ಲಿಲ್ಲ?'. ಅದಕ್ಕವಳು, 'ಅದು ದೇವರ ಶಾಪ. ನನಗೆ ಮಗು ಆಗಿತ್ತು. ಅದನ್ನು ಬೇರೆಯವರಿಗೆ ಕೊಟ್ಬಿಟ್ಟೆ. ನಾನು ಹೆತ್ತಿದ್ದು ನಿನ್ನನ್ನೇ' ಎಂದು ಸತ್ಯ ಬಚ್ಚಿಡಲಾಗದೆ ಹೇಳಿಬಿಟ್ಟಳು. ಅಲ್ಲಿಂದ ಇಬ್ಬರೂ ಒಂದಾದರು. ಅವನು ಹಾಸ್ಟೆಲ್ನಲ್ಲೇ ಇದ್ದು ಓದುತ್ತಿದ್ದ. ತಾಯಿ ವಾರಕ್ಕೊಮ್ಮೆ ಅವನ ಬಳಿ ಹೋಗುತ್ತಿದ್ದಳು. ಆದರೆ, ತಾಯಿ- ಮಗನ ಮುದ್ದಾಟ ಸೆಕ್ಸ್ಗೆ ತಿರುವು ಪಡೆಯಿತು. 36 ವರ್ಷದ ತಾಯಿ, 20 ವರ್ಷದ ಹುಡುಗ. ಗಾಬರಿ ಹುಟ್ಟುವಷ್ಟು ಗಂಭೀರವಾಯಿತು ಪ್ರಕರಣ. ಈ ಸಮಸ್ಯೆಯನ್ನು ಪೈಗಳು ಹಲವು ಟ್ರೀಟ್ಮೆಂಟಿನಲ್ಲಿ ಬಗೆಹರಿಸಿದರು.
ಕೆಲವು ದಿನಗಳ ನಂತರ, ಆ ದತ್ತು ಹುಡುಗನ ಮಲತಂದೆಯಿಂದ ಫೋನು ಬಂತು. ಅವರಿಗೆ ಎರಡು ಹೆಣ್ಣುಮಕ್ಕಳು. ದೊಡ್ಡವಳಿಗೆ ಆ ದತ್ತು ಹುಡುಗನ ಮೇಲೆ ಲವ್ವಾಗಿದೆ. ಅವಳು ಅವನನ್ನೇ ಮದ್ವೆ ಆಗ್ತೀನಿ ಅಂತ ಹಠ ಹಿಡಿದಿದ್ದಾಳೆ. ನೇಣು ಹಾಕ್ಕೊಳ್ತೀನಿ ಅಂತ ಹೆದರಿಸುತ್ತಿದ್ದಾಳೆ. ಅವರ ತಂದೆ ಕಂಗಾಲಾಗಿದ್ದಾರೆ!
ಮನಸ್ಸು 3
ಒಬ್ಬಳು ಬಾಣಂತಿ. ಮಗು ಹೆತ್ತು ಎಂಟು ದಿನವಾಗಿದೆ. ಆ ಹಸುಗೂಸನ್ನು ಮಡಿಲಲ್ಲಿಟ್ಟುಕೊಂಡು, ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದಾಳೆ. ರಾತ್ರಿ ಆಕಸ್ಮಿಕವಾಗಿ ಆ ಮಗು ಹಾಸಿಗೆಯಿಂದ ಕೆಳಗೆ ಬಿದ್ದು, ಮಂಡೆಯೊಡೆದು ಸತ್ತುಹೋಗಿದೆ. ಈಕೆ ಅದೇ ಆಘಾತದಲ್ಲಿ ಹುಚ್ಚಿಯಾದಳು.
ಪೈಗಳ ಬಳಿ ಟ್ರೀಟ್ಮೆಂಟಿಗೆಂದು ಬಂದಳು. ಒಂದು ವಾರದ ಚಿಕಿತ್ಸೆ ಪೂರ್ಣಗೊಂಡಾಗ, ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಳು. ಡಾಕ್ಟರಿಗೊಂದು ಥ್ಯಾಂಕ್ಸ್ ಹೇಳಿ, ವಾಪಸು ಹೋಗುವಾಗ ಬ್ಲೌಸೊಳಗೆ ಬಚ್ಚಿಟ್ಟಿದ ಚೀಟಿಯೊಂದನ್ನು ಪೈಗಳ ಮುಂದಿಡುತ್ತಾಳೆ. ಅದರಲ್ಲಿ ಹೀಗಿತ್ತು... 'ನೀವು ತುಂಬಾ ಚೆನ್ನಾಗಿ ಚಿಕಿತ್ಸೆ ಕೊಟ್ಟಿರಿ. ಆ ಮಗು ಆಕಸ್ಮಿಕವಾಗಿ ಸತ್ತಿದ್ದಲ್ಲ. ನಾನೇ ಬೆಡ್ಡಿನಿಂದ ತಳ್ಳಿ ಕೊಂದುಹಾಕಿದೆ. ಹೆಣ್ಮಗು ಅಂತ ಮನೆಯವರೆಲ್ಲ ತಿರಸ್ಕಾರದ ಮಾತುಗಳನ್ನಾಡುತ್ತಿದ್ದರು. ಅದಕ್ಕಾಗಿ ಕೊಂದೆ'!


-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ