ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾದಾಮಿಯಲ್ಲೂ ಇದೆ ಕೊಲೆಸ್ಟರಾಲ್ ತಗ್ಗಿಸುವ ಗುಣ

Rashmi Kasaragodu
Updated On : 30 Jun 2013, 4:11 am

ಬಾದಾಮಿ, ಆಕ್ರೋಟು ಮತ್ತಿತರ ಬೀಜಗಳನ್ನು ನಾವು ಕೊಬ್ಬಿನ ಪದಾರ್ಥಗಳಲ್ಲಿ ಸೇರಿಸಿಕೊಂಡಿದ್ದೇವೆ. ಅವುಗಳಲ್ಲಿ ಕೊಬ್ಬಿನ ಅಂಶ ಇರುವುದು ನಿಜ. ಆದರೆ ಅವು ಮೊನೊಸ್ಯಾಚುರೇಟೆಡ್ ಕೊಬ್ಬು. ಅವುಗಳಿಂದ ಹಾನಿ ಏನಿಲ್ಲ. ಕೊಲೆಸ್ಟರಾಲ್ ತಗ್ಗಿಸುವಲ್ಲಿ ಬಾದಾಮಿ, ಆಕ್ರೋಟುಗಳೂ ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದು ಈಗೀಗ ಗೊತ್ತಾಗುತ್ತಿದೆ. ಆಲಿವ್ ಎಣ್ಣೆ ಮತ್ತು ಇವುಗಳಲ್ಲಿರುವ ರಾಸಾಯನಿಕಗಳು ಭಿನ್ನವೇನಲ್ಲ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬರುತ್ತಿದೆ. ಇವು ಆಲಿವ್ ಎಣ್ಣೆಯಂತೆಯೇ ಎಲ್ಡಿಎಲ್ ಕೊಲೆಸ್ಟರಾಲ್ ತಗ್ಗಿಸುವುದರ ಜತೆಗೆ, ಮೂಲಧಾತುರಹಿತ ಆಮ್ಲಜನಕ ಮತ್ತು ಎಲ್ಡಿಎಲ್ ನಡುವೆ ಅನಾಹುತಕಾರಿ ರಾಸಾಯನಿಕ ಪ್ರಕ್ರಿಯೆ ನಡೆಯುವುದನ್ನು ತಪ್ಪಿಸುತ್ತವೆ.
ಎರಡು ಪ್ರಯೋಗಗಳ ಬಗ್ಗೆ ಹೇಳುತ್ತೇನೆ. ಡಾ.ಜೀನ್ ಸ್ಪಿಲ್ಲರ್ ಎನ್ನುವವರು 240 ಜನರನ್ನು ಪ್ರಯೋಗಕ್ಕೆ ಒಳಪಡಿಸಿದರು. ಅವರಲ್ಲಿ ಅರ್ಧದಷ್ಟು ಮಂದಿಗೆ 3ರಿಂದ 9 ವಾರ ನಿತ್ಯವೂ ಮೂರೂವರೆ ಔನ್ಸ್ನಷ್ಟು ಬಾದಾಮಿ ಸೇವಿಸುವಂತೆ ಶಿಫಾರಸ್ಸು ಮಾಡಿದರೆ, ಉಳಿದವರಿಗೆ ಇದೇ ಪ್ರಮಾಣದಲ್ಲಿ ಚೀಸ್ ತಿನ್ನಲು ಸಲಹೆ ಮಾಡಿದರು. ಆ ನಂತರ ಎರಡೂ ಗುಂಪಿನವರ ಕೊಲೆಸ್ಟರಾಲ್ ಮಟ್ಟ ಪರೀಕ್ಷಿಸಿದಾಗ, ಬಾದಾಮಿ ತಿಂದವರ ಕೊಲೆಸ್ಟರಾಲ್ ಶೇ 10ರಿಂದ 15ರಷ್ಟು ಇಳಿದಿತ್ತು. ಹೀಗಾಗಿ ಆಲಿವ್ ಎಣ್ಣೆಯಂತೆ ಬಾದಾಮಿ ಕೂಡ ಹೃದ್ರೋಗಿಗಳಿಗೆ ಉಪಯುಕ್ತವಾದದ್ದು ಎನ್ನುವ ತೀರ್ಮಾನಕ್ಕೆ ಅವರು ಬಂದರು.
ಇನ್ನು ಆಕ್ರೋಟು. ಅದು ಕೂಡ ಕೊಲೆಸ್ಟರಾಲ್ ತಗ್ಗಿಸುವಂಥದು. ಲೋಮಾ ಲಿಂಡಾ ವಿಶ್ವವಿದ್ಯಾಲಯದ ಡಾ.ಜೋನ್ ಸಬಾಟೆ ಎನ್ನುವವರು ಈ ಕುರಿತು ಆಳವಾದ ಸಂಶೋಧನೆಗಳನ್ನು ನಡೆಸಿದ್ದಾರೆ. ಸಹಜ ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ವಿಚಾರದಲ್ಲಿ ಈಕೆ ಪಂಡಿತೆ. ಕಡಿಮೆ ಕೊಬ್ಬಿನಂಶದ ಆಹಾರ ಸೇವಿಸುತ್ತಿದ್ದವರನ್ನು (ಲೊ ಫ್ಯಾಟ್ ಡಯಟ್) ಒಂದಷ್ಟು ಮಂದಿಯನ್ನು ಆಯ್ಕೆ ಮಾಡಿಕೊಂಡ ಜೋನ್, ಒಂದು ತಿಂಗಳ ಕಾಲ ನಿತ್ಯವೂ ಎರಡೂವರೆ ಔನ್ಸ್ನಷ್ಟು ಆಕ್ರೋಟುಗಳನ್ನು ಸೇವಿಸುವಂತೆ ಸಲಹೆ ಮಾಡಿದರು. ನಂತರದ ಒಂದು ತಿಂಗಳು ಆಕ್ರೋಟುಗಳಿಂದ ದೂರವಿರುವಂತೆ ನೋಡಿಕೊಂಡರು. ಈ ಅವಧಿಯಲ್ಲಿ ಅಂದರೆ ಆಕ್ರೋಟು ಸೇವಿಸದಿದ್ದಾಗ ಕೊಲೆಸ್ಟರಾಲ್ 6ರಷ್ಟು ಕಡಿಮೆಯಾಗಿತ್ತು. ಪುನಃ ಒಂದು ತಿಂಗಳು ಆಕ್ರೋಟು ಸೇವನೆ. ಆಗ ಕೊಲೆಸ್ಟರಾಲ್ ಶೇ 18ರಷ್ಟು ಕಡಿಮೆಯಾಗಿತ್ತು. ಸರಾಸರಿ ಇಳಿಕೆ ಪ್ರಮಾಣ ಶೇ 22. 'ಕೊಲೆಸ್ಟರಾಲ್ ಕಡಿಮೆ ಮಾಡಿಕೊಳ್ಳಲು ಬಯಸುವವರ ಸುಲಭ ದಾರಿ ಎಂದರೆ ನಿಯಮಿತವಾಗಿ, ನಿರ್ದಿಷ್ಟ ಪ್ರಮಾಣದ ಬಾದಾಮಿ ಅಥವಾ ಆಕ್ರೋಟು ಸೇವಿಸುವುದು' ಎನ್ನುತ್ತಾರೆ ಡಾ.ವಿಲಿಯಂ ಕ್ಯಾಸ್ಟೆಲಿ ಎಂಬ ಹೃದ್ರೋಗ ತಜ್ಞ.
ಡಾ.ಸ್ಪಿಲ್ಲರ್ ಮತ್ತು ಡಾ.ಜೋನ್ ಇಬ್ಬರೂ ಒಂದು ಕಿವಿಮಾತು ಹೇಳಲು ಮರೆಯುವುದಿಲ್ಲ, 'ಕೊಲೆಸ್ಟರಾಲ್ ತಕಡಿಮೆ ಮಾಡುತ್ತದೆ ಎಂದು ಬಾದಾಮಿ ಅಥವಾ ಆಕ್ರೋಟನ್ನು ಅತಿಯಾಗಿ ಸೇವಿಸಬೇಡಿ. ದಿನಕ್ಕೆ 2-3 ಔನ್ಸ್ ಸಾಕು. ಸಿಕ್ಕಾಪಟ್ಟೆ ತಿಂದರೆ ಬೊಜ್ಜು ಬಂದೀತು'


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


ಮೊ.9900113699 (ಎಸ್ಎಂಎಸ್ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement